ಬುಧವಾರ, ಜನವರಿ 29, 2014

“ಅಂದಿನಿಂದ ಇಲ್ಲದ ಡಬ್ಬಿಂಗ್ ಈಗೇಕೆ?”




                                                     
 ಅಂದಿನಿಂದ ಇಲ್ಲದ ಡಬ್ಬಿಂಗ್ ಸಹವಾಸ ಈಗೇಕೆ?

ಇಂತಹುದೊಂದು ಪ್ರಶ್ನೆ ಡಬ್ಬಿಂಗ್ ವಿವಾದದ ಹಿನ್ನೆಲೆಯಲ್ಲಿ ಕೇಳಿಬರುತ್ತಿದೆ. ಅಥವಾ ಡಬ್ಬಿಂಗನ್ನು ಶತಾಯಗತಾಯ ವಿರೋಧಿಸುವವರು ರೀತಿಯ ಪ್ರಶ್ನೆಯನ್ನು ಹುಟ್ಟುಹಾಕಿದ್ದಾರೆ. ನಿಜಕ್ಕೂ ಇದು ಆಲೋಚಿಸಬಹುದಾದ ವಿಚಾರ. ಹಿಂದೆ ಇಲ್ಲದ್ದು ಈಗ್ಯಾಕೆ? ಇದರ ಅಗತ್ಯ ಇದೆಯಾ? ಆಗ ಅಪ್ರಸ್ತುತವಾಗಿದ್ದು ಈಗ ಪ್ರಸ್ತುತವಾ? ಎಂದು ನಮ್ಮನ್ನೇ ನಾವು ಪ್ರಶ್ನಿಸಿಕೊಳ್ಳುತ್ತಲೇ ಉತ್ತರವನ್ನು ಕಂಡುಕೊಳ್ಳಬೇಕಾಗಿದೆ.

ಯಾರು ಏನೇ ಹೇಳಲಿ ಕಾಲ ಮಾತ್ರ ಬದಲಾಗುತ್ತಲೇ ಇರುತ್ತದೆ. ‘‘ಎಂದೂ ಕಾಲಕ್ಕೆ ತಕ್ಕಂತೆ ನಡೆಯಬೇಕು ಎಂದು ಅಣ್ಣವರೇ ಹಾಡಿದ್ದಾರೆ. ಅಗತ್ಯ ಮತ್ತು ಅನುಕೂಲತೆಗಳು ಆಯಾ ಕಾಲದ ಸನ್ನಿವೇಶಕ್ಕೆ ತಕ್ಕಂತೆ ಪರಿವರ್ತನೆಯಾಗಲೇ ಬೇಕಾಗುತ್ತದೆ. ಪರಿವರ್ತನೆಯೊಂದೇ ಜಗದ ನಿಯಮ. ಹಾಗೇನಾದರೂ ನಾವು ಬದಲಾಗುವುದಿಲ್ಲ ಎಂದು ಹಠ ಹಿಡಿದು ಕುಳಿತರೆ ನಿಂತ ನೀರಾಗಿ ಬಿಡುತ್ತೇವೆ. ಬದಲಾವಣೆಯನ್ನು ತರಲು ಸಾಧ್ಯವೇ ಇಲ್ಲ ಎಂದರೆ ಜನತೆ ಅದಕ್ಕೆ ಬದಲಾಗಿ ಕಾಲ ಎನ್ನುವುದು ಪರ್ಯಾಯ ಮಾರ್ಗವನ್ನು ಕಂಡುಕೊಳ್ಳುತ್ತದೆ. ಉದಾಹರಣೆಗೆ ಹಿಂದೂ ಧರ್ಮ ಬದಲಾಗಲು ಬಯಸದೇ ತನ್ನ ಕರ್ಮಠತನವನ್ನು ಕಾಪಾಡಿಕೊಂಡು ಬಂದಿದ್ದರಿಂದಲೇ ಪರ್ಯಾಯವಾಗಿ ಬುದ್ದಿಸಂ, ಜೈನಿಸಂ, ಲಿಂಗಾಯಿತ ಧರ್ಮಗಳು ಹುಟ್ಟಿದವು. ಹಿಂದುತ್ವದ ಸಿದ್ದಾಂತಕ್ಕೆ ವಿರುದ್ದವಾಗಿ ಹಲವಾರು ಸಿದ್ದಾಂತಗಳು ರೂಪಗೊಂಡವು. ಅಕಸ್ಮಾತ್ ಕಾಲದ ಅಗತ್ಯಕ್ಕೆ ತಕ್ಕಂತೆ ಸಕಾರಾತ್ಮಕವಾಗಿ ಹಿಂದೂ ಧರ್ಮ ಬದಲಾಗುತ್ತಾ ಜನತೆಗೆ ಸ್ಪಂದಿಸುತ್ತಾ ಹೋಗಿದ್ದರೆ ಬೇರೆ ಧರ್ಮಗಳು ಹುಟ್ಟುವ ಪ್ರಮೇಯವೇ ಬರುತ್ತಿರಲಿಲ್ಲ. ಹಾಗೊಂದು ವೇಳೆ ಹುಟ್ಟಿದ್ದರೂ ಸುದೀರ್ಘ ಕಾಲ ಬದುಕುತ್ತಿರಲಿಲ್ಲ. 

ಈಗ ಡಬ್ಬಿಂಗ್ ವಿಚಾರದಲ್ಲೂ ಆಗಿದ್ದೂ ಇದೆ.

ಅದು ಅರವತ್ತರ ದಶಕದ ಆರಂಭ ಕಾಲ. ಕನ್ನಡ ಸಿನೆಮಾ ರಂಗ ಇನ್ನೂ ಮಗು. ಅದೇ ತಾನೆ ಕಣ್ಣುಬಿಟ್ಟು ಜಗತ್ತಿನ ಸಿನೆಮಾ ಬೆಳವಣಿಗೆಯತ್ತ ಅಚ್ಚರಿಯಿಂದ ನೋಡುತ್ತಿತ್ತು. ಆಗೊಂದು ಈಗೊಂದು ಸಿನೆಮಾಗಳು ಕನ್ನಡದಲ್ಲಿ ಹರಸಾಹಸದಿಂದ ತಯಾರಾಗುತ್ತಿದ್ದವು. ಹಾಗೆ ತಯಾರಾದ ಸಿನೆಮಾಗಳ ಭಾಷೆ ಕನ್ನಡವಾಗಿರುತ್ತಿತ್ತೆ ಹೊರತು ಸಂಪೂರ್ಣ ನಿರ್ಮಾಣ ಹೊರರಾಜ್ಯವಾದ ತಮಿಳು ನಾಡಿನ ಮದ್ರಾಸ್ನಲ್ಲಾಗುತ್ತಿತ್ತು. ಅಲ್ಲಿಯ ಸ್ಟುಡಿಯೋಗಳು ಕನ್ನಡ ಸಿನೆಮಾಗಳಿಗೆ ಹಗಲು ಹೊತ್ತಿನಲ್ಲಿ  ದೊರೆಯುತ್ತಿರಲಿಲ್ಲ. ರಾತ್ರಿ ಹೊತ್ತಿನಲ್ಲಿ ಕನ್ನಡ ಸಿನೆಮಾದ ಶೂಟಿಂಗ್ ನಡೆಸಬೇಕಾದ ಅನಿವಾರ್ಯತೆ ಇತ್ತು. ಪ್ರೊಸೆಸಿಂಗ್ ಕೆಲಸಗಳೆಲ್ಲವೂ ಸ್ಟುಡಿಯೋದವರು ಬಿಡುವಿದ್ದಾಗ ರಾತ್ರಿ ಪಾಳಯದಲ್ಲಿ ಮಾಡಬೇಕಾಗಿತ್ತು. ಭಾರತೀಯ ಸಿನೆಮಾರಂಗದಲ್ಲಿ ಕನ್ನಡ ಸಿನೆಮಾಗಳಿಗೆ ಅಸ್ತಿತ್ವವೇ ಇಲ್ಲದ ಹಾಗಾಗಿತ್ತು. ಕನ್ನಡ ಸಿನೆಮಾ ತಯಾರಿಕರಿಗೆ ತಮ್ಮದೇ ಆದ ಒಂದು ಸ್ಟುಡಿಯೋ ಇರಲಿಲ್ಲ, ತಂತ್ರಜ್ಞರೂ ಇರಲಿಲ್ಲ, ರಿಕಾರ್ಡಿಂಗ್ ವ್ಯವಸ್ಥೆ ಇರಲಿಲ್ಲ.... ಎಲ್ಲದಕ್ಕೂ ಪರರನ್ನು ಬೇಡಿಕೊಳ್ಳುವಂತಹ ಹೀನಾಯ ಸ್ಥಿತಿಯಲಿ ಕನ್ನಡ ಸಿನೆಮಾ ರಂಗವಿತ್ತು.

ಮೊಟ್ಟ ಮೊದಲ ಕನ್ನಡದ ಮಾತಿನ ಚಿತ್ರ 'ಸತಿ ಸುಲೋಚನಾ' (1934) ಮತ್ತು ಭಕ್ತದೃವ ಸಿನೆಮಾಗಳು ಬಾಂಬೆ ಮತ್ತು ಕೊಲ್ಲಾಪುರದಲ್ಲಿ  ತಯಾರಾಗಿದ್ದವು. 1935 ರಿಂದ 1945 ರ ವರೆಗೆ ಕೇವಲ 13 ಸಿನೆಮಾಗಳು ಮಾತ್ರ ಕನ್ನಡ ಭಾಷೆಯಲ್ಲಿ ತಯಾರಾದವು. 1955 ರಷ್ಟೊತ್ತಿಗೆ 50 ಕ್ಕಿಂತಲೂ ಕಡಿಮೆ ಸಿನೆಮಾಗಳು ಮದ್ರಾಸನಲ್ಲಿ ತಯಾರಾಗಿ ಮೈಸೂರು ರಾಜ್ಯದಲ್ಲಿ ಬಿಡುಗಡೆಗೊಂಡವು. ರಾಜಕುಮಾರರವರ ಮೊದಲ ಸಿನೆಮಾ ಬೇಡರ ಕಣ್ಣಪ್ಪ ಬಿಡುಗಡೆಯಾಗಿದ್ದು 1954ರಲ್ಲಿ . ತದನಂತರದ ನಾಲ್ಕು ದಶಕಗಳ ಕಾಲ ಕನ್ನಡ ಚಿತ್ರರಂಗವನ್ನು ತಮ್ಮ ಅಭಿನಯ ಸಾಮರ್ಥ್ಯದಿಂದ ಆಳಿದವರು  ವರನಟ ರಾಜಕುಮಾರರು.

ಷ್ಟೊಂದು ಶ್ರಮಪಟ್ಟು ಕನ್ನಡ ಭಾಷೆಯ ಸಿನೆಮಾ ತೆಗೆಯುವ ಬದಲಾಗಿ ಈಗಾಗಲೇ ಸಿದ್ದವಾದ ಅನ್ಯಭಾಷೆಗಳ ಸಿನೆಮಾಗಳನ್ನೇ ನೇರವಾಗಿ ಕರ್ನಾಟಕದಲ್ಲಿ ಬಿಡುಗಡೆ ಮಾಡುವ ಪ್ರಯತ್ನಗಳು ನಡೆದವಾದರೂ ಯಶಸ್ವಿಯಾಗಲಿಲ್ಲ. ಆಗ ಈಗಿನಂತೆ ಬೇರೆ ಭಾಷೆ ಸಿನೆಮಾಗಳಿಗೆ ಆಗಿನ ಜನ ಹೊಂದಾಣಿಕೆಯಾಗಿರಲಿಲ್ಲ. ಸಿನೆಮಾ ಎನ್ನುವುದೂ ಈಗಿನ ಹಾಗೆ ಕ್ರೇಜ್ ಆಗಿರಲಿಲ್ಲ. ಯಾವಾಗ ಪರಭಾಷಾ ಸಿನೆಮಾಗಳು ಕನ್ನಡದಲ್ಲಿ ಅಂದುಕೊಂಡಷ್ಟು ಯಶಸ್ವಿಯಾಗಲಿಲ್ಲವೋ ಆಗ ಕೆಲವು ನಿರ್ಮಾಪಕರು ಬೇರೆ ದಾರಿಯಲ್ಲಿ ಸುಲಭವಾಗಿ ಹಣ ಮಾಡಲು ಬಯಸಿದರು. ಅದೇ ಡಬ್ಬಿಂಗ್.

ಈಗಾಗಲೇ ಹಿಂದಿ, ತಮಿಳು, ತೆಲುಗು ಭಾಷೆಯಲ್ಲಿ ನಿರ್ಮಾಣಗೊಂಡ ಸಿನೆಮಾಗಳನ್ನೇ ಇಟ್ಟುಕೊಂಡು ಕೇವಲ ಭಾಷೆಯನ್ನು ಮಾತ್ರ ಕನ್ನಡಕ್ಕೆ ಬದಲಾಯಿಸಿ ಕರ್ನಾಟಕದಲ್ಲಿ ರಿಲೀಸ್ ಮಾಡಿ ಹಣ ಮಾಡುವ ಹುನ್ನಾರಗಳು ನಡೆದವು. ಆಗ ಕನ್ನಡ ಸಿನೆಮಾವನ್ನೇ ನಂಬಿದ ಕೆಲವು ಜನ ಸಿಡಿದೆದ್ದರು. ಡಬ್ಬಿಂಗ್ ಸಂಸ್ಕೃತಿ ಬಂದರೆ ಕನ್ನಡದ ಸಿನೆಮಾರಂಗ ಮೊಳಕೆಯಲ್ಲೇ ಅವಸಾನವಾಗುತ್ತದೆ ಎಂದು ಅರಿತು ಪ್ರತಿಭಟಿಸಿದರು. ಡಬ್ಬಿಂಗ್ ಪಿಡುಗಿನ ವಿರುದ್ದ  ಹೋರಾಟಕ್ಕಿಳಿದರು. ರಾಜಕುಮಾರ್ರವರೂ ಸಹ ಡಬ್ಬಿಂಗ್ ವಿರೋಧಿ ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲಿದ್ದರು. ಆಗಿನ ಸರಕಾರವೂ ಡಬ್ಬಿಂಗ್ ವಿರೋಧಿ ಚಳುವಳಿಗೆ ಸಹಕರಿಸಿತು. ಆಗ ಡಬ್ಬಿಂಗ್ ನಿಷೇಧ ಜಾರಿಗೆ ಬಂದಿತು. ಮತ್ತು ಅದು ಕಾಲದ ಅಗತ್ಯವೂ ಆಗಿತ್ತು.  ಯಾವಾಗ ಡಬ್ಬಿಂಗ ನಿಷೇಧವಾಯಿತೋ ಅದರಿಂದ ನಿರಾಶೆಗೊಂಡ ಕೆಲವರು ಮತ್ತೆ ಪರ್ಯಾಯವನ್ನು ಕಂಡುಕೊಂಡರು ಅದೇ ರಿಮೇಕ್. ಅನ್ಯ ಭಾಷೆಯ ಯಶಸ್ವಿ ಸಿನೆಮಾಗಳನ್ನು ಕನ್ನಡದಲ್ಲಿ ಮರು ನಿರ್ಮಿಸಿ ಹಣ ಮಾಡಿಕೊಳ್ಳುವ ಕೆಲಸವನ್ನು ಮಾಡತೊಡಗಿದರು. ರಿಮೇಕ್ ಸಂಸ್ಕೃತಿ ಈಗಲೂ ಮುಂದುವರೆದಿದೆ. ಈಗ ದೊಡ್ಡ ದ್ವನಿಯಲ್ಲಿ ಯಾರು ಡಬ್ಬಿಂಗನ್ನು ವಿರೋಧಿಸುತ್ತಿದ್ದಾರೋ ಅವರೆಲ್ಲಾ ರಿಮೇಕ್ ಸಂಸ್ಕೃತಿಯ ಫಲಾನುಭವಿಗಳೇ ಆಗಿದ್ದಾರೆ.

ಹಾಗೆಯೇ ಇನ್ನೂ ಒಂದು ಸಂದರ್ಭ ಬಂದಿತ್ತು. ಅದು ಟಿವಿಯಲ್ಲಿ ಡಬ್ಬಿಂಗ್ ದಾರಾವಾಹಿಗಳನ್ನು ಪ್ರಚಾರಪಡಿಸಲು ತಯಾರಿ ನಡೆದಿತ್ತು. ಸಂಜಯ್ ಖಾನ್ ತಮ್ಮ ಟಿಪು ಕುರಿತ ಹಿಂದಿ ದಾರಾವಾಹಿಯನ್ನು ಕನ್ನಡದಲ್ಲಿ ಡಬ್ ಮಾಡಿ ಖಾಸಗಿ ಚಾನೆಲ್ನಲ್ಲಿ  ಪ್ರಸಾರಮಾಡಲು ದೊಡ್ಡದಾಗಿಯೇ ತಯಾರಿ ಮಾಡಿಕೊಂಡಿದ್ದರು. ಆಗಿದ್ದಿದ್ದೇ ಒಂದು ಸರಕಾರಿ ದೂರದರ್ಶನ ಚಾನೆಲ್ ಹಾಗೂ ಇನ್ನೊಂದು ಖಾಸಗಿ ಒಡೆತನದ ಸನ್ ನೆಟ್ವರ್ಕನ ಉದಯಾ ಚಾನೆಲ್. ನಂತರ ಹುಟ್ಟಿದ್ದು ಈಟಿವಿ. ಆಗ ತಾನೆ ಸರಕಾರಿ ಸಾಮ್ಯತೆಯಿಂದ ದೂರದರ್ಶನವೆನ್ನುವುದು ಮುಕ್ತವಾಗಿ ಖಾಸಗಿ ವ್ಯಕ್ತಿಗಳಿಗೂ ಪರವಾನಿಗೆ ಸಿಕ್ಕಿತ್ತು. ಹೀಗೆ ಆರಂಭದ ಘಟ್ಟದಲ್ಲೇ ಬೇರೆ ಭಾಷೆಯ ದಾರಾವಾಹಿಗಳು ಕನ್ನಡದಲ್ಲಿ ಡಬ್ ಆಗಿ ಬಂದರೆ ಕನ್ನಡದಲ್ಲಿ ಕಾರ್ಯಕ್ರಮಗಳನ್ನು ರೂಪಿಸಲು ಸಾಧ್ಯವಾಗುವುದೇ ಇಲ್ಲ ಎನ್ನುವುದನ್ನು ಮನಗಂಡ ಕೆಲವು ಕನ್ನಡ ಸಂಘಟನೆಗಳು ರಾಜಕುಮಾರ್ರವರ ಮುಂದಾಳತ್ವದಲ್ಲಿ ಪ್ರತಿಭಟನೆಗಿಳಿದರು. ಅಲ್ಲಿಗೆ ಟಿವಿಯನ್ನು ಆಕ್ರಮಿಸಿಕೊಳ್ಳಲು ಬಂದಿದ್ದ ಡಬ್ಬಿಂಗ್ ಭೂತ ದೂರವಾಯಿತು. ತಮಿಳು ಹಾಗೂ ತೆಲುಗು ಭಾಷಿಕರ ಮಾಲಿಕತ್ವದಲ್ಲಿರುವ ಖಾಸಗಿ ಚಾನೆಲ್ಗಳಲ್ಲಿ ಕನ್ನಡಿಗರು ತಮ್ಮ ನೆಲದ ಸಂಸ್ಕೃತಿಗೆ ತಕ್ಕಂತೆ ದಾರಾವಾಹಿಗಳನ್ನು ತಯಾರಿಸಲು ಸಹಕಾರಿಯಾಯಿತು. ಸಹಸ್ರಾರು ಕಲಾವಿದರು, ತಂತ್ರಜ್ಞರು ಹಾಗೂ ಕಾರ್ಮಿಕರಿಗೆ ಅನ್ನಕ್ಕೆ ದಾರಿಯಾಯಿತು.

ಡಬ್ಬಿಂಗ್ ನಿಷೇಧವೆನ್ನುವುದು ಸಿನೆಮಾ ಮತ್ತು ಟಿವಿಗಳ ಆರಂಭಿಕ ಬೆಳವಣಿಗೆಯ ಕಾಲದಲ್ಲಿ ಅತ್ಯಂತ ಸೂಕ್ತವಾದ ನಿರ್ಧಾರವಾಗಿತ್ತು ಎನ್ನುವುದರಲ್ಲಿ ಎರಡು ಮಾತಿಲ್ಲ. ಅದು ಆಗಿನ ಕಾಲದ ಅಗತ್ಯವೂ ಆಗಿತ್ತು. ಡಬ್ಬಿಂಗ್ ನಿಷೇಧಗೊಂಡು ಐದೂವರೆ ದಶಕಗಳೇ ಆಗಿವೆ. ಆಗ ಮಗುವಾಗಿದ್ದ ಕನ್ನಡ ಸಿನೆಮಾರಂಗ ಈಗ ಪ್ರೌಢಾವಸ್ತೆಗೆ ಬಂದಿದೆ. ಆದರೆ ಡಬ್ಬಿಂಗ್ ವಿರೋಧಿಗಳು ಮಾತ್ರ ಪ್ರೌಢರಾಗದೆ ಇನ್ನೂ ಶೈಶವಾವಸ್ಥೆಯಲ್ಲೇ ಇದ್ದಾರೆ. ಈಗ ಕರ್ನಾಟಕ ಚಲನಚಿತ್ರ ತಯಾರಿಯಲ್ಲಿ ಸ್ವಾವಲಂಭನೆಯನ್ನು ಸಾಧಿಸಿದೆ. ಬೆಂಗಳೂರಿನಲ್ಲೇ ಪೈಪೋಟಿಗೆ ಬೀಳುವಂತೆ ಒಳಾಂಗಣ ಮತ್ತು ಹೊರಾಂಗಣ ಸ್ಟುಡಿಯೋಗಳು ಸರಕಾರಿ ಹಾಗೂ ಖಾಸಗಿ ಒಡೆತನದಲ್ಲಿ ಆರಂಭಗೊಂಡಿವೆ. ಎಡಿಟಿಂಗ್ ಹಾಗೂ ರಿಕಾರ್ಡಿಂಗ್ ಸ್ಟುಡಿಯೋಗಳಂತೂ ಬೇಕಾದಷ್ಟು ಆರಂಭಗೊಂಡಿವೆ. ಕ್ಯಾಮರಾ ಲೈಟಿಂಗ್ಗಳನ್ನು ಬಾಡಿಗೆ ಕೊಡುವ ಯುನಿಟ್ಗಳು ಸಾಕಷ್ಟಿವೆ. ಕನ್ನಡದ ಕೆಲವು ನಾಯಕರು ಸ್ವತಃ ಸಿನೆಮಾ ಯುನಿಟ್ಗಳನ್ನು, ಬೆಲೆಬಾಳುವ ಕ್ಯಾಮರಾಗಳನ್ನು ಇಟ್ಟುಕೊಂಡು ತಾವು ನಟಿಸುವ ಸಿನೆಮಾಗಳಿಗೆ ಬಂಡಲ್ ಆಪರ್ ಕೊಡುವಷ್ಟು ಶ್ರೀಮಂತರಾಗಿದ್ದಾರೆ. ಸಿನೆಮಾ ಮಾಡ್ತೀರಿ ಎಂದರೆ ಸಂಪೂರ್ಣ ಸಿನೆಮಾ ತಾಂತ್ರಿಕತೆಯ ಗುತ್ತಿಗೆ ಪಡೆಯುವ ಗುತ್ತಿಗೆದಾರರೂ ಇದ್ದಾರೆ. ಕನ್ನಡದಲ್ಲಿ ತಯಾರಾದ ಅದೆಷ್ಟೋ ಸಿನೆಮಾಗಳೇ ಬೇರೆ ಭಾಷೆಗಳಿಗೆ ಡಬ್ ಆಗುವಷ್ಟು ಕನ್ನಡ ಸಿನೆಮಾರಂಗ ಬೆಳೆದು ನಿಂತಿದೆ. ಬೇರೆ ಯಾವುದೇ ಭಾಷೆಯ ಆತಂಕವನ್ನು ನಿವಾರಿಸಿಕೊಳ್ಳುವಷ್ಟು ನಮ್ಮ ಸಿನೆಮಾ ಕ್ಷೇತ್ರ ಸ್ವಾವಲಂಬನೆಯನ್ನು ಸಾಧಿಸಿದೆ

 ಈಗ ಸಿನೆಮಾದವರು ಬದಲಾಗಬೇಕಿದೆ. ತಮ್ಮ ಕರ್ಮಠತನದಿಂದ ಹೊರಬರಬೇಕಿದೆ. ಅನ್ಯ ಭಾಷಾ ಸಿನೆಮಾಗಳ ರಿಮೇಕನ್ನು ಅಪ್ಪಿ ಮುದ್ದಾಡುವ ನಾಯಕ ನಿರ್ದೇಶಕ ನಿರ್ಮಾಪಕರು ಈಗ ಡಬ್ಬಿಂಗ್ಗೆ ಅವಕಾಶ ಕೊಡಬೇಕಾಗಿದೆ. ತಮ್ಮ ಸ್ವಾರ್ಥವನ್ನು ಬಿಟ್ಟು ಕನ್ನಡ ಪ್ರೇಕ್ಷಕರ ಬಗ್ಗೆ, ಕನ್ನಡ ಭಾಷೆಯ ಬಗ್ಗೆ ಆಲೋಚಿಸಬೇಕಿದೆ. ಹಾಗೇನಾದರೂ ಡಬ್ಬಿಂಗ್ ವಿರೋಧಿಸಿ ಹಠ ಹಿಡಿದು ತಮ್ಮ ಕರ್ಮಠತನವನ್ನು ಖಾಯಂಗೊಳಿಸಿಕೊಳ್ಳಲು ಪ್ರಯತ್ನಿಸಿದ್ದೇ ಆದರೆ ಜನರು ಅನಿವಾರ್ಯವಾಗಿ ಪರ್ಯಾಯ ಮಾರ್ಗಗಳನ್ನು ಹುಡುಕಿಕೊಳ್ಳುತ್ತಾರೆ. ಅದು ಕನ್ನಡ ಭಾಷೆಗೆ ಮಾರಕವಾಗುವುದರಲ್ಲಿ ಸಂದೇಹವಿಲ್ಲ.

ಈಗ ಅರವತ್ತು ಎಪ್ಪತ್ತರ ದಶಕದ ಕಾಲದ ಪ್ರೇಕ್ಷಕರಿಲ್ಲ. ಜನತೆ ಜಾಗತೀಕರಣದ ಕಾಲದಲ್ಲಿ ಬದುಕುತ್ತಿದ್ದಾರೆ. ಜನ ತಾಂತ್ರಿಕವಾಗಿ ಬೆಳೆದಿದ್ದಾರೆ. ತಮಗೆ ಬೇಕಾದುದನ್ನು ಪಡೆದುಕೊಳ್ಳುವಲ್ಲಿ ಸಮರ್ಥರಾಗಿದ್ದಾರೆ. ಬೇರೆಲ್ಲಾ ಭಾಷೆಯಲ್ಲಿ ಬರುವ ಅತ್ಯುತ್ತಮ ಜನಪ್ರೀಯ ಸಿನೆಮಾಗಳನ್ನು ಡಿವಿಡಿಗಳ ಮೂಲಕ ಇಲ್ಲವೇ ಇಂಟರನೆಟ್ ಮೂಲಕ ಮೂಲ ಭಾಷೆಯಲ್ಲೇ ನೋಡುತ್ತಾರೆ. ಕರ್ನಾಟಕದಲ್ಲಿ ಬಿಡುಗಡೆಯಾದ ಹಿಂದಿ ತಮಿಳು ತೆಲುಗು ಮುಂತಾದ ಭಾಷೆಗಳ ಸಿನೆಮಾಗಳನ್ನು ಥೀಯಟರನಲ್ಲೇ ಹೋಗಿ ನೋಡಿ ಆನಂದಿಸುತ್ತಾರೆ. ಇದರಿಂದಾಗಿ ತಮಗರಿವಿಲ್ಲದಂತೆ ಕನ್ನಡಿಗರು ಭಾಷೆಯ ಸೆಳತಕ್ಕೆ ಒಳಗಾಗುತ್ತಾರೆ. ಮನರಂಜನೆ ಪಡೆಯಲು ಅನ್ಯ ಭಾಷೆಯನ್ನು ಸಾವಕಾಶವಾಗಿ ಕಲಿಯಲು ಆರಂಭಿಸುತ್ತಾರೆ. ನಂತರದ ಕಾಲಘಟ್ಟದಲ್ಲಿ ಬೇರೆ ಭಾಷೆಯ ಜನರೊಂದಿಗೆ ಅವರದೇ ಭಾಷೆಯಲ್ಲಿ ವ್ಯವಹರಿಸಲು ತೊಡಗುತ್ತಾರೆ. ಬೇರೆ ಭಾಷಿಕರು ಕರ್ನಾಟಕಕ್ಕೆ ಬಂದರೆ ಅನಿವಾರ್ಯವಾಗಿ ಕನ್ನಡ ಕಲಿಯುವಂತಹ ವಾತಾವರಣವನ್ನು ನಿರ್ಮಿಸುವ ಬದಲಾಗಿ ಕನ್ನಡಿಗರೇ ಅವರ ಭಾಷೆಯಲ್ಲಿ ಮಾತಾಡುವ ಮೂಲಕ ಅವರಿಗೆ ಕನ್ನಡದ ಹಂಗಿಲ್ಲದೇ ಬದುಕುವ ಅವಕಾಶವನ್ನು ಇಲ್ಲ ಕಲ್ಪಿಸಿಕೊಡಲಾಗುತ್ತಿದೆ. ಹೀಗಾದಾಗ ಕನ್ನಡದ ಗತಿಯೇನು? ಈಗಾಗಲೇ ಇಂಗ್ಲೀಷ್ ಭಾಷೆ ಕನ್ನಡಿಗರ ಮೇಲೆ ಮೋಡಿ ಮಾಡಿದೆ. ಹಿಂದಿ ತನ್ನ ಸಾರ್ವಭೌಮತೆಯನ್ನು ಕಾಪಾಡಿಕೊಳ್ಳಲು ಹೊಂಚು ಹಾಕಿದೆ. ಈಗ ನೆರೆಹೊರೆಯ ಭಾಷೆಗಳೂ ಸಿನೆಮಾಗಳ ಮೂಲಕ ಕನ್ನಡಿಗರ ಬಾಯಲ್ಲಿ ಆಡತೊಡಗಿದರೆ ಕನ್ನಡ ಭಾಷೆಯ ಸ್ಥಿತಿ ಚಿಂತಾಜನಕವಾಗುವುದರಲ್ಲಿ ಸಂದೇಹವಿಲ್ಲ. ಈಗಾಗಲೇ ಬೆಂಗಳೂರಿನಲ್ಲಿ ಕನ್ನಡಿಗರ ಸಂಖ್ಯೆ ಕಡಿಮೆಯಾಗುತ್ತಿದೆ. ಅಳಿದುಳಿದ ಕನ್ನಡಿಗರೂ ಅನ್ಯ ಭಾಷೆಗಳಲ್ಲಿ ವ್ಯವಹರಿಸತೊಡಗಿದರೆ ಮುಂದೊಂದು ದಿನ ಕನ್ನಡಿಗರೇ ಕನ್ನಡನಾಡಲ್ಲಿ ಅಲ್ಪಸಂಖ್ಯಾತರಾಗಬೇಕಾಗುತ್ತದೆ.


ಅಪಾಯವನ್ನು ಪೂರ್ವಭಾವಿಯಾಗಿ ಮನಗಂಡಾದರೂ ಡಬ್ಬಿಂಗಗೆ ಅವಕಾಶ ಕೊಡಬೇಕಾಗಿದೆ. ಹೇಗೂ ಅನ್ಯ ಭಾಷೆಯ ಸಿನೆಮಾಗಳನ್ನು, ಟಿವಿ ಚಾನೆಲ್ಗಳನ್ನು  ನೋಡುವ ಜನರಿಗೆ ಕನ್ನಡ ಭಾಷೆಯ ಮೂಲಕವೇ ಬೇರೆ ಭಾಷೆಗಳ ಸಿನೆಮಾ ಹಾಗೂ ಟಿವಿ ಕಾರ್ಯಕ್ರಮಗಳನ್ನು ನೋಡುವ ಅವಕಾಶವನ್ನು ಕೊಟ್ಟರೆ ಭಿನ್ನ ಭಾಷೆಗಳ ಪ್ರಭಾವ ಕಡಿಮೆಯಾಗಿ ಕನ್ನಡ ಭಾಷೆ ಬೆಳೆಯದಿದ್ದರೂ ಉಳಿಯುವ ಸಾಧ್ಯತೆಗಳು ಹೆಚ್ಚಾಗಿವೆ. ಇದರ ಜೊತೆಗೆ ನಮ್ಮ ಮುಂದಿನ ಜನಾಂಗ ತಮ್ಮ ಭಾಷೆಯ ಮೂಲಕ ಜಗತ್ತಿಗೆ ತೆರೆದುಕೊಳ್ಳಬೇಕಾಗಿದೆ. ಜಗತ್ತಿನ ಎಲ್ಲಾ ಭಾಷೆಯ ಜ್ಞಾನ, ಮನರಂಜನೆ, ವ್ಯವಹಾರಗಳ ಬಗ್ಗೆ ಅರಿವನ್ನು ಹೊಂದಬೇಕಾಗಿದೆ. ಬೇರೆ ಭಾಷೆ ಬರುವುದಿಲ್ಲ ಎನ್ನುವ ಕೀಳರಮೆ ಇದ್ದವರೂ ಸಹ ತಮ್ಮ ಮಾತೃಭಾಷೆಯಲ್ಲಿ ಜಗದ ಆಗುಹೋಗುಗಳನ್ನು ನೋಡಿ ತಮ್ಮ ಗ್ರಹಿಕೆಯನ್ನು  ಹೆಚ್ಚಿಸಿಕೊಳ್ಳಬಹುದಾಗಿದೆ.

ಭಾಷೆ ಎನ್ನುವುದು ಒಂದು ಜನಾಂಗದ ಸಂಸ್ಕೃತಿ ನಿರ್ಮಿತಿಯಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ಭಾಷೆಯನ್ನು ಕಳೆದುಕೊಂಡ ಜನಾಂಗ ತಮ್ಮ ಸಂಸ್ಕೃತಿಯನ್ನೂ ನಿಧಾನವಾಗಿ ಕಳೆದುಕೊಳ್ಳುತ್ತಾರೆ. ಕೊನೆಗೊಂದು ದಿನ ತಮ್ಮತನವನ್ನೇ ಕಳೆದುಕೊಂಡು ಪರಾವಲಂಬಿಗಳಾಗಿ ಬದುಕಬೇಕಾಗುತ್ತದೆ. ಮೊದಲೇ ಆಂಗ್ಲ ಭಾಷಾ ಶಿಕ್ಷಣ ಮಾಧ್ಯಮ ನಮ್ಮ ಕನ್ನಡ ಭಾಷೆಗೆ ಬಹುದೊಡ್ಡ ಕಂಟಕವಾಗಿದೆ. ಇಂಗ್ಲೀಷ ಮೋಹಪೀಡಿತರಿಗೆ ಕನ್ನಡವನ್ನು ಮನರಂಜನಾ ಮಾಧ್ಯಮಗಳ ಮೂಲಕವಾದರೂ ಕೊಡಬೇಕಾಗಿದೆ. ದುಡಿಮೆಗಾಗಿ ಆಂಗ್ಲ ಭಾಷೆಯನ್ನು ಅಪ್ಪಿಕೊಂಡವರನ್ನು, ಮನರಂಜನೆಗಾಗಿ ಬೇರೆ ಭಾಷಾ ಸಿನೆಮಾಗಳನ್ನು ಒಪ್ಪಿಕೊಂಡವರನ್ನು ಹಾಗೂ ವ್ಯವಹಾರಿಕವಾಗಿ ಅನ್ಯ ಭಾಷೆಗಳನ್ನು ರೂಢಿಸಿಕೊಂಡವರನ್ನು, ಮತ್ತೆ ಮಾತೃಭಾಷೆಗೆ ಹತ್ತಿರವಾಗುವಂತೆ ಮಾಡುವ ಶಕ್ತಿ ದೃಶ್ಯಮಾಧ್ಯಮಗಳಿಗಿದೆ. ಅದನ್ನು ಡಬ್ಬಿಂಗ್ ಮೂಲಕ ಸಾಧಿಸಬಹುದಾಗಿದೆ. ಡಬ್ಬಿಂಗ್ ಬಂದ ತಕ್ಷಣ ಎಲ್ಲವೂ ಬದಲಾಗುತ್ತದೆ ಎನ್ನುವ ಭ್ರಮೆ ಅನಗತ್ಯ. ಆದರೆ ದೀರ್ಘ ಕಾಲಘಟ್ಟದಲ್ಲಿ ಅದರಿಂದ ಕನ್ನಡ ಭಾಷೆಗೆ ಪ್ರಯೋಜನವಿದೆ. ಏನು ಇಲ್ಲಾ ಎಂದರೂ ನಮ್ಮ ಮುಂದಿನ ಜನಾಂಗ ಕನ್ನಡದಲ್ಲಿ ಜಗತ್ತನ್ನು ಗ್ರಹಿಸುವ, ಅಗತ್ಯ ಜ್ಞಾನವನ್ನು ಪಡೆಯುವ ಹಾಗೂ ಕೀಳರಮೆಯಿಂದ ಹೊರಬರುವ ಸಾಧ್ಯತೆಗಳಂತೂ ಇವೆ.

ಹಾಗೆಯೇ ಕಳೆದ ವರ್ಷ ಸುವರ್ಣ ಕನ್ನಡ ವಾಹಿನಿಯವರು ಈಗಾಗಲೇ ಸ್ಟಾರ್ ಚಾನಲ್ನಲ್ಲಿ ಪ್ರಸಾರಗೊಂಡು ಅತ್ಯಂತ ಯಶಸ್ವಿಯಾದ ಅಮಿರ್ ಖಾನ್ರವರ ಸಮಾಜಮುಖಿ ಸತ್ಯಮೇವಜಯತೆ ಎನ್ನುವ ರಿಯಾಲಿಟಿ ಕಾರ್ಯಕ್ರಮವನ್ನು ಕನ್ನಡದಲ್ಲಿ ಡಬ್ ಮಾಡಿ ಪ್ರಸಾರಮಾಡಲು ಸಿದ್ದತೆ ಮಾಡಿಕೊಂಡರು. ಕುರಿತು ಯಾವಾಗ ಸುದ್ದಿಮಾಧ್ಯಮಗಳಲ್ಲಿ ಪ್ರಚಾರವಾಯಿತೋ ಆಗ ಟಿವಿ ಮಾಧ್ಯಮ ಹಾಗೂ ಕನ್ನಡ ಚಿತ್ರರಂಗದವರು ಎಚ್ಚೆತ್ತುಕೊಂಡರು. ಒಂದು ಆಯೋಗ ಮಾಡಿಕೊಂಡು ಸುವರ್ಣ ವಾಹಿನಿಗೆ ಹೋಗಿ ಯಾವುದೇ ಕಾರಣಕ್ಕೂ ಡಬ್ ಮಾಡಿದ ಕಾರ್ಯಕ್ರಮಗಳನ್ನು ಪ್ರಸಾರ ಮಾಡಕೂಡದು ಎಂದು ತಾಕೀತು ಮಾಡಿಬಂದರು. ಒಂದು ಅತ್ಯುತ್ತಮ ಸಮಾಜಮುಖಿ ಕಾರ್ಯಕ್ರಮವನ್ನು ಕನ್ನಡದಲ್ಲಿ ನೋಡುವ ಭಾಗ್ಯದಿಂದ ಕನ್ನಡಿಗರು ವಂಚಿತರಾದರು.

ಇಷ್ಟಕ್ಕೂ ಡಬ್ಬಿಂಗ್ ನಿಷೇಧಕ್ಕೆ ಯಾವುದೇ ಕಾನೂನಿನ ಮಾನ್ಯತೆ ಇಲ್ಲ. ಇಂತಹ ಭಾಷಾವಾರು ಏಕಮುಖಿ ನಿರ್ಣಯಗಳಿಗೆ ಸಂವಿಧಾನದಲ್ಲಿ ಅವಕಾಶವೂ ಇಲ್ಲ. ಕೇವಲ ಗುಂಪುಗಾರಿಕೆಯಿಂದ, ದಾದಾಗಿರಿಯಿಂದ, ಒತ್ತಡ ಒತ್ತಾಯ ತಂತ್ರಗಳಿಂದ, ಪರವಾಗಿರುವವರ ಬಾಯಿಮುಚ್ಚಿಸುವುದರಿಂದ ಒಂದು ಕಾಲದ ಅಗತ್ಯತೆಯನ್ನು ತಡೆಯಲು ಸಾಧ್ಯವೇ ಇಲ್ಲ. ದೇಶದ ಸಂವಿಧಾನ ಹಾಗೂ ಕಾನೂನೂ ಸಹ ಡಬ್ಬಿಂಗ್ ವಿರೋಧಿಗಳ ಪರವಾಗಿಲ್ಲ. ಈಗಿನ ಸನ್ನಿವೇಶದಲ್ಲಿ ಅನಿವಾರ್ಯವಾದ ಡಬ್ಬಿಂಗನ್ನು ಒಪ್ಪಿಕೊಂಡು ಸಕಾರಾತ್ಮಕ ಬೆಳವಣಿಗೆಗೆ ಅವಕಾಶ ಮಾಡಿಕೊಡುವುದನ್ನು ಬಿಟ್ಟು ಕರ್ಮಠತನವನ್ನೇ ಸಾಧಿಸಿದರೆ ಅದರಿಂದಾಗುವ ಸೈಡ್ ಎಫೆಕ್ಟ್ಗಳಿಗೆ, ಅಪಾಯಗಳಿಗೆ ಡಬ್ಬಿಂಗ್ ವಿರೋಧಿಗಳೇ ಕಾರಣರಾಗುತ್ತಾರೆ. ನಮ್ಮನ್ನು ಹಾಗೂ ನಮ್ಮ ಮಕ್ಕಳನ್ನು ಜಗತ್ತಿನ ಮನರಂಜನೆ ಹಾಗೂ ಜ್ಞಾನದಿಂದ ವಂಚಿಸಿದ ಆರೋಪವನ್ನೂ ಇವರೇ ಹೊರಬೇಕಾಗುತ್ತದೆ. ಹೀಗಾಗಿ ನಮ್ಮ ಕನ್ನಡ ಸಿನೆಮಾದ ದೇವಾನುದೇವತೆಗಳು ದೊಡ್ಡ ಮನಸ್ಸು ಮಾಡಿ ಅಭಿಮಾನಿ ದೇವರುಗಳನ್ನು ಡಬ್ಬಿಂಗ್ ನಿರ್ಬಂಧದಿಂದ ಮುಕ್ತರನ್ನಾಗಿಸಬೇಕಾಗಿದೆ. ಮಾತೃಭಾಷೆಯಲ್ಲಿ ತಮಗಿಷ್ಟವಾದುದನ್ನು ನೋಡುವ ಪ್ರೇಕ್ಷಕರ ಹಕ್ಕನ್ನು ಗೌರವಿಸಲೇ ಬೇಕಿದೆ. ಅಂದು ಅನಗತ್ಯವಾದ ಡಬ್ಬಿಂಗ್ ಇಂದು ಅತ್ಯಗತ್ಯವಾಗಿದೆ.  

                                                    -ಶಶಿಕಾಂತ ಯಡಹಳ್ಳಿ 
               


3 ಕಾಮೆಂಟ್‌ಗಳು:

  1. ನೀವು ಹೇಳಿರುವುದು ಸೂಕ್ತವಾಗಿದೆ. ಒಂದು ಕ್ಷಣ ವಿವೇಚನೆಯಿಂದ ಯೋಚಿಸಿದರೆ ಕನ್ನಡದ ಉಳಿವಿನ ಕಾರಣಕ್ಕಾದರೂ ಡಬ್ಬಿಂಗ್ ಒಪ್ಪಿಕೊಳ್ಳುವುದು ಸೂಕ್ತವೆನ್ನಿಸುತ್ತದೆ. ಈಗ ವಿರೋಧಿಸುತ್ತಿರುವವರಲ್ಲಿ ಹಲವರು, ಪರ ಭಾಷೆಯ ಕತೆಗಳಿಗೆ, ತಂತ್ರಜ್ನರಿಗೆ ಮಣೆ ಹಾಕಿ ಕನ್ನಡದ ಪ್ರತಿಭೆಗಳನ್ನು ಕೊಂದವರೇ ಆಗಿದ್ದಾರೆ. ಸಿನಿಮಾಕ್ಕಿಂತ ಭಾಷೆ ದೊಡ್ಡದು ಅದನ್ನು ಉಳಿಸೋಣ.

    ಪ್ರತ್ಯುತ್ತರಅಳಿಸಿ
  2. Part1: ಒಬ್ಬ ಸಾಮಾನ್ಯ ಕನ್ನಡ ಪ್ರೇಕ್ಷಕನ ಪ್ರಶ್ನೆಗಳು
    ಉತ್ತರಿಸಿ ನೋಡೋಣ ?
    •ಬೇರೆಲ್ಲೂ ಇಲ್ಲದ ಡಬ್ಬಿಂಗ್ ನಿಷೇಧವನ್ನು ಅಸಂವಿಧಾನಿಕವಾಗಿ ಜಾರಿಗೆಗೊಳಿಸಿ ಕನ್ನಡದಲ್ಲಿ ಡಬ್ಬಿಂಗ್ ವಿರೋಧಿಸುವ ನೀವು ಕನ್ನಡದ ಮುಗ್ದ ಪ್ರೇಕ್ಷಕರನ್ನ ತನ್ನ ಮನೊರಂಜೆನೆಗೆ ಬೇರೆ ಭಾಷೆಯನ್ನೂ ಅವಲಂಬಿಸಿವಂತೆ ಮಾಡುತ್ತಿರುವುದು ನೀವೇ ಅಲ್ಲವೇ!?ಇನ್ನೆಲ್ಲಿ ಬಂತು ನಿಮ್ಮ ಕನ್ನಡ ಪ್ರೇಮ!?

    • ಬೇರೆ ಭಾಷೆ ಚಿತ್ರಗಳನ್ನು ರಿಮೇಕ್ ಮಾಡುವ ನಿಮಗೆ ಅದೇ ಚಿತ್ರಗಳನ್ನ ಡಬ್ ಮಾಡಿದ್ರೆ ಯಾಕೆ ವಿರೋಧಿಸುತ್ತೀರ.!? ಇದು ಸ್ವಾರ್ಥದ ಪರಮಾವಧಿಯಲ್ಲವೇ !? ಇನ್ನೆಲಿ ಬಂತು ನಿಮ್ಮ ಸೃಜನಶೀಲತೆ !?
    • ಹಲವಾರು ಕನ್ನಡ ಚಿಂತಕರು, ಪ್ರೇಕ್ಷಕರು,ಸಾಹಿತಿಗಳು,ಹೋರಾಟಗಾರರ ಅಭಿಲಾಶಯದಂತೆ ಡಬ್ಬಿಂಗ್ ಬಂದಿದ್ದಾರೆ ಕನ್ನಡ ಇನ್ನಷ್ಟು ಬೆಳೆಯುತ್ತಿತ್ತು ,ಕನ್ನಡ ಪ್ರೇಕ್ಷಕ ,ಮಕ್ಕಳು ಕನ್ನಡ ಭಾಷೆಗೆ ಹತ್ತಿರವಾಗುತ್ತಿದ್ದರು ಮತ್ತು ಎಲ್ಲಾ ಮನೊರಂಜನೆಯು ಕನ್ನಡೀಕರಣಗೊಳ್ಳುತ್ತಿತ್ತು.

    • ಡಬ್ಬಿಂಗ್ ಬಂದರೆ ಸಂಸ್ಕೃತಿ, ಸೃಜನಶೀಲತೆ ಮತ್ತು ಸಂಪ್ರದಾಯ ನಾಶವಗುತ್ತೆ ಅನ್ನುವ ಹೇಳಿಕೆ ಕೊಟ್ಟ ಎಲ್ಲಾ ನಟಿಮಣಿಗಳು ತಮ್ಮ ಅರೆಬರೆ ದೇಹಸಿರಿಯನ್ನು ಪ್ರದರ್ಶಿದವರೆ!ಇನ್ನೆಲಿ ಬಂತು ನಿಮ್ಮ ಸಂಪ್ರದಾಯ & ಸಂಸ್ಕೃತಿ!?

    • ಡಬ್ಬಿಂಗ್ ತಡೆಯುವುದಕ್ಕಾಗಿ ಪ್ರಾಣ ಕೊಡ್ತೀನಿ,ತ್ಯಾಗ ಮಾಡುತ್ತೀನಿ ಅನ್ನುವ ನೀವು ಕಾವೇರಿ,ಕೃಷ್ಣಾ ವಿವಾದದಲ್ಲಿ,ಸಂಬಾಜಿ ಪಾಟೀಲನ ಕನ್ನಡಿಗರ ಶವಯಾತ್ರೆ ಮಾಡುವ ವಿಚಾರದಲ್ಲಿ,ಉತ್ತರ ಭಾರತದಲ್ಲಿ ಕನ್ನಡಿಗರಿಗೆ ಅವಕಾಶ ಕೊಡಬೇಡಿ ಎಂದ ನಿತ್ಯಾನಂದನ ವಿಚಾರದಲ್ಲಿ,ಇನ್ನು ಹತ್ತು ಹಲವು ಕನ್ನಡ/ಕರ್ನಾಟಕ ವಿರೋಧಿ ವಿಚಾರದಲ್ಲಿ ಎಲ್ಲಿ ಹೋಗಿತ್ತು ನಿಮ್ಮ "ಪುರುಷತ್ವ" !?

    ಪ್ರತ್ಯುತ್ತರಅಳಿಸಿ
  3. Part2: ಒಬ್ಬ ಸಾಮಾನ್ಯ ಕನ್ನಡ ಪ್ರೇಕ್ಷಕನ ಪ್ರಶ್ನೆಗಳು
    ಉತ್ತರಿಸಿ ನೋಡೋಣ ?
    ಕನ್ನಡದ ಮಕ್ಕಳನ್ನು ಈಗಾಗಲೇ ಮಕ್ಕಳಿಗಿರುವ ಪರಭಾಷಾ ಚಾನೆಲ್ಗಳಿಗೆ(ವಾಹಿನಿಗಳಿಗೆ) ಮೊರೆಹೊಗುವಂತೆ ಮಾಡಿ ಕನ್ನಡದ ಮಕ್ಕಳನ್ನು ತಾಯ್ನುಡಿಯಿಂದ ಬೇರ್ಪದಿಸುತ್ತಿರುವ ನಿಮಗೆ ಪಾಪ ಪುಣ್ಯವಿಲ್ಲವೆ?ಇನ್ನೆಲಿ ಬಂತು ಕನ್ನಡವನ್ನು ಕಾಪಾಡುವ ನಿಮ್ಮ ಕಾಳಜಿ !?

    • ಡಬ್ಬಿಂಗ್ ನಿಂದ ಕನ್ನಡ ಮನೋರಂಜನೆಯನ್ನು ಕನ್ನಡೀಕರಣಗೊಳಿಸಬಹುದು ಎಂದು ಮಾತನಾಡಿದ ಸಾಹಿತಿಗಳ ಬಗ್ಗೆ ಅವಹೆಳನಕರವಾಗಿ ಮಾತನಾಡುವ ಮತ್ತು ಡಬ್ಬಿಂಗ್ ಪರವಿರುವ ನಿರ್ದೇಶಕ, ನಿರ್ಮಾಪಕರ ಗಂಡಸತ್ವವನ್ನು ಪ್ರಶ್ನಿಸುವ ನೀವು ಬೌದ್ಧಿಕವಾಗಿ ಮತ್ತು ನೈತಿಕವಾಗಿ ದಿವಾಳಿಯಾಗಿದ್ದೀರಿ.

    • ನಮ್ಮಂತಹ ಸಾಮಾನ್ಯ ಕನ್ನಡ ಪ್ರೇಕ್ಷಕ/ವೀಕ್ಷಕ ಡಬ್ಬಿಂಗ್ ಪರವಾಗಿ "ಸುಪ್ರೀಂ ಕೋರ್ಟ್' ಅಥವಾ "ಹೈ ಕೋರ್ಟ್" ಮೊರೆಹೋದಲ್ಲಿ ಇದರಿಂದ ಆಗುವ ಆಗುವ ಘಟನೆಗಳ ಬಗ್ಗೆ "ಕನ್ನಡ ಚಿತ್ರರಂಗ" ಕ್ಕೆ ಅರಿವಿದೆಯೇ ? ಆಗ ಸಾಮಾನ್ಯ ಕನ್ನಡ ಪ್ರೇಕ್ಷಕ/ವೀಕ್ಷಕರ ಪರ ತೀರ್ಪು ಬಂದಲ್ಲಿ ನಿಮಗೆ ಗೊತ್ತಾಗುತ್ತೆ ಯಾವುದು ಸ್ವಾರ್ಥ ,ಯಾವುದು ಜನಪರ ಅಂತ !
    • ತಾಯ್ನುಡಿಯಲ್ಲಿ ಮನೋರಂಜನೆ ಸಿಗದಾಗ ಬೇರೆ ಭಾಷೆಯ ಮನೋರಂಜನೆಗೆ ಮಾರುಹೊಗುವುದು ಸಹಜ. ಈ ಬೆಳವಣಿಗೆ ಇನ್ನೊಂದು ಭಾಷೆಯ ಚಿತ್ರರಂಗಕ್ಕೆ ,ಆ ಭಾಷೆಯ ಬೆಳವಣಿಗೆಗೆ ಮತ್ತು ಪರಭಾಷಿಕರಿಗೆ ಕರ್ನಾಟಕದಲ್ಲಿ ಮಣೆಹಾಕಿ ಕೂರಿಸಿಕೊಂಡಂತೆಯೆ. ಇನ್ನೆಲ್ಲಿ ಬಂತು ನಿಮ್ಮ ಕನ್ನಡ/ಕರ್ನಾಟಕ ಕಾಪಾಡುವ "ಪುರುಷತ್ವ"

    • ಪ್ರಜಾಸತ್ತಾತ್ಮಕವಾಗಿ ತಾಯ್ನುಡಿ ಕನ್ನಡದಲ್ಲಿ ಮನೋರಂಜನೆ ಪಡೆಯುವುದಕ್ಕೆ ಪ್ರತಿಯೊಬ್ಬ ಕನ್ನಡಿಗರಿಗೆ ಹಕ್ಕಿದೆ. ಡಬ್ಬಿಂಗ್ ವಿರೋಧಿಸಿ ಕನ್ನಡಿಗನ ಮನೋರಂಜನ ಹಕ್ಕನ್ನು ಕಿತ್ತುಕೊಳ್ಳುತ್ತಿರುವ ನೀವು ಸಂವಿಧಾನ,ಪ್ರಜಾಪ್ರಭುತ್ವಕ್ಕಿಂತ ದೊಡ್ಡವರಲ್ಲ .

    • ಬೇರೆ ಭಾಷೆಯ ಚಿತ್ರಗಳು ಕರ್ನಾಟಕದಲ್ಲಿ ಅಂಕುಶವಿಲ್ಲದೆ ಬಿಡುಗಡೆಯಾಗುತ್ತಿರುವಾಗ ಬೀದಿಗೆ ಬೀಳದ ಕಲಾವಿದರು """ಅದೇ ಚಿತ್ರಗಳನ್ನು ಕನ್ನಡದಲ್ಲಿ ಡಬ್ ಆಗಿ ಬಿಡುಗಡೆಯಾದರೆ ಕಲಾವಿದರು ಹೇಗೆ ಬೀದಿಗೆ ಬೀಳುತ್ತಾರೆ!?ಬೀದಿಗೆ ಬೀಳುತ್ತಾರೆ ಅನ್ನುವುದು ಶುದ್ಧ ಪೊಳ್ಳುವಾದ.

    • ೨ ಸಾವಿರ ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆ ಮತ್ತು ಕನ್ನಡಿಗ ಪ್ರೇಕ್ಷಕನಿಂದ ಕನ್ನಡ ಚಿತ್ರರಂಗ ಹುಟ್ಟಿಕೊಂಡಿತೆ ಹೊರತು ಕನ್ನಡ ಚಿತ್ರರಂಗದಿಂದ ಏನು ಕನ್ನಡ ಭಾಷೆ,ಕನ್ನಡ ಸಂಸ್ಕೃತಿ ಮತ್ತು ಕನ್ನಡಿಗ ಪ್ರೇಕ್ಷಕ ಹುಟ್ಟಿಕೊಂಡಿಲ್ಲ. ಒಬ್ಬ ಸಾಮಾನ್ಯ ಕನ್ನಡ ಪ್ರೇಕ್ಷಕನಿಗೆ ಏನು ನೋಡಬೇಕು/ಬೇಡ ಎಂದು ನಿರ್ಧರಿಸುವ ಹಕ್ಕನ್ನು ನಿಮಗೆ ಕೊಟ್ಟವರು ಯಾರು?

    • ಈಗೀಗ ಒಳ್ಳೆಯ ಕನ್ನಡ ಚಿತ್ರಗಳು & ಕಿರುತೆರೆ ಕಾರ್ಯಕ್ರಮಗಳು ಬರುತ್ತಿರುವುದು ಸ್ವಾಗತಾರ್ಹ ಮತ್ತು ಪ್ರಶಂಸನೀಯ ಅದರೆ “ಬೇರೆ ಭಾಷಿಕರು ಪ್ರಪಂಚದ ಎಲ್ಲ ಮನೋರಂಜನೆಗಳನ್ನು ತಮ್ಮ ತಮ್ಮ ಭಾಷೆಯಲ್ಲಿ ನೋಡುತ್ತಿರುವಾಗ” ಕೇವಲ ೪- ೫ ಒಳ್ಳೆಯ ಚಿತ್ರಗಳು & ಕಾರ್ಯಕ್ರಮಗಳು ಸಾಕೆ ಒಬ್ಬ ಸಾಮಾನ್ಯ ಕನ್ನಡಿಗನ ಮನೋರಂಜನೆ ತಣಿಸಲು !??

    • ಡಬ್ಬಿಂಗ್ ವಿರೋಧಿಗಳಿಗೆ ಕನ್ನಡ ಭಾಷೆಯ ಗಾತ್ರ, ಕರ್ನಾಟಕ/ಕನ್ನಡ/ಕನ್ನಡಿಗರ ಇತಿಹಾಸ, ಕರ್ನಾಟಕದ ಉದ್ದಗಲ(ಭೂಗೋಳ), ಕನ್ನಡ ಸಾಹಿತ್ಯ & ಸುವರ್ಣಯುಗ ಮೆರೆದ ಕನ್ನಡ ರಾಜವಂಶಗಳ ಬಗ್ಗೆ ಅರಿವಿದೆಯೇ?ಇವುಗಳನ್ನು ಅರಿತವನು ಯಾರು ಡಬ್ಬಿಂಗ್ ಅನ್ನು ವಿರೋಧಿಸಲಾರ

    • ತಮಿಳು,ತೆಲುಗು,ಹಿಂದಿ ಜನರು ತಮ್ಮ ತಮ್ಮ ಭಾಷೆಯಲ್ಲಿ ತಯಾರಾದ ಕಿರುತೆರೆ ಕಾರ್ಯಕ್ರಮಗಳು,ಸಿನೆಮಾಗಳ ಸವಿರುಚಿಯನ್ನು ಸವಿಯುವುದರ ಜೊತೆಗೆ ಜಗತ್ತಿನ ಹತ್ತು ಹಲವು ಕಾರ್ಯಕ್ರಮಗಳನ್ನು,ಸಿನೆಮಾಗಳನ್ನು,ಚಾನೆಲ್ಗಳನ್ನು ತಮ್ಮ ಭಾಷೆಗೆ ಅನುವಾದಿಸಿಕೊಂಡು (ಡಬ್ಬಿಂಗ್) ಮೃಷ್ಟಾನ್ನ ಭೋಜನವನ್ನು ಮಾಡುತ್ತಿದ್ದಾರೆ .. ಹಾಗಾದರೆ ಯಾಕೆ ಅಲ್ಲಿಯ ಕಿರುತೆರೆ & ಹಿರಿತೆರೆ ಮಂದಿ ಇನ್ನು ಬೀದಿಗೆ ಬಿದ್ದಿಲ್ಲ!? ಹಾಗಾದರೆ ಅವರಂತೆ 'ಮೃಷ್ಟಾನ ಬೋಜನ ಸವಿಯಲು' ನಮ್ಮ ಕನ್ನಡದ ಮಕ್ಕಳು,ಜನರು ಏನು ಪಾಪ ಮಾಡಿದ್ದಾರೆ !?ನಿಮ್ಮ ಸ್ವಾರ್ಥಕ್ಕಾಗಿ ಕನ್ನಡಿಗರನ್ನು ಬೇರೆ ಭಾಷೆಗೆ ಅವಲಂಬಿಸುವಂತೆ ಮಾಡ ಬೇಡಿ ಪಾಪಿಗಳೇ!?

    • ಒಬ್ಬ ಸಾಮಾನ್ಯ ಕನ್ನಡಿಗನ ಮನೋರಂಜನಾ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಬುದ್ಧಿಗೇಡಿ ಬುದ್ಧಿಜೀವಿಗಳು,ಗೂಂಡಾಗಳು & ದೊಣ್ಣೆನಾಯಕರು ನಿರ್ಧರಿಸುತ್ತಿರುವುದು ಪ್ರಜಾಪ್ರಭುತ್ವ ವಿರೋಧಿ ಚಟುವಟಿಕೆ.
    • ಕೊನೆಯದಾಗಿ ಒಬ್ಬ ಸಾಮಾನ್ಯ ಕನ್ನಡಿಗ ಪ್ರೇಕ್ಷಕ ನ ಹಿಂದೆ ಯಾವ ಮಾಪಿಯಾವು,ಬಹುರಾಷ್ಟ್ರೀಯ ಸಂಸ್ಥೆಗಳ ಕೈವಾಡವೂ ಇಲ್ಲ.ಅದರೆ ಡಬ್ಬಿಂಗ್ ವಿರೋಧಿಗಳ ಹಿಂದೆ ಸ್ವಾರ್ಥ,ಗೂಂಡಾಗಿರಿ,ಮತ್ತು ಹಣದದಾಹವಿದೆ.

    ಪ್ರತ್ಯುತ್ತರಅಳಿಸಿ