ಬುಧವಾರ, ಜನವರಿ 29, 2014

ಡಬ್ಬಿಂಗ್ ವಿವಾದ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ



                                                
ಭಾರತ ಪ್ರಜಾಪ್ರಭುತ್ವ ರಾಷ್ಟ್ರ. ಅಭಿವ್ಯಕ್ತಿ ಸ್ವಾತಂತ್ರ್ಯ ದೇಶದ ಪ್ರತಿಯೊಬ್ಬ ಪ್ರಜೆಯ ಹಕ್ಕು. ಆದರೆ ಹಕ್ಕನ್ನು ಸಕರಾತ್ಮಕವಾಗಿಯೂ ಬಳಸಬಹುದಾಗಿದೆ ಇಲ್ಲವೇ ನಕಾರಾತ್ಮಕವಾಗಿಯೂ ಉಪಯೋಗಿಸಬಹುದಾಗಿದೆ. ಮತ್ತೊಬ್ಬರನ್ನು ವ್ಯಯಕ್ತಿಕವಾಗಿ ಹೀಗಳೆದು ಅದು ನನ್ನ ಅಭಿವ್ಯಕ್ತಿ ಸ್ವಾತಂತ್ರ್ಯ ಎನ್ನುವುದು ಕುಚೋಧ್ಯವೆನಿಸುತ್ತದೆ. ಇತ್ತೀಚೆಗೆ ಗಿರೀಶ್ ಕರ್ನಾಡರು ರಾಷ್ಟ್ರಕವಿ ರವೀಂದ್ರನಾಥ ಠಾಗೋರರನ್ನು ಮೂರನೇ ದರ್ಜೆ ನಾಟಕಕಾರ ಎಂದು ವ್ಯಕ್ತಿಗತ ಈರ್ಷೆಯಿಂದ ಸಾರ್ವಜನಿಕವಾಗಿ ಜರಿದದ್ದು ಅಭಿವ್ಯಕ್ತಿ ಸ್ವಾತಂತ್ರ್ಯದ ದುರುಪಯೋಗವಾಗಿದೆ. ಹೀಗೆ ಸ್ವಾರ್ಥಪರ ವ್ಯಕ್ತಿಗತ ನಿಂದನೆಗಳು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿನ ಉಲ್ಲಂಘನೆಯಾಗುತ್ತವೆ.

ಆದರೆ ನಮ್ಮ ದೇಶ ಹಲವು ಜಾತಿ, ಧರ್ಮ, ದೇವರು, ನಂಬಿಕೆಗಳು ಹಾಗೂ ಸಿದ್ದಾಂತಗಳನ್ನು ಹೊಂದಿದೆ. ಅನೇಕ ಸಂಸ್ಕೃತಿಯಲ್ಲಿ ಏಕತೆಯನ್ನು ಕಾಪಾಡಿಕೊಂಡೇ ಭಾರತ ಬೆಳೆದಿದೆ. ಎಲ್ಲಾ ಮತ ಧರ್ಮಗಳಲ್ಲೂ, ಎಲ್ಲಾ ರೀತಿಯ ತತ್ವ ಸಿದ್ದಾಂತಗಳಲ್ಲೂ ಭಿನ್ನತೆ ಇದೆ. ಹಲವಾರು ಬಾರಿ ಭಿನ್ನತೆ ವಾದಕ್ಕೂ, ಜಗಳಕ್ಕೂ ರಕ್ತಪಾತಕ್ಕೂ ಕಾರಣವಾಗಿದೆ. ಕೋಮುದ್ವೇಷದ ದಳ್ಳುರಿ ದೇಶದಲ್ಲಿ ಮಾಗದ ಗಾಯವನ್ನಾಗಿಸಿ ಮನಸುಗಳ ನಡುವೆ ಗೋಡೆ ಕಟ್ಟಿಬಿಟ್ಟಿದೆ. ಗಡಿ, ಭಾಷೆ, ನೆಲ, ಜಲ ವಿವಾದಗಳು ಆಗಾಗ ಜನತೆಯ ನೆಮ್ಮದಿಯನ್ನು ಕೆಡಿಸುತ್ತಲೇ ಇರುತ್ತದೆ.

ಇದಕ್ಕೆಲ್ಲಾ ಏನು ಕಾರಣ? ಯಾಕೆ ಹೀಗೆ ಅತಿರೇಕಗಳು ಸಂಭವಿಸುತ್ತವೆ. ಯಾಕೆಂದರೆ ಮತ್ತೊಬ್ಬರ ಅಭಿಪ್ರಾಯಬೇದವನ್ನು ಗೌರವಿಸುವುದರೊಂದಿಗೆ ತನ್ನ ಅಭಿಪ್ರಾಯವನ್ನು ಮಂಡಿಸುವ ವಿವೇಚನೆ ಇಲ್ಲದಿರುವುದೇ ಇದಕ್ಕೆ ಕಾರಣ. ಪರಹಿತ ಸಹಿಷ್ಣುತತೆ ಎನ್ನುವುದು ಪರಹಿತ ಸಂಹಾರ ಎನ್ನುವ ಮಟ್ಟಿಗೆ ಬೆಳೆದು ಸದಾ ದ್ವೇಷದ ವಾತಾವರಣವನ್ನು ಬೆಳೆಸುತ್ತದೆ. ತನ್ನ ನಂಬಿಕೆಯೇ ಸರ್ವಶ್ರೇಷ್ಠ, ಅದನ್ನು ವಿರೋಧಿಸುವವರೆಲ್ಲಾ ಶತ್ರುಗಳು ಎನ್ನುವ ನಿಲುವುಗಳು ಮನುಷ್ಯತ್ವಕ್ಕೆ ಮಾರಕವಾಗಿವೆ. ಇದೊಂದು ರೀತಿಯಲ್ಲಿ ಫ್ಯಾಸಿಸ್ಟ್ ಮನೋಭಾವ. ನಾನು ಹೇಳಿದ್ದು, ನಾನು ಅಂದುಕೊಂಡಿದ್ದು ಮಾತ್ರ ಸತ್ಯ, ನನ್ನ ವಾದ, ನನ್ನ ಸಿದ್ದಾಂತ, ನನ್ನ ಮತ ಮಾತ್ರ ಸಾರ್ವಕಾಲಿಕ ಸತ್ಯ, ಅದನ್ನು ಎಲ್ಲರೂ ಅನುಮೋದಿಸಿ ಅನುಕರಿಸಬೇಕು. ಅದಕ್ಕೆ ವಿರುದ್ಧ ವಾದವನ್ನು ಮಂಡಿಸುವವರ ಕುಲ ಸರ್ವನಾಶವಾಗಲಿ ಎನ್ನುವ ಸರ್ವಾಧಿಕಾರಿ ಮನೋಭಾವ ಆತಂಕಕಾರಿಯಾದುದು.

ಇದಕ್ಕೆ ಪ್ರಸ್ತುತ ಉದಾಹರಣೆ ಎಂದರೆ ಡಬ್ಬಿಂಗ್ ವಿವಾದ. ಅನ್ಯ ಭಾಷೆಯ ಸಿನೆಮಾಗಳು ಕನ್ನಡ ಭಾಷೆಗೆ ಡಬ್ ಆದರೆ ತಪ್ಪೇನಿಲ್ಲ, ಕನ್ನಡದ ಮೂಲಕ ಅಪರೂಪದ ಬೇರೆ ಭಾಷೆಗಳ ಅತ್ಯುತ್ತಮ ಸಿನೆಮಾಗಳನ್ನು ನೋಡುವ ಅವಕಾಶ ಕನ್ನಡಿಗರಿಗೆ ದಕ್ಕುತ್ತದೆ ಎನ್ನುವುದು ಕೆಲವರ ಆಶಯ. ಡಬ್ಬಿಂಗ್ ಬಂದರೆ ಕನ್ನಡ ಚಲನಚಿತ್ರರಂಗ ನಾಶವಾಗುತ್ತದೆ, ಕನ್ನಡ ಭಾಷೆ-ಸಂಸ್ಕೃತಿ ಸರ್ವನಾಶವಾಗುತ್ತದೆ, ಕನ್ನಡ ದೃಶ್ಯಮಾಧ್ಯಮಗಳ ಕಲಾವಿದರು- ತಂತ್ರಜ್ಞರು ಬೀದಿಪಾಲಾಗುತ್ತಾರೆ ಎನ್ನುವುದು ಸಿನೆಮಾ ಟಿವಿ ರಂಗದ ಹಲವರ ನಂಬಿಕೆ. ಇದರಿಂದಾಗಿ ಡಬ್ಬಿಂಗ್ ಪರ ಮತ್ತು ಡಬ್ಬಿಂಗ್ ವಿರೋಧ ಎನ್ನುವ ಎರಡು ವಾದಗಳು ಹುಟ್ಟಿಕೊಂಡವು. ಪರ ವಿರೋಧ ಗುಂಪುಗಳು ವಾದ ವಿವಾದಗಳಲ್ಲಿ ತೊಡಗಿದವು. ಇದು ಬರೀ ವಾದ ವಿವಾದ ಚರ್ಚೆ ಸಂವಾದವಾಗಿದ್ದರೆ ಸ್ವಾಗತಿಸಬಹುದಾಗಿತ್ತು. ಅದು ಅಭಿವ್ಯಕ್ತಿ ಸ್ವಾತಂತ್ರ್ಯದ ಸಮರ್ಪಕ ಬಳಕೆ ಎಂದುಕೊಳ್ಳಬಹುದಾಗಿತ್ತು.

ಆದರೆ ಯಾವಾಗ ಡಬ್ಬಿಂಗ್ ವಿರೋಧಿಗಳು ಡಬ್ಬಿಂಗ್ ಪರವಾಗಿರುವವರ ಮೇಲೆ ವ್ಯಯಕ್ತಿಕವಾಗಿ ನಿಂದನೆಗೆ ಇಳಿದರೋ, ಸಾಂಸ್ಕೃತಿಕ ದಾದಾಗಿರಿಗೆ ಮುಂದಾದರೋ, ಡಬ್ಬಿಂಗ್ ಪರವಾಗಿರುವವರನ್ನು ಕನ್ನಡ ದ್ರೋಹಿಗಳೆಂದು ಸಾರಾಸಗಟಾಗಿ ದ್ವೇಷಿಸತೊಡಗಿದರೋ ಆಗ ಅಂತವರಲ್ಲಿ ಆಕ್ರಮನಶೀಲ ಪ್ಯಾಸಿಸ್ಟ್ ಮನೋಧರ್ಮ ಹೆಡೆಯೆತ್ತಿತು. ವಿರೋಧಿಗಳನ್ನು ಶತಾಯ ಗತಾಯ ನಾಶಮಾಡಬೇಕು, ಯಾರೂ ಡಬ್ಬಿಂಗ್ ಪರ ಮಾತಾಡಲೇ ಬಾರದು ಎನ್ನುವ ಸರ್ವಾಧಿಕಾರಿತನ ಪ್ರಕಟಗೊಳ್ಳತೊಡಗಿತು. ಡಬ್ಬಿಂಗ್ ವಿರೋಧಿಸಲು ಎಷ್ಟು ಸ್ವಾತಂತ್ರ್ಯ ಇದೆಯೋ ಅಷ್ಟೇ ಸ್ವಾತಂತ್ರ್ಯ ಡಬ್ಬಿಂಗ್ ಸಮರ್ಥಕರಿಗೂ ಇದೆ ಎನ್ನುವುದನ್ನು ಸಿನೆಮಾರಂಗದ ದಾದಾಗಳು ಮರೆತುಬಿಟ್ಟರು.

ಸಿನೆಮಾ ನಿರ್ದೇಶಕ ಗುರುಪ್ರಸಾದ್ ಡಬ್ಬಿಂಗ್ ಬೇಕು ಎಂದ ತಕ್ಷಣ ಎಲ್ಲಾ ಡಬ್ಬಿಂಗ್ ವಿರೋಧಿಗಳು ಅವರ ಮೇಲೆ ಮುಗಿಬಿದ್ದು ತೇಜೋವಧೆಗೆ ಇಳಿದುಬಿಟ್ಟರು. ಜ್ಞಾನಪೀಠ ಪುರಸ್ಕೃತರಾದ ಡಾ.ಚಂದ್ರಶೇಖರ್ ಕಂಬಾರರು ಡಬ್ಬಿಂಗ ಪರ ನಿಲುವು ಪ್ರಕಟಿಸಿದ ಕೂಡಲೇ ಡಬ್ಬಿಂಗ್ ವಿರೋಧಿ ಬಣದ ಯೋಧ ನಟ ಪ್ರೇಮ್ ಅವರ ವಿರುದ್ಧ ತಿರುಗಿ ಬಿದ್ದುಬಿಟ್ಟ. ಟಿವಿ ಚಾನೆಲ್ನಲ್ಲಿ ಡಬ್ಬಿಂಗ್ ವಿರೋಧಿಸಲು ನಿಮಗೆ ನಾಚಿಕೆ ಆಗುವುದಿಲ್ಲವೇ, ಯಾಕೆ ತಲೆಹಿಡಿಯೋ ಕೆಲಸ ಮಾಡ್ತೀರಿ... ಎಂದೆಲ್ಲಾ ವಯಕ್ತಿಕವಾಗಿ ನಿಂದಿಸಿದ ಪ್ರೇಮ್ ಸಭ್ಯತೆಯ ಗಡಿಯನ್ನು ದಾಟಿದ್ದು ನೋಡಿ ಸಿನೆಮಾರಂಗದವರೇ ದಂಗುಬಡಿದು ನೋಡಿದರು. ಸಾಮಾಜಿಕ ಜಾಲತಾಣಗಳಲ್ಲಿ ಪ್ರೇಮ್ ಅತಿರೇಕತನವನ್ನು ಕನ್ನಡಿಗರು ವಿರೋಧಿಸಿದರು. ಕೆಲವರಂತೂ ಕೆಟ್ಟ ಪದಗಳನ್ನು ಬಳಸಿ ಪ್ರೇಮ್ನನ್ನು ಬೈದಿದ್ದು ಇನ್ನೊಂದು ರೀತಿಯ ಅನಾಗರಿಕ ಕ್ರಮವಾಗಿತ್ತು.


ಜನವರಿ 27 ರಂದು ನಡೆದ ಡಬ್ಬಿಂಗ್ ವಿರೋಧಿ ಹೋರಾಟದ ಬಹಿರಂಗ ಸಭೆಯಲ್ಲೂ ಸಹ ಕನ್ನಡ ಸಿನೆಮಾದ ತಾರೆಯರು ತಮ್ಮ ತಾರಾ ವರ್ಚೆಸ್ಸನ್ನೂ ಮರೆತು ಡಬ್ಬಿಂಗ್ ಪರರನ್ನು ತರಾಟೆಗೆ ತಗೆದುಕೊಂಡರು. ಡಬ್ಬಿಂಗ್ ಬೇಕೆನ್ನುವವರೆಲ್ಲಾ ಕನ್ನಡ ದ್ರೋಹಿಗಳು ಎನ್ನುವಂತೆ ಬಿಂಬಿಸಲು ಪ್ರಯತ್ನಿಸಿದರು. ಇಂತಹ ದುಂಡಾವರ್ತನೆಯನ್ನು ನೋಡಿ, ವ್ಯಯಕ್ತಿಕ ನಿಂದನೆ ಮಾಡುವವರಿಂದ ಹೆದರಿ.. ಡಬ್ಬಿಂಗ್ ಪರವಾಗಿರುವ ಸಿನೆಮಾ ರಂಗದ ಹಲವಾರು ಜನ ಬಾಯಿಬಿಡದೇ ಸುಮ್ಮನೆ ಕುಳಿತರು. ಎಲ್ಲಿ ತಮ್ಮ ಅಭಿಪ್ರಾಯಗಳನ್ನು ಹೇಳಿದರೆ ತಮಗೆ ಕನ್ನಡ ದ್ರೋಹಿ ಎನ್ನುತ್ತಾರೋ, ಎಲ್ಲಿ ಡಬ್ಬಿಂಗ್ ಪರ ಎಂದು ಹೇಳಿದರೆ ತಲೆಹಿಡಕರು ಎಂದು ನಿಂದಿಸುತ್ತಾರೋ, ಎಲ್ಲಿ ತಮ್ಮ ಹಿತಾಸಕ್ತಿಗಾಗಿ ಸಿಡಿದೆದ್ದ ತಾರೆಗಳ ವಿರುದ್ದ ಹೇಳಿಕೆ ನೀಡಿದರೆ ಸಿನೆಮಾ ವಿರೋಧಿಗಳೆಂದು ಲೇಬಲ್ ಅಂಟಿಸುತ್ತಾರೋ ಎಂದು ಆತಂಕಗೊಂಡ ಅನೇಕರು ಮೌನಕ್ಕೆ ಶರಣಾದರು. ಡಬ್ಬಿಂಗ್ ವಿರೋಧಿ ಪ್ರತಿಭಟನೆಯಲ್ಲಿ ಭಾಗವಹಿಸದೇ ತಮ್ಮ ಮೌನ ಪ್ರತಿಭಟನೆಯನ್ನು ತೋರಿಸಿದರು.

ಇದು ಸ್ವಸ್ತ ಸಮಾಜದ ಲಕ್ಷಣವಲ್ಲವೇ ಅಲ್ಲ. ತಾತ್ವಿಕ ವಿರೋಧವನ್ನು ಗಮನಿಸುವುದು, ತಾರ್ಕಿಕ ವಿರೋಧಿಗಳನ್ನು ಗೌರವಿಸುವುದು ವಿವೇಕ ಇರುವವರು ಮಾಡುವ ಕೆಲಸ. ತಮ್ಮ ಅಭಿಪ್ರಾಯವನ್ನು ಹೇಳುವುದಕ್ಕೆ, ಅದಕ್ಕಾಗಿ ಪ್ರತಿಭಟಿಸುವುದಕ್ಕೆ ಎಲ್ಲರಿಗೂ ಹಕ್ಕಿದೆ. ಅದೇ ರೀತಿ ವಿರೋಧಿಸುವವರಿಗೂ ಅಭಿಪ್ರಾಯ ಸ್ವಾತಂತ್ರ್ಯವಿದೆ. ಯಾರು ಭಿನ್ನಾಭಿಪ್ರಾಯಗಳನ್ನು ಮತಬೇಧವನ್ನು ಅರ್ಥಮಾಡಿಕೊಳ್ಳುವುದಿಲ್ಲವೋ ಅಂತವರಿಗೆ ಸಮರ್ಪಕವಾಗಿ ವಾದ ಮಾಡುವ ತಾಕತ್ತೂ ಇರುವುದಿಲ್ಲ. ಯಾರು ಮತ್ತೊಬ್ಬರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಗೌರವಿಸುವುದಿಲ್ಲವೋ ಅಂತವರಿಗೆ  ವಿವೇಚನೆ ಎನ್ನುವುದೇ ಇರುವುದಿಲ್ಲ. ವಿವೇಚನೆ ಕಳೆದುಕೊಂಡ ವ್ಯಕ್ತಿ ವ್ಯಯಕ್ತಿಕ ನಿಂದನಾಸ್ತ್ರವನ್ನು ಬಳಸಿ ವಿರೋಧಿಗಳನ್ನು ಗಾಸಿಗೊಳಿಸುವ ಹೀನ ಕೆಲಸಕ್ಕೆ ಇಳಿಯುತ್ತಾನೆ. ತನ್ನದೇ ಆದ ಬೆಂಬಲಿಗರನ್ನು ಕಟ್ಟಿಕೊಂಡು ವಿರೋಧಿಗಳನ್ನು ನಾಶಮಾಡಲು ಪ್ರಯತ್ನಿಸುತ್ತಾನೆ. ಇದೇ ಮುಂದೆ ಪ್ಯಾಸಿಸಂಗೆ ದಾರಿಯಾಗುತ್ತದೆ. ಹಿಟ್ಲರ್ ಮಾಡಿದ್ದು ಇದನ್ನೇ. ತನ್ನನ್ನು ವಿರೋಧಿಸಿದ ಎಲ್ಲವನ್ನೂ ಎಲ್ಲರನ್ನೂ ಆತ ತನ್ನ ಸಮರ್ಥಕರ ಪಡೆಯೊಂದಿಗೆ ಸೇರಿ ಸರ್ವನಾಶ ಮಾಡಿದ.

ವೈರುಧ್ಯ ಎನ್ನುವುದು ಜಗತ್ತಿನ ಎಲ್ಲಾ ಕಡೆಯೂ ಇರುತ್ತದೆ, ಇರಬೇಕು. ಎಲ್ಲಾ ಒಂದೇ ರೀತಿಯ ಮನೋಭಾವ ಇರಲು ಸಾಧ್ಯವೇ ಇಲ್ಲ. ಅದು ಪ್ರಕೃತಿ ಧರ್ಮವೂ ಅಲ್ಲ. ಪ್ರೀತಿಸಿ ಮದುವೆಯಾದ ಗಂಡು ಹೆಣ್ಣುಗಳಲ್ಲೇ ಹಲವು ಅಭಿಪ್ರಾಯ ಬೇಧಗಳಿರುತ್ತವೆ. ಒಂದೇ ತಾಯಿಗೆ ಹುಟ್ಟಿದ ಮಕ್ಕಳಲ್ಲೇ ಅನೇಕ ವೈರುಧ್ಯಗಳಿರುತ್ತವೆ. ಒಬ್ಬನೇ ವ್ಯಕ್ತಿಯಲ್ಲೂ ಸಕಾರಾತ್ಮಕ ಮತ್ತು ನಕಾರಾತ್ಮಕ ಭಾವನೆಗಳು ಸದಾ ಗುದ್ದಾಡುತ್ತಲೇ ಇರುತ್ತವೆ. ಇನ್ನು ಭಿನ್ನ ಲಿಂಗ, ಜಾತಿ, ಪಂಗಡ, ಧರ್ಮ, ಭಾಷೆ, ದೇಶಗಳಲ್ಲಿ ವೈರುಧ್ಯ ಇರುವುದಿಲ್ಲವೇ? ಹೀಗೆ ಭಿನ್ನಾಭಿಪ್ರಾಯ ಬಂದಾಗಲೆಲ್ಲಾ ಪ್ರಭಲರಾದವರು ಗುಂಪು ಕಟ್ಟಿಕೊಂಡು ಅಲ್ಪಸಂಖ್ಯಾತ ವಿರೋಧಿಗಳನ್ನು  ದ್ವೇಷಿಸತೊಡಗಿದರೆ, ದ್ವಂಸಮಾಡತೊಡಗಿದರೆ ನಾಗರೀಕರೆಂದು ಯಾಕೆ ಕರೆಯಬೇಕು? ಹಣ ಬಲ, ಜನ ಬಲ, ಅಧಿಕಾರದ ಬಲ ಹಾಗೂ ಗ್ಲಾಮರ್ ಮದದಲ್ಲಿ ಏನು ಬೇಕಾದರೂ ಮಾಡುತ್ತೇನೆ, ಭಿನ್ನತೆಯನ್ನು ಮೆಟ್ಟಿ ಹಾಕುತ್ತೇನೆ, ವೈರುದ್ಯವನ್ನು ನಾಶಮಾಡುತ್ತೇನೆ ಎಂದುಕೊಂಡರೆ ಅದು ಬರೀ ಭ್ರಮೆ ಮಾತ್ರ.


ಶಂಕರಾಚಾರ್ಯರು ಮಾಡಿದ್ದು ಇದನ್ನೇ. ತಮ್ಮ ವಿರೋಧಿಗಳಾದ ಚಾರ್ವಾಕರು ಮತ್ತು ಲೋಕಾಯತರನ್ನು ಸೆದೆಬಡಿದು ವಿರೋಧಿ ಸಿದ್ದಾಂತ ಕೃತಿಗಳನ್ನು ಸರ್ವನಾಶಮಾಡಿದರು. ಜಗತ್ತಿನ ಎಲ್ಲಾ ಸರ್ವಾಧಿಕಾರಿಗಳು ಮಾಡಿದ್ದು ಇದನ್ನೇ.... ತಮ್ಮ ವಿರೋಧಿಗಳನ್ನು ಸಾಮೂಹಿಕವಾಗಿ ಸಂಹರಿಸಿದರು. ಹಲವಾರು ಜನವಿರೋಧಿ ಕ್ರೂರ ರಾಜರುಗಳು ಮಾಡಿದ್ದು ಇಂತಹುದನ್ನೆ... ತಮ್ಮ ರಾಜ್ಯದಲ್ಲಿ ವಿರೋಧಿಸುವವರೇ ಇರಬಾರದೆಂದು ಶತಾಯಗತಾಯ ಪ್ರಯತ್ನಿಸಿದರು, ಹೊಗಳುಬಟ್ಟರನ್ನು ಪ್ರೋತ್ಸಾಹಿಸಿದರು, ಖಂಡಿಸಿದವರನ್ನು ತುಂಡರಿಸಿದರು. ಈಗಿನ ಆಳುವ ವರ್ಗಗಳು ಮಾಡುತ್ತಿರುವುದು ಇದನ್ನೇ.. ಅವರು ಮಾಡುವ ಶೋಷಣೆಯನ್ನು ಪ್ರಶ್ನಿಸಿದವರನ್ನು ಮಟ್ಟಹಾಕುವುದು.  ನಮ್ಮ ಮನುಕುಲದ ಇತಿಹಾಸವೇ ಬಹುತೇಕ ಹೀಗೆ ನಡೆದು ಬಂದಿದೆ. ಇದರಿಂದಾಗಿಯೇ ಅದೆಷ್ಟೋ ಯುದ್ದಗಳಾಗಿವೆ, ರಕ್ತಪಾತಗಳಾಗಿವೆ, ಸಾಮೂಹಿಕ ಹತ್ಯೆಗಳಾಗಿವೆ, ಜನಾಂಗಕ್ಕೆ ಜನಾಂಗವೇ ಸರ್ಮನಾಶವಾಗಿದೆ. ಕೋಮುದಳ್ಳುರಿಯಲ್ಲಿ ಮನುಷ್ಯತ್ವವೇ ಬೆಂದು ಹೋಗಿದೆ. ಎಲ್ಲದರಿಂದ ನಾವು ಪಾಠ ಕಲಿಯಲೇ ಬೇಕಿದೆ. ಇಲ್ಲವಾದರೆ ದ್ವೇಶದ ಬೆಂಕಿ ಎಲ್ಲರನ್ನೂ ಸುಡುತ್ತದೆ.

ಡಬ್ಬಿಂಗ್ ಬೇಕೋ ಬೇಡವೋ ಎನ್ನುವುದು ಆಮೇಲಿನ ಮಾತು.  ಆದರೆ ಡಬ್ಬಿಂಗ್ ವಿರೋಧಿಗಳು ಅನುಸರಿಸುತ್ತಿರುವುದು ಮಾತ್ರ ಅಸಂವಿಧಾನಿಕವಾದ ಮಾರ್ಗ. ಅವರು ತಮ್ಮ ಹಕ್ಕೋತ್ತಾಯ ಮಾಡುವುದಕ್ಕೆ ಯಾವುದೇ ವಿರೋಧವಿಲ್ಲ... ಆದರೆ ತಮ್ಮ ವಿರೋಧಿ ದ್ವನಿಗಳನ್ನು ನಿಂದನಾತ್ಮಕವಾಗಿ ಬಂದು ಮಾಡುವುದು ಖಂಡನೀಯವಾಗಿದೆ. ವಿರೋಧಿಸಿದವರನ್ನು ಶತ್ರುಗಳು, ತಲೆಹಿಡುಕರು, ನಾಚಿಕೆ ಇಲ್ಲದವರು ಎಂದು ವ್ಯಯಕ್ತಿಕವಾಗಿ ಅವನಿಂದನೆಗೆ ಗುರಿಮಾಡುವುದು ಒಂದು ರೀತಿಯಲ್ಲಿ ದಾದಾಗಿರಿಯಾಗಿದೆ. ಸಂವಿಧಾನಬದ್ದ ಅಭಿಪ್ರಾಯ ಸ್ವಾತಂತ್ರ್ಯಕ್ಕೆ ಚ್ಯುತಿ ತರುವ ಪ್ರಯತ್ನವಾಗಿದೆ.

ಇಂದು ಬೆಳಿಗ್ಗೆ ನಾನು ಇದೇ ಬ್ಲಾಗ್ನಲ್ಲಿ ಕನ್ನಡ ಭಾಷೆ ಸಂಸ್ಕೃತಿ ಮತ್ತು ಡಬ್ಬಿಂಗ್ ಎನ್ನುವ ಲೇಖನವನ್ನು ಬರೆದಿದ್ದೆ. ಅದಕ್ಕೆ ಹಲವರು ಅತ್ಯುತ್ತಮ ವಿಶ್ಲೇಷಣೆ ಎಂದು ಹೇಳಿದರೆ ಇನ್ನು ಕೆಲವರು ಡಬ್ಬಿಂಗ್ ವಿರೋಧಿಸುವುದು ಸರಿಯಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಪೋನ್ ಮಾಡಿಯೂ ಕೆಲವರು ಅಭಿನಂದನೆಗಳನ್ನು ಹಾಗೂ ಇನ್ನು ಕೆಲವರು ತಮ್ಮ ಭಿನ್ನಾಭಿಪ್ರಾಯವನ್ನೂ ವ್ಯಕ್ತಪಡಿಸಿದ್ದಾರೆ. ಎಲ್ಲಾ ಅಭಿನಂದನೆ, ಅಭಿಪ್ರಾಯ ಹಾಗೂ ಭಿನ್ನಾಭಿಪ್ರಾಯಗಳನ್ನು ನಾನು ಸಮಚಿತ್ತನಾಗಿ ಸ್ವಾಗತಿಸುತ್ತೇನೆ. ಅಭಿಪ್ರಾಯಬೇಧವಿರುವವರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಗೌರವಿಸುತ್ತೇನೆ. ಆದರೆ ಮೂರು ಜನರು ಮಾತ್ರ ವ್ಯಯಕ್ತಿಕವಾಗಿ ಅಟ್ಯಾಕ್ ಮಾಡುವ ಹಾಗೆ ರಿಯಾಕ್ಟ್ ಮಾಡಿದ್ದಾರೆ.  ನಿಮ್ಮಂತ ಬರಹಗಾರರೇ ಕನ್ನಡ ದ್ರೋಹಿಗಳು, ನಿಮ್ಮಂತ ಬುದ್ದಿಜೀವಿಗಳಿಂದಲೇ ಕನ್ನಡಕ್ಕೆ ಗತಿ ಬಂದಿದೆ ಎಂದು ಅವಲತ್ತುಕೊಂಡಿದ್ದಾರೆ. ಅಂತವರ ಬಗ್ಗೆ ನನಗೆ ಸಹಾನುಭೂತಿ ಇದೆ.

ಲೇಖನ ಬರೆದು ಬ್ಲಾಗ್ನಲ್ಲಿ ಪೋಸ್ಟ್ ಮಾಡಿದ ಅರ್ಧ ದಿನದೊಳಗೆ ಮುನ್ನೂರು ಜನ ಓದಿದ್ದಾರೆ. ಸಂಜೆಯ ಕ್ಷಣದವರೆಗೂ ಎಂಟುನೂರಾ ಮೂವತ್ತೆರಡು ಜನರು ಲೇಖನವನ್ನು ಓದಿದ್ದಾರೆ. ನನ್ನ ಲೇಖನವೊಂದನ್ನು ಇಷ್ಟು ಕ್ಷಿಪ್ರಗತಿಯಲ್ಲಿ ಇಷ್ಟೊಂದು ಜನರು ಓದಿದ್ದಾರಲ್ಲಾ ಎನ್ನುವುದೇ ನನಗೆ ಖುಷಿ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಗೌರವಿಸುವ ಎಲ್ಲರನ್ನೂ ನಾನು ಗೌರವಿಸುತ್ತೇನೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಲ್ಲಿ ವ್ಯಯಕ್ತಿಕ ನಿಂದನೆ ಮಾಡುವಂತಹ, ತಮ್ಮದೇ ಗುಂಪು ಕಟ್ಟಿಕೊಂಡು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ದಾಳಿ ಮಾಡುವಂತವರ ಪ್ಯಾಸಿಸ್ಟ್ ಮನೋಭಾವವನ್ನು ದಿಕ್ಕರಿಸುತ್ತೇನೆ. ಯಾವುದೇ ಕ್ಷಣ, ಇನ್ಯಾವುದೇ ದಿನ, ಎಂತಹುದೇ ವೇದಿಕೆಯಲ್ಲಿ ನಾನು ಸಕಾರಾತ್ಮಕ ಸಂವಾದಕ್ಕೆ, ವೈಚಾರಿಕ ಚರ್ಚೆಗೆ ಸಿದ್ದನಾಗಿದ್ದೇನೆ. ಅಭಿಪ್ರಾಯಬೇದವನ್ನು ಗೌರವಿಸುವಂತಹ ಸ್ವಸ್ತ ಸಮಾಜವನ್ನು ಕಟ್ಟುವ ನಿಟ್ಟಿನಲ್ಲಿ ನನ್ನ ಬರವಣಿಗೆ ಬಳಕೆಯಾಗುತ್ತದೆ ಎನ್ನುವುದನ್ನು ವಿನಯಪೂರ್ವಕವಾಗಿ ಹೇಳುತ್ತೇನೆ.

                                      "ಆಕ್ಟರ್ ಆಗು ಇಲ್ಲವೇ ಸುಪರ್ ಸ್ಟಾರ್ ಆಗು
ಡಬ್ಬಿಂಗ ಪರವಾಗಿರು ಇಲ್ಲವೇ ವಿರೋಧವಾಗಿರು
ಮೊದಲು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಗೌರವಿಸು
ಏನಾದರಾಗು  ಮೊದಲು  ಮಾನವನಾಗು.."

                      -ಶಶಿಕಾಂತ ಯಡಹಳ್ಳಿ
               


1 ಕಾಮೆಂಟ್‌:

  1. WHAT U SAY ABOUT FREEDOM ABOUT A CHOICE IS OKAY BUT i PERSONALLY FEEL THAT YOU ARE NOT A HIGHLY EDUCATED PERSON WHO CAN DISCUSS ABOUT ALL THIS SPECIALLY REGARDING LANGUAGE LIKE OUR KANNADA. PRIMORDIALLY LOT OF THINGS HAVE HAPPENED IN THE BACK STAGE AND YOU DO NOT HAVE ANY IDEA OR YOU THE IDEA AND YOU ARE ACTING TOO SMART. MY SYMPATHY WITH YOU AND I PITY YOU. JUST TYPING BIG WORDS CANNOT HIDE THE HIDDEN AGENDA OF YOU PEOPLE IF YOU REALLY ONE AND IF YOU DO NOT HAVE ANY HIDDEN AGENDA THEN YOU DO NOT HAVE KNOWLEDGE ABOUT HOW THE THINGS GO WRONG DUE TO SOME DECISIONS WHICH ARE TAKEN JUST BECAUSE SOME SO CALLED LIBERAL PEOPLE WANT LIBERAL POLICIES. SHIVARAJKUMAR KNOWS WHAT HE IS DOING HOPE YOU WILL UNDERSTAND WHAT YOU ARE DOING AND I PRAY TO GOD TO GIVE SOME WISDOM TO YOU

    ಪ್ರತ್ಯುತ್ತರಅಳಿಸಿ