ಮಂಗಳವಾರ, ಜನವರಿ 28, 2014

“ಕನ್ನಡ ಭಾಷೆ-ಸಂಸ್ಕೃತಿ ಮತ್ತು ಡಬ್ಬಿಂಗ್”



       


ಡಬ್ಬಿಂಗ್ ವರವೋ ಶಾಪವೋ? ಎನ್ನುವುದನ್ನು ಪಕ್ಕಕ್ಕಿಟ್ಟು ಅದಕ್ಕೆ ಪೂರಕವಾದ ಬೇರೆ ಪ್ರಮುಖ ವಿಷಯಗಳ ಬಗ್ಗೆ ನೋಡೋಣ. ಡಬ್ಬಿಂಗ್ ಭೂತದ ವಿರುದ್ಧ ಸಿನೆಮಾ, ಟಿವಿ ರಂಗದ ಹಲವು ನಟರು, ಕೆಲವು ತಂತ್ರಜ್ಞರು ಗಣರಾಜ್ಯೋತ್ಸವದ ಮಾರನೆಯ ದಿನ ಜನವರಿ 27ರಂದು ಬೆಂಗಳೂರಿನ ಬೀದಿಗಿಳಿದರು. ಐದು ದಶಕಗಳಲ್ಲಿಲ್ಲದ ಡಬ್ಬಿಂಗ್ ಈಗ್ಯಾಕೆ? ಡಬ್ಬಿಂಗ್ ಬಂದರೆ ಕನ್ನಡ ಭಾಷೆ ಅವಸಾನವಾಗುತ್ತದೆ. ಅನ್ಯ ಭಾಷೆಗಳು ಕರ್ನಾಟಕವನ್ನಾಳುತ್ತವೆ. ಕನ್ನಡ ಚಲನಚಿತ್ರರಂಗ ಮಖಾಡೆ ಮಲಗುತ್ತದೆ. ಕನ್ನಡದ ಕಲಾವಿದರು- ತಂತ್ರಜ್ಞರು ನಿರುದ್ಯೋಗಿಗಳಾಗುತ್ತಾರೆ. ಕನ್ನಡಿಗರು ತಮ್ಮ ನೆಲದಲ್ಲೇ ಅನಾಥರಾಗುತ್ತಾರೆ.... ಹೀಗೆಲ್ಲಾ ಹಲವು ಆತಂಕಗಳನ್ನು ಆಕ್ರೋಶಗಳನ್ನು ಸಿನೆಮಾ ನಾಯಕ ನಟ ನಟಿಯರು ಸಾರ್ವಜನಿಕವಾಗಿ ತೋಡಿಕೊಂಡರು. ಕನ್ನಡದ ಉಟ್ಟು ಓರಾಟಗಾರರಾದ ವಾಟಾಳ್ ನಾಗರಾಜ್ ಡಬ್ಬಿಂಗ್ ವಿರೋಧಿ ಚಳುವಳಿಯ ವ್ಯವಸ್ಥಾಪಕರು. ಡಬ್ಬಿಂಗ್ ಪರ ವಿರೋಧದ ಒಳಮರ್ಮವನ್ನರಿಯದ ಸಹಸ್ರಾರು ಅಭಿಮಾನಿ ದೇವರುಗಳು ಹೋಲ್ಸೇಲಾಗಿ ಸಿನೆಮಾ ನಾಯಕ-ನಾಯಕಿಯರನ್ನು ಕಣ್ಣಾರೆ ನೋಡುವ ಅವಕಾಶವನ್ನು ಸದುಪಯೋಗಪಡಿಸಿಕೊಂಡರು. ಇನ್ನೂ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕಿತ್ತು ಎಂದು ನಟ ಸುದೀಪ್ ಬೇಸರ ವ್ಯಕ್ತಪಡಿಸಿದರೆ, ಒಬ್ಬನೆ ಬಂದರೂ ಸರಿ, ಸಾವಿರ ಮಂದಿ ಬಂದರೂ ಸರಿ ಅದು ರಿಪ್ರಜೆಂಟೇಶನ್, ಅದೇ ರಿಕಗ್ನೆಜೇಶನ್ ಎಂದು ಶಿವರಾಜಕುಮಾರ್ ಗುಡುಗಿದರು.

ಕನ್ನಡ ಚಲನಚಿತ್ರರಂಗದ ಆಸ್ತಿತ್ವಕ್ಕೆನಾದರೂ ತೊಂದರೆಯಾದರೆ ಕನ್ನಡ ಭಾಷೆ ನೆಲಕಚ್ಚುತ್ತದೆ ಎನ್ನುವ ಭಾವನಾತ್ಮಕ ಸಿದ್ದಾಂತವನ್ನು  ನಂಬಿಸಲು ನಮ್ಮ ಗ್ಲಾಮರ್ ನಾಯಕರುಗಳು ಹೋರಾಟದ ಮೂಲಕ, ಮಾಧ್ಯಮಗಳಲ್ಲಿ ಹೇಳಿಕೆ ಕೊಡುವ ಮೂಲಕ ತಮ್ಮ ಆಕ್ರೋಶ ಆಟಾಟೋಪಗಳನ್ನು ಹೆಚ್ಚಾಗಿಯೇ ತೋರಿಸಿದರು.  ಆದರೆ ಇದು ಅವಾಸ್ತವ ಪರಿಕಲ್ಪನೆ. ಕನ್ನಡ ಭಾಷೆಗೂ ದೃಶ್ಯಮಾಧ್ಯಮಕ್ಕೂ ಅನಿವಾರ್ಯವೆನಿಸುವ ಮಹತ್ತರವಾದ ಸಂಬಂಧವಿಲ್ಲ. ಕನ್ನಡ ಭಾಷೆ ಎಂಬ ನಾಲ್ಕೈದು ಸಾವಿರ ವರ್ಷದ ಇತಿಹಾಸವಿರುವ ಆಲದ ಮರದಲ್ಲಿ ಕಳೆದ  ಒಂದು ನೂರು ವರ್ಷಗಳಲ್ಲಿ ಹುಲುಸಾಗಿ ಬೆಳೆದ ಒಂದು ಕೊಂಬೆಯಾಗಿ ಮಾತ್ರ ಸಿನೆಮಾ ರಂಗವನ್ನು ಪರಿಗಣಿಸಬೇಕು. ತನ್ನದೇ ಸ್ವಯಂಕೃತ ಪಾಪಗಳಿಂದ ಕೊಂಬೆ ಗೆದ್ದಲು ಹಿಡಿದು ನೆಲಕ್ಕೊರಗಿದರೂ, ಇಲ್ಲವೇ ತನ್ನದೇ ಭಾರಕ್ಕೆ ಕುಸಿದರೂ  ಮರದ ಇಡಿಯಾದ ಅಸ್ತಿತ್ವಕ್ಕೇನೂ ದಕ್ಕೆಯಿಲ್ಲ. ಮರದ ಬಲಿಷ್ಟ ಬೇರುಗಳನ್ನು ಅಲ್ಲಾಡಿಸಲೂ ಸಾಧ್ಯವಿಲ್ಲ. ಆದರೆ ಒಂದು ಸುಂದರವಾದ ಭಾಗ ಕಳೆದು ಹೋಯಿತಲ್ಲಾ ಎನ್ನುವ ಹಳಹಳಿಯಂತೂ ಇದ್ದೇ ಇರುತ್ತದೆ. ನಾಯಿಗೆ ಬಾಲ ಮುಖ್ಯ, ಬಾಲ ಕಳೆದುಕೊಂಡರೂ ನಾಯಿ ಬದುಕಬಹುದು. ನಾಯಿಯೇ ಇಲ್ಲವಾದರೆ ಬಾಲ ಇದ್ದೂ ಅಪ್ರಯೋಜಕ. ಆದರೆ ಬಾಲವೇ ನಾಯಿಯನ್ನು ನಿಯಂತ್ರಿಸಲು ಪ್ರಯತ್ನಿಸಿದರೆ, ನಾನಿರುವುದರಿಂದಲೇ ನೀನಿರುವುದು ಎಂದು ಬಾಲವೇ ನಾಯಿಗೆ ಹೇಳಿದರೆ ನಂಬಲು ಸಾಧ್ಯವೇ? ಇಲ್ಲಿ ನಾಯಿ ಎಂದರೆ ಕನಿಷ್ಟ ಎಂದು ಅರ್ಥವಲ್ಲ. ಇದು ಕೇವಲ ಒಂದು ಉದಾಹರಣೆ ಮಾತ್ರ.



ಹಿಂದೆ ಕನ್ನಡದಲ್ಲಿ ಸಿನೆಮಾ ಎನ್ನುವುದು ಇಲ್ಲದಿದ್ದಾಗಲೂ ಕನ್ನಡ ಭಾಷೆ ಶ್ರೀಮಂತವಾಗಿತ್ತು. ಮುಂದೊಂದು ದಿನ ಇದೇ ರೀತಿ ಕಳಪೆ ಸಿನೆಮಾಗಳನ್ನು ಕೊಡುತ್ತಾ ಹೋಗಿ ಪ್ರೇಕ್ಷಕರಿಂದ ಸಿನೆಮಾಗಳು ಸಾರಾಸಗಟಾಗಿ ತಿರಸ್ಕೃತಗೊಂಡು ಇಡೀ ಸಿನೆಮಾ ರಂಗ ತನ್ನ ಅಸ್ತಿತ್ವವನ್ನು ಕಳೆದುಕೊಂಡರೂ ಕನ್ನಡ ಭಾಷೆ ಇದ್ದೇ ಇರುತ್ತದೆ. ಈಗ
ನೂರಕ್ಕೆ ಎಂಬತ್ತು ಕನ್ನಡ ಸಿನೆಮಾಗಳು ಜನರಿಂದ ತಿರಸ್ಕೃತವಾಗಿ ತೋಪಾಗುತ್ತಿವೆ. ಎಂಬತ್ತರ ದಶಕದವರೆಗೂ ಬಂದಿರುವ ಬಹುತೇಕ ಸಿನೆಮಾಗಳಲ್ಲಿ ಭಾಷೆಯ ಬಳಕೆ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆ ಕನ್ನಡ ಭಾಷಾ ಬೆಳವಣಿಗೆಗೆ ಪೂರಕವಾಗಿತ್ತು. ತದನಂತರ ಕನ್ನಡ ಭಾಷೆಯನ್ನು ಒಂದು ಹಂತದಲ್ಲಿ ಕುಲಗೆಡಿಸಿದ್ದೇ ಇತ್ತೀಚಿನ ಎರಡು ದಶಕಗಳಲ್ಲಿ ಬಂದಿರುವ ಅರ್ಧಕ್ಕಿಂತ ಹೆಚ್ಚು  ಕಳಪೆ  ಸಿನೆಮಾಗಳು. ದ್ವಂದ್ವಾರ್ಥಕ ಸಂಭಾಷಣೆಗಳು, ಅಶ್ಲೀಲ ನಡೆನುಡಿಗಳು, ಡಗಾರ್. ಮಾಲ್, ಐಟಂ ಎನ್ನುವಂತಹ ಮಹಿಳಾ ವಿರೋಧಿ ಪದಗಳು. ಅಮ್ಮಾ ಲೂಜಾ ಅಪ್ಪಾ ಲೂಜಾ ಎನ್ನುವಂತಹ ದರಿದ್ರ ಸಿನೆಮಾ ಹಾಡುಗಳು.

ಸೆನ್ಸಾರ್ ಮಂಡಳಿ, ಸಬ್ಸಿಡಿ ಕಮಿಟಿ ಹಾಗೂ ಪ್ರಶಸ್ತಿ ಆಯ್ಕೆ ಕಮಿಟಿಯವರನ್ನು ಹೋಗಿ ಕೇಳಿ ಶೇಕಡಾ ಎಪ್ಪತ್ತರಷ್ಟು ಸಿನೆಮಾಗಳಲ್ಲಿ ಬಳಸಲಾದ ಭಾಷೆ ಹಾಗೂ ತೋರಿಸಲಾದ ದೃಶ್ಯಗಳು ಹೇಗೆ ನಮ್ಮ ಭಾಷೆ ಹಾಗೂ ಸಂಸ್ಕೃತಿಗೆ ಮಾರಕವಾಗಿವೆ ಎನ್ನುವುದನ್ನು ವಿವರಿಸುತ್ತಾರೆ. ಈಗಲೂ ನಗರ-ಗ್ರಾಮಗಳ ಮಕ್ಕಳು, ಯುವಕರ ಬಾಯಲ್ಲಿ ಜನಪ್ರೀಯ ಸಿನೆಮಾಗಳು ಹುಟ್ಟುಹಾಕಿದ ಹೊಡಿ, ಬಡಿ, ಕಡಿ ಎನ್ನುವ ಭಾಷೆಯೇ ಬಳಕೆಯಲ್ಲಿದೆ. ಹಲವರು ಇಂದೂ ಗಟ್ಟಿದ್ವನಿಯಲ್ಲಿ ಗುಣುಗುವುದು ಕನ್ನಡ ಸಿನೆಮಾದ ದರಿದ್ರ ಹಾಡುಗಳನ್ನು. ಎಲ್ಲಾ ಸಿನೆಮಾಗಳೂ ಹೀಗೆ ಎಂದು ಹೇಳಲಾಗದು ಆದರೆ ಇತ್ತೀಚಿನ ಬಹುತೇಕ ಸಿನೆಮಾಗಳು ನಮ್ಮ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ಪೂರಕವಾಗಿಲ್ಲ. ಬಹುತೇಕ ಸಿನೆಮಾಗಳು ವೈಭವೀಕರಿಸುವ ಲವ್, ಸೆಕ್ಸ್ ಮತ್ತು ಹಿಂಸೆಯಿಂದಾಗಿ ಯುವಜನಾಂಗವೇ ದಾರಿತಪ್ಪುವ ಸನ್ನಿವೇಶ ಸೃಷ್ಟಿಯಾಗಿದ್ದಂತೂ ಸುಳ್ಳಲ್ಲ. ಹೀಗಾಗಿ ವ್ಯಾಪಾರಿ ಕನ್ನಡ ಸಿನೆಮಾಗಳಿಂದ ಭಾಷೆ ಉಳಿಯುತ್ತದೆ, ಕನ್ನಡ ಸಂಸ್ಕೃತಿ ಬೆಳೆಯುತ್ತದೆ ಎನ್ನುವುದು ಸತ್ಯಕ್ಕೆ ದೂರವಾದ ಮಾತು.


ಕನ್ನಡ ಭಾಷೆ ಹಾಗೂ ಸಂಸ್ಕೃತಿಯ ಮೇಲೆ ಬೇರೆಲ್ಲಾ ಮಾಧ್ಯಮಗಳಿಗಿಂತ ಹೆಚ್ಚು ಪ್ರಭಾವ ಬೀರುವ ಸಾಮರ್ಥ್ಯ ಸಿನೆಮಾಗಳಿಗಿವೆ ಎನ್ನುವುದು ನಿರ್ವಿವಾದ. ಆದರೆ ಅದು ನಕಾರಾತ್ಮಕವಾಗಿ ಪ್ರಭಾವ ಬೀರುತ್ತಿರುವುದೆ ಆತಂಕದ ವಿಷಯ. ಕಲಾತ್ಮಕ ಎನ್ನುವ ಸಿನೆಮಾಗಳು, ಪ್ರಯೋಗಾತ್ಮಕ ಸಿನೆಮಾಗಳು, ಅಪರೂಪಕ್ಕೆ ಕೆಲವು ವ್ಯಾಪಾರಿ ಸಿನೆಮಾಗಳು ಕನ್ನಡ ಭಾಷೆ ಮತ್ತು ಸಂಸ್ಕೃತಿಗೆ ಪೂರಕವಾಗಿ ಅತ್ಯುತ್ತಮ ಕೊಡುಗೆಯನ್ನು ಕೊಟ್ಟು ಜಾಗತಿಕ ನ್ನನೆಯನ್ನು ಗಳಿಸಿವೆಯಾದರೂ ಬಹುತೇಕ ಅಭಿಮಾನಿ ದೇವರುಗಳು ನಕಾರಾತ್ಮಕವಾದ ವ್ಯಾಪಾರಿ ಸೂತ್ರಗಳ
ಮಸಾಲೆ ಸಿನೆಮಾಗಳಿಗೆ ಮಾರುಹೋಗಿದ್ದೊಂದು ವಿಪರ್ಯಾಸ. 

ಯಾರು ಏನೇ ಹೇಳಿದರೂ ಸಿನೆಮಾ ಎನ್ನುವುದು ಜಾಗತೀಕರಣದ ಕಾಲಘಟ್ಟದಲ್ಲಿ ಒಂದು ವ್ಯಾಪಾರೋಧ್ಯಮ. ಉದ್ಯಮ ಎಂದ ಮೇಲೆ ಅಲ್ಲಿ ಲಾಭ ನಷ್ಟಗಳ ವ್ಯಾಕರಣ ಮಾತ್ರ ಅಸ್ತಿತ್ವದಲ್ಲಿರುತ್ತದೆ. ಹಾಕಿದ ಬಂಡವಾಳಕ್ಕೆ ಪ್ರತಿಯಾಗಿ ಎಷ್ಟು ಲಾಭ ಬರುತ್ತದೆ, ಹಾಗೆ ಲಾಭವನ್ನು ಹೊಂದಲು ಏನೇನೆಲ್ಲಾ ಸರಕನ್ನು ನಾವು ಸಿದ್ದಪಡಿಸಿ ಮಾರಬೇಕು, ಅದಕ್ಕೆ ಅದೆಷ್ಟು ವಾಮಮಾರ್ಗಗಳನ್ನು ಬಳಸಬೇಕು ಎನ್ನುವ ಚಿಂತೆ ಹಾಗೂ ಚಿಂತನೆಯಲ್ಲೇ ಉದ್ಯಮ ಎನ್ನುವುದು ತನ್ನ ಅಸ್ತಿತ್ವವನ್ನು ಕಾಪಾಡಿಕೊಳ್ಳುತ್ತದೆ. ಇಲ್ಲಿ ಭಾಷೆ, ಸಂಸ್ಕೃತಿ, ಕಲಾತ್ಮಕತೆ, ಜನಪರತೆ, ಜೀವಪರತೆ ಎನ್ನುವುದೆಲ್ಲಾ ಮುಖ್ಯವಾಗುವುದೇ ಇಲ್ಲ. ಹೆಣ್ಣಿನ ಅಂಗಾಂಗಳನ್ನು ಬೆತ್ತಲೆ ತೋರಿದರೆ ಹಣ ಬರುತ್ತದೆಂದಾದರೆ ಅದನ್ನೇ ರೂಪಿಸಿಕೊಂಡು ಐಟಂ ಸಾಂಗ್ಗಳ ಒಂದು ಣಿಯೇ ಶುರುವಾಗುತ್ತದೆ. ತಮ್ಮ ತಂಗಿ, ತಾಯಿ, ಹೆಂಡತಿ, ಗೆಳತಿಯರನ್ನು ಮನೆಯಲ್ಲಿ ಬೆಚ್ಚಗಿಡುವ ಇದೇ ವ್ಯಾಪಾರಿ ಸಿನೆಮಾಗಳ ಕೆಲವು ಜನ ಬೇರೆಯವರ ಹೆಣ್ಣುಮಕ್ಕಳನ್ನು ಬೆತ್ತಲೆಗೊಳಿಸಿ ಹಣ ದೋಚುವ ಕಾಯಕವನ್ನು ಬಲು ನಿಷ್ಟೆಯಿಂದಲೇ ಮಾಡುತ್ತಿದ್ದಾರೆ. ಹೆಣ್ಣನ್ನು ಭೋಗದ ವಸ್ತು ಎಂದು ಪ್ರತಿಬಿಂಬಿಸುವ ಸಿನೆಮಾಗಳನ್ನು  ತಯಾರಿಸಿ ಬಿಕರಿ ಮಾಡುತ್ತಿದ್ದಾರೆ. ಇಂತಹ ವ್ಯಾಪಾರಿ ಸಿನೆಮಾಗಳಲ್ಲಿ ಈಗ ಡಬ್ಬಿಂಗ್ ವಿರೋಧಿಸಿ ಹೋರಾಟಕ್ಕಿಳಿದ ಬಹುತೇಕ ನಾಯಕ ನಟರುಗಳು ಸಂಕೋಚವಿಲ್ಲದೇ ಅಭಿನಯಿಸಿದ್ದಾರೆ. ಇಲ್ಲಿ ಕಲೆಯ ಹೆಸರಲ್ಲಿ ಕಾಸು ಮಾಡಿಕೊಳ್ಳುವ ದೊಡ್ಡ ತಂತ್ರವೇ ಇದೆ. ಇಂತಹ ವ್ಯಾಪಾರಿ ತಂತ್ರಕ್ಕೆ ಭಾಷೆಯ ಭಾವನಾತ್ಮಕತೆಯನ್ನು ಸೇರಿಸುವ ನೈತಿಕ ಹಕ್ಕು ನಿಜಕ್ಕೂ ಇಂತಹ ಸಿನೆಮಾಗಳನ್ನು ಮಾಡುವ ಹಾಗೂ ಅಂತಹ ಸಿನೆಮಾಗಳಲ್ಲಿ ತೊಡಗಿಸಿಕೊಳ್ಳುವ ಕಲಾವಿದ ತಂತ್ರಜ್ಞರಿಗೆ ಇದೆಯಾ?

ಯಾವುದೇ ಉದ್ಯಮಕ್ಕೆ ಭಾಷೆ ಮತ್ತು ಸಂಸ್ಕೃತಿಯ ಹಂಗಿರುವುದಿಲ್ಲ ಎನ್ನುವುದು ಬಹುತೇಕ ಎಲ್ಲಾ ಕ್ಷೇತ್ರಗಳಲ್ಲೂ ಸಾಬೀತಾಗಿದೆ. ಸತ್ಯವೇನೆಂದರೆ ಆಯಾ ಭಾಷೆ ಮತ್ತು ಸಂಸ್ಕೃತಿಯನ್ನು ತನ್ನ ಹಿತಾಸಕ್ತಿಗೆ ಪೂರಕವಾಗಿ ವಿಕೃತಗೊಳಿಸುತ್ತಲೇ ಎಲ್ಲಾ ವ್ಯಾಪಾರೋಧ್ಯಮಗಳು ಬೆಳೆಯುತ್ತವೆ. ಎಲ್ಲಾ ಬಗೆಯ ಉದ್ಯಮಿಗಳು ಲಾಭಕ್ಕೆ ನಿಷ್ಟರಾಗಿರುತ್ತಾರೆಯೇ ಹೊರತು ಭಾಷೆಗಲ್ಲ. ಭಾಷೆ ಎಂಬುದು ಉದ್ಯಮಿಗಳಿಗೆ ಕೇವಲ ಲಾಭಮಾಡಿಕೊಳ್ಳಲು ಇರುವ ಮಾಧ್ಯಮವಾಗಿದೆ. ಸಂಸ್ಕೃತಿ ಎನ್ನುವುದು ತೋರುಂಬ ಲಾಭವಾಗಿದೆ. ಕಲೆ ಎನ್ನುವುದು ಕಾಸು ಸಂಪಾದನೆಗೆ ಹೆದ್ದಾರಿಯಾಗಿದೆ. ಇಂತಹುದರಲ್ಲಿಯೂ ಎಲ್ಲೋ ಕೆಲವೇ ಕೆಲವು ಪ್ರಜ್ಞಾವಂತರು ಭಾಷೆ, ಸಂಸ್ಕೃತಿ, ಕಲೆಗೆ ಪೂರಕವಾಗಿ ಸಿನೆಮಾ ಮಾಧ್ಯಮವನ್ನು ಬಳಸಿಕೊಂಡಿದ್ದಾರಾದರೂ ಅಂತವರು ಅಲ್ಪಸಂಖ್ಯಾತರು ಹಾಗೂ ವ್ಯಾಪಾರಿ ಸಂಸ್ಕೃತಿಯ ದಲ್ಲಾಳಿಗಳ ಕುತಂತ್ರಕ್ಕೆ ಒಂದಿಲ್ಲೊಂದು ರೀತಿಯಲ್ಲಿ ಬಲಿಯಾದವರು.

ತನ್ನ ಆಂತರಿಕ ಸಮಸ್ಯೆಯನ್ನು ಸಾರ್ವತ್ರಿಕಗೊಳಿಸಿ ಬಹುಜನರ ಬೆಂಬಲವನ್ನು ಹಾಗೂ ಸಿಂಪತಿಯನ್ನು ಗಳಿಸುವುದು ಉದ್ಯಮಿಗಳ ತಾಂತ್ರಿಕ ನಡೆಯಾಗಿದೆ. ಈಗ ಇದೇ ತಂತ್ರವನ್ನು ನಮ್ಮ ಕನ್ನಡ ಸಿನೆಮಾ ವ್ಯಾಪಾರೋದ್ಯಮದ ಫಲಾನುಭವಿಗಳು ಕನ್ನಡಿಗರ ಮೇಲೆ ಪ್ರಯೋಗಿಸುತ್ತಿದ್ದಾರೆ. ಸಿನಿಮೋಧ್ಯಮದ ಸಮಸ್ಯೆಯನ್ನು ಕನ್ನಡ ಭಾಷಾ ಸಮಸ್ಯೆ ಎನ್ನುವಂತೆ ಬಿಂಬಿಸುತ್ತಿದ್ದಾರೆ. ಕನ್ನಡಿಗರನ್ನು ಭಾವನಾತ್ಮಕವಾಗಿ ಪ್ರಚೋದಿಸಿ, ಅವರ ಬೆಂಬಲವನ್ನು ಪಡೆದು ತಮ್ಮ ಹಿತಾಸಕ್ತಿಯನ್ನು ಕಾಪಾಡಿಕೊಳ್ಳಲು ಹೋರಾಟಕ್ಕಿಳಿದಿದ್ದಾರೆ. ತಂತ್ರಗಾರಿಕೆಯ ಅರಿವಾಗಿದ್ದರಿಂದಲೋ ಏನೋ ವಾಟಾಳ್ ಮತ್ತು ಕನ್ನಡ ರಕ್ಷಣಾ ಪಡೆಯ ಪ್ರವೀಣ್ ಶೆಟ್ಟಿ ಗುಂಪನ್ನು ಹೊರತುಪಡಿಸಿ ಬಹುತೇಕ ಕನ್ನಡ ಸಂಘಟನೆಗಳು ಹಾಗೂ ಕನ್ನಡ ಪರ ಹೋರಾಟಗಾರರು ಡಬ್ಬಿಂಗ್ ವಿರೋಧಿ ಹೋರಾಟದಿಂದ ಒಂದು ಅಂತರವನ್ನು ಕಾಪಾಡಿಕೊಂಡರು. ಪ್ರಗತಿಪರ ಚಿಂತಕರು, ವಿಚಾರವಾದಿಗಳು ದೂರವೇ ಉಳಿದರು. ಚಂದ್ರಶೇಖರ್ ಕಂಬಾರರಂತವರು ನೇರವಾಗಿಯೇ ಡಬ್ಬಿಂಗ್ ವಿರೋಧವನ್ನು ವಿರೋಧಿಸಿದರು. ಬಹುತೇಕ ಪ್ರಜ್ಞಾವಂತರು ಡಬ್ಬಿಂಗ್ ವಿರೋಧಿ ಪ್ರಹಸನವನ್ನು ನೋಡಿ ನಿರ್ಲಕ್ಷಿಸಿದರು

  
ಈಗ ಡಬ್ಬಿಂಗ್ ಎನ್ನುವುದು ಬಂದರೆ ಕನ್ನಡ ಭಾಷೆಗೆ ಆತಂಕ ಎನ್ನುವುದು ಡಬ್ಬಿಂಗ್ ವಿರೋಧಿಗಳ ಪ್ರಮುಖ ಆರೋಪವಾಗಿದೆ. ಡಬ್ಬಿಂಗ್ ಎಂದರೆ ಬೇರೆ ಭಾಷೆಯ ಸಿನೆಮಾಗಳಿಗೆ ಕನ್ನಡ ಭಾಷೆಯ ದ್ವನಿಯನ್ನು ಒದಗಿಸಿ ಕನ್ನಡಿಗರಿಗೆ ಪ್ರದರ್ಶಿಸುವುದಾಗಿದೆ. ಈಗ ಕನ್ನಡಿಗರು ಕನ್ನಡ ಭಾಷೆಯ ಸಿನೆಮಾಗಳಿಗಿಂತಲೂ ಅನ್ಯ ಭಾಷೆಯ ಸಿನೆಮಾಗಳನ್ನು ಹೆಚ್ಚು ನೋಡುತ್ತಿದ್ದಾರೆನ್ನುವುದು ಗೊತ್ತಿರುವ ವಿಷಯ. ಹೇಗೂ ಸಿನೆಮಾ ಥೀಯಟರನಲ್ಲೋ, ಡಿವಿಡಿಗಳಲ್ಲೋ, ಇಂಟರ್ನೆಟ್ಗಳಲ್ಲೋ ಬೇರೆ ಭಾಷೆಯ ಸಿನೆಮಾಗಳನ್ನು ನೋಡುತ್ತಿರುವವರಿಗೆ ಅದೇ ಸಿನೆಮಾಗಳನ್ನು ಕನ್ನಡ ಭಾಷೆಯ ಮೂಲಕ ನೋಡುವಂತೆ ಮಾಡಿದರೆ ಏನು ಸಮಸ್ಯೆ? ಕನ್ನಡ ಭಾಷೆಯ ಮೂಲಕ ಇಡೀ ಜಗತ್ತಿನ ಎಲ್ಲಾ ಭಾಷೆಯ ಸಿನೆಮಾಗಳನ್ನು ನೋಡಿದರೆ ಕನ್ನಡ ಭಾಷೆಗೆ ಆಗುವ ನಷ್ಟವೇನು?

ನಿಜ ಹೇಳಬೇಕೆಂದರೆ ಡಬ್ಬಿಂಗ್ನಿಂದ  ಕನ್ನಡ ಭಾಷೆಗೆ ಲಾಭವಿದೆ. ಸ್ಥಿತಿವಂತ ಕನ್ನಡಿಗರು ತಮ್ಮ ಮಕ್ಕಳಿಗೆ ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ಕೊಡಿಸುತ್ತಿದ್ದಾರೆ. ಶಾಲೆಯಲ್ಲಿ ಕನ್ನಡದ ಉಸಿರೆತ್ತಲಾರದ ಮಕ್ಕಳು ತಮ್ಮ ಜೊತೆಗಾರರೊಂದಿಗೆ ಆಂಗ್ಲ ಭಾಷೆಯಲ್ಲೇ ವ್ಯವಹರಿಸುತ್ತಿದ್ದಾರೆ.  ಕನ್ನಡದ ಭಾಷೆಯಿಂದ ಒಂದು ಅಂತರವನ್ನು ಕಾಪಾಡಿಕೊಂಡೇ ಯುವಕರಾಗುತ್ತಿದ್ದಾರೆ. ಮನೆಯಲ್ಲಿ ಕನ್ನಡ ಭಾಷೆ ಇದ್ದರೂ ಇವರನ್ನು ಆಂಗ್ಲ ಭಾಷೆ ಆವರಿಸಿಕೊಂಡಿರುತ್ತದೆ. ಇಂತವರು ಇಂಗ್ಲೀಷ್ ಸಿನೆಮಾಗಳನ್ನು ಅಥವಾ ಇಂಗ್ಲೀಷ್ ಸಬ್ಟೈಟಲ್ ಇರುವ ಬೇರೆ ದೇಶಗಳ ಸಿನೆಮಾಗಳನ್ನೋ ನೋಡಲು ಬಯಸುತ್ತಾರೆ. ಒಂದು ವೇಳೆ ಇವರು ನೋಡುತ್ತಿರುವ ಅದೇ ಸಿನೆಮಾಗಳನ್ನು ಕನ್ನಡ ಭಾಷೆಯಲ್ಲಿ ತೋರಿಸುವ ವ್ಯವಸ್ಥೆಯಾದರೆ ತಮ್ಮ ಮಾತೃಭಾಷೆಯಲ್ಲೇ ತಮಗಿಷ್ಟವಾದ ಸಿನೆಮಾಗಳನ್ನು ನೋಡಬಹುದು. ಅವರು ಕೇವಲ ಸಿನೆಮಾವನ್ನು ಮಾತ್ರ ನೋಡುವುದಿಲ್ಲ ನೋಡುತ್ತಲೇ ಅವರು ಮರೆತು ಹೋದ ಅದೆಷ್ಟೋ ಕನ್ನಡ ಭಾಷೆಯ ಶಬ್ದಗಳು ವಾಕ್ಯಗಳು ನೋಡುಗರ ಅರಿವಿಲ್ಲದಂತೆ ಅವರನ್ನು ಆವರಿಸಿಕೊಳ್ಳುತ್ತವೆ. ಕನ್ನಡ ಭಾಷೆ ಕಿವಿಯ ಮೇಲೆ ಬೀಳುತ್ತಾ ಹೋದಂತೆ ಭಾಷೆಗೆ ಆಪ್ತರಾಗುತ್ತಾರೆ. ಹೀಗೆ ಕನ್ನಡ ಭಾಷೆ ಎನ್ನುವುದು ಆಂಗ್ಲ ಭಾಷಾ ಪ್ರೇರಿತರ ಅಂತರಂಗದಲ್ಲಿ ಚಿಗುರುತ್ತದೆ. ಹೀಗಾದರೂ ಒಂದಿಷ್ಟು ಭಾಷೆಯ ಬೆಳವಣಿಗೆಯ ಸಾಧ್ಯತೆಗಳಿವೆ



ಮಾತೃಭಾಷೆಯಲ್ಲೇ ಶಿಕ್ಷಣ ಇರಬೇಕು ಎಂದು ಕನ್ನಡಿಗರು ಆಗ್ರಹಿಸುತ್ತಿರುವಾಗ ಮಾತೃಭಾಷೆಯಲ್ಲಿ ಹೊರ ಜಗತ್ತನ್ನು ನೋಡಬೇಕು ಎನ್ನುವುದು ಅಪೇಕ್ಷನೀಯ. ಹಲವಾರು ಭಾಷೆಗಳ ಸಾಹಿತ್ಯ ಕೃತಿಗಳು ಕನ್ನಡಕ್ಕೆ ಅನುವಾದವಾಗುತ್ತಿದೆ. ಯಾವ ಕನ್ನಡ ಸಾಹಿತಿಯೂ ಹೀಗೆ ಅನುವಾದ ಬಂದರೆ ಕನ್ನಡ ಸಾಹಿತ್ಯ-ಭಾಷೆ ನಶಿಸುತ್ತದೆ ಎಂದು ಹೇಳಿದ ಉದಾಹರಣೆ ಇಲ್ಲ. ಅನೇಕ ಭಾಷೆಯ ಉತ್ತಮ ನಾಟಕಗಳು ಕನ್ನಡದಲ್ಲಿ ಅನುವಾದಿತಗೊಂಡೋ ಇಲ್ಲವೇ ರೂಪಾಂತರಗೊಂಡೋ ಬಂದಿವೆ, ಅದಕ್ಕೆ ರಂಗಭೂಮಿಯವರಾರೂ ಕನ್ನಡ ನಾಟಕಗಳಿಗೆ ತೊಂದರೆಯಾಗುತ್ತದೆ ಎಂದು ತಕರಾರು ತೆಗೆದಿಲ್ಲ. ಅದೇ ರೀತಿ ಬೇರೆ ಭಾಷೆಯ ಉತ್ತಮ ಸಿನೆಮಾ-ಟಿವಿ ಪ್ರೊಗ್ರಾಂಗಳು ಕನ್ನಡ ಭಾಷೆಯ ಲೇಪನದೊಂದಿಗೆ ಬಂದರೆ ಯಾಕೆ ವಿರೋಧ? ವಿಪರ್ಯಾಸ ನೋಡಿ, ಅನ್ಯ ಭಾಷೆಯ ಎಲ್ಲಾ ನಮೂನೆಯ ಜಾಹಿರಾತುಗಳು ಕನ್ನಡ ಟಿವಿ ಚಾನೆಲ್ ಗಳಲ್ಲಿ ಡಬ್ ಆಗಿ ದಿನನಿತ್ಯ ಪ್ರಸಾರಗೊಳ್ಳುತ್ತಿವೆ, ಅದನ್ನು ಯಾರೂ ಪ್ರಶ್ನಿಸುವುದಿಲ್ಲ.
 

ಡಬ್ಬಿಂಗ್ ಮಾಡದೇ ಹೋದರೂ ಅನ್ಯ ಭಾಷೆಯ ಸಿನೆಮಾಗಳನ್ನು ನೋಡುವವರನ್ನು ನಿರ್ಬಂಧಿಸಲಂತೂ ಸಾಧ್ಯವಿಲ್ಲ. ಯಾವಾಗ ನಿಯಂತ್ರಣ ಸಾಧ್ಯವಿಲ್ಲವೋ ಆಗ ಮಾತೃಭಾಷೆಯಲ್ಲೇ ಸಿನೆಮಾಗಳನ್ನು ತೋರಿಸಿದರೆ ಕನ್ನಡ ಭಾಷೆಗೆ ಅನುಕೂಲವಲ್ಲವೆ? ನಮ್ಮ ಮಕ್ಕಳು ಇಂಗ್ಲೀಷನಲ್ಲಿ ಬರುವ ಜಿಯಾಗ್ರಾಫಿಕಲ್ ಚಾನೆಲ್, ಎನಿಮಲ್ ಪ್ಲಾನೆಟ್ಗಳಂತಹ ಅನೇಕ ಟಿವಿ ಚಾನೆಲ್ಗಳನ್ನು ಕನ್ನಡದಲ್ಲಿ ನೋಡಿದರೆ ಹೆಚ್ಚೆಚ್ಚು ಜ್ಞಾನದ ಹೊಂದುತ್ತಾ ಕನ್ನಡ ಭಾಷೆಯ ಜೊತೆಗೆ ಅನುಸಂದಾನ ಮಾಡುತ್ತಾ ಬೆಳೆಯುತ್ತಾರಲ್ಲವೆ?

ಈಗ ತಮಿಳು, ತೆಲುಗು, ಮಲಯಾಳಂ, ಹಿಂದಿ.. ಇಂಗ್ಲೀಷ್...  ಮುಂತಾದ ಭಾಷೆಯ ಸಿನೆಮಾಗಳನ್ನು ನೋಡುವ ಬಹುತೇಕರು ಆಯಾ ಭಾಷೆಗಳನ್ನು ತಮಗರಿವಿಲ್ಲದೇ ಕಲಿಯುತ್ತಿದ್ದಾರೆ. ಆಯಾ ಭಾಷೆಗಳ ಸಿನೆಮಾ ಮೋಡಿಗೊಳಗಾಗಿ ಮಾತೃಭಾಷಾ ಕೀಳರಮೆಯನ್ನು ಬೆಳೆಸಿಕೊಳ್ಳುತ್ತಿದ್ದಾರೆ. ಜೊತೆಗೆ ಅನ್ಯ ಭಾಷಿಕರೊಂದಿಗೆ ಅವರದೇ ಭಾಷೆಯಲ್ಲಿ ಸಂವಹನ ಮಾಡಲು ಆರಂಭಿಸುತ್ತಾರೆ. ಇದರಿಂದಾಗಿ ಕನ್ನಡ ಭಾಷೆಗೆ ನಿಜಕ್ಕೂ ಹೊಡೆತ ಬೀಳುತ್ತದೆ. ಅನಾಹುತವನ್ನು ತಪ್ಪಿಸಲು ಕನ್ನಡ ಭಾಷೆಯ ಮೂಲಕವೇ ಎಲ್ಲಾ ಭಾಷೆಯ ಜನಪ್ರೀಯ ಸಿನೆಮಾಗಳನ್ನು, ಟಿವಿ ಕಾರ್ಯಕ್ರಮಗಳನ್ನು ತೋರಿಸುವುದರ ಮೂಲಕ ಕನ್ನಡ ಭಾಷೆಯ ಬೆಳವಣಿಗೆಗೆ ಪೂರಕವಾಗಿ ಸ್ಪಂದಿಸಬಹುದಾಗಿದೆ. ಮನೆಯಲ್ಲಿ ಮಕ್ಕಳು, ಯುವಕರು ಬೇರೆ ಭಾಷೆಯ ಚಾನೆಲ್ಗಳನ್ನೋ, ಸಿನೆಮಾಗಳನ್ನೋ ನೋಡುವಾಗ ಮನೆಯ ಹಿರಿಯರು ಭಾಷೆ ಅರಿಯದೆ ಒಂದು ರೀತಿಯ ಕೀಳರಮೆಯನ್ನು ಹೊಂದುತ್ತಾರೆ. ಅಕಸ್ಮಾತ್ ಅನ್ಯ ಭಾಷೆಗಳ ದೃಶ್ಯಮಾಧ್ಯಮವನ್ನು ಕನ್ನಡದಲ್ಲಿ ನೋಡುವ ಅವಕಾಶ ವದಗಿದರೆ ಮನೆಯವರೆಲ್ಲಾ ಕುಳಿತು ನೋಡುತ್ತಾ.. ಸಂಭಾಷಿಸುತ್ತಾ... ಕನ್ನಡವನ್ನು ಸವಿಯಬಹುದಲ್ಲವೆ?


ಹೋಗಲಿ, ಎಲ್ಲಿಯೂ ಇಲ್ಲದ ಡಬ್ಬಿಂಗ್ ವಿರೋಧ ಕರ್ನಾಟಕದಲ್ಲಿ ಮಾತ್ರ ಯಾಕೆ? ಡಬ್ಬಿಂಗ್ ಮುಕ್ತವಾಗಿರುವ ಭಾರತದ ಎಲ್ಲಾ ಭಾಷೆಗಳು ಈಗೇನು ಸರ್ವನಾಶವಾಗಿವೆಯಾ? ಮರಾಠಿ ಭಾಷೆ ಡಬ್ಬಿಂಗ್ನಿಂದಾಗಿ ಅವನತಿ ಹೊಂದಿತು ಎನ್ನುತ್ತಾರೆ. ಇದು ಅವಾಸ್ತವ. ಕೇವಲ ಬಾಂಬೆಯೊಂದನ್ನು ಮಾತ್ರ ಗಮನಿಸಿದವರು ರೀತಿ ಹೇಳಬಹುದಾಗಿದೆ. ಆದರೆ ಕೇವಲ ಬಾಂಬೆ ಒಂದೇ ಇಡೀ ಮಹಾರಾಷ್ಟ್ರ ಆಗಲಾರದು. ಕರ್ನಾಟಕದಲ್ಲಿ ಪುಕ್ಕಟೆ ನಾಟಕಗಳನ್ನು ತೋರಿಸಿದರೂ ಜನ ಬರುತ್ತಿಲ್ಲ. ಆದರೆ ಮಹಾರಾಷ್ಟ್ರದಲ್ಲಿ ಹಣ ಕೊಟ್ಟು ಸರದಿಸಾಲಲ್ಲಿ ನಿಂತು ಟಿಕೆಟ್ ಪಡೆದು ನಾಟಕಗಳನ್ನು ಮರಾಠಿಗರು ನೋಡುತ್ತಾರೆ. ಇಲ್ಲಿ ಸರಕಾರಿ ಗ್ರಂಥಾಲಯಗಳೇ ಕಣ್ಣುಮುಚ್ಚುತ್ತಿವೆ. ಆದರೆ ಮಹಾರಾಷ್ಟ್ರದಲ್ಲಿ ಖಾಸಗಿ ಗ್ರಂಥಾಲಯಗಳು ಲಾಭದಾಯಕವಾಗಿ ನಡೆಯುತ್ತಿವೆ. ಹಿಂದಿಯನ್ನು ವ್ಯವಹಾರಿಕ ಭಾಷೆಯನ್ನಾಗಿಸಿಕೊಂಡರೂ ಬಹುತೇಕ ಮರಾಠಿಗರು ತಮ್ಮ ಮಾತೃಭಾಷೆಯನ್ನು ಬಿಟ್ಟಿಲ್ಲ. ಕನ್ನಡಿಗರ ಹಾಗೆ ಇಂಗ್ಲೀಷ್ ವ್ಯಾಮೋಹದ ಸಮೂಹ ಸನ್ನಿಗೆ ಒಳಗಾಗಿಲ್ಲ. ಭಾರತದಲ್ಲಿ ಯಾವುದಾದರೂ ಭಾಷೆ ಅವನತಿಯತ್ತ ಸಾಗಿದ್ದರೆ ಅದಕ್ಕೆ ಆಂಗ್ಲ ಭಾಷಾ ಪ್ರಧಾನ ಶಿಕ್ಷಣ ಪದ್ದತಿ ಮಾತ್ರ ಕಾರಣವಾಗಿದೆಯೇ ಹೊರತು ಡಬ್ಬಿಂಗ್ ಕಾರಣ ಅಲ್ಲವೇ ಅಲ್ಲ. ಸತ್ಯಗಳನ್ನು ತಿರುಚಿ ಕನ್ನಡಿಗರನ್ನು ಭಾವನಾತ್ಮಕವಾಗಿ ಪ್ರಚೋದಿಸಿ ತಮ್ಮ ಸ್ವಾರ್ಥಸಾಧನೆಗೆ ಇಳಿದಿರುವ ಕನ್ನಡ ದೃಶ್ಯಮಾಧ್ಯಮಗಳ ಕೆಲವು ಜನರನ್ನು ಯಾಕೆ ಬೆಂಬಲಿಸಬೇಕು? ರೈತರ ಆತ್ಮಹತ್ಯೆ, ಸರಕಾರಿ ಹತ್ಯೆಗಳಾದಾಗ, ದಲಿತರ ಮೇಲೆ ನಿರಂತರ ದಬ್ಬಾಳಿಕೆಗಳು ನಡೆದಾಗ, ಮಹಿಳೆಯರ ಮೇಲೆ ದಿನನಿತ್ಯ ಲೈಂಗಿಕ ಶೋಷಣೆ ಆಗುತ್ತಿರುವಾಗ, ಕನ್ನಡ ಕುಲ-ನೆಲ-ಜಲಕ್ಕೆ ಆತಂಕ ಎದುರಾದಾಗ, ಭ್ರಷ್ಟಾಚಾರ ಎನ್ನುವುದು ರಾಜ್ಯಾದ್ಯಂತ ಸರ್ವವ್ಯಾಪಿಯಾಗಿರುವಾಗ.... ಎಂದೂ ಎಂದೆಂದೂ ದ್ವನಿ ಎತ್ತದ ದುಡ್ಡಿನ ಮೇಲೆ ದಿಮಾಖು ತೋರಿಸುವ ಸಿನೆಮಾ ಜನರ ಪರವಾಗಿ ಹೋರಾಟಕ್ಕಿಳಿಯಬೇಕೆ? ಕನ್ನಡಿಗರ ಔದಾರ್ಯದಿಂದಲೇ ಐಶಾರಾಮಿ ಜೀವನ ನಡೆಸುತ್ತಿರುವವರು ತಮ್ಮ ಸ್ವಂತ ಅಸ್ಥಿತ್ವಕ್ಕೆ ಬಂದ ಆತಂಕದಿಂದಾಗಿ ದ್ವನಿ ಎತ್ತಿದಾಗ ಕನ್ನಡಿಗರೆಲ್ಲರೂ ಒಕ್ಕೂರಲಿನಿಂದ ಬೆಂಬಲಿಸಿ ಬೀದಿಗಿಳಿಯಬೇಕೆ? ನಮ್ಮ ದೇಶದ ಸಂವಿಧಾನಕ್ಕೆ ಅಗೌರವ ತೋರಿಸುವವರೊಂದಿಗೆ,  ನೆಲದ ಕಾನೂನನ್ನು ಕಡೆಗಣಿಸಿದವರೊಂದಿಗೆ  ಇಡೀ ಕನ್ನಡ ಜನತೆ ಕೈಜೋಡಿಸಬೇಕೆ?

ಭಾಷೆಯೆಂಬ ಭಾವನಾತ್ಮಕ ಮಂತ್ರ ಹೆಚ್ಚು ಮೋಡಿ ಮಾಡದಿದ್ದಾಗ, ಕನ್ನಡದ ಲಕ್ಷಾಂತರ ಕಲಾವಿದರು ಹಾಗೂ ತಂತ್ರಜ್ಞರು ಬೀದಿಪಾಲಾಗುವರೆಂಬ ಇನ್ನೊಂದು ಹುಸಿ ಸೆಂಟಿಮೆಂಟ್ ಸುದ್ದಿಯನ್ನು ಡಬ್ಬಿಂಗ್ ವಿರೋಧಿಗಳ ಪಡೆ ಸಮರ್ಥಿಸಿಕೊಳ್ಳುತ್ತಿದೆ. ಆದರೆ ಸತ್ಯವೇನೆಂದರೆ ಕನ್ನಡ ಸಿನೆಮಾ ನಿರ್ಮಾಣದ ನೇಪತ್ಯದಲ್ಲಿ ಕೆಲಸ ಮಾಡುವ ಲೈಟ್ಸಮ್ಯಾನ್ನಿಂದ ಹಿಡಿದು ಕ್ಯಾಮಾರಾಮ್ಯಾನ್ವರೆಗೂ ಬಹುತೇಕ ಅನ್ಯ ಭಾಷೀಯರೆ ಕೆಲಸ ಮಾಡುತ್ತಿದ್ದಾರೆ. ಕನ್ನಡಿಗರಿದ್ದಾರಾದರೂ ಅವರಿಗೆ ಹೆಚ್ಚು ಮನ್ನನೆಯನ್ನು ಕೊಡಲಾಗುತ್ತಿಲ್ಲ. ಅದೆಷ್ಟೋ ಉದಯೋನ್ಮುಖ ಕಲಾವಿದರಿಗೆ, ಸಹಾಯಕರಿಗೆ ಕನಿಷ್ಟ ಸಂಭಾವನೆಯನ್ನೇ ಕೊಡದೇ ದುಡಿಸಿಕೊಳ್ಳಲಾಗುತ್ತಿದೆ. ತಾಂತ್ರಿಕವಾಗಿ ಪರಿಣಿತರಾದವರು ಯಾವ ಭಾಷೆಯ ಸಿನೆಮಾ ಇಂಡಸ್ಟ್ರೀಯಲ್ಲಿದ್ದರೂ ಬದುಕುತ್ತಾರೆ. ಡಬ್ಬಿಂಗ್ ಬಂದ ತಕ್ಷಣ ಸಿನೆಮಾ - ಟಿವಿ ದಾರಾವಾಹಿ ನಿರ್ಮಾಣಗಳೇನೂ ಸಂಪೂರ್ಣ ಬಂದಾಗುವುದಿಲ್ಲವಲ್ಲ. ತಾಕತ್ತಿದ್ದವರು, ಟ್ಯಾಲೆಂಟ್ ಇದ್ದವರೂ ಎಲ್ಲಿದ್ದರೂ ಬದುಕುತ್ತಾರೆ.

                             
ನಮ್ಮ ಸಿನೆಮಾ ನಿರ್ಮಾತೃಗಳಿಗೆ ಅನ್ಯ ಭಾಷೆಯ ತಂತ್ರಜ್ಞರು ಬೇಕು, ಬೇರೆ ಭಾಷೆಯ ನಾಯಕಿಯರು-ಖಳನಾಯಕರು ಬೇಕು, ಕಥೆ ಕೂಡಾ ಎರವಲು ಪಡೆದದ್ದೇ ಬೇಕು, ಹಾಡಿನ ಟ್ಯೂನ್ ಗಳು ಬೇರೆ ಭಾಷೆಯದ್ದೇ ಆಗಬೇಕು, ಕೆಲವು ಸಲ ನಿರ್ದೇಶಕರು ಬೇರೆ ಭಾಷೆಯವರೇ ಆಗಬೇಕು.... ಆದರೆ ಹೀರೋಗಳಾಗಿ ಸೋಕಾಲ್ಡ್ ಕನ್ನಡಿಗರು ಮಿಂಚಬೇಕು. ಇದರಿಂದ ಅರ್ಥವಾಗುತ್ತದೆ ಡಬ್ಬಿಂಗ್ ಬರುವುದರಿಂದ ಯಾರಿಗೆ ಲಾಭ ಎನ್ನುವುದು. ಲಾಭ ನಷ್ಟಗಳ ಲೆಕ್ಕಾಚಾರ ಹಾಕಬೇಕಾದ ಬಹುತೇಕ ನಿರ್ಮಾಪಕರೆ ಡಬ್ಬಿಂಗ್ ವಿರುದ್ದವಾಗಿ ಮಾತಾಡುತ್ತಿಲ್ಲ. ವಿತರಕರು, ಪ್ರದರ್ಶಕರು ಚಕಾರವೆತ್ತುತ್ತಿಲ್ಲ. ಪ್ರಜ್ಞಾವಂತ ಸಿನೆಮಾ ನಿರ್ದೇಶಕರು ಡಬ್ಬಿಂಗನ್ನು ವಿರೋಧಿಸುತ್ತಿಲ್ಲ. ಎಲ್ಲಾ ತಳುಕು ಬಳುಕಿನ ಲೋಕವನ್ನು ಕಟ್ಟಲು ಮೂಲಕಾರಣರಾದ ಪ್ರೇಕ್ಷಕ ಪ್ರಭುಗಳು ಡಬ್ಬಿಂಗ್ ಬೇಡವೇ ಬೇಡಾ ಎಂದು ಹಠಹಿಡಿದು ಕೂತಿಲ್ಲ. ತಮ್ಮ ಶ್ರಮದ ಸಹಸ್ರಾರು ಪಟ್ಟು ಹರಿದು ಬರುವ ಅಗಣಿತ ಲಾಭದಲ್ಲಿ ಎಲ್ಲಿ ಖೋತಾ ಆಗುವುದೋ, ಎಲ್ಲಿ ತಮ್ಮ ಸಾರ್ವಭೌಮತೆಗೆ ದಕ್ಕೆ ಬರುತ್ತದೆಯೋ ಎಂದು ಆತಂಕಗೊಂಡ ಸಿನೆಮಾ ಟಿವಿ ಫಲಾನುಭವಿ ನಾಯಕ-ನಾಯಕಿಯರು ಹಾಗೂ ಕೆಲವೇ ಕೆಲವು ನಿರ್ದೇಶಕರು ಬೀದಿಗೆ ಬಂದಿದ್ದಾರೆ. ತಮ್ಮ ಸಮಸ್ಯೆಯನ್ನು ಸಾರ್ವತ್ರಿಕಗೊಳಿಸುತ್ತಿದ್ದಾರೆ. ಜನತೆಯನ್ನು ತಮ್ಮ ತಾರಾಮೆರಗಿನಿಂದ ಸಮ್ಮೋಹಿತರನ್ನಾಗಿಸಲು ಪ್ರಯತ್ನಿಸುತ್ತಿದ್ದಾರೆ. ಸಂವಿಧಾನಕ್ಕೆ ಚಾಲೆಂಜ್ ಮಾಡುತ್ತಿದ್ದಾರೆ. ದೇಶದ ಒಕ್ಕೂಟ ವ್ಯವಸ್ಥೆಗೆ ಸವಾಲೊಡ್ಡುತ್ತಿದ್ದಾರೆ.
         
ಅರ್ಥವಾಗದ ಅನ್ಯ ಭಾಷೆಯಲ್ಲಿರುವ ಮನರಂಜನೆ, ಬೋಧನೆ, ಶಿಕ್ಷಣವನ್ನು ನಮ್ಮದೆ ಮಾತೃಭಾಷೆಯಲ್ಲಿ ನೋಡುವ ಹಕ್ಕೂ ನಮ್ಮ ಮಕ್ಕಳಿಗಿಲ್ಲವೆ? ಎಲ್ಲಾ ಭಾಷೆಯಲ್ಲಿರುವ ಅರಿವನ್ನು ಕನ್ನಡದಲ್ಲಿ ಪಡೆಯುವ ಕನ್ನಡಿಗರ ಹಕ್ಕನ್ನು ನಿರಾಕರಿಸುವುದು ಒಂದು ರೀತಿಯಲ್ಲಿ ಜನವಿರೋಧಿ ನಿಲುವಾಗಿದೆಯಲ್ಲವೇ?  ಕೆಲವೇ ಕೆಲವು ಜನ ತಮ್ಮ ಸ್ವಾರ್ಥಕ್ಕಾಗಿ ಕೊಟ್ಯಾಂತರ ಜನರ ಹಕ್ಕನ್ನು ನಿರ್ಬಂಧಿಸುವುದು ಜೀವವಿರೋಧಿಯಲ್ಲವೆ? ಭಾರತದ ಸಂವಿಧಾನದಕ್ಕೆ ಗೌರವ ಕೊಡದೆ ಅದರ ಒಕ್ಕೂಟದ ಪರಿಕಲ್ಪನೆಯ ಆಶಯಕ್ಕೆ ವಿರುದ್ದವಾದ ನಿಲುವನ್ನು ಹೊಂದಿರುವ ಡಬ್ಬಿಂಗ್ ವಿರೋಧಿಗಳು ದೇಶದ ವಿರೋಧಿಗಳೂ ಅಲ್ಲವೆ? ಇಷ್ಟಕ್ಕೂ ಅಂತಿಮವಾಗಿ ಡಬ್ಬಿಂಗ್ ಬೇಕಾ ಬೇಡವಾ ಎಂದು ತೀರ್ಮಾನಿಸುವವರು ಪ್ರೇಕ್ಷಕ ಪ್ರಭುಗಳೇ.

                                   -ಶಶಿಕಾಂತ ಯಡಹಳ್ಳಿ 
               


1 ಕಾಮೆಂಟ್‌:

  1. ಡಬ್ಬಿ೦ಗ್ ಸಮರ್ಥಕರ ವಾದ

    ೧. ಇ೦ದಿನ ಕನ್ನಡ ಚಿತ್ರ ಗಳಲ್ಲಿ ಕನ್ನಡ ಸ೦ಸ್ಕ್ರತಿ ಇಲ್ಲ

    ೨. ಬರೀ ಲಾ೦ಗು ಮಚ್ಚು, ಆಯ್ಯನ್, ಅಕ್ಕನ್ ಭಾಷೆ...ಇದು ನಮ್ಮ ಸ೦ಸ್ಕ್ರುತಿ ಅಲ್ಲ...

    ೩. ಕನ್ನಡಿಗರು ರಿಮೇಕ್ ಪ್ರವೀಣರು...

    ೪. ಕನ್ನಡ ಚಿತ್ರಗಳಲ್ಲಿ ಕೇವಲ ಕನ್ನಡ ತ೦ತ್ರಜ್ನ್ಯರಿರಲಿ...ನಾಯಕಿಯರಿರಲಿ...

    ೫. ಕರ್ನಾಟಕಲ್ಲಿ ಬಿಡುಗಡೆಯಾಗುವ ಎಲ್ಲಾ ಚಿತ್ರಗಳು ಕನ್ನಡ ಭಾಷೆಯಲ್ಲಿರ ಬೇಕು....

    ೬. ಕನ್ನಡ ಚಿತ್ರಗಳು ಇಷ್ಟು ದುರ್ಬಲ ವೇಕೆ...?

    ೧. ಇ೦ದಿನ ಕನ್ನಡ ಚಿತ್ರಗಳಲ್ಲಿ ಕನ್ನಡ ಸ೦ಸ್ಕ್ರುತಿ ಇಲ್ಲ ಎ೦ದು ಅಪವಾದಿಸುವ ಜನ ಕನ್ನಡ ಸ೦ಸ್ಕ್ರುತಿ ಎ೦ದರೇನು ಎ೦ಬುದನ್ನು ಹೇಳಲು ಮರೆಯುತ್ತಾರೆ. ಮಕ್ಕಳನ್ನು ಇ೦ಗ್ಲೀಷ ಮೀಡಿಯ೦ ಶಾಲೆಗಳಿಗೆ ಸೇರಿಸಿ..ಅವರು ಮಮ್ಮೀ, ಡ್ಯಾಡಿ, ಆ೦ಟೀ , ಅ೦ಕಲ್ ಎನ್ನುವುದನ್ನು ಕೇಳಿ ಪುಲಕಿತರಾಗುವ ಕಾಲ ಇದು. ಮನೆಗೆ ಬ೦ದ ಅತಿಥಿಗಳ ಎದುರು....ಕನ್ನಡ ದಲ್ಲಿ ಪದ್ಯಗಳೇ ಇಲ್ಲವೇನೋ ಎ೦ಬ೦ತೆ " ಟ್ವಿ೦ಕಲ್ ಟ್ವಿ೦ಕಲ್ ಲಿಟ್ಲ ಸ್ಟಾರ್ " ಎ೦ದು ಹಾಡಿಸಿ ಬೀಗುವ ಕಾಲ ಇದು. ಚಲನ ಚಿತ್ರವೆನ್ನುವುದು...ನಮ್ಮ ಸಮಾಜಕ್ಕೆ ಹಿಡಿದ ಕನ್ನಡಿ. ಈಗ ಸಮಾಜದಲ್ಲಿ ಏನು ನಡೆಯುತ್ತಿರುವುದೋ ಅದನ್ನೇ ಅಲ್ಲಿ ತೋರುವುದು...ಆದ್ದರಿ೦ದ ಕನ್ನಡ ಸ೦ಸ್ಕ್ರುತಿಯ ಬಗ್ಗೆ ಮಾತನಾಡುವವರು...ಅವರು ಚಿತ್ರಗಳಲ್ಲಿ ಅಪೇಕ್ಷಿಸುವ ಸ೦ಸ್ಕ್ರತಿ ಎ೦ಥದು ಎ೦ದು ವಿವರಣೆ ಕೊಡುವ ಅಗತ್ಯವಿದೆ....

    ೨ ಚಲನ ಚಿತ್ರ ವೆ೦ಬುದು ಸಮಾಜಕ್ಕೆ ಹಿಡಿದ ಕನ್ನಡಿ ... ನಮ್ಮ ಸಮಾಜದಲ್ಲಿ ಈಗ ನಡೆಯುವುದನ್ನೇ ಹಲವಾರು ಸಿನಿಮಾಗಳು ತೋರಿಸುತ್ತಿವೆ ( ಉದಾ : ದ೦ಡು ಪಾಳ್ಯ ). ಬೆ೦ಗಳೂರಿನ ಬೀದಿಗಳಲ್ಲಿ ಲಾ೦ಗು ಮಚ್ಚು ಹಿಡಿದು ರೌಡಿಗಳು ಹೊಡೆದಾಡಿದ ನಿದರ್ಶನ " ಓ೦ " ಚಿತ್ರ ಬಿಡುಗಡೆಯಾಗುವುದಕ್ಕಿ೦ತ ಮೊದಲೇ ಇತ್ತು. ಹೀಗಾಗಿ ರೌಡಿಯಿಸ೦ ಕಥೆಗಳನ್ನು ಹೇಳುವ ಸಿನಿಮಾಗಳಲ್ಲಿ ಲಾ೦ಗು ಮಚ್ಚು ಇದ್ದೇ ಇರುತ್ತೆ...ಇನ್ನು ರೌಡಿಗಳ ಭಾಷೆಯೇ ಅಯ್ಯನ್, ಅಕ್ಕನ್...ಇದನ್ನು ಬಿಟ್ಟು ಅವರ ಬಾಯಿ೦ದ ಬಸವಣ್ಣನವರ ವಚನ ಹೇಳಿಸಲು ಸಾಧ್ಯವೇ...?

    ಹೀಗೆ೦ದು ನಾನು ಇ೦ಥ ಚಿತ್ರಗಳನ್ನು ಮತ್ತು ಇ೦ಥ ಸ೦ಭಾಷಣೆಯನ್ನು ಸಮರ್ಥಿಸಿಕೊಳ್ಳುವುದಿಲ್ಲ..ಆದರೆ ಇ೦ಥ ಕ್ರೌರ್ಯವಿರುವ ಚಿತ್ರಗಳನ್ನು ಅಭೂತ ಪೂರ್ವವಾಗಿ ಗೆಲ್ಲಿಸಿ ( " ಓ೦ ", " ಜೋಗಿ ", " ದುನಿಯಾ " )..ಹೆಚ್ಚು ಹೆಚ್ಚು ಇ೦ಥ ಚಿತ್ರಗಳು ನಿರ್ಮಾಣವಾಗಲು ಪ್ರೋತ್ಸಾಹ ಕೊಟ್ಟವರೇ ನಾವು ಕನ್ನಡಿಗರು....ಕಳೆದ ವರ್ಷ ಇ೦ಥ ಯಾವ ಚಿತ್ರಗಳೂ ಗೆದ್ದಿಲ್ಲದಿರುವುದನ್ನೂ ಇಲ್ಲಿ ಗಮನಿಸಬೇಕು...ಇನ್ನು ಬೇರೆ ಭಾಷೆಯ ಚಿತ್ರಗಳಲ್ಲಿ ಇ೦ಥ ಚಿತ್ರಗಳಿಲ್ಲವಾ...? ನಿಮ್ಮನ್ನೇ ನೀವು ಕೇಳಿಕೊಳ್ಳಿ...

    ೩. ರಿಮೇಕ್ ಚಿತ್ರಗಳಿರಬಾರದು ನಿಜ...ಅವು ಯಾವುದೇ ಭಾಷೆಯ ಚಿತ್ರರ೦ಗಕ್ಕೆ ಶೋಭೆ ತರುವುದಿಲ್ಲ. ಹಾಗಿದ್ದರೆ ತಡೆಯುವುದೆ೦ತು...? ಅವುಗಳನ್ನು ನೋಡುವುದನ್ನು ನಿಲ್ಲಿಸುವುದು. ಆದರೆ " ಜೈ ಹೋ " ಎ೦ಬ ಇತ್ತೀಚೆಗೆ ಬಿಡುಗಡೆಯಾದ ಹಿ೦ದೀ ಚಿತ್ರ ೨೦ ವರ್ಷಗಳ ಹಿ೦ದಿನ " ಸ್ಟಾಲಿನ್ " ಚಿತ್ರದ ನಕಲು ಎ೦ದು ತಿಳಿದೂ...ಆ ಚಿತ್ರ ನೋಡಲು ಮುಗಿಬಿದ್ದು ಒ೦ದೇ ವಾರದಲ್ಲಿ ಅದು ನೂರು ಕೋಟಿ ಕ್ಲಬ್ ಸೇರುವ೦ತೆ ಮಾಡಿದ್ದರಲ್ಲಿ ಕನ್ನಡಿಗರ ಪಾಲೂ ಇಲ್ಲವೇ...ಇನ್ನು ರಿಮೇಕ್ ಹೇಗೆ ತಡೆಯುತ್ತೀರಿ.....ಆದರೆ ಡಬ್ಬಿ೦ಗ ಗಿ೦ತ...ರಿಮೇಕ್ ವಾಸಿ..ಅದರಿ೦ದ ಎಷ್ತೋ ಕನ್ನಡ ಕಲಾವಿದರಿಗೆ ಕೆಲಸ ಸಿಗುತ್ತದೆ

    ೪. ಇದೆ೦ತಹ ವಾದ...ತಮಿಳಿನ " ಎ೦ದಿರನ್ " ಚಿತ್ರಕ್ಕೆ ಹಾಲಿವುಡ್ ತ೦ತ್ರಜ್ನ್ಯರನ್ನು, ಹಿ೦ದಿಯ ನಾಯಕಿ ಮತ್ತು ಖಳನನ್ನು ಉಪಯೋಗಿಸಿದರೆ ಅದು ಸರಿ...ಅದನ್ನು ಮುಗಿಬಿದ್ದು ನೋಡುತ್ತೀರಿ...ಕನ್ನಡ ಚಿತ್ರರ೦ಗದವರು ಮಾತ್ರ ಅಪ್ಪಟ ಕನ್ನಡಿಗರನ್ನೇ ಉಪಯೋಗಿಸಬೇಕು...ಇದ್ಯಾವ ನ್ಯಾಯ...ತ್ರ೦ತ್ರಜ್ನ್ಯರ, ನಾಯಕಿಯರ, , ಗಾಯಕರ ವಿನಿಮಯ ಇ೦ದು ನಿನ್ನೆಯದಲ್ಲಿ , ಇದು ೫೦ ವರ್ಷಗಳಷ್ಟು ಹಳೆಯದು...ಇದಕ್ಕಾಗಿ ಕನ್ನಡ ಚಿತ್ರರ೦ಗವನ್ನು ದೂರುವುದು .." ಒಲ್ಲದ ಗ೦ಡ ಮೊಸರಲ್ಲಿ ಕಲ್ಲು ಹುಡುಕಿದ ಹಾಗೆ...ಮಿಡುಕಿದ ಹಾಗೆ " ...

    ನಿಮ್ಮ ಯಾವುದೇ ಸಮಸ್ಸೆಗಳ ಹೋರಾಟಕ್ಕೆ ನಿಮ್ಮ ಜೊತೆ ಕೈ ಜೋಡಿಸ ಬೇಕಾದವರು ನಿಮಗೆ ನೂತೆ೦ಟು ಸುಳ್ಳು ಆಶ್ವಾಸನೆ ಕೊಟ್ಟು ಚುನಾಯಿತರಾಗಿ ಬರುವ ರಾಜಕಾರಣಿಗಳು...ಅವರ ಕೊರಳ ಪಟ್ಟು ಹಿಡಿದು ಕೇಳಿ....

    ಡಾ.ರಾಜ್ ಇದ್ದಾಗ ಅನೇಕ ಕನ್ನಡ ಭಾಷೆ, ನೆಲ ಜಲ ಸಮಸ್ಯೆಗಳಿಗೆ ಅವರು ಮಿಡಿದಿದ್ದರು...ಆದ್ದರಿ೦ದಲೇ ಅವರು " ಕರ್ನಾಟಕ ರತ್ನ " ಆದರು...ಇ೦ದಿನ ನಟರಿಗೆ ಆ ದರ್ದಿಲ್ಲ ಎ೦ಬುದೂ ನಿಜ...

    ೭. ಕನ್ನಡ ಚಿತ್ರಗಳು ದುರ್ಬಲವಾಗಲು ( ಶ್ರೀಮ೦ತಿಕೆ ಯಲ್ಲಿ ಮಾತ್ರ ) ಕಾರಣ ಎರಡು

    ಒ೦ದು..... ಕನ್ನಡಿಗರ ಭಾಷಾಭಿಮಾನದ ಕೊರತೆ. ತಮಿಳು ನಾಡನ್ನೇ ನೋಡಿ ನಮಗೆ ಹಿ೦ದೀ ಚಾನಲ್ ಗಳೇ ಬೇಡ ಎ೦ದು ಹೋರಾಟಕ್ಕಿಳಿದವರು ಅವರು. ನೀವು ತಮಿಳಿನಾಡಿಗೆ ಹೋಗಿ ಹಿ೦ದೀ ಅಥವಾ ಇ೦ಗ್ಲೀಶ ನಲ್ಲಿ ಪ್ರಶ್ನೆ ಕೇಳಿದರೆ ತಮಿಳಿನಲ್ಲೇ ಉತ್ತರ ಕೊಡುವವರು ಅವರು...ಆದ್ದರಿ೦ದಲೇ ಅವರ ಚಿತ್ರರ೦ಗ ಬಾಲಿವುಡ್ ಗೆ ಸವಾಲು ಹಾಕುವಷ್ಟು ಅಗಾಧವಾಗಿ ಬೆಳೆಯಿತು...

    ಕಾರಣ ಎರಡು : ಭೌಗೋಳಿಕ ವಾಗಿ ಕರ್ನಾಟಕ ಆ೦ಧ್ರ ಮತ್ತು ತಮಿಳುನಾಡುಗಳಿಗಿ೦ತ ಚಿಕ್ಕದು...ತಮಿಳುನಾಡಿನಲ್ಲಿ ಬೆ೦ಗಳೂರಿನ೦ತಹ ಸುಮಾರು ೮ ಮೆಟ್ರೋ ಎ೦ಬಒತಹ ನಗರಗಳಿವೆ ಹೀಗಾಗಿ ಅಲ್ಲಿ ಚಿತ್ರಮ೦ದಿರಗಳ ಸ೦ಖ್ಯೆ ೩೦೦೦ , ನಮ್ಮಲ್ಲಿ ಬರೀ ೬೦೦. ಆ೦ಧ್ರದಲ್ಲೂ ಸುಮಾರು ೨೦೦೦ ಚಿತ್ರಮ೦ದಿರಗಳಿವೆ

    ಇನ್ನೊ೦ದು ಕಾರಣ ನಾವು ೭೦ರ ದಶಕದಿ೦ದಲೂ ಪರಭಾಷಾ ಚಿತ್ರಗಳಿಗೆ ಮಣೆ ಹಾಕಿದ್ದು.

    ಕನ್ನಡ ಚಿತ್ತ್ರರ೦ಗದ ಈಗಿನ ಡಬ್ಬಿ೦ಗ್ ವಿರುದ್ದದ ಹೋರಾಟ ಅವರ ಉಳಿವಿಗಾಗಿ...ನಿಮಗೆ ಕನ್ನಡ ಚಿತ್ರರ೦ಗದ ಉಳಿವಿನ ಕಾಳಜಿ ಇದ್ದರೆ ಕೈ ಜೋಡಿಸಿ..ಇಲ್ಲದಿದ್ದರೆ ಕೊನೆಯ ಪಕ್ಷ...ವಿತ೦ಡ ವಾದಗಳನ್ನು ಮ೦ಡಿಸಿ...ಕಾಲೆಳೆಯ ಬೇಡಿ...

    ಕೊನೆಯ ಪ್ರಶ್ನೆ : ಪರಭಾಷಾ ಚಿತ್ರಗಳು ಡಬ್ ಅಗಿ ಬ೦ದರೆ...ಮೇಲಿನದೆಲ್ಲ ನಿ೦ತು ಬಿಡುತ್ತಾ ?

    ಪ್ರತ್ಯುತ್ತರಅಳಿಸಿ