ಗುರುವಾರ, ಜನವರಿ 30, 2014

“ಡಬ್ಬಿಂಗ್‌ನಿಂದ ಕನ್ನಡ ಚಲನಚಿತ್ರರಂಗಕ್ಕೆ ಆಪತ್ತು”




                 ಡಬ್ಬಿಂಗ್ ಆತಂಕವಾ ಇಲ್ಲಾ ಅವಕಾಶವಾ ?
                  
                      
ಹೌದು! ಡಬ್ಬಿಂಗ್ ಬಂದರೆ ಕನ್ನಡ ಚಲನಚಿತ್ರರಂಗಕ್ಕೆ ಆಪತ್ತು ಕಟ್ಟಿಟ್ಟ ಬುತ್ತಿ ಎನ್ನುವ ಆತಂಕವನ್ನು ರಾಜ್ಯಾದ್ಯಂತ ವ್ಯವಸ್ಥಿತವಾಗಿ ಪ್ರಚಾರಗೊಳಿಸಲಾಗುತ್ತಿದೆ. ಇದು ನಿಜವಾ? ಪೈಪೋಟಿಯನ್ನು ಎದುರಿಸಲಾರದಷ್ಟು ನಮ್ಮ ಸಿನೆಮಾ ಕ್ಷೇತ್ರ ದುರ್ಬಲವಾ? ಪರಭಾಷಿಕರಿಗೆ ಕರೆಕರೆದು ಕೆಲಸ ಕೊಡುವ ನಮ್ಮ ಸಿನೆಮಾ ನಿರ್ಮಾತೃಗಳು, ಪರಭಾಷೆ ಚಿತ್ರಗಳನ್ನು ನಿರಂತರವಾಗಿ ರಿಮೇಕ್ ಮಾಡುವ ನಮ್ಮ ಸಿನೆಮಾ ಪ್ರವರ್ತಕರು ಕನ್ನಡ ಭಾಷೆಯಲ್ಲಿ ಅನ್ಯ ಭಾಷೆಗಳ ಸಿನೆಮಾ ತೋರಿಸಲು ಹೆದರುತ್ತಾರಾ? ಅದೋ ನೋಡಿ ಡಬ್ಬಿಂಗ್ ಭೂತ ಬರುತ್ತಿದೆ ಓಡಿ ಓಡಿ, ಇಲ್ಲವೇ ಎಲ್ಲರೂ ಒಂದಾಗಿ ಬನ್ನಿ ಅದನ್ನು ಓಡಿಸೋಣ ಎನ್ನುವಷ್ಟು ಭಯಭೀತರಾಗಿದ್ದಾರಾ?

ನಿಜವಾಗಿ ಡಬ್ಬಿಂಗ್ ಆತಂಕ ಕೆಲವೇ ಕೆಲವು ಜನರ ಸೃಷ್ಟಿಯಾಗಿದೆ. ಕಾಲಘಟ್ಟದ ಅನಿವಾರ್ಯತೆಯಾದ ಡಬ್ಬಿಂಗನಿಂದ ಪ್ರಸ್ತುತ ಸಿನೆಮಾರಂಗಕ್ಕೆ ಆಪತ್ತಿಗಿಂತ ಉಪಯುಕ್ತತೆಗಳೂ ಇವೆ. ಅವುಗಳತ್ತ ಆಲೋಚಿಸಬೇಕಾಗಿದೆ. ಕೇವಲ ತಾರೆಗಳ ಬಾಯಲ್ಲಿ ಬಂತು ಎಂದಾಕ್ಷಣ ಅದನ್ನು ಕುರುಡಾಗಿ ನಂಬುವಷ್ಟು ಕನ್ನಡದ ಜನತೆ ನೆರೆಹೊರೆಯ ರಾಜ್ಯಗಳಷ್ಟು ಅಂದಾಭಿಮಾನಿಗಳಲ್ಲ. ಒಂದೇ ಸುಳ್ಳನ್ನು ಸಾವಿರಾರುಬಾರಿ ಹೇಳಿ ಪ್ರೇಕ್ಷಕರನ್ನು ನಂಬಿಸಲು ಹೊರಟವರಿಗೆ ತಿರುಗೇಟು ಕೊಡುವಷ್ಟು ಸಾಮರ್ಥ್ಯ ಕನ್ನಡಿಗರಿಗಿದೆ. ಕನ್ನಡ ನಾಡಿನ ಜನರು ಪ್ರಜ್ಞಾವಂತರಿದ್ದಾರೆ. ಅದಕ್ಕೆ ಉದಾಹರಣೆ ಎಂದರೆ ವರ್ಷಕ್ಕೆ ಬರುವ ನೂರಾಮೂವತ್ತು ಸಿನೆಮಾಗಳಲ್ಲಿ ನೂರಕ್ಕೂ ಹೆಚ್ಚು ಅಪ್ರಸ್ತುತ ಸಿನೆಮಾಗಳನ್ನು ನಿರ್ದಾಕ್ಷಿಣ್ಯವಾಗಿ ತಿರಸ್ಕರಿಸುವಷ್ಟು ಕನ್ನಡಿಗರು ಪ್ರೌಢರಾಗಿದ್ದಾರೆ. ಬೇರೆಲ್ಲಾ ಭಾಷೆಗಳಲ್ಲಿ ಹೇಗೋ ಸಿನೆಮಾ ಮಾಡಿ ಗೆಲ್ಲಬಹುದು. ಆದರೆ ಕನ್ನಡದಲ್ಲಿ ಬೇಜವಾಬ್ದಾರಿಯಿಂದ ಸಿನೆಮಾ ಮಾಡಿದರೆ ಸೋಲು ಗ್ಯಾರಂಟಿ. ಪ್ರೇಕ್ಷಕ ಮಾತನಾಡುವುದಿಲ್ಲ ಆದರೆ ಸಿನೆಮಾಒಂದರ ಸೋಲು ಗೆಲುವಿನಲ್ಲಿ ನಿರ್ಣಾಯಕ ಪಾತ್ರವಹಿಸುತ್ತಾನೆ.

ಡಬ್ಬಿಂಗ್ ಭೂತ ಕನ್ನಡ ಸಿನೆಮಾಗಳನ್ನು ಆಪೋಷಣ ತೆಗೆದುಕೊಳ್ಳುತ್ತದೆ ಎನ್ನುವ ಹುಸಿ ಘೋಷಣೆಯನ್ನು ಗಮನಿಸೋಣ. ಈಗ ಕನ್ನಡದಲ್ಲಿ ಬರುತ್ತಿರುವ ಒಟ್ಟಾರೆ ಸಿನೆಮಾಗಳಲ್ಲಿ ಕನಿಷ್ಟ ಕಾಲು ಭಾಗ ನೇರವಾಗಿ ಪರಭಾಷಾ ಸಿನೆಮಾಗಳ ರಿಮೇಕ್ನಿಂದ ನಿರ್ಮಿಸಲ್ಪಡುತ್ತಿವೆ. ಇನ್ನೂ ಅರ್ಧ ಭಾಗದಷ್ಟು ಸಿನೆಮಾಗಳನ್ನು ಸ್ವಮೇಕ್ ಎಂದು ಸಮರ್ಥಿಸಿಕೊಳ್ಳುತ್ತಾರಾದರೂ ಯಾವುದ್ಯಾವುದೋ ಭಾಷೆಗಳ ಸಿನೆಮಾ ದೃಶ್ಯಗಳನ್ನು ತೆಗೆದುಕೊಂಡು ಸ್ವಮೇಕ್ ಹೆಸರಲ್ಲಿ ಸಿನೆಮಾ ಮಾಡುತ್ತಿದ್ದಾರೆ. ಇಂತವುಗಳಿಗೆ ರೀಮಿಕ್ಸ ಸಿನೆಮಾಗಳೆನ್ನಬಹುದಾಗಿದೆ. ಇತ್ತೀಚೆಗೆ ರಿಮೇಕ್ ಮತ್ತು ರಿಮಿಕ್ಸ ಸಿನೆಮಾಗಳ ಹಾವಳಿ ಹೆಚ್ಚಾಗಿದೆ. ಕನ್ನಡದ ಕಥೆ ಕಾದಂಬರಿಯಂತಹ ಸಾಹಿತ್ಯ ಕೃತಿಗಳನ್ನು ಆಧರಿಸಿದ ಶುದ್ದ ಕನ್ನಡ ಚಿತ್ರಗಳು ಅಪರೂಪವಾಗಿವೆ. ಇಂತಹ ಸಂದರ್ಭದಲ್ಲಿ ಡಬ್ಬಿಂಗ್ ಬಂದರೆ ಏನಾಗುತ್ತದೆ?

ರಿಮೇಕ್ ಸಿನೆಮಾಗಳು ಬಂದಾಗುತ್ತವೆ. ಯಾಕೆಂದರೆ ಕನ್ನಡ ಭಾಷೆಯಲ್ಲೇ ಡಬ್ ಆದ ಅನ್ಯಭಾಷೆಯ ಸಿನೆಮಾಗಳು ಬಂದರೆ ಯಾರು ಆಯಾ ಭಾಷೆಯ ಸಿನೆಮಾಗಳ ರಿಮೇಕನ್ನು ನೋಡಲು ಇಷ್ಟಪಡುತ್ತಾರೆ. ಉದಾಹರಣೆಗೆ ಮುನ್ನಾ ಭಾಯಿ ಎಂಬಿಬಿಎಸ್ ಎನ್ನುವ ಸಂಜಯ್ ದತ್ ಅಭಿನಯದ ಹಿಂದಿ ಸಿನೆಮಾವನ್ನು ಕನ್ನಡ ಭಾಷೆಗೆ ಡಬ್ ಮಾಡಿದಾಗ ಅದನ್ನು ನಮ್ಮದೇ ಮಾತೃಭಾಷೆಯಲ್ಲಿ ನೋಡಿದ ಪ್ರೇಕ್ಷಕರು ಸಿನೆಮಾವನ್ನೇ ಉಪೇಂದ್ರ ಅಭಿನಯದಲ್ಲಿ ಕನ್ನಡದಲ್ಲಿ ಮರುನಿರ್ಮಿಸಿ ರಿಮೇಕ್ ಮಾಡಿದಾಗ ಬಂದು ನೋಡುತ್ತಾರೆಯೇ?  ಡಬ್ ಆದ ಸಿನೆಮಾವನ್ನು ಯಾವ ಧೈರ್ಯದ ಮೇಲೆ ರಿಮೇಕ್ ಮಾಡಲು ಸಾಧ್ಯ? ಹೀಗಾಗಿ ಡಬ್ಬಿಂಗ್ ಭೂತ ಮೊದಲು ಬಲಿ ತೆಗೆದುಕೊಳ್ಳುವುದೇ ರಿಮೇಕ್ ಸಂಸ್ಕೃತಿಯನ್ನು.

ರಿಮೇಕ್ ಬಂದಾಗುತ್ತಲ್ಲಾ ಎನ್ನುವ ಆತಂಕ ಕೆಲವರನ್ನು ಕಾಡುತ್ತಿದೆ. ಯಾಕೆಂದರೆ ಕನ್ನಡದಲ್ಲಿ ಸಿನೆಮಾಗೆ ಹೊಂದಾಣಿಕೆಯಾಗುವ ಕಥೆಗಳಿಲ್ಲ ಎನ್ನುವುದು ಬಹುದಿನಗಳಿಂದ ಕೇಳಿಬರುತ್ತಿರುವ ಅಪಸ್ವರ. ಸ್ವಮೇಕ್ ಮಾಡಿ ಗೆಲ್ಲುವ ಸವಾಲನ್ನು ಎದುರಿಸುವ ರಿಸ್ಕ ತೆಗೆದುಕೊಳ್ಳಲು ನಮ್ಮ ಸಿನೆಮಾ ಜನ ಹಿಂಜರಿಯುತ್ತಾರೆ. ಹೀಗಾಗಿಯೇ ಬೇರೆ ಭಾಷೆಯಲ್ಲಿ ಯಶಸ್ವಿಯಾದ ಸಿನೆಮಾ ಕಥೆಗಳನ್ನು ನೇರವಾಗಿ ಬಟ್ಟಿಇಳಿಸುತ್ತಾರೆ. ಅಲ್ಲಿ ಗೆದ್ದ ಸಿನೆಮಾ ಇಲ್ಲಿಯೂ ಗೆಲ್ಲುತ್ತದೆ ಎನ್ನುವ ಅಪಾರವಾದ ನಂಬಿಕೆ ಅವರದು. ಆದರೆ ಅಂತಹ ನಂಬಿಕೆಗಳನ್ನೂ ಹಲವಾರು ಬಾರಿ ಕನ್ನಡದ ಪ್ರಜ್ಞಾವಂತ ಪ್ರೇಕ್ಷಕರು ಬುಡಮೇಲು ಮಾಡಿದ್ದಾರೆ. ಅದಕ್ಕೆ ಲೇಟೆಸ್ಟ್ ಉದಾಹರಣೆ ಎಂದರೆ ಇತ್ತೀಚೆಗೆ ತೋಪಾದ ಅದ್ದೂರಿ ರಿಮೇಕ್ ಸಿನೆಮಾ ನಿನ್ನಿಂದಲೇ,

ಯಾವಾಗ ಡಬ್ಬಿಂಗನಿಂದಾಗಿ ಎರವಲು ಸಿನೆಮಾಗಳನ್ನು, ಸಿನೆಮಾ ಕಥೆಗಳನ್ನು, ಸಿನೆಮಾ ಕಥಾ ಭಾಗಗಳನ್ನು ಕನ್ನಡದಲ್ಲಿ ಮರುನಿರ್ಮಿಸುವುದು ನಿಲ್ಲುತ್ತದೆಯೋ ಆಗ ಅನಿವಾರ್ಯವಾಗಿ ಕನ್ನಡ ಸಿನೆಮಾ ನಿರ್ಮಾತೃಗಳು ಕನ್ನಡ ಸಾಹಿತ್ಯ ಕೃತಿಗಳತ್ತ ಗಮನ ಹರಿಸಬೇಕಾಗುತ್ತದೆ. ಸ್ವಮೇಕ್ ಸಿನೆಮಾ ನಿರ್ಮಾಣಗಳತ್ತ ತಮ್ಮನ್ನು ತೊಡಗಿಸಿಕೊಳ್ಳಬೇಕಾಗುತ್ತದೆ. ನೆಲದ ಸಂಸ್ಕೃತಿಗೆ ಹೊಂದಿಕೊಳ್ಳುವಂತಹ ಕಥೆಗಳನ್ನು ಹುಡುಕಬೇಕಾಗುತ್ತದೆ ಇಲ್ಲವೇ ಹೊಸದಾಗಿ ಕಟ್ಟಬೇಕಾಗುತ್ತದೆ. ಆಗ ನೋಡಿ ನಿಜವಾದ ಕನ್ನಡ ಮಣ್ಣಿನ ಗುಣವಿರುವ, ನಾಡು ನುಡಿಯ ನಿಜವಾದ ಸೊಗಡಿರುವ ಚಲನಚಿತ್ರಗಳು ಮೂಡಿಬರುತ್ತವೆ. ಕನ್ನಡದ ಸಂಸ್ಕೃತಿಯಲ್ಲಿಲ್ಲದ ಗ್ಯಾಂಗಸ್ಟರ್ ಸಿನೆಮಾಗಳು, ಸೆಕ್ಸ ಮತ್ತು ಹಿಂಸಾಪ್ರಧಾನ ಸಿನೆಮಾಗಳು ಸ್ವಲ್ಪ ಮಟ್ಟಿಗಾದರೂ ಕಡಿಮೆಯಾಗುತ್ತವೆ. ಆಗ ಬಂಗಾರದ ಮನುಷ್ಯ, ಯಜಮಾನ ನಂತಹ ಅಪ್ಪಟ ಕನ್ನಡತನವಿರುವ ಸಿನೆಮಾಗಳು ನಿರ್ಮಿತವಾಗುತ್ತವೆ. ರೀತಿಯ ಅಸಲಿ ಸಿನೆಮಾಗಳು ಯಾವಾಗ ಬರುತ್ತವೆಯೋ ಆಗ ಕನ್ನಡ ಪ್ರೇಕ್ಷಕ ಅವುಗಳನ್ನು ತಮ್ಮವೆಂದು ಅಪ್ಪಿಕೊಳ್ಳುತ್ತಾನೆ, ತಮ್ಮದೇ ಸಂತಸ ಸಂಕಟಗಳನ್ನು ಹೇಳುವಂತಹ ಪ್ರಯತ್ನಗಳು ಸಿನೆಮಾದಲ್ಲಿ ತೋರಿಸಿದಾಗಿ ಅಂತಹ ಸಿನೆಮಾಗಳು ತಮ್ಮದೇ ಬದುಕಿನ ಭಾಗ ಎಂದು ಕನ್ನಡದ ಜನತೆ ಒಪ್ಪಿಕೊಳ್ಳುತ್ತಾರೆ. ಯಾವಾಗ ಪ್ರೇಕ್ಷಕರೇ ಒಪ್ಪಿಕೊಳ್ಳುತ್ತಾರೋ ಆಗ ಕನ್ನಡ ಸಿನೆಮಾಗಳು ಗೆಲ್ಲತೊಡಗುತ್ತವೆ. ಅವು ಹೆಚ್ಚು ಸಂಖ್ಯೆಯಲ್ಲಿ ಗೆದ್ದಂತೆಲ್ಲಾ ಕನ್ನಡ ಸಿನೆಮಾ ಕ್ಷೇತ್ರ ಬೆಳೆಯುತ್ತಾ ಹೋಗುತ್ತದೆ. ಬೆಳೆದಂತೆಲ್ಲಾ ಡಬ್ಬಿಂಗ್ ಸಿನೆಮಾಗಳಿಗೆ ಸಮರ್ಥ ಪೈಪೋಟಿಯನ್ನು  ಕೊಡಲು ಸಾಧ್ಯವಾಗುತ್ತದೆ. ಕೊನೆಗೆ ಗೆಲುವು ಕನ್ನಡ ಸಂಸ್ಕೃತಿಯನ್ನು ಬಿಂಬಿಸುವಂತಹ, ಕನ್ನಡ ಜನರ ಬದುಕಿಗೆ ಉತ್ತರವಾಗಬಹುದಾದಂತಹ ಸಿನೆಮಾಗಳಿಗೆ ಸಲ್ಲುತ್ತದೆ. ಡಬ್ಬಿಂಗ್ ಸಿನೆಮಾಗಳು ಮೂಲೆಗುಂಪಾಗುತ್ತವೆ.

ಯಾವ ಡಬ್ಬಿಂಗ್ ಎನ್ನುವುದು ಭೂತವಾಗಿ ಕನ್ನಡ ಸಿನೆಮಾರಂಗವನ್ನು ನುಂಗಲು ಹೊಂಚುಹಾಕಿ ಬಂದಿತ್ತೋ, ಕನ್ನಡ ಸಿನೆಮಾ ನಿರ್ಮಾತೃಗಳಿಗೆ ದುಸ್ವಪ್ನವಾಗಿ ಕಾಡಿತ್ತೋ ಅದೇ ಆತಂಕ ಕನ್ನಡ ಸಿನೆಮಾ ರಂಗಕ್ಕೆ ಪೈಪೋಟಿಯನ್ನು ಎದುರಿಸುವ ಸಾಮರ್ಥ್ಯವನ್ನು ಕಲಿಸಿಕೊಡುತ್ತದೆ. ಇಡೀ ಸಿನೆಮಾರಂಗವನ್ನು  ತನ್ನ ಸ್ವಂತ ಸಾಮರ್ಥ್ಯದ ಮೇಲೆ ನಿಲ್ಲುವಂತೆ ಮಾಡುತ್ತದೆ. ಎರವಲು ಸಿನೆಮಾಗಳಿಗಿಂತ ಸ್ವಮೇಕ್ ಸಿನೆಮಾಗಳಲ್ಲಿರುವ ನಿಜವಾದ ತಾಕತ್ತನ್ನು ತೋರಿಸಿಕೊಡಲು ನೆರವಾಗುತ್ತದೆ. ಯಾವಾಗ ತನ್ನ ಸಾಮರ್ಥ್ಯದ ನಿಜವಾದ ಅರಿವು ಕನ್ನಡ ಸಿನೆಮಾ ರಂಗಕ್ಕೆ ಆಗುತ್ತದೆಯೋ, ಯಾವಾಗ ಎಂತಹುದೇ ಪೈಪೋಟಿಯನ್ನು ಮೆಟ್ಟಿನಿಲ್ಲಲು ಸಿನೆಮಾದವರು ಶಕ್ತರಾಗುತ್ತಾರೋ ಆಗ ಡಬ್ಬಿಂಗ ಭೂತ ಎನ್ನುವುದು ವಶೀಕರಣಕ್ಕೊಳಗಾದ ಪ್ರಾಣಿಯಂತಾಗುತ್ತದೆ



ಡಬ್ಬಿಂಗ್ ಎನ್ನುವುದು ತನ್ನ ಒಡಲಲ್ಲೇ ತನ್ನ ವಿನಾಶದ ಬೀಜಗಳನ್ನು ಇಟ್ಟುಕೊಂಡೇ ಹುಟ್ಟಿಕೊಳ್ಳುತ್ತದೆ. ಪೈಪೋಟಿಯನ್ನು ಎದುರಿಸುವ ಸಾಮರ್ಥ್ಯ ಇಲ್ಲವೆಂದುಕೊಂಡು ನಮ್ಮಲ್ಲಿ ನಾವೇ ಕೀಳರಮೆಯನ್ನು ಬೆಳಸಿಕೊಂಡು ಡಬ್ಬಿಂಗನ್ನು ಗುಂಪುಗಾರಿಕೆಯಿಂದ ದೂರವಿಡುವುದು ಅಪಾಯಕಾರಿಯಾಗಬಲ್ಲುದು. ನಮ್ಮ ಶತ್ರು ದೂರವಿದ್ದಷ್ಟೂ ತುಂಬಾ ಡೇಂಜರ್. ಯಾಕೆಂದರೆ ಅಂತಹ ಶತ್ರು ದೂರವಿದ್ದುಕೊಂಡೇ ನಮ್ಮೊಳಗೆ ಆತಂಕವಾದವನ್ನು ಸೃಷ್ಟಿಸಬಲ್ಲುದು, ಇಲ್ಲವೇ ಅನ್ಯ ಮಾರ್ಗಗಳಿಂದ ಒಳನುಸುಳಿ ನಮ್ಮ ಸಿನೆಮಾ ಸ್ವಾವಲಂಬನೆಯನ್ನೇ ದ್ವಂಸಮಾಡಬಲ್ಲುದು. ಮೀರಸಾಧಿಕ್ನಂತವರು, ಮಲ್ಲಪ್ಪಶೆಟ್ಟಿಯಂತವರು ನಮ್ಮ ಸಿನೆಮಾ ರಂಗದಲ್ಲೂ ಇದ್ದಾರೆ, ಅವರು ನಮ್ಮ ಪ್ರಭಲ ಶತ್ರುವಿನ ಆಮಿಷಕ್ಕೆ ಬಲು ಬೇಗ ಬಲಿಯಾಗಿ ನಮ್ಮ ಸಿನೆಮಾರಂಗದ ವಿನಾಶಕ್ಕೆ ಒಳಸಂಚು ಮಾಡುತ್ತಾರೆ ಎನ್ನುವ ಅರಿವು ನಮ್ಮ ಸಿನೆಮಾದವರಿಗಿರಬೇಕು. ಡಬ್ಬಿಂಗ ಎನ್ನುವ ಕನ್ನಡ ಸಿನೆಮಾದ ವೈರಿಯನ್ನು ಮಟ್ಟಹಾಕಲೇ ಬೇಕೆಂದಿದ್ದರೆ ಮೊದಲು ವೈರಿಯ ಜೊತೆಗೆ ಮೈತ್ರಿಯನ್ನು ಮಾಡಿಕೊಳ್ಳಬೇಕು. ಅದರ ಸಾಧಕ ಬಾಧಕಗಳನ್ನು ಅರ್ಥೈಸಿಕೊಳ್ಳಬೇಕು. ಅದು ಹೂಡುವ ತಂತ್ರಗಳಿಗೆ ಪ್ರತಿತಂತ್ರಗಳನ್ನು ರೂಢಿಸಿಕೊಳ್ಳಬೇಕು. ನಮ್ಮ ಸಾಮರ್ಥ್ಯವನ್ನು ಬೆಳೆಸಿಕೊಂಡು ಕೊನೆಗೊಂದು ದಿನ ಡಬ್ಬಿಂಗ್ ಭೂತವನ್ನು ಶಕ್ತಿಹೀನವಾಗಿಸಬೇಕು. ಇದಕ್ಕೆ ಚಾಣಕ್ಯ ತಂತ್ರಗಾರಿಕೆ ಎನ್ನುತ್ತಾರೆ.
   
ರಿಮೇಕ್ ಸಂಸ್ಕೃತಿಯ ಅವಸಾನದಿಂದಾಗಿ ಅನಿವಾರ್ಯವಾಗಿ ಕನ್ನಡ ಚಲನಚಿತ್ರರಂಗವು ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳಲೇ ಬೇಕಾಗುತ್ತದೆ. ಆಗ ಕನ್ನಡದ ಕಥೆಗಾರರಿಗೆ, ಕನ್ನಡದ ಸಾಹಿತ್ಯಕ್ಕೆ ಬೆಲೆ ಬರುತ್ತದೆ. ಕನ್ನಡ ನೆಲಮೂಲ ಸಂಸ್ಕೃತಿಗೆ ಸಿನೆಮಾಗಳಲ್ಲಿ ನೆಲೆ ಸಿಕ್ಕುತ್ತದೆ. ತನ್ನ ಅಸ್ತಿತ್ವಕ್ಕಾಗಿ ಕನ್ನಡ ಸಿನೆಮಾರಂಗ ಹೊಸ ಪ್ರಯೋಗಗಳನ್ನು ತನ್ನ ಸಿನೆಮಾಗಳ ಮೂಲಕ ಮಾಡಲೇ ಬೇಕಾಗುತ್ತದೆ. ತಿಂಗಳೊಪ್ಪೊತ್ತಿನಲ್ಲಿ ರೀಲ್ ಸುತ್ತಿ ಬಿಕರಿಮಾಡಬಯಸುವವರು ಮೂಲೆಗುಂಪಾಗುತ್ತಾರೆ. ನಿಜವಾದ ಕ್ರಿಯಾಶೀಲ ಸಿನೆಮಾಕರ್ಮಿಗಳು ಮುಂಚೂಣಿಗೆ ಬರುತ್ತಾರೆ. ಅನ್ಯ ಭಾಷಾ ಸಿನೆಮಾಗಳನ್ನು ಮೀರಿಸುವಂತಹ ರೀತಿಯಲ್ಲಿ ಕನ್ನಡದಲ್ಲಿ ಸಿನೆಮಾ ತಯಾರಿಸಲೇಬೇಕಾದ ಸವಾಲನ್ನು ಸ್ವೀಕರಿಸುವಂತಹ ಗಂಡೆದೆಯ ಗುಂಡಿಗೆಯ ನಿರ್ದೇಶಕರು, ನಿರ್ಮಾಪಕರು ಉಳಿಯುತ್ತಾರೆ. ಸಾಮರ್ಥ್ಯವಿರುವ ಗಟ್ಟಿ ಕಾಳುಗಳು ಉಳಿದುಕೊಂಡು ಡಬ್ಬಿಂಗ್ ಸುಂಟರಗಾಳಿಯಲ್ಲಿ ಹೊಟ್ಟು ಹಾರಿಹೋಗುತ್ತದೆ. ಕನ್ನಡ ಚಲನಚಿತ್ರರಂಗ ತನ್ನ ಸೃಜನಶೀಲತೆಯಿಂದಾಗಿ ಗಮನಾರ್ಹವಾಗಿ ಬೆಳೆಯುತ್ತದೆ. ಪೈಪೋಟಿಯ ದೃಶ್ಯಮಾಧ್ಯಮದ ಸಮರದಲ್ಲಿ ಕೊನೆಗೂ ಗೆಲ್ಲುವುದು ಸ್ವಂತ ಪ್ರತಿಭೆ, ಪ್ರಯೋಗಶೀಲತೆ ಮತ್ತು ಪೈಪೋಟಿಯನ್ನು ಎದುರಿಸುವ ತಂತ್ರಗಾರಿಕೆಗಳು ಮಾತ್ರ.
    
ಹೀಗಾಗಿ ಡಬ್ಬಿಂಗ್ ಎನ್ನುವುದನ್ನು ಅಪಾಯಕಾರಿ ಎಂದು ಆರೋಪಿಸಿ ಅದರಿಂದ ತಪ್ಪಿಸಿಕೊಳ್ಳುವ ಹೇಡಿತನವನ್ನು ಕೈಬಿಟ್ಟು, ನಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಲು ಇರುವ ಅವಕಾಶವೆಂದುಕೊಂಡು ಕಾರ್ಯಪ್ರವೃತ್ತರಾಗುವ ಮೂಲಕ ಕನ್ನಡಿಗರ ಪ್ರತಿಭಾಶಕ್ತಿಯನ್ನು ತೋರಿಸಬೇಕಾಗಿದೆ. ಡಬ್ಬಿಂಗ್ ಆತಂಕವನ್ನು ಅವಕಾಶವಾಗಿ ಬದಲಾಯಿಸಿಕೊಂಡು ಅದು ಒಡ್ಡುವ ಪೈಪೋಟಿಯನ್ನು ವಾಮಮಾರ್ಗದಿಂದಲ್ಲದೇ ನೇರಮಾರ್ಗಗಳಿಂದ ಎದುರಿಸಿ ಗೆಲ್ಲಲೇ ಬೇಕಾಗಿದೆ. ಕನ್ನಡ ಚಲನಚಿತ್ರ ತನ್ನ ತಾಕತ್ತನ್ನು ಸಾಬೀತುಪಡಿಸಲು ಹಾಗೂ ಭಾರತ ಚಲನಚಿತ್ರೋಧ್ಯಮದಲ್ಲಿ ತನ್ನತನವನ್ನು ಮೆರೆಯಲು ಇದೊಂದು ಅಪೂರ್ವ ಅವಕಾಶವಾಗಿದೆ. ಸತ್ಯವನ್ನು ಡಬ್ಬಿಂಗ್ ವಿರೋಧಿಗಳು ಮನಗಾಣಬೇಕಾಗಿದೆ.

ಡಬ್ಬಿಂಗ್ನ್ನು ವಿರೋಧಿಸಿ ಅದನ್ನು ದೂರವಿಟ್ಟರೂ ಜನ ಆಯಾ ಭಾಷೆಯಲ್ಲಿ ಸಿನೆಮಾ ನೋಡುವುದನ್ನು ಬಿಡುವುದಿಲ್ಲ ಹಾಗೂ ಕೆಲವಾರು ಸಿನೆಮಾಕರ್ಮಿಗಳು ರಿಮೇಕ್ ರಿಮಿಕ್ಸ ಸಿನೆಮಾಗಳನ್ನು ನಿರ್ಮಿಸುವುದನ್ನು ನಿಲ್ಲಿಸುವುದಿಲ್ಲ. ಕಲಾವಿದೆಯರು ತಂತ್ರಜ್ಞರ ಆಮದು ಕೊನೆಯಾಗುವುದಿಲ್ಲ. ಇಂತಹ ಸಿನೆಮಾಗಳಲ್ಲಿ ಅಭಿನಯಿಸುವುದನ್ನು ಬಹುತೇಕ ನಮ್ಮ ಸಿನೆಮಾ ನಟರು ನಿರಾಕರಿಸುವುದಿಲ್ಲ. ಅನ್ಯ ಭಾಷೆಗಳ ಪರೋಕ್ಷ ದಾಳಿಯನ್ನು ಹಿಮ್ಮೆಟ್ಟಿಸಬೇಕೆಂದರೆ ನೇರವಾಗಿ ಎದುರಿಸುವುದೇ ಉತ್ತಮ. ಎಲ್ಲಾ ಭಾಷೆಯ ಸಿನೆಮಾಗಳು ಕನ್ನಡಕ್ಕೆ ಡಬ್ ಆಗಿ ಬರಲಿ. ನಮ್ಮ ಜನರು ನಮ್ಮದೇ ಭಾಷೆಯಲ್ಲಿ ಎಲ್ಲಾ ರೀತಿಯ ಸಿನೆಮಾಗಳನ್ನು ನೋಡಲಿ.  ತಮ್ಮ ಸಂಸ್ಕೃತಿಗೆ ಹೊರತಾದ ಸಿನೆಮಾಗಳನ್ನು ಕನ್ನಡಿಗರು ತಿರಸ್ಕರಿಸುತ್ತಾರೆ. ಪ್ರೇಕ್ಷಕರಿಗೆ ಆಯ್ಕೆಯ ಸ್ವಾತಂತ್ರ್ಯ ಹೇಗಿದೆಯೋ ಹಾಗೆಯೇ ತಿರಸ್ಕರಿಸುವ ಸ್ವಾತಂತ್ರ್ಯವೂ ಇದೆ. ಡಬ್ಬಿಂಗ್ ಬರಲಿ ಬಿಡಲಿ ಸಿನೆಮಾಗಳನ್ನು ಗೆಲ್ಲಿಸುವ ಅಥವಾ ಸೋಲಿಸುವ ಮಂತ್ರದಂಡವಿರುವುದು ಅಂತಿಮವಾಗಿ ಪ್ರೇಕ್ಷಕರ ಕೈಯಲ್ಲಿ. ಒಳ್ಳೆಯ ಸಿನೆಮಾಗಳನ್ನು ಕನ್ನಡಿಗರು ಪ್ರೋತ್ಸಾಹಿಸುತ್ತಾರೆ, ಕೆಟ್ಟ ಸಿನೆಮಾಗಳನ್ನು ನಿರ್ದಾಕ್ಷಿಣ್ಯವಾಗಿ ತಿರಸ್ಕರಿಸುತ್ತಾರೆ. ಯಾಕೆಂದರೆ ಕನ್ನಡ ನಾಡಿನ ಪ್ರೇಕ್ಷಕರು ತುಂಬಾ ಪ್ರಜ್ಞಾವಂತರು. ಅವಿವೇಕತನದ ಬೇಜವಾಬ್ದಾರಿ ಸಿನೆಮಾಗಳನ್ನು ತಿರಸ್ಕರಿಸುತ್ತಾರೆ. ಉತ್ತಮ ಮನರಂಜನೆ ಹಾಗೂ ಸಮಾಜಮುಖಿ ಸಿನೆಮಾಗಳನ್ನು ಗೆಲ್ಲಿಸುತ್ತಾರೆ. ಜನರನ್ನು ನಿರ್ಲಕ್ಷಿಸಿದ, ಜನರ ಆಶಯಗಳನ್ನು ಉಪೇಕ್ಷಿಸಿದ ಯಾವುದೇ ರಂಗ ಉದ್ದಾರವಾಗಿಲ್ಲ, ಆಗುವುದೂ ಇಲ್ಲ.

ಡಬ್ಬಿಂಗ್ ವರವೂ ಅಲ್ಲಾ ಶಾಪವೂ ಅಲ್ಲ. ಡಬ್ಬಿಂಗ್ ಭೂತವೂ ಅಲ್ಲಾ ಭಗವಂತನೂ ಅಲ್ಲ. ಅದೊಂದು ಕಾಲಘಟ್ಟದ ಸೃಷ್ಟಿ ಅಷ್ಟೇ. ಒಕ್ಕೂಟ ವ್ಯವಸ್ಥೆಯ ಅನಿವಾರ್ಯತೆ. ಅದು ಸೃಷ್ಟಿಸುವ ಸವಾಲನ್ನು ಸಮರ್ಥವಾಗಿ ಎದುರಿಸಿದರೆ ಕನ್ನಡ ಸಿನೆಮಾ ರಂಗ ಉಳಿಯುತ್ತದೆ. ಪೈಪೋಟಿಯನ್ನು ಸಕಾರಾತ್ಮಕವಾಗಿ ತೆಗೆದುಕೊಂಡು ಕ್ರಿಯಾಶೀಲತೆಯ ಮೂಲಕ ಎದುರಿಸಿದರೆ ಕನ್ನಡ ಚಲನಚಿತ್ರ ಕ್ಷೇತ್ರ ಬೆಳೆಯುತ್ತದೆ. ಡಬ್ಬಿಂಗನ್ನು ಸಮರ್ಥವಾಗಿ ಎದುರಿಸುವ ಸಾಮರ್ಥ್ಯ ನಿಜಕ್ಕೂ ಕನ್ನಡ ಸಿನೆಮಾರಂಗಕ್ಕೆ ಇದೆ. ಅದು ಈಗ ತನ್ನ ಪ್ರೌಢಾವಸ್ಥೆಯಲ್ಲಿದೆ. ಎಲ್ಲಾ ವಿಭಾಗಗಳಲ್ಲೂ ವೃತ್ತಿಪರತೆಯನ್ನು ಬೆಳೆಸಿಕೊಂಡರೆ ಸಾಕು, ಸೃಜನಶೀಲತೆಯನ್ನು ಸಾಕಾರಗೊಳಿಸಿಕೊಂಡರೆ ಸಾಕು, ಪ್ರಯೋಗಶೀಲತೆಯನ್ನು ಅಳವಡಿಸಿಕೊಂಡರೆ ಸಾಕು, ಹೊಸ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಿದರೆ ಸಾಕು.... ನಮ್ಮ ಕನ್ನಡ ಸಿನೆಮಾ ಕ್ಷೇತ್ರ ಇಡೀ ದೇಶದಲ್ಲೇ ಬ್ರಹದಾಕಾರವಾಗಿ ಬೆಳೆದು ನಿಲ್ಲುವುದರಲ್ಲಿ ಸಂದೇಹವಿಲ್ಲ. ಕನ್ನಡಿಗರ ಸಾಮರ್ಥ್ಯಕ್ಕೆ ಸಾಟಿಯೇ ಇಲ್ಲ ಇನ್ನು ಪೈಪೋಟಿ ಯಾವ ಲೆಕ್ಕ.

                                   -ಶಶಿಕಾಂತ ಯಡಹಳ್ಳಿ
               


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ