ಬುಧವಾರ, ಫೆಬ್ರವರಿ 5, 2014

“ಡಬ್ಬಿಂಗ್ ಎಂಬ ವಿಕೃತಿ” ಭಾಗ-2


(ಸೃಷ್ಟಿ ದೃಶ್ಯಕಲಾಮಾಧ್ಯಮ ಅಕಾಡೆಮಿಯು 2014, ಫೆಬ್ರವರಿ 2ರಂದು ದೃಶ್ಯಮಾಧ್ಯಮಗಳಲ್ಲಿ ಡಬ್ಬಿಂಗ್ ಬೇಕೊ ಬೇಡವೊ ಕುರಿತು ವಿಚಾರಸಂಕಿರಣ ಮತ್ತು ಸಂವಾದ ಕಾರ್ಯಕ್ರಮವನ್ನು ಆಯೋಜಿಸಿತ್ತು. ಸೆಮಿನಾರ್ನಲ್ಲಿ ಡಬ್ಬಿಂಗ್ ಬೇಡವೇ ಬೇಡ ಎಂದು ವಿಚಾರ ಮಂಡಿಸಿದ ಸಿನೆಮಾ, ದೂರದರ್ಶನ ಹಾಗೂ ರಂಗಭೂಮಿಯ ನಿರ್ದೇಶಕ, ನಿರ್ಮಾಪಕ, ನಟ, ಬರಹಗಾರ ಬಿ.ಸುರೇಶ್ರವರ ಅನಿಸಿಕೆಗಳನ್ನು ಹಾಗೂ ನಂತರ ನಡೆದ ಸಂವಾದದಲ್ಲಿ ಕೇಳಲಾದ ಪ್ರಶ್ನೆಗಳಿಗೆ ಸುರೇಶರವರು ಕೊಟ್ಟ ಉತ್ತರಗಳನ್ನು ಇಲ್ಲಿ ದಾಖಲಿಸಲಾಗಿದೆ. ಡಬ್ಬಿಂಗ್ ಯಾಕೆ ಬೇಡ, ಅದು ಬಂದರೆ ಏನಾಗುತ್ತದೆ ಎನ್ನುವುದರ ಕುರಿತು ವಿವರವಾಗಿ ಹೇಳಿದ್ದಾರೆ. ಓದುಗರಿಗೆ ಅನೂಕೂಲಕರವಾಗಲಿ ಎಂದು ಒಂದೊಂದು ಪ್ಯಾರಾಗಳಲ್ಲಿ ಒಂದೊಂದು ವಿಷಯವನ್ನು ಒಪ್ಪವಾಗಿ ಜೋಡಿಸಿ ಸಂದರ್ಶನದ ಮಾದರಿಯಲ್ಲಿ ಕೊಡಲಾಗಿದೆ.)  ಭಾಗ…. 2


ಹದಿನೈದು ಸಾವಿರ ಜನ ಕೆಲಸ ಕಳೆದುಕೊಳ್ಳುತ್ತಾರೆ : ಅಕಸ್ಮಾತ್ ಡಬ್ಬಿಂಗ್ ಬಂತು ಅಂದರೆ ಎಲ್ಲಾ ವಾಹಿನಿಗಳಲ್ಲಿ ಪ್ರಸಾರವಾಗುತ್ತಿರುವ ಅರವತ್ತು ದಾರಾವಾಹಿಗಳಿಗೆ ಏಟು ಬೀಳುತ್ತೆ. ಪ್ರತಿ ಒಂದು ದಾರಾವಾಹಿಯಲ್ಲಿ ಕನಿಷ್ಟ ಎಪ್ಪತ್ತು ಜನ ಕಲಾವಿದರು ತಂತ್ರಜ್ಞರು ಕಾರ್ಮಿಕರು ಕೆಲಸ ಮಾಡ್ತಿದ್ದಾರೆ. ಎಪ್ಪತ್ತು ಕುಟುಂಬಗಳು ಟಿವಿಯನ್ನೇ ಅವಲಂಬಿಸಿ ಬದುಕ್ತಿದ್ದಾವೆ. ಕರ್ನಾಟಕದಲ್ಲಿ ಟಿವಿಯನ್ನೇ ನೆಚ್ಚಿಕೊಂಡು ಬದುಕುವ ಹದಿನೈದು ಸಾವಿರ ಜನರಿದ್ದಾರೆ. ಇದರಲ್ಲಿ ಎರಡು ಮೂರು ಸಾವಿರ ಕಲಾವಿದರಿರಬಹುದು ಇನ್ನುಳಿದವರು ಕಾರ್ಯಕರ್ತರಿರಬಹುದು. ಹದಿನೈದು ಸಾವಿರ ಕುಟುಂಬಗಳು ತೊಂದರೆಗೊಳಗಾಗುತ್ತವೆ. ಬೇರೆ ಭಾಷೆಗಳಲ್ಲಿ ತಯಾರಾದ ದಾರಾವಾಹಿಗಳು ಲೆಕ್ಕವಿಲ್ಲದಷ್ಟಿವೆ. ಈಗಾಗಲೇ ಬಹುತೇಕ ಕನ್ನಡ ಚಾನೆಲ್ ಗಳಲ್ಲಿ ಪ್ರಸಾರವಾಗ್ತಿರೋದು ಶೇಕಡಾ ತೊಂಬತ್ತು ಭಾಗ ರಿಮೇಕ್ ದಾರಾವಾಹಿಗಳು. ಇನ್ನು ಡಬ್ಬಿಂಗ್ ಬಂದರೆ ನೂರಕ್ಕೆ ನೂರು ಡಬ್ಬಿಂಗ್ ದಾರಾವಾಹಿಗಳೇ ಇರುತ್ತವೆ. ಕಂಠದಾನ ಕಲಾವಿದರನ್ನು ಹೊರತು ಪಡಿಸಿ ಬೇರೆ ಯಾರಿಗೂ ಕೆಲಸ ಇಲ್ಲವಾಗುತ್ತದೆ. 

ಸಿನೆಮಾಮಂದಿರಗಳೇ ಸಿಕ್ಕೋದಿಲ್ಲ : ಬೇಕಾದಷ್ಟು ಸಿನೆಮಾಗಳ ಡಬ್ಬಿಂಗ್ ಹಕ್ಕನ್ನು ಈಗಾಗಲೆ ಕೆಲವರು ಪಡೆದುಕೊಂಡಿದ್ದಾರೆ. ಜಗತ್ತಿನಾದ್ಯಂತ ಒಂದು ವರ್ಷಕ್ಕೆ ಜಗತ್ತಿನಾದ್ಯಂತ ತಯಾರಾಗುತ್ತಿರುವುದು 3800 ಸಿನೆಮಾಗಳು. ಕರ್ನಾಟಕದಲ್ಲಿ ತಯಾರಾಗುತ್ತಿರುವುದು ವರ್ಷಕ್ಕೆ ಸರಾಸರಿ ನೂರಿಪ್ಪತ್ತು ಸಿನೆಮಾಗಳು. ನೂರಿಪ್ಪತ್ತು ಸಿನೆಮಾಗಳ ಜೊತೆಗೆ ಮೂರುಸಾವಿರದೆಂಟನೂರು ಸಿನೆಮಾಗಳು ಕನ್ನಡಕ್ಕೆ ಡಬ್ ಆಗಿ ಬಂದರೆ ಪ್ರದರ್ಶಿಸಲು ನಮಗೆ ಸಿನೆಮಾ ಥೆಯಟರ್ಗಳು ಸಿಗುತ್ತಾ. ಆಗ ನಮ್ಮ ಸಿನೆಮಾ ಮಂದಿರಗಳಲ್ಲಿ ಕನ್ನಡ ಸಿನೆಮಾಗಳಿರೋದಿಲ್ಲ. ಡಬ್ಬಿಂಗ್ ಆದ ಕನ್ನಡ ಸಿನೆಮಾಗಳಿರುತ್ತಾವೆ.

ಡಬ್ಬಿಂಗ್ ಕನ್ನಡ ಮಾರುಕಟ್ಟೆಯನ್ನು ಕೊಲ್ಲುತ್ತದೆ : ಡಬ್ಬಿಂಗ್ನಿಂದ ಮಾರುಕಟ್ಟೆ ಬೆಳೆಯುತ್ತೆ ಅಂತ ಹೇಳುವವರು ಸುಳ್ಳು ಹೇಳುತ್ತಿದ್ದಾರೆ. ಮಾರುಕಟ್ಟೆ ಬೆಳೆಯುವ ಅವಕಾಶವೂ ಇಲ್ಲ. ಅದು ಎಂದೂ ಸಾಧ್ಯವೂ ಇಲ್ಲ. ಉದಾಹರಣೆಗೆ ನಿನ್ನಿಂದಲೇ ಸಿನೆಮಾವನ್ನು ಆರು ಕೋಟಿಗೆ ಚಾನೆಲ್ ನವರು ಕೊಂಡುಕೊಂಡಿದ್ದಾರೆ ಎಂದು ಪತ್ರಿಕೆಯಲ್ಲಿ ಬಂದಿದೆ. ವಾಸ್ತವ ಏನೆಂದರೆ ಮೂರುವರೆ ಕೋಟಿಗೆ ಟಿವಿ ಹಕ್ಕು ಕೊಂಡುಕೊಳ್ಳಲಾಗಿದೆ. ಅದೇ ರಜನಿಕಾಂತರವರ ಸಿನೆಮಾ ಡಬ್ಬಿಂಗ್ ಹಕ್ಕು ಕೇವಲ ಇಪ್ಪತೈದು ಲಕ್ಷಕ್ಕೆ ಸಿಗುತ್ತದೆ ಎಂದರೆ ಯಾವ ಚಾನೆಲ್ಗಳು ಕನ್ನಡ ಸಿನೆಮಾಕ್ಕೆ ಮೂರುವರೆ ಕೋಟಿ ಕೊಡ್ತಾವೆ. ಗಿರೀಶ ಕಾಸರವಳ್ಳಿಯವರ ಸಿನೆಮಾಗೆ ಹತ್ತು ಲಕ್ಷ ಕೊಡುವ ಬದಲು ಅಮೇರಿಕಾದ ಇಂಗ್ಲಿಷ್ ಸಿನೆಮಾಗಳೇ ಹತ್ತು ಲಕ್ಷಕ್ಕೆ ಡಬ್ ಮಾಡಲು ಸಿಗುತ್ತವೆ ಎಂದರೆ ಟಿವಿ ಚಾನೆಲ್ಗಳು ಯಾವುದನ್ನು ಕೊಂಡುಕೊಳ್ಳುತ್ತವೆ? ಒಂದು ಸಿನೆಮಾ ಡಬ್ಬಿಂಗ್ ಮಾಡುವುದಕ್ಕೆ ಗರಿಷ್ಟ ಒಂದೂವರೆ ಲಕ್ಷ ಹಣ ಸಾಕು. ಹೀಗಾದಾಗ ಗಿರೀಶ ಕಾಸರವಳ್ಳಿಯವರ ಸಿನೆಮಾ ಟಿವಿಗಳಲ್ಲಿ ಬರೋದು ಬೇಡವಾ? ಕನ್ನಡ ಸಿನೆಮಾಗಳನ್ನು ಜನ ಟಿವಿಯಲ್ಲಿ ನೋಡುವುದು ಬೇಕಾಗಿಲ್ವಾ? ಗಿರೀಶ ಕಾಸರವಳ್ಳಿಯವರ ಸಿನೆಮಾಗಳಿಗೆ ಪ್ರೇಕ್ಷಕರು ಕಡಿಮೆ ಇದ್ದರೂ ಪ್ರೇಕ್ಷಕರಂತೂ ಇದ್ದಾರಲ್ಲಾ. ಅಂತಹ ಸಿನೆಮಾಗಳು ಹೇಗೋ ಬದುಕುತ್ತಿವೆಯಲ್ಲಾ. ಹೀಗೆ ಬದುಕುವಂತಹ ಸಿನೆಮಾಗಳನ್ನು ಕೊಲ್ಲುವಂತಹ ಹುನ್ನಾರವನ್ನು ಎಲ್ಲರೂ ವಿರೋಧಿಸಲೇಬೇಕು. ಸೀಮಿತ ಮಾರುಕಟ್ಟೆ ಇರುವಾಗ ಡಬ್ಬಿಂಗ್ ಬರುವುದನ್ನು ನಾವು ತಡೆಯಲೇಬೇಕು.

ಟಿವಿ ಜಾಹಿರಾತುಗಳಲ್ಲೇಕೆ ಡಬ್ಬಿಂಗ್? : 1985ರಲ್ಲಿ ಟೆಲಿವಿಜನ್ ಕರ್ನಾಟಕಕ್ಕೆ ಬರುತ್ತದೆ. 1986ರಲ್ಲಿ ಜಾಹಿರಾತುಗಳು ಬರಲು ಆರಂಭಿಸುತ್ತವೆ. ಆಗ ಕೇಂದ್ರದಲ್ಲಿದ್ದ ಬ್ರಾಡಕಾಸ್ಟಿಂಗ್ ಕಾರ್ಪೊರೇಷನ್ ಪ್ರಸಾರ ಭಾರತಿಯು ಕನ್ನಡಿಗರ ಸಭೆ ಕರೆದು ಜಾಹಿರಾತಿನ ಡಬ್ಬಿಂಗ್ ಬಗ್ಗೆ ಕೇಳುತ್ತದೆ. ಜಾಹಿರಾತು ಎನ್ನುವುದು ಟಿವಿಯ ಆದಾಯ ಮೂಲವಾಗಿದೆ. ಕನ್ನಡದಲ್ಲೇ ಜಾಹಿರಾತು ಮಾಡುವುದು ಕಷ್ಟ. ಆದ್ದರಿಂದ ಡಬ್ಬಿಂಗ್ ಜಾಹಿರಾತು ಪ್ರಸಾರ ಮಾಡುವುದು ಅನಿವಾರ್ಯ ಎಂದು ಕೇಳಿಕೊಳ್ಳುತ್ತಾರೆ.  ಆಗ ಸಭೆಯಲ್ಲಿದ್ದವರು ಹೇಳ್ತಾರೆ ಡಬ್ಬಿಂಗ್ ಜಾಹಿರಾತುಗಳಲ್ಲಿ ಕನ್ನಡ ಸರಿಯಾಗಿರಬೇಕಾದದ್ದನ್ನು ನೋಡಿಕೊಳ್ಳಬೇಕಾದದ್ದು ದೂರದರ್ಶನದ ಜವಾಬ್ದಾರಿ ಎನ್ನುವ ಕಂಡೀಶನ್ ಮೇಲೆ ಒಪ್ಪುತ್ತಾರೆ. ಯಾವುದೇ ಜಾಹಿರಾತು ನಿರ್ಮಿಸುವವನು ಮುಂಚೆ ಜಾಹಿರಾತಿನ ಸ್ಕ್ರಿಪ್ಟ್ ಹಾಗೂ ಸ್ಟೋರಿ ಬೋರ್ಡನ್ನು ದೂರದರ್ಶನದ ಕಮಿಟಿಗೆ ಸಲ್ಲಿಸಬೇಕು, ಜಾಹಿರಾತಿನ ಮೊದಲ ಪ್ರತಿಯನ್ನು ತೋರಿಸಬೇಕು ಹಾಗೂ ಭಾಷೆಗೆ ಸಂಬಂಧಿಸಿದಂತೆ ದೂರದರ್ಶನದವರು ಸೂಚಿಸಿದ್ದನ್ನು ಸರಿಮಾಡಿ ಅಂತಿಮ ಪ್ರತಿಯನ್ನು ತೋರಿಸಿ ಅನುಮತಿ ಪಡೆದು ನಂತರ ಕರ್ನಾಟಕದಲ್ಲಿ ಪ್ರಸಾರಮಾಡಬೇಕು ಎನ್ನುವ ಒಪ್ಪಂದ ಮಾಡಲಾಗಿತ್ತು. ಒಪ್ಪಂದ ಆಗುವ ಕಾಲಕ್ಕೆ ದೂರದರ್ಶನದ ಮುಖ್ಯಸ್ಥರಾಗಿ ನಳನಿ ರಾಮಣ್ಣ ಎನ್ನುವ ಕೊಡಗಿನ ಕನ್ನಡತಿ ಇದ್ದರು. 1990 ರವರೆಗೂ ಒಪ್ಪಂದವನ್ನು ಚೆನ್ನಾಗಿ ಪಾಲನೆ ಮಾಡಿದರು. ನಂತರ ಅವರಿಗೆ ವರ್ಗಾವಣೆಯಾಗಿ ಜಾಗಕ್ಕೆ ಮಲಯಾಳಿಯೊಬ್ಬರು ಬರುತ್ತಾರೆ.  ಅದೆ ಸಮಯಕ್ಕೆ ದೇಶದಾದ್ಯಂತ ಖಾಸಗಿ ವಾಹಿನಿಗಳಿಗೆ ಅನುಮತಿ ಕೊಡಲಾಗುತ್ತದೆ. 1990 ರಲ್ಲಿ ಉದಯಾ ಟಿವಿಗೆ ಲೈಸನ್ಸ ಸಿಗುತ್ತದೆ. 2000 ದಲ್ಲಿ ಈಟಿವಿಗೆ ಅನುಮತಿ ಸಿಗುತ್ತದೆ. ಇಷ್ಟೊಂದು ಚಾನೆಲ್ ಗಳಿಗೆ ಸ್ಕ್ರಿಪ್ಟ್ ಚೆಕ್ ಮಾಡಿ ಜಾಹಿರಾತುಗಳಿಗೆ ಒಪ್ಪಿಗೆ ಕೊಡುವ ಕ್ರಿಯೆಗೆ ಮೂರು ತಿಂಗಳು ಬೇಕಾಗುತ್ತಿತ್ತು. ಇದು ದೀರ್ಘ ಕಾಲ ಆಗುತ್ತದೆ. ತಕ್ಷಣ ಜಾಹಿರಾತುಗಳನ್ನು  ಪ್ರಸಾರ ಮಾಡದಿದ್ದರೆ ನಮಗೆ ಹಣ ಬರೋದಿಲ್ಲ, ಹಣ ಇಲ್ಲದೆ ಚಾನೆಲ್ ನಡೆಸಲು ಆಗುತ್ತಿಲ್ಲ ಎಂದು ಎಲ್ಲಾ ಖಾಸಗಿ ವಾಹಿನಿಯವರು ದೂರದರ್ಶನ ಮತ್ತು ಕೇಂದ್ರದ ವಾರ್ತಾ ಮಂತ್ರಿಗಳ ಮೇಲೆ ಒತ್ತಡ ತರುತ್ತಾರೆ. ಹೀಗೆ ಒತ್ತಡಕ್ಕೆ ಮಣಿದ ವಾರ್ತಾ ಮಂತ್ರಾಲಯವು ಕನ್ನಡಿಗರನ್ನು ಒಂದು ಮಾತೂ ಕೇಳದೇ ಜಾಹಿರಾತುಗಳನ್ನು  ಪರಿಶೀಲಿಸಬೇಕಿಲ್ಲಾ, ದೆಹಲಿಯಲ್ಲಿ ಪರಶೀಲಿಸಿದರೆ ಸಾಕು, ಭಾಷೆಗೂ ಜಾಹೀರಾತುಗಳಿಗೂ ಸಂಬಂಧವೇ ಇಲ್ಲ ಎಂದು ಆದೇಶ ಮಾಡಿಬಿಡ್ತಾರೆ. ಕನ್ನಡಿಗರಿಗೆ ಗೊತ್ತಿಲ್ಲದೆ ಆದೇಶ ಜಾರಿಆಗುತ್ತದೆ. ವಿಕೃತ ರೀತಿಯಲ್ಲಿ ಡಬ್ ಆದ ಜಾಹಿರಾತುಗಳು ಪ್ರಸಾರ ವಾಗತೊಡಗುತ್ತವೆ. ವಿಕೃತತೆ ಹೇಗಿದೆ ಎಂದರೆ ಅಪೌಷ್ಟಿಕತೆ ಜಾಹಿರಾತಿನಲ್ಲಿ ಅಮೀರ್ ಖಾನ್ ಬಂದು ಕನ್ನಡದಲ್ಲಿ ಕುಪೋಷಣೆ ಎನ್ನುತ್ತಾನೆ. ಕನ್ನಡದಲ್ಲಿ ಕುಪೋಷಣೆ ಎನ್ನುವ ಶಬ್ಧವೇ ಇಲ್ಲ. ಸೋಪಿನ ಜಾಹಿರಾತಿನಲ್ಲಿ ತ್ವಚೆ ಎನ್ನುತ್ತಾರೆ. ತ್ವಚೆ ಅನ್ನೋದು ಯಾವ ಭಾಷೆಯ ಪದ ಎನ್ನುವುದು ಗೊತ್ತಿಲ್ಲ. ಕುರುಕುರೆ ಜಾಹಿರಾತಿನಲ್ಲಿ ಹಿಂದಿಯಲ್ಲಿ ತೇಡಾಸಾ ಹೈ ಮಗರ್ ಮೇರಾ ಹೈ ಎನ್ನುವ ವಾಕ್ಯ ಬರುತ್ತದೆ. ಆದರೆ ಅದು ಕನ್ನಡಕ್ಕೆ ಡಬ್ಬಿಂಗ್ ಆದಾಗ ತಿರುಚ್ಚಾಗಿದೆ ಆದರೆ ನಂದಾಗಿದೆ ಎಂದು ಕೆಟ್ಟದಾಗಿ ಅನುವಾದ ಆಗಿದೆ. ಅಪಭ್ರಂಶವನ್ನು ನಿಲ್ಲಸಬೇಕು ಎಂದು ನಾವು ನಮ್ಮ ಟೆಲಿವಿಜನ್ ಅಸೋಸಿಯೇಶನ್ ನಿಂದ ಕೇಂದ್ರ ಸರಕಾರಕ್ಕೆ ಮನವಿಯನ್ನು ಸಲ್ಲಿಸಿದ್ದೇವೆ. ಇನ್ನೂ ಅಲ್ಲಿಂದ ಪ್ರತಿಕ್ರಿಯೆ ಬಂದಿಲ್ಲ. ಡಬ್ಬಿಂಗ್ ಜಾಹಿರಾತಿನಲ್ಲೂ ಕನ್ನಡ ಸರಿಯಾಗಿರಬೇಕು ಎನ್ನುವುದು ನಮ್ಮ ಆಶಯ ಆದರೆ ನಿಯಂತ್ರಣ ನಮ್ಮ ಕೈಯಲ್ಲಿ ಇಲ್ಲದೇ ಇರುವುದರಿಂದ ಇಂತಹುದರ ಮೇಲೆ ನಿಯಂತ್ರಣವನ್ನು ಹೇರಲು ಆಗ್ತಿಲ್ಲ.


ಶ್ರೇಷ್ಠ ಸಿನೆಮಾ ಕೃತಿಗಳು ಕನ್ನಡಕ್ಕೆ ಬರುವುದು ಬೇಡವೆ? : ಶ್ರೇಷ್ಠತೆ ಎನ್ನುವುದು ಸಾಪೇಕ್ಷವಾದದ್ದು. ಪ್ರತಿಯೊಬ್ಬನಿಗೂ ಅವನಿಗೆ ಶ್ರೇಷ್ಠ ಎನ್ನಿಸುವುದು ಬೇರೆಯಾಗಿರುತ್ತದೆ. ಒಬ್ಬನಿಗೆ ಹಾಲಿವುಡ್ ಟೈಟಾನಿಕ್ ಶೇಷ್ಠ ಸಿನೆಮಾವಾದರೆ ಇನ್ನೊಬ್ಬನಿಗೆ ಕಾಸರವಳ್ಳಿಯವರ ಕೂರ್ಮಾವತಾರ ಶ್ರೇಷ್ಠವೆನಿಸುತ್ತದೆ. ಇದು ನೋಡುವ ಕ್ರಮ, ನೋಡುಗನ ಬೌದ್ಧಿಕ ಮಿತಿಗಳನ್ನಾಧರಿಸಿದೆ. ಕದ್ದು ಮುಚ್ಚಿ ನೋಡುವವನಿಗೆ ಶಕಿಲಾ ಸಿನೆಮಾ ಶ್ರೇಷ್ಠ ಸಿನೆಮಾ ಎನ್ನಿಸುತ್ತದೆ. ಕನ್ನಡದಲ್ಲೂ ಪ್ರತಿವರ್ಷ ಶ್ರೇಷ್ಠ ಸಿನೆಮಾಗಳು ರುತ್ತಿದ್ದಾವೆ. ಆದರೆ ಶ್ರೇಷ್ಠತೆಯನ್ನು ಅದು ಹಣ ಗಳಿಸುವ ಮಾನದಂಡದಿಂದ ಅಳೆದು ಯಶಸ್ಸನ್ನು ನಿರ್ಧರಿಸಲಾಗುತ್ತಿದೆ. ಇದೇ ಮಾನದಂಡವನ್ನಿಟ್ಟುಕೊಂಡೇ ನೋಡಿದರೆ, ಜಗತ್ತಿನಾದ್ಯಂತ ಹಾಕಿದ ಬಂಡವಾಳಕ್ಕಿಂತ ಎರಡು ಮೂರು ಪಟ್ಟು ಹೆಚ್ಚು ಲಾಭ ಗಳಿಸುವ ಸಿನೆಮಾಗಳ ಸಂಖ್ಯೆ ಶೇಕಡಾ ಎರಡು ಇಲ್ಲವೆ ಮೂರು. ಹಾಕಿದ ಹಣವನ್ನು ವಾಪಸ್ ಪಡೆಯುವ ಸಿನೆಮಾಗಳು ಶೇಕಡಾ ಒಂದು. ಹಣದ ಲೆಕ್ಕಾಚಾರದಲ್ಲಿ ಶೇಕಡಾ ನಾಲ್ಕರಷ್ಟು ಸಿನೆಮಾಗಳು ಮಾತ್ರ ಯಶಸ್ವಿ ಸಿನೆಮಾಗಳೆನಿಸಿಕೊಳ್ಳುತ್ತವೆ. ಲೆಕ್ಕದಲ್ಲಿ ಕಳೆದ ವರ್ಷ ಕರ್ನಾಟಕದಲ್ಲಿ ನೂರಾ ನಲವತ್ತು ಸಿನೆಮಾಗಳಲ್ಲಿ  ಹದಿನೈದು ಸಿನೆಮಾಗಳು ಯಶಸ್ವಿಯಾಗಿದ್ದಾವೆ. ಇದು ಅಂದಾಜು ಹನ್ನೆರಡು ಪರ್ಸೆಂಟ್ ಯಶಸ್ಸು. ಇಡೀ ಜಗತ್ತಿನಲ್ಲಿ ಯಾವುದೆ ಭಾಷೆಯಲ್ಲಿ ಹನ್ನೆರಡು ಪರ್ಸೆಂಟ್ ಯಶಸ್ಸು ಸಿಕ್ಕಿಲ್ಲ. ಅದು ಕನ್ನಡ ಸಿನೆಮಾದಲಿ ಸಿಕ್ಕಿದೆ. ಹೀಗಾಗಿ ಶ್ರೇಷ್ಠತೆಯನ್ನು ಯಾವ ಮಾನದಂಡದಿಂದ ಆಧರಿಸಿ ನಿರ್ಧರಿಸುತ್ತೀರಿ ಎನ್ನುವುದರ ಮೇಲೆ ಶ್ರೇಷ್ಠತೆ ನಿಂತಿದೆ. ನನಗೆ ಕೊರಿಯನ್ ನಿದೇಶಕ ಕಿಮ್ ಕಿ ಡುಕ್ ಸಿನೆಮಾ ಶ್ರೇಷ್ಠವೆನ್ನಿಸಿದರೆ ಇನ್ನೊಬ್ಬನಿಗೆ ಜಾಕಿಚಾನ್ ಸಿನೆಮಾ ಶ್ರೇಷ್ಠವಾಗುತ್ತದೆ. ಶ್ರೇಷ್ಠತೆಯ ಪ್ರಶ್ನೆಯನ್ನಿಟ್ಟುಕೊಂಡು ಎಲ್ಲವನ್ನೂ ನೋಡುವುದು ಸರಿಯಾದ ಕ್ರಮವಲ್ಲ. ಬೇಕಾದರೆ ಜಗತ್ತಿನ ಎಲ್ಲಾ ಚಲನಚಿತ್ರೋತ್ಸವಗಳಲ್ಲಿ ಯಾವುದು ಶ್ರೇಷ್ಠ ಸಿನೆಮಾಗಳು ಎಂದು ಪ್ರಶಸ್ತಿಯನ್ನು ಪಡೆದುಕೊಂಡಿದೆಯೋ ಅಂತಹ ಸಿನೆಮಾಗಳನ್ನು ಬೇಕಾದರೆ ಕನ್ನಡಕ್ಕೆ ರಿಮೇಕೋ ಡಬ್ಬೋ ಮಾಡಲಿ. ಆದರೆ ಇಲ್ಲಿ ಗಿರೀಶ್ ಕಾಸರವಳ್ಳಿ ಸಿನೆಮಾಗಳನ್ನೇ ನೋಡದವರು ಇನ್ನು ಆಸ್ಕರ್ ಪ್ರಶಸ್ತಿ ಪಡೆದ  ಸಿನೆಮಾಗಳನ್ನು ನೋಡುತ್ತಾರಾ? ಆರ್ಟಿಸ್ಟ ಎನ್ನುವ ಅತ್ಯುತ್ತಮ ಸಿನೆಮಾ ಬೆಂಗಳೂರಿನಲ್ಲಿ ಬಿಡುಗಡೆಯಾದರೆ ಒಂದು ವಾರ ಕೂಡಾ ಓಡಲಿಲ್ಲ. ಯಾರೋ ಶ್ರೇಷ್ಠ ಅಂದಿದ್ದು ಶ್ರೇಷ್ಠ ಆಗೊದಿಲ್ಲವಲ್ಲ, ಯಾವುದೋ ಕಮಿಟಿ ತೀಮಾನಿಸಿದ್ದು ತಾನೆ ಶ್ರೇಷ್ಠ. ಹೀಗಾಗಿ ಪ್ರಶಸ್ತಿ ಪುರಸ್ಕೃತ ಸಿನೆಮಾಗಳು ಡಬ್ ಆದರೆ ತಪ್ಪಿಲ್ಲ. ಆದರೆ ಅಂತವುಗಳನ್ನು ಬಿಡುಗಡೆಯಾದಾಗ ನೋಡದಿದ್ದವರು ಇನ್ನು ಡಬ್ಬಿಂಗ್ ಆದಾಗ ನೋಡ್ತಾರಾ? ಕ್ರಾಶ್ ಎನ್ನುವ ಅದ್ಬುತ ಸಿನೆಮಾ ಆಧರಿಸಿ ತಮಿಳು, ಮಲಯಾಳಂನಲ್ಲಿ ಸಿನೆಮಾ ಬಂದಿತ್ತು. ಒರಿಜಿನಲ್ ಕ್ರ್ಯಾಶ್ ಸಿನೆಮಾನೇ ಬಿಡುಗಡೆಯಾಗಿತ್ತು. ಅದು ಬೆಂಗಳೂರಿನಲ್ಲಿ ಮೂರು ದಿನ ನಡೆಯಲಿಲ್ಲ. ಹೀಗಾಗಿ ಶ್ರೇಷ್ಠ ಎನ್ನಿಸುವ ಸಿನೆಮಾಗಳೆಲ್ಲವನ್ನೂ ಜನ ನೋಡ್ತಾರೆ ಎನ್ನುವುದು ಭ್ರಮೆ.

ಬೆಂಗಳೂರಿನಲ್ಲಿ ಅನ್ಯ ಭಾಷೆಗಳ ಸಿನೆಮಾಗಳೇ ಹೆಚ್ಚು ಯಾಕೆ? : ಬೆಂಗಳೂರು ನಗರ ಬಹಳಾ ವಿಚಿತ್ರ ನಗರ. ಇದರ ಹಿಸ್ಟರಿ ಇನ್ನೂ ವಿಚಿತ್ರ. ಮೊದಲು ಬೆಂಗಳೂರು ನಗರವನ್ನಾಳಿದವರು ತಮಿಳರು. ಧರ್ಮರಾಯನ ದೇವಸ್ಥಾನವನ್ನು ಕಟ್ಟಿದವರು ತಮಿಳರು. ನಂತರ ಕೆಂಪೆಗೌಡ ಚಿತ್ತೂರಿನ ಕಡೆಯಿಂದ ಬಂದ ತೆಲುಗಿನವನು. ನಂತರ ಕೆಂಪೆಗೌಡನನ್ನು ಸೋಲಿಸಿ ಶಿವಾಜಿಯ ಅಪ್ಪ ಮತ್ತು ಅಣ್ಣ ಇನ್ನೂರು ವರ್ಷಗಳ ಕಾಲ ಬೆಂಗಳೂರನ್ನು ಆಳುತ್ತಾರೆ. ತಮಿಳರಿದ್ದಾಗ ಇಲ್ಲಿ ತಮಿಳು ಆಡಳಿತ ಭಾಷೆ ಆಗಿದ್ದರೆ, ತೆಲಗರು ಇದ್ದಾಗ ಬೆಂಗಳೂರಿನ ಆಡಳಿತ ಭಾಷೆ ತೆಲುಗು ಆಗಿರುತ್ತದೆ. ಮರಾಠಿಗರು ಇನ್ನೂರು ವರ್ಷ ಆಳಿದ ನಂತರ ಬೆಂಗಳೂರನ್ನು ನೂರೈವತು ವರ್ಷ ಆಳಿದವರು ಹೈದರಾಲಿ ಮತ್ತು ಟಿಪು ಸುಲ್ತಾನ್. ಆಗ ಅವರು ಪರ್ಶಿಯನ್ ಭಾಷೆಯನ್ನು ಆಡಳಿತ ಭಾಷೆಯನ್ನಾಗಿ ಮಾಡಿಕೊಂಡಿದ್ದರು. ಈಗಲೂ ಕಲಾಸಿಪಾಳ್ಯ ಎನ್ನುತ್ತೇವಲ್ಲಾ ಅದರ ಅರ್ಥ ಸೈನಿಕರಿಗೆ ಟೆಂಟು ಹಾಕುವ ಜನಕ್ಕೆ ಕಲಾಸಿಗಳು ಎನ್ನುತ್ತಾರೆ. ಅಂತವರು ಇದ್ದ ಏರಿಯಾವೇ ಕಲಾಸಿಪಾಶ್ಯ. ಆವಲಹಳ್ಳಿ ಅಂದರೆ ಹಸುಗಳ ಜಾಗ. ಹಸುಸಾಕುವವರೆ ಇದ್ದಂತಹ ಜಾಗ ಇಂದು ನಗರವಾಗಿದೆ. ಕನ್ನಡದ ಪದಗಳಿರುವ ಏರಿಯಾಗಳೇ ಆಗ ಇರಲಿಲ್ಲ. ಬೆಂಗಳೂರಿನಲ್ಲಿ  ಮೊದಲ ಬಾರಿಗೆ ಕನ್ನಡ ಆಡಳಿತ ಭಾಷೆ ಆಗಿದ್ದು ಟಿಪೂ ನಂತರ ಮೈಸೂರು ಅರಸರು ಆಳುತ್ತಿದ್ದಾಗ. ಅದೂ ಈಗಿನ ಕಬ್ಬನ್ ಪಾರ್ಕಿನವರೆಗೂ ಮೈಸೂರರಸರ ಗಡಿ ಇತ್ತು. ಅಲ್ಲಿಂದಾಚೆಗೆ ಬ್ರಿಟೀಷರ ಸಾಮ್ರಾಜ್ಯ. ಕಂಟೋನ್ಮೆಂಟು, ಶಿವಾಜಿನಗರ ಅದೆಲ್ಲಾ ಬ್ರಿಟೀಷರ ನೇರ ಆಡಳಿತಕ್ಕೊಳಪಟ್ಟಿತ್ತು.

ಎಲ್ಲರಿಗೂ ಅವರ ಬಾಷೆಯಲ್ಲಿ ಸಿನೆಮಾ ನೋಡುವ ಹಕ್ಕಿದೆ : 2011 ಜನಗಣತಿಯನ್ನು ನೋಡಿದರೆ ಮಾತೃಭಾಷೆಯ ಲೆಕ್ಕದಲ್ಲಿ ಬೆಂಗಳೂರಿನಲ್ಲಿ ಕನ್ನಡ ಮಾತೃಭಾಷೆಯವರು ಕೇವಲ ಶೇಕಡಾ 28 ಮಾತ್ರ. ತಮಿಳು ಮಾತೃ ಭಾಷಿಕರು ಶೇಕಡಾ 35. ತೆಲುಗರ ಸಂಖ್ಯೆ ಶೇಕಡಾ 24. ನಾಲ್ಕನೆ ಜಾಗದಲ್ಲಿ ಸಿಂಧಿಗಳು ಗುಜರಾತಿಗಳು ಇದ್ದಾರೆ. ಹೀಗಾಗಿ ಯಾವ ಏರಿಯಾದಲ್ಲಿ ಯಾವ ಭಾಷಿಕರು ಇದ್ದಾರೋ ಅವರು ತಮ್ಮ ಭಾಷೆಯ ಸಿನೆಮಾಗಳನ್ನು ನೋಡುತ್ತಾರೆ. ಹೆಚ್ಚು ಜನ ನೋಡುವ ಭಾಷೆಯ ಸಿನೆಮಾಗಳನ್ನು ಆಯಾ ಚಿತ್ರಮಂದಿರದ ಮಾಲೀಕರು ತೋರಿಸುತ್ತಾರೆ. ಇದು ಅವರವರ ಸಂವಿಧಾನಿಕ ಹಕ್ಕು.
ಬೆಂಗಳೂರು ನಗರ ಜಿಲ್ಲೆಯಲ್ಲಿ ಸರಿಸುಮಾರು ಇನ್ನೂರಾ ಐವತ್ತು ತಮಿಳು ಮಾಧ್ಯಮ ಶಾಲೆಗಳಿದ್ದಾವೆ. ಪ್ರತಿಯೊಬ್ಬರಿಗೂ ಅವರವರದೇ ಭಾಷೆಯಲ್ಲಿ ಸಿನೆಮಾ ನೋಡುವ ಹಕ್ಕಿದೆ. ಡಬ್ಬಿಂಗ್ ಬರುವುದರಿಂದ ಬೇರೆ ಭಾಷೆಯ ಸಿನೆಮಾಗಳು ನಮ್ಮಲ್ಲಿ ಬಿಡುಗಡೆ ಆಗುವುದೇ ಇಲ್ಲ ಅಂದುಕೊಂಡಿದ್ದರೆ ಅದು ಕೇವಲ ಭ್ರಮೆ. ರೀತಿಯ ತೀರ್ಮಾಣವನ್ನು ತೆಗೆದುಕೊಳ್ಳುವ ಶಕ್ತಿ ಇರುವುದು ಕೇವಲ ತಮಿಳುನಾಡಿಗೆ ಮಾತ್ರ.  ದೇಶದ ಯಾವ ರಾಜ್ಯದಲ್ಲೂ ರೀತಿಯ ತೀರ್ಮಾಣ ತೆಗೆದುಕೊಳ್ಳಲು ಸಾಧ್ಯವೇ ಇಲ್ಲ. ತಮಿಳುನಾಡಿನಲ್ಲಿ ಚೆನೈಯನ್ನು ಹೊರತುಪಡಿಸಿ ರಾಜ್ಯಾದ್ಯಂತ ಕೇವಲ ತಮಿಳು ಸಿನೆಮಾಗಳೇ ಬಿಡುಗಡೆಯಾಗಬೇಕು ಎನ್ನುವ ತೀರ್ಮಾಣವನ್ನು ತಮಿಳು ಸಿನೆಮಾರಂಗದಿಂದ ರಾಜಕೀಯಕ್ಕೆ ಹೋದವರು ತೆಗೆದುಕೊಂಡಿದ್ದರಿಂದ ಸಾಧ್ಯವಾಗಿದೆ. ರೀತಿಯ ಇಚ್ಚಾಶಕ್ತಿ ನಮ್ಮ ಸರಕಾರಕ್ಕೆ ಹಿಂದೂ ಇಲ್ಲಾ ಮುಂದೂ ಇರೋದಿಲ್ಲ.

ಡಬ್ಬಿಂಗ್ನಿಂದ ಕನ್ನಡ ಸಿನೆಮಾಕ್ಕೆ ಥೀಯಟರ್ಗಳೇ ಸಿಕ್ಕುವುದಿಲ್ಲ : ಕರ್ನಾಟಕದಲ್ಲಿ ಒಟ್ಟು 540 ಚಿತ್ರಮಂದಿರಗಳಿವೆ. ಅದರಲ್ಲಿ ಕನ್ನಡ ಸಿನೆಮಾ ಪ್ರದರ್ಶನಮಾಡುತ್ತಿರುವ ಚಿತ್ರಮಂದಿರಗಳು ಕೇವಲ 240. ಇನ್ನು ಉಳಿದ ಥೀಯಟರ್ಗಳಲ್ಲಿ ಅನ್ಯ ಭಾಷೆಯ ಸಿನೆಮಾಗಳೇ ಪ್ರದರ್ಶನಗೊಳ್ಳುತ್ತಿವೆ. ಹೀಗಾಗಿ ಡಬ್ಬಿಂಗ್ ಮಾಡಿದ ಸಿನೆಮಾಗಳು ಬಂದರೆ ಕನ್ನಡ ಸಿನೆಮಾ ತೋರಿಸುವ 240 ಚಿತ್ರಮಂದಿರಗಳಲ್ಲೇ ಡಬ್ ಆದ ಪರಭಾಷೆ ಸಿನೆಮಾಗಳು ಪ್ರದರ್ಶನಗೊಳ್ಳುತ್ತವೆ. ಇರುವ ಸಿನೆಮಾ ಚಿತ್ರಮಂದಿರಗಳನ್ನೂ ಕಳೆದುಕೊಳ್ಳಬೇಕಾಗುತ್ತವೆ. ಎಲ್ಲಾ ಕಡೆ ಕನ್ನಡಕ್ಕೆ ಡಬ್ ಆದ ಅನ್ಯ ಭಾಷೆಯ ಸಿನೆಮಾಗಳೇ ಮೆರೆಯುತ್ತವೆ.  ಇಲ್ಲೇ ಶೇಷಾದ್ರಿಪುರದಲ್ಲಿರುವ ನಟರಾಜ ಚಿತ್ರಮಂದಿರದಲ್ಲಿ ಕನ್ನಡ ಚಿತ್ರಗಳು ಎಂದೂ ನಡೆಯುವುದಿಲ್ಲ. ಮುಂಗಾರು ಮಳೆ ಸಿನೆಮಾ ಅಲ್ಲಿ ಬಿಡುಗಡೆಯಾಗಿತ್ತಾದರೂ ನಡೆಯಲೇ ಇಲ್ಲ. ಯಾಕೆಂದರೆ ಸುತ್ತ ಮುತ್ತ ತಮಿಳರೆ ಹೆಚ್ಚಾಗಿದ್ದಾರೆ. ನಗರ್ತಪೇಟೆಯ ವರ್ತಕರು ತೆಲುಗರಾಗಿದ್ದರಿಂದ ಮೂವಿಲ್ಯಾಂಡ್ ಚಿತ್ರಮಂದಿರದಲ್ಲಿ ತೆಲುಗು ಸಿನೆಮಾ ಮಾತ್ರ ಪ್ರದರ್ಶಿಸಲಾಗುತ್ತದೆ. ಅದೇ ರೀತಿ ಅಭಿನಯ ಥೀಯಟರ್ ಸುತ್ತ ಮುತ್ತಲೂ ಸಿಂಧಿ ಗುಜರಾತಿ ಮಾರವಾಡಿ ವ್ಯಾಪಾರಿಗಳು ಹೆಚ್ಚಾಗಿರುವುದರಿಂದ ಹಿಂದಿ ಸಿನೆಮಾಗಳು ಮಾತ್ರ ನಡೆಯುತ್ತವೆ. ಹಾಗೂ ತಮಿಳು ಹಿಂದಿ ಸಿನೆಮಾಗಳಿಗೆ ಹೆಚ್ಚು ಹಣ ಖರ್ಚು ಮಾಡುವ ಶಕ್ತಿ ಇದೆ. ಸಿನೆಮಾಗಳು ಗ್ಲಾಮರಸ್ ಆಗಿರುತ್ತವೆ ಆದ್ದರಿಂದ ಬೇರೆ ಭಾಷೆಯವರೂ ಸಹ ಅಂತಹ ಸಿನೆಮಾಗಳನ್ನು ನೋಡಿ ಖುಷಿಪಡುತ್ತಾರೆ.

ಝಿ ಕನ್ನಡ ವಾಹಿನಿ ವಿರುದ್ಧದ ಹೋರಾಟ : ಝಿ ಕನ್ನಡ ವಾಹಿನಿಯಲ್ಲಿ ಝಾನ್ಸಿ ರಾಣಿ ದಾರಾವಾಹಿಯನ್ನು ನಿರೂಪನೆಯೊಂದಿಗೆ ತೋರಿಸಲು ಪ್ರಯತ್ನಿಸಿದರು. ಅದನ್ನು ವಿರೋಧಿಸಲಾಯ್ತು. ಯಾಕೆಂದರೆ ಝಿ ಕನ್ನಡ ವಾಹಿನಿ ಕೇವಲ ಕನ್ನಡ ಭಾಷೆಗಾಗಿ ಲೈಸನ್ಸ್ ಪಡೆದಿದೆ. ಆದರೆ ಯಾವಾಗ ಹಿಂದಿ ದಾರಾವಾಹಿಯೊಂದನ್ನು ಕನ್ನಡ ಚಾನೆಲ್ನಲ್ಲಿ ತೋರಿಸುವ ಪ್ರಯತ್ನ ಮಾಡಿದರೋ ಆಗ ವಿರೋಧಿಸಿದೆವು. ಇನ್ನೂರಕ್ಕೂ ಹೆಚ್ಚು ಎಪಿಸೋಡ್ ಇರುವ ಝಾನ್ಸಿರಾಣಿಯನ್ನು ಹದಿಮೂರು ಎಪಿಸೋಡಿನಲ್ಲಿ ಕನ್ನಡದಲ್ಲಿ ಪ್ರಸಾರಮಾಡಲು ತಯಾರಿ ಮಾಡಿಕೊಂಡು ಅದಕ್ಕೆ ಸಾಕ್ಷಚಿತ್ರವೊಂದನ್ನು ಪ್ರದರ್ಶನ ಮಾಡ್ತಿದ್ದೇವೆ ಎಂದು ಹೇಳಿದ್ದರು. ಆದರೆ ಝೀ ಹಿಂದಿ ಚಾನೆಲ್ನಲ್ಲಿ ಬಂದ ಝಾನ್ಸಿರಾಣಿ ದಾರಾವಾಹಿಯ ತುಣುಕುಗಳನ್ನ ಇಟ್ಟುಕೊಂಡು,  ಮನರಂಜನೆಗಾಗಿ ಮಾಡಿದ ದಾರಾವಾಹಿಯನ್ನು ಸಾಕ್ಷಚಿತ್ರ ಎಂದು ತೋರಿಸುವುದು ಕನ್ನಡಿಗರಿಗೆ ಮಾಡುವ ಮೋಸ ಎಂದು ನಾವು ಹೋರಾಟ ಮಾಡಿದೆವು. ಹೋರಾಟ ಸರಿಯಾಗೇ ಇತ್ತು. ಆದರೆ ವಾಹಿನಿಯ ಮುಖ್ಯಸ್ತರು ನೀವೇನು ಕಿತ್ತಕೋತಿರಿ ನಮ್ಮತ್ರ ಎಂದು ದಮಕಿ ಹಾಕುವ ಹಾಗೆ ಮಾತಾಡಿದರು. ತಿಳುವಳಿಕೆ ಇದ್ದ ನಾವು ತಡಕೊಂಡಿದ್ವಿ. ಆದರೆ ನಮ್ಮ ಹಿಂದೆ ಇದ್ದ ಕಾರ್ಮಿಕರು ತಡೆದುಕೊಳ್ಳದೇ ಆಕ್ರೋಶಕ್ಕೊಳಗಾಗಿ ಕಲ್ಲು ಹೊಡೆದರು. ಚಾನೆಲ್ನವರು ಕಂಪ್ಲೆಂಟ್ ಕೊಟ್ಟು ಕೇಸ್ ಹಾಕಿದರು. ಎಲ್ಲಾ ಗಲಾಟೆ ಆಯ್ತು. ನಮ್ಮವರನ್ನು ನಾವು ರಕ್ಷಿಸಲೇ ಬೇಕಾಗಿತ್ತು. ಹೀಗಾಗಿ ಟಿವಿ ಅಸೋಸಿಯೇಶನ್ನಿನ ಅಧ್ಯಕ್ಷ ರವಿಕಿರಣ್ ಮೊದಲನೇ ಆರೋಪಿಯಾದರೆ, ಕಾರ್ಯದರ್ಶಿ ಸಂಜೀವ್ ತಗಡೂರ್ 2ನೇ ಅರೋಪಿಯಾದರು, 3 ನೇ ಆರೋಪಿ ನಾನೇ. ಇವತ್ತಿನವರೆಗೂ ನಮಗೆ ಬಿ ರಿಪೋರ್ಟ ಕೊಟ್ಟಿಲ್ಲ. ಆದರೆ ನಮಗೆ ನಾವು ಕೇಸನ್ನು ಮುಂದು ವರೆಸುವುದಿಲ್ಲಾ ಅಂತ ಲಿಖಿತವಾಗಿ ಬರೆದು ಕೊಟ್ಟಿದ್ದಾರೆ. ಆದರೆ ಪೋಲೀಸರಿಗೆ ಬರೆದು ಕೊಟ್ಟಿಲ್ಲ. ಎಂತಾ ಕಳ್ಳರಿರುತ್ತಾರೆ ನೋಡಿ. ಇದರ ಹಿನ್ನೆಲೆ ಹೀಗಿದೆ. 2012 ಮಾರ್ಚನಲ್ಲಿ ನಮಗೆ ಸುದ್ದಿ ಗೊತ್ತಾದ ತಕ್ಷಣ ಹೋಗಿ ಚಾನೆಲ್ನವರಿಗೆ ಪ್ರಸಾರ ಮಾಡಬೇಡಿ ಎಂದು ಮನವಿ ಮಾಡಿಕೊಂಡೆವು. ನಂತರ ಮೇ ವರೆಗೂ ಆರು ಸಲ ಸಭೆಗಳಾಗಿವೆ. ಮೇ ಆರರಂದು ಗೌತಮ ಮಾಚಯ್ಯ ಎನ್ನುವ ಝಿ ವಾಹಿನಿಯ ಮುಖ್ಯಸ್ಥ ನಮಗೆ ಉದ್ದೇಶಿತ ಕಾರ್ಯಕ್ರಮವನ್ನ ಪ್ರಸಾರ ಮಾಡುವುದಿಲ್ಲ ಎಂದು ಲಿಖಿತವಾಗಿ ಬರೆದು ಕೊಡುತ್ತಾರೆ. ಮುಂದೆ ಆಗಸ್ಟ 15 ರಜಾ ದಿನ ಯಾರಿಗೂ ಗೊತ್ತಾಗದ ಹಾಗೆ ಬೆಳಿಗ್ಗೆ ಪ್ರೋಮೊ ಹಾಕಿ 10 ಗಂಟೆಗೆ ನಾವು ಪ್ರಸಾರ ಮಾಡುತ್ತೇವೆ ಎಂದು ವಾಹಿನಿಯಲಿ ಬಿತ್ತರಿಸಿದರು. ಅವತ್ತು ದ್ವಜ ಹಾರಿಸಿದ ನಂತರ ನಾವೆಲ್ಲಾ ಸಂಘದವರು ಹೋಗಿ ವಾಹಿನಿಯ ಮುಂದೆ ಪ್ರತಿಭಟಿಸಿದೆವು. ಆಗ ದಾಂದಲೆಯೂ ಆಯಿತು.  ಟಿವಿ ವಾಹಿನಿಯವರಿಗೆ ಟಿಆರ್ಪಿ ಮುಖ್ಯವಾಗಿರಲಿಲ್ಲ, ಜನ ನೋಡಲಿ ಎನ್ನುವುದೂ ಮುಖ್ಯ ಆಗಿರಲಿಲ್ಲ. ಒಂದು ಪ್ರಿಸಿಡೆಂಟ್ ಸೆಟ್ ಮಾಡುವುದು ಮಾತ್ರ ಬೇಕಾಗಿತ್ತು. ಹೀಗೊಂದು ಮಾದರಿಯನ್ನು ಸೆಟ್ ಮಾಡಿಬಿಟ್ಟರೆ ಮುಂದೆ ಕೋರ್ಟಿಗೆ ಹೋದರೂ ಗೆಲ್ಲಬಹುದು ಎನ್ನುವ ಇರಾದೆ ಅವರದು. ಇಂತಾ ಕಳ್ಳರಿಗೆ ಕಲ್ಲು ಹೊಡಿಯೋದೆ ಸೂಕ್ತ. ಆದರೆ ಚಾನೆಲ್ ವಿರುದ್ದದ ಹೊರಾಟವನ್ನು ಪತ್ರಿಕೆಯವರು ಡಬ್ಬಿಂಗ್ ವಿರುದ್ಧದ ಹೋರಾಟ ಅಂತಾ ಬರೆದರು. ಇದು ಕೂಡಾ ಚಾನೆಲ್ನವರ ರಾಜಕೀಯವಾಗಿತ್ತು. ಆದರೆ ಅದು ಡಬ್ಬಿಂಗ್ ವಿರುದ್ದ ಹೋರಾಟವಾಗಿರಲಿಲ್ಲ. ಕನ್ನಡ ವಾಹಿನಿಯಲ್ಲಿ ಹಿಂದಿ ಯಾಕೆ ಬಂತು ಎನ್ನುವುದರ ವಿರುದ್ಧದ ಪ್ರತಿಭಟನೆಯಾಗಿತ್ತು. ಅದರಲ್ಲಿ ನಮ್ಮ ಹೋರಾಟ ಯಶಸ್ವಿಯಾಯಿತು.

ಟಿವಿ ಬಂದಾದರೆ ಸಿನೆಮಾಕ್ಕೆ ಕುತ್ತು : ಇವತ್ತು ಸಿನೆಮಾ ತಯಾರಿ ಮಾಡುವ ಪ್ರತಿಯೊಬ್ಬ ನಿರ್ಮಾಪಕನೂ
ಟಿವಿಯಿಂದಲೇ ಶೇಕಡಾ ಐವತ್ತರಷ್ಟು ದುಡ್ಡು ಬರಲಿ ಎಂದು ಬಯಸುತ್ತಾನೆ. ಒಂದು ಕೋಟಿ ಬಂಡವಾಳದಲ್ಲಿ ಸಿನೆಮಾ ಮಾಡುವವನೂ ಸಹ ಐವತ್ತು ಲಕ್ಷನಾದರೂ ಟಿವಿಯಿಂದ ಸಿಗಲಿ ಎಂದೇ ಅಪೇಕ್ಷಿಸುತ್ತಾನೆ. ಡಬ್ಬಿಂಗ್ ನೇರವಾಗಿ ಕನ್ನಡ ಸಿನೆಮಾಗೆ ಏನೂ ಮಾಡದೇ ಇರಬಹುದು ಆದರೆ ಕನ್ನಡ ಟಿವಿ ಲೋಕವನ್ನು ಸಮಾಧಿ ಮಾಡಿಬಿಡುತ್ತದೆ. ಆಗ ವಾಹಿನಿಗಳು ಕನ್ನಡ ಸಿನೆಮಾಗಳನ್ನು ಕೊಂಡುಕೊಳ್ಳುವುದು ಕಡಿಮೆಯಾಗುತ್ತದೆ. ಈಗಾಗಲೇ ಯುಟಿವಿ ಮೂವಿ, ಯೂಟಿವಿ ಆಕ್ಷನ್ ಚಾನೆಲ್ಗಳನ್ನು ಗಮನಿಸಿದಾಗ ಅಲ್ಲಿ ಒರಿಜಿನಲ್ ಸಿನೆಮಾಗಳಿಗಿಂತ ಡಬ್ಬಿಂಗ್ ಆದ ಸಿನೆಮಾಗಳೇ ಹೆಚ್ಚು ಪ್ರಸಾರ ಆಗುತ್ತಿವೆ. ಒಂದು ದಿನಕ್ಕೆ ಪ್ರಸಾರವಾಗುವ ಹನ್ನೆರಡು ಸಿನೆಮಾಗಳಲ್ಲಿ ಹತ್ತು ಸಿನೆಮಾಗಳು ಡಬ್ ಮಾಡಿದವೇ ಆಗಿರುತ್ತವೆ. ಮಾ ಟಿವಿ ಎನ್ನುವ ತೆಲಗು ಚಾನೆಲ್ನಲ್ಲಿ ಒಂದೂ ಒರಿಜಿನಲ್ ಕಾರ್ಯಕ್ರಮಗಳಿಲ್ಲ. ಚಾನೆಲ್ನ್ನು ನಡೆಸ್ತಾ ಇರೋದೇ ಆಂದ್ರದ ಇಬ್ಬರು ದೊಡ್ಡ ಸ್ಟಾರ್ ನಟರು. ಅವರು ಒಂದೂ ತೆಲುಗು ಸಿನೆಮಾಗಳನ್ನು ಕೊಂಡುಕೊಳ್ಳುವುದೇ ಇಲ್ಲ. ಟೆಲಿವಿಜನ್ ವಾಹಿನಿಗಳು ಅತೀ ಕಡಿಮೆ ದುಡ್ಡಲ್ಲಿ ಸಿನೆಮಾಗಳು ದೊರಕಲಿ ಎನ್ನುವ ಉದ್ದೇಶದಿಂದ ಡಬ್ಬಿಂಗ್ ಬರಲಿ ಎಂದು ಬಯಸುತ್ತವೆ. ಕನ್ನಡದ ಸಿನೆಮಾ ನಿರ್ಮಾಪಕರಿಗೆ ಟಿವಿ ಹಕ್ಕುಗಳ ಮಾರಾಟದಿಂದ ಹಣ ಬರುತ್ತದೆ. ಟಿವಿಯಲ್ಲಿ ಕನ್ನಡ ಸಿನೆಮಾಗಳಿಗೆ ಬೇಡಿಕೆ ಕುಗ್ಗಿದರೆ ಕನ್ನಡ ಸಿನೆಮಾಗಳ ಮಾರುಕಟ್ಟೆ ಕುಗ್ಗುತ್ತದೆ.

ಮಲ್ಟಿಪ್ಲೆಕ್ಸಗಳಲ್ಲಿ ಕನ್ನಡ ಸಿನೆಮಾಗಳಿಗೆಲ್ಲಿ ಅವಕಾಶ? : ಡಬ್ ಆದ ಎಲ್ಲಾ ಸಿನೆಮಾಗಳು ಕನ್ನಡಕ್ಕೆ ಮೀಸಲಾದ 240 ಚಿತ್ರಮಂದಿರಗಳನ್ನೇ ಬಳಸಿಕೊಳ್ಳುತ್ತವೆಯೇ ಹೊರತು ಅನ್ಯ ಭಾಷೆಗಳನ್ನು ಪ್ರದರ್ಶಿಸುವ ಥೀಯಟರಗಳಿಗೆ ಬರುವುದಿಲ್ಲ. ಉದಾಹರಣೆಗೆ ಮಂತ್ರಿಮಾಲ್ನಲ್ಲಿರುವ ಮಲ್ಟಿಪ್ಲೆಕ್ಸನ ಆರು ಸ್ಕ್ರೀನ್ಗಳಲಿ ಒಂದು ಸ್ಕ್ರೀನ್ನಲ್ಲಿ ರಜನಿಕಾಂತ ಅಭಿನಯದ ತಮಿಳು ಚಿತ್ರ, ಇನ್ನೊಂದು ಸ್ಕ್ರೀನ್ನಲ್ಲಿ ಅದೇ ರಜನೀಕಾಂತ್ ಅಭಿನಯದ ತೆಲುಗು ಡಬ್ ಆದ ಚಿತ್ರ, ಮತ್ತೂ ಒಂದು ಸ್ಕ್ರೀನ್ಲ್ಲಿ ಅದೇ ರಜನೀಕಾಂತ ಅಭಿನಯದ ಕನ್ನಡ ಭಾಷೆಯ ಡಬ್ ಚಿತ್ರ  ಪ್ರದರ್ಶನಗೊಳ್ಳುತ್ತದೆ. ಈಗಿನ ಹಾಗೆ ಆರು ಸ್ಕ್ರೀನ್ಗಳಲ್ಲಿ ಮೂರು ಸ್ಕ್ರೀನ್ಲ್ಲಿ ಕನ್ನಡದ ಚಿತ್ರ ಪ್ರದರ್ಶನ ಇರುವುದಿಲ್ಲ. ವಿಶೇಷವಾಗಿ ಮಾಲ್ಗಳಲ್ಲಿರುವ ಮಲ್ಟಿಪ್ಲೆಕ್ಸ್ಗಳಲ್ಲಿ ಕನ್ನಡ ಸಿನೆಮಾಗಳಿಗೆ ಬೆಂಬಲವೇ ಇಲ್ಲ. ಕೋರಮಂಗಲದ ಮಾಲ್ನಲ್ಲಿರುವ ಪಿವಿಆರ್ ಮಲ್ಟಿಪ್ಲೆಕ್ಸ್ಗೆ ನೇರವಾಗಿ ಹೋಗಿ ಕಲ್ಲು ಹೊಡೆದ ಮೇಲೆ ಈಗ ಒಂದಿಷ್ಟಾದರೂ ಕನ್ನಡ ಸಿನೆಮಾಗಳಿಗೆ ಅವಕಾಶ ಸಿಗುವಂತಾಗಿದೆ. ಮಲ್ಟಿಪ್ಲೆಕ್ಸಗಳಿಗೆ ಭಾಷೆ ಮುಖ್ಯವಾಗುವುದಿಲ್ಲ ಕೇವಲ ಹಣ ಗಳಿಸುವುದು ಮಾತ್ರ ಮುಖ್ಯ. ಹೀಗಾಗಿ ಯಾವ ಭಾಷೆಯ ಸಿನೆಮಾಗಳು ಹಣ ತಂದುಕೊಡುತ್ತವೆಯೋ ಅಂತಹ ಭಾಷೆಯ ಸಿನೆಮಾಗಳನ್ನು ಮಾತ್ರ ಅವು ಪ್ರದರ್ಶಿಸುತ್ತವೆ. ಕನ್ನಡ ಸಿನೆಮಾಗಳೂ ಸಹ ದುಡ್ಡು ಮಾಡುತ್ತವೆ ಎಂದಾದರೆ ಅವುಗಳನ್ನೂ ಪ್ರದರ್ಶಿಸುತ್ತವೆ. ಉದಾಹರಣೆಗೆ ಸಿಂಪಲ್ಲಾಗಿ ಒಂದು ಲವ್ ಸ್ಟೋರಿ ಹಾಗೂ ಲೂಸಿಯಾ ಸಿನೆಮಾಗಳಿಗೆ ಎರಡು ಸ್ಕ್ರೀನ್ ಕೊಟ್ಟವರು ನಂತರ ಜನ ನೋಡುತ್ತಿದ್ದಂತೆ ನಾಲ್ಕು ಸ್ಕ್ರೀನ್ ಬಿಟ್ಟು ಕೊಟ್ಟರು. ನನ್ನ ನಾನು ನನ್ನ ಕನಸು ಸಿನೆಮಾ ನಾಲ್ಕು ಮಾಲ್ಗಳಲ್ಲಿ 154 ದಿನ ನಡೆಯಿತು. ದುಡ್ಡು ಮಾಡಿದರೆ ಸಿನೆಮಾ ಉಳಿಸಿಕೊಳ್ತಾರೆ, ದುಡ್ಡು ಗಿಟ್ಟದೇ ಹೋದರೆ ಅಂತಹ ಸಿನೆಮಾಗಳು ಅಲ್ಲಿ ನಿಲ್ಲೋದಿಲ್ಲ. ನಮ್ಮಲ್ಲೂ ಎಷ್ಟು ಒಳ್ಳೆಯ ಸಿನೆಮಾಗಳು ಬಂದಿದ್ದಾವೋ ಅದಕ್ಕಿಂತ ಹೆಚ್ಚು ಕೆಟ್ಟ ಸಿನೆಮಾಗಳು ಬಂದಿದ್ದಾವೆ. ಕೆಟ್ಟ ಸಿನೆಮಾಗಳು ಮಾಲ್ಗಳಲ್ಲಿ ಒಂದೇ ಶೋಗೆ ಹೊರಹೋಗಿವೆ. ತಲ್ಲಣ ಎನ್ನುವ ಒಳ್ಳೆಯ ಸಿನೆಮಾಕ್ಕೆ ಏಳು ಪ್ರದರ್ಶನ ಕೊಡಿ ಎಂದು ಹೋರಾಟ ಮಾಡಬೇಕಾಯಿತು. ಏಳು ಶೋಗಳಿಂದ ಬಂದ ಹಣ ಥೀಯಟರ್ ಬಾಡಿಗೆಯನ್ನೂ ಕೊಡಲು ಸಾಕಾಗಲಿಲ್ಲ. ಶೇಕಡಾ 35 ಹೋಲ್ಡವೋವರ್ ಕ್ಯಪಾಸಿಟಿಯನ್ನು ಮುಟ್ಟದಿದ್ದರೆ ಸಿನೆಮಾಗಳು ಪ್ರದರ್ಶನಗೊಳ್ಳುವುದಿಲ್ಲ. ಗಿರೀಶ್ ಕಾಸರವಳ್ಳಿಯವರ ಕೂರ್ಮಾವತಾರವೂ ಒಂದೇ ವಾರ ನಡೆದದ್ದು, ಅದೂ ರಾಷ್ಟ್ರಪ್ರಶಸ್ತಿ ಪಡೆದ ಸಿನೆಮಾ ಎನ್ನುವ ರಿಕ್ವೆಸ್ಟ ಮೇಲೆ. ನಮ್ಮ ಕನ್ನಡಿಗರನ್ನು ಕನ್ನಡ ಸಿನೆಮಾಗಳ ಬಗ್ಗೆ ಖಾಸಗಿಯಾಗಿ ಕೇಳಿ ಥೂ ಡಬ್ಬಾ ಸಿನೆಮಾ ತಗೀತಾರೆ ಗುರು, ಬರೀ ರಿಮೇಕೆ ಮಾಡ್ತಾರೆ, ಗುರು ಎನ್ನುತ್ತಾರೆ. ನನ್ನನ್ನೆ ಕೇಳಿದರೂ ನಾನು ಹಾಗೇ ಹೇಳುತ್ತೇನೆ. ಇದು ವಾಸ್ತವ. ಹೀಗಾಗಿ ಇಂದು ಕರ್ನಾಟಕದಲ್ಲಿರುವ ಆರು ಕೋಟಿ ಜನರಲ್ಲಿ ಕನ್ನಡ ಸಿನೆಮಾ ನೋಡುವ ಜನ ಕೇವಲ ಹತ್ತು ಲಕ್ಷ ಜನ. ಅತ್ಯಂತ ಯಶಸ್ವಿ ಸಿನೆಮಾ ಆದರೆ ಐವತ್ತು ಲಕ್ಷ ಜನ ನೋಡಬಹುದು. ಹತ್ತು ಲಕ್ಷ ಜನ ನೋಡಿದರೂ ಅದು ಸುಪರ್ ಹಿಟ್ ಸಿನೆಮಾ ಎಂದೇ ಲೆಕ್ಕ. ಆರು ಕೋಟಿ ಜನರು ನೋಡಲು ಮಾಡಿದ ಸಿನೆಮಾವನ್ನು ಹತ್ತುಲಕ್ಷ ಜನ ನೋಡಿದಾಗ ಅದನ್ನು ಸುಪರ್ ಹಿಟ್ ಸಿನೆಮಾ ಎಂದು  ಹೇಳುವುದು ಇಂದಿನ ಪರಿಸ್ಥಿತಿ. ದುಸ್ಥಿತಿಗೆ ಕಾರಣ ನಾವೆಲ್ಲರೂ ಆಗಿದ್ದೇವೆ.

ಡಬ್ಬಿಂಗ್ಗೆ ಸಮ್ಮತಿಸಿದರೆ ಸರ್ವನಾಶ : ಮನೆಯಲ್ಲೇ ಡಬ್ಬಿಂಗ್ ಸಿನೆಮಾ ನೋಡದವರು ಥೀಯಟರ್ಗೆ ಹೋಗಿ ಅಂತಹ ಸಿನೆಮಾ ನೋಡ್ತಾರಾ? ಡಬ್ಬಿಂಗ್ ಬರಲಿ ಬಿಡಿ, ಬಂದರೆ ತನ್ನಿಂದ ತಾನೆ ಸತ್ತುಹೋಗುತ್ತೆ ಎನ್ನುವ ವಾದವಿದೆ. ಆದರೆ ಮನೆಗೆ ಬಂದ ಒಂಟೆಯನ್ನು ಮತ್ತೆ ಆಚೆ ಕಳಿಸಲು ಸಾಧ್ಯವಿಲ್ಲ. ಅದು ಇಡೀ ಮನೆಯನ್ನೇ ಆಕ್ರಮಿಸಿಕೊಂಡು ಮನೆಯವರನ್ನೇ ಆಚೆಗೆ ಹಾಕುತ್ತದೆ. ಹಾಗೆ ಬಂದ ಡಬ್ಬಿಂಗ್ ಸಾಯೋದನ್ನ ಕಾಯೋಕ್ಕೆ ನಾನೂ ಇರೋದಿಲ್ಲ ಪ್ರಾಯಶಃ ನೀವೂ ಇರುವುದಿಲ್ಲ. ಆಗ ಇನ್ನೊಬ್ಬ ರಾಜಕುಮಾರ್ ಬರಬೇಕು, ಇನ್ನೊಬ್ಬ ಅನ ಕೃಷ್ಣರಾಯರು ಇರಬೇಕು ಮತ್ತೆ ಹೋರಾಟ ಮಾಡಬೇಕು. ಆದರೆ ಅಷ್ಟು ದೊಡ್ಡ ಸಾಂಸ್ಕೃತಿಕ ನಾಯಕರು ಇಂದು ನಮ್ಮಲ್ಲಿ ಇಲ್ಲ. ಇಡೀ ದೇಶದಲ್ಲಿ ಲೀಡರ್ಗಳ ಕೊರತೆ ಇದೆ. ಕರ್ನಾಟಕದಲ್ಲೂ ಪರಿಸ್ಥಿತಿ ಹಾಗೆಯೇ ಇದೆ. ಇದು ಜಾಗತೀಕರಣದಿಂದಾದ ಪರಿಣಾಮ. ಗ್ಲೋಬಲೈಜೇಶನ್ ಒಂದು ದೇಶವನ್ನು ಒಂದಾಗಿ ಇರೋಕೆ ಬಿಡೋದಿಲ್ಲ. ಟ್ರೇಡ್ ಯೂನಿಯನ್ಗಳು ಒಟ್ಟಿಗೆ ಇರೋಕೆ ಬಿಡೋದಿಲ್ಲ. ದಲಿತ ಸಂಘಟನೆಗಳು ಒಂದಿದ್ದದ್ದು ಹದಿನಾರಾಗಿವೆ. ಹೀಗೆ ನಮ್ಮ ಸಂಘಟನೆಗಳಲ್ಲೆ ಒಗ್ಗಟ್ಟಿಲ್ಲದಿರುವಾಗ ಡಬ್ಬಿಂಗ್ ಎನ್ನುವ ಕಾಯಿಲೆಯನ್ನು ಒಳಗೆ ಬಿಟ್ಟುಕೊಂಡರೆ ಮತ್ತೆ ಆಚೆಗೆ ಕಳುಹಿಸಲೂ ಸಾಧ್ಯವಿಲ್ಲ.

ಸ್ವತಂತ್ರ ಕೃತಿಗಳಿಂದ ರಿಮೇಕ್ ಹಾವಳಿ ತಪ್ಪಿಸಬಹುದು.: ರಿಮೇಕ್ ಮಾಡುವುದೂ ಸಹ ತಪ್ಪೇ. ಸ್ವತಂತ್ರ ಕೃತಿಗಳು ಹೆಚ್ಚು ಯಶಸ್ವಿಯಾದಾಗ ರಿಮೇಕ್ ಕೃತಿಗಳು ತಾವೇ ಹಿನ್ನಡೆಯನ್ನು ಅನುಭವಿಸುತ್ತವೆ. ರಿಮೇಕ್ ಯಾಕೆ ಮಾಡ್ತಾರೆ?  ಪಕ್ಕದ ರಾಜ್ಯದಲ್ಲಿ ಹಿಟ್ ಆಗಿದೆ ಎಂದು ರಿಮೇಕ್ ಮಾಡಲಾಗುತ್ತದೆ. ಸ್ವಮೇಕ್ಗಳನ್ನೇ ಸುಪರ್ಹಿಟ್ ಆಗುವಂತೆ ಮಾಡಿದರೆ ಯಾರು ತಾನೆ ರಿಮೇಕ್ ಮಾಡಲು ಬಯಸ್ತಾರೆ. ಉತ್ತಮ ಸ್ವತಂತ್ರ ಕೃತಿಗಳನ್ನು ಕನ್ನಡಿಗರು ಬೆಂಬಲಿಸಿ ಯಶಸ್ಸು ಮಾಡಿದ್ದರೆ ನಿರ್ಮಾಪಕ ಬೇರೆ ಭಾಷೆಯಿಂದ ಯಾಕೆ ಯರವಲು ತರುತ್ತಿದ್ದ. ಓರಿಜಿನಲ್ ಕಥೆ ಮಾಡಿದಾಗ ಜನ ನೋಡದಿದ್ದಾಗ ಅನಿವಾರ್ಯವಾಗಿ ರಿಮೇಕ್ ಮಾಡಲು ಪ್ರಯತ್ನಿಸುತ್ತಾರೆ. ಒಂದು ವೇಳೆ ರಿಮೇಕನ್ನಾದರೂ ಸಹಿಸಿಕೊಳ್ಳಬಹುದು ಆದರೆ ಡಬ್ಬಿಂಗ್ ಬಂದರೆ ಇಲ್ಲಿ ಯಾರಿಗೂ ಕೆಲಸ ಇಲ್ಲದಂತಾಗಿ ಎಲ್ಲಾ ಕಂಠದಾನ ಕಲಾವಿದರಾಗಬೇಕಾಗುತ್ತದಷ್ಟೆ. ಹಾಗಂತ ರಿಮೇಕನ್ನು ಒಪ್ಪಿಕೋಬೇಕು ಎನ್ನುವುದು ನನ್ನ ಆಶಯವಲ್ಲ. ರಿಮೇಕ್ ವಿರುದ್ದ ಹೋರಾಡ ಬೇಕೆಂದರೆ ಸ್ವತಂತ್ರ ಕೃತಿಗಳನ್ನು ಜನಮೆಚ್ಚುವಂತೆ ಮಾಡಿ ಗೆಲ್ಲಿಸಬೇಕು. ಇನ್ನೂ ಹೆಚ್ಚಿಗೆ ಬಂಗಾರದ ಮನುಷ್ಯ, ಬೂತಯ್ಯನ ಮಗ ಅಯ್ಯ, ಮುಂಗಾರುಮಳೆಯಂತಹ ಯಶಸ್ವಿ ಸಿನೆಮಾಗಳು ಬರಲಿ. ಆಗ ರಿಮೇಕ್ ನಿಲ್ಲುತ್ತದೆ.     

ಕೊನೆಯದಾಗಿ, ಡಬ್ಬಿಂಗ್ ಬಂದರೆ ಕನ್ನಡ ಉಳಿಯುವುದಿಲ್ಲ ಅನ್ನುವುದು ಮೊದಲನೆ ಸತ್ಯ, ಡಬ್ಬಿಂಗ್ ಎನ್ನುವುದೊಂದು ವಿಕೃತಿ ಎನ್ನುವುದು ಎರಡನೇ ಸತ್ಯ, ಅದೊಂದು ಭಗ್ನಗೊಂಡ ವಿಗ್ರಹ ಎನ್ನುವುದು ಮೂರನೆಯ ಸತ್ಯ. ಹಿನ್ನೆಲೆಯಲ್ಲಿ ಎಲ್ಲರೂ ಡಬ್ಬಿಂಗನ್ನು ವಿರೋಧಿಸಬೇಕಾದದ್ದು ತುಂಬಾ ಅಗತ್ಯವೆನ್ನುವುದು ಅಂತಿಮ ಸತ್ಯ.





                                 -ಶಶಿಕಾಂತ ಯಡಹಳ್ಳಿ  (ಅಕ್ಷರ ರೂಪಕ್ಕೆ)