ಶುಕ್ರವಾರ, ನವೆಂಬರ್ 1, 2013

‘ದಿ ಗುಡ್ ರೋಡ್’ ಆಸ್ಕರ್‌ನತ್ತ ಪಯಣ







-ಶಶಿಕಾಂತ ಯಡಹಳ್ಳಿ




 ದಿ ಗುಡ್ ರೋಡ್ ಆಸ್ಕರ್ನತ್ತ ಪಯಣ                    


ಸಿನೆಮಾದ ಹಿಂದೆ ಸಿಕ್ಕಾಪಟ್ಟೆ ಶ್ರಮ ಇತ್ತು, ಅನುಪಮವಾದ ಕ್ರಿಯಾಶೀಲತೆ ಇತ್ತು. ಸಮಾಜದ ಕುರಿತು ಕಳಕಳಿ ಇತ್ತು, ವ್ಯವಸ್ಥೆಯ ಬಗ್ಗೆ ತಣ್ಣನೆಯ ಆಕ್ರೋಶ ಇತ್ತು. ಇವೆಲ್ಲವೂ ಸೇರಿ ಇಂದು ಜಗತ್ತಿನಾದ್ಯಂತ ಸುದ್ದಿಯಾಯಿತು. ದೇಶಾದ್ಯಂತ ವಿವಿಧ ಭಾಷೆಗಳ ಇಪ್ಪತ್ತು ಸಿನೆಮಾಗಳ ತುರುಸಿನ ಸ್ಪರ್ಧೆಯಲ್ಲಿ ಗೆದ್ದು 2013 ವಿದೇಶಿ ವಿಭಾಗದ ಅತ್ಯುತ್ತಮ ಚಿತ್ರ ಪ್ರಶಸ್ತಿ ಆಸ್ಕರ್ ಸ್ಪರ್ಧೆಗೆ ಆಯ್ಕೆಯಾಯಿತು. ಅದು ದಿ ಗುಡ್ ರೋಡ್ ಸಿನೆಮಾ.
          ಕೇವಲ ೩೦ಲಕ್ಷದಲ್ಲಿ ತಯಾರಾದ ಕಡಿಮೆ ಬಜೆಟ್ ಕನ್ನಡದ ಲೂಸಿಯಾ ದಿಂದ ಹಿಡಿದು 30 ಕೋಟಿ ಬಜೆಟ್ ಸಂಗೊಳ್ಳಿ ರಾಯಣ್ಣ, ೩೫ಕೋಟಿ ಖರ್ಚು ಮಾಡಿ ತಯಾರಿಸಲಾದ ಭಾಗ್ ಮಿಲ್ಕಾ ಭಾಗ್, 50 ಕೋಟಿ ನುಂಗಿದ ಲಂಚ್ ಬಾಕ್ಸ.... ಹೀಗೆ ಕೋಟಿ ಕೋಟಿಗಳ ಲೆಕ್ಕದಲ್ಲಿ ತಯಾರಾದ ಸಿನೆಮಾಗಳನ್ನು ಹಾಗೂ ತಾಂತ್ರಿಕವಾಗಿ ಶ್ರೀಮಂತಿಕೆ ಹೊಂದಿದ ಚಲನಚಿತ್ರಗಳನ್ನು ಹಿಂದಿಕ್ಕಿ ಕೇವಲ 2 ಕೋಟಿ ಬಜೆಟ್ನಲ್ಲಿ ತಯಾರಾದ ದಿ ಗುಡ್ ರೋಡ್ ಆಸ್ಕರ್ಗೆ ಆಯ್ಕೆಯಾಯಿತು. ಬಾಲಿವುಡ್ ಸಾಮ್ರಾಜ್ಯವೇ ಹುಬ್ಬೇರಿಸಿತು. 
          ಸಿನೆಮಾ ತಯಾರಿಸಬೇಕು ಎಂದ ಕೂಡಲೇ ಸಂತೆ ಹೊತ್ತಿಗೆ ಮೂರು ಮೊಳ ನೇಯುವ, ಯಾರಾದರೂ ಹಣ ಹೂಡುವವರು ಸಿಕ್ಕರು ಎಂದ ತಕ್ಷಣ ರಿಮೇಕನ್ನೋ ಅಥವಾ ಹಲವು ಸಿನೆಮಾಗಳ ಕಿಚಡಿ ಮಾಡಿದಂತಹ ಸ್ವಮೇಕನ್ನೂ ಅವಸರದಲ್ಲಿ ತಯಾರಿಸುವ, ಯಾರಾದರೂ ಹೆಸರುವಾಸಿ ನಟ ನಟಿಯರ ಕಾಲ್ಶೀಟ್ ದೊರಕಿತೆಂದ ಕೂಡಲೇ ವ್ಯಕ್ತಿಕೇಂದ್ರಿತ ಕಥೆ ಕಟ್ಟಿ ರೀಲು ಸುತ್ತುವ ಭ್ರಹಸ್ಪತಿಗಳಿರೋದರಿಂದಲೇ ಕನ್ನಡ ಸಿನೆಮೋದ್ಯಮದ ಬಹುತೇಕ ಚಲನಚಿತ್ರಗಳು ಸೋತು ಹಳ್ಳಹಿಡಿಯುತ್ತಿವೆ. ಅಕಸ್ಮಾತ್ ಗೆದ್ದರೂ ಅವು ದೇಶಾದ್ಯಂತ ಸುದ್ದಿಯೂ ಆಗೋಲ್ಲ, ಆಸ್ಕರ್ಗೆ ಆಯ್ಕೆಯೂ ಆಗೋದಿಲ್ಲ. ಯಾಕೆ ಹೀಗೆ?
          ಏಕಾಗ್ರತೆ, ವೃತ್ತಿಪರತೆ, ಕ್ರಿಯಾಶೀಲತೆ, ಸಹನಶೀಲತೆ, ರಾಜಿರಹಿತ ಮನೋಭಾವನೆ. ಶ್ರಮ ಹಾಗೂ ಪ್ರತಿಭೆ ಮಾತ್ರ ಉತ್ತಮ ಸಿನೆಮಾವನ್ನು ಕಟ್ಟಿ ಕೊಡಲು ಸಾಧ್ಯ. ಇದಕ್ಕೆ ಸಾಕ್ಷಿ ಯುವ ನಿರ್ದೇಶಕ ಗ್ಯಾನ್ ಕೋರಿಯಾ. ತಮ್ಮ ಮೊಟ್ಟ ಮೊದಲ ನಿರ್ದೇಶನದ  ದಿ ಗುಡ್ ರೋಡ್ ಸಿನೆಮಾ ಮೂಲಕ ತಮ್ಮ ಪ್ರತಿಭೆಯನ್ನು ಸಾಬೀತುಗೊಳಿಸಿದ್ದಾರೆ

          ಸಿನೆಮಾ ಮಾಡಬೇಕು ಅನ್ನಿಸಿದಾಗ ಅವಸರಕ್ಕೆ ಬೀಳಲಿಲ್ಲ. ಅನಗತ್ಯ ಆತುರ ತೋರಲಿಲ್ಲ. ತನ್ನ ಜಾಹಿರಾತು ವಿಭಾಗದಿಂದ ಹೊರಬಿದ್ದು ಒಂದು ಟ್ರಕ್ ಹತ್ತಿ ಹೊರಟರು. ಸತತ 2 ವರ್ಷಗಳ ಕಾಲ ಸಾವಿರಾರು ಮೈಲುಗಳಷ್ಟು ದೂರ ಹೆದ್ದಾರಿ ಗುಂಟ ಅಧ್ಯಯನಕ್ಕಾಗಿಯೇ ಪಯಣ ಮಾಡಿದ್ದಾರೆ, ಹಾದಿಯುದ್ದಕ್ಕೂ ಜನರ ಬದುಕನ್ನು ಅರ್ಥೈಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ, ತಮ್ಮ ಸ್ಕ್ರಿಪ್ಟ್ಗೆ ಬೇಕಾದ ದೃಶ್ಯಗಳನ್ನು, ದೃಶ್ಯದೊಳಗಿನ ಪಾತ್ರಗಳನ್ನು ಹೆದ್ದಾರಿಗಳಿಂದಲೇ ಹೆಕ್ಕಿ ತೆಗೆದಿದ್ದಾರೆ. 500 ಕ್ಕೂ ಹೆಚ್ಚು ಜನರನ್ನು ತಮ್ಮ ಸಿನೆಮಾ ಪಾತ್ರಕ್ಕಾಗಿ ಆಡಿಶನ್ ಮಾಡಿದ್ದಾರೆ. ತಮ್ಮೆಲ್ಲಾ ಪ್ರಾಯೋಗಿಕ ಅನುಭವಗಳನ್ನು ಸಾಂದ್ರಗೊಳಿಸಿ ಸಿನೆಮಾ ರೂಪದಲ್ಲಿ ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ. ಮಾನವ ಸಂಬಂಧಗಳ ಮೌಲ್ಯಗಳನ್ನು ಮನಮಿಡಿಯುವಂತೆ ದೃಶ್ಯೀಕರಿಸಿದ್ದಾರೆ, 105 ದಿನಗಳ ಕಾಲ ಚಿತ್ರೀಕರಣ ನಡೆಸಿದ್ದಾರೆ. ಅದೂ ಗುಜರಾತಿ ಪ್ರಾದೇಶಿಕ ಭಾಷೆಯ ಮೂಲಕ. ಇನ್ನೊಂದು ವಿಶೇಷ ಅಂದರೆ ಗ್ಯಾನ್ ಕೋರಿಯಾಗೆ ಗುಜರಾತಿ ಭಾಷೆ ಮಾತಾಡೋಕೂ ಬರೋದಿಲ್ಲ. ಬಾರದ ಭಾಷೆಯಲ್ಲಿ ಸಿನೆಮಾ ತೆಗೆಯುವುದು ಅಷ್ಟೊಂದು ಸುಲಭವೂ ಅಲ್ಲ.
          ಇಂತಾದ್ದೊಂದು ಸಿನೆಮಾ ತಯಾರಿಸುತ್ತೇನೆ ಹಣ ಹೂಡಿ ಎಂದು ಕೇಳಿಕೊಂಡರೆ ನಕ್ಕವರೇ ಜಾಸ್ತಿ, ನಿರಾಕರಿಸಿದವರು ಇನ್ನೂ ಜಾಸ್ತಿ. ಆಗ ಸಿನೆಮಾ ನಿರ್ಮಾಣಕ್ಕೆ ಹಣ ತೊಡಗಿಸಲು ಗ್ಯಾನ್ರವರು ಕೇಳಿಕೊಂಡಿದ್ದು ನ್ಯಾಶನಲ್ ಫಿಲಂ ಡೆವೆಲಪ್ಮೆಂಟ್ ಕಾರ್ಪೊರೇಶನ್ (ಎನ್ಎಫ್ಡಿಸಿ) ಎಂಬ ಸರಕಾರಿ ಪ್ರಾಯೋಜಿತ ಸಂಸ್ಥೆಯ ಚೇರಮನ್ ರಮೇಶ್ ಸಿಪ್ಪಿಯವರನ್ನು. ತಮ್ಮ ಸ್ಕ್ರಿಪ್ಟನ್ನು ತೋರಿಸಿ ಎನ್ಎಫ್ಡಿಸಿ  ಯನ್ನು ಸಿನೆಮಾ ನಿರ್ಮಾಣಕ್ಕೆ ಹಣ ಹೂಡಲು ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಇಡೀ ಸಿನೆಮಾದ ಸ್ಕ್ರಿಪ್ಟ್ ವಿಶಿಷ್ಟವಾಗಿದೆ. ತನ್ನ ಕುಟುಂಬದ ಆರ್ಥಿಕ ಸಮಸ್ಯೆಯನ್ನು ನೀಗಿಸಲು ಪಪ್ಪು ಎನ್ನುವ ಟ್ರಕ್ ಚಾಲಕ ಜೀವವಿಮೆಯ ಹಣಕ್ಕಾಗಿ ಸುಳ್ಳು ಅಪಘಾತವನ್ನು ಸೃಷ್ಟಿಸುವ ಯೋಜನೆಯಲ್ಲಿರುತ್ತಾನೆ. ತಂದೆ ತಾಯಿಗಳೊಂದಿಗೆ ರಜೆಯ ಮೋಜಿಗಾಗಿ ಟ್ರಿಪ್ಗೆ ಬಂದು ತಪ್ಪಿಸಿಕೊಂಡ ಆದಿತ್ಯ ಎನ್ನುವ 7 ವರ್ಷದ ಬಾಲಕ ದಾಬಾದಲ್ಲಿ ಹೆತ್ತವರಿಂದ ದೂರವಾಗುತ್ತಾನೆ. ದಾಬಾದ ಮಾಲೀಕ ಹುಡುಗನನ್ನು ಪಪ್ಪುವಿನ ಟ್ರಕ್ನಲ್ಲಿ ಹಾಕುತ್ತಾನೆ. ಪೂನಂ ಎನ್ನುವ 11 ವರ್ಷದ ಬಾಲಕಿ ತನ್ನ ಅಜ್ಜಿಯನ್ನು ಹುಡುಕುತ್ತಾ ಟ್ರಕ್ ಏರುತ್ತಾಳೆ. ಪಪ್ಪು ಆಕೆಯನ್ನು ಬಟ್ಟೆಗೆ ಬಣ್ಣ ಹಾಕುವ ಕಾರ್ಖಾನೆ ಹತ್ತಿರ ಇಳಿಸುತ್ತಾನೆ. ಮುಂದೆ ನಡೆಯುವ ಅನಿರೀಕ್ಷಿತ ನಾಟಕೀಯ Wಟನೆಗಳು ಪ್ರೇಕ್ಷಕರನ್ನು ಕುರ್ಚಿಯ ತುದಿಗೆ ಆತಂಕದಿಂದ ಕೂಡಿಸುತ್ತವೆ. ಹೀಗೆ ಕಥೆಯ ಮೂರು ವಿಭಿನ್ನ ಎಳೆಗಳ ಮೂರೂ ಪಾತ್ರಗಳು ಒಂದಕ್ಕೊಂದು ಗುಜರಾತ್ ಹೈವೇನಲ್ಲಿ ಸಂಧಿಸುತ್ತವೆ. 24ಗಂಟೆಯೊಳಗೆ ಮೂರು ಪಾತ್ರಗಳ ಜೊತೆಗೆ ನಡೆಯುವ ಘಟನೆಗಳನ್ನು ಕುತೂಹಲಕಾರಿಯಾಗಿ ಹೆಣೆಯಲಾಗಿದೆ. ಇಡೀ ಸಿನೆಮಾ ಎಲ್ಲಿಯೋ ಬೋರ್ ಹೊಡೆಸುವುದಿಲ್ಲ. ಅನಗತ್ಯ ಎನ್ನುವ ದೃಶ್ಯಗಳಾಗಲೀ, ಅತಿರೇಕ ಎನ್ನುವ ಮಾತುಗಳಾಗಲೀ ಇಲ್ಲವೇ ಇಲ್ಲಾ. ಕ್ಲೈಮ್ಯಾಕ್ಸ ಅಂತೂ ಊಹಾತೀತವಾಗಿ ಮೂಡಿಬಂದಿದೆ. ಸಿನೆಮಾದ ಅತೀ ವಿರಳವೆನಿಸುವ ಕಥೆ, ಸರಳ ಎನ್ನಿಸುವ ಸ್ಕ್ರಿಪ್ಟ್ ಇಡೀ ಚಲನಚಿತ್ರದ ಸಶಕ್ತ ಅಂಶವಾಗಿದೆ. ಸುಂದರ ಪರಿಸರವನ್ನು ಕ್ಯಾಮರಾದಲ್ಲಿ ಸೆರೆಹಿಡಿದ ಅಮಿತಾಭ ಸಿಂಗ್ರವರ ಸಿನೆಮಾಟೋಗ್ರಫಿ ಅದ್ಬುತ. 2013, ಜುಲೈ 19 ರಂದು ಸಿನೆಮಾ ಬಿಡುಗಡೆಯಾಯಿತು. ೬೦ನೇ ರಾಷ್ಟ್ರೀಯ ಅಕಾಡೆಮಿ ಅವಾರ್ಡನಲ್ಲಿ ಅತ್ಯುತ್ತಮ ಚಲನಚಿತ್ರ (ಪ್ರಾದೇಶಿಕ) ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.
          ಆಸ್ಕರ್ಗೆ ನಾಮಿನೇಟ್ ಆಗುವುದು ಅಷ್ಟೊಂದು ಸುಲಭದ ಮಾತಲ್ಲ. ಜಗತ್ತಿನ ಸಿನೆಮಾ ರಂಗದ ಅತ್ಯುನ್ನತ ಪ್ರಶಸ್ತಿ ಎಂದು ಸಾಮ್ರಾಜ್ಯಶಾಹಿ ದೇಶಗಳು ಬಿಂಬಿಸಿವೆ. ಹಾಲಿವುಡ್  ಸಿನೆಮಾಗಳಿಗೆ ಮಾತ್ರ ಆಸ್ಕರ್ ಪ್ರಶಸ್ತಿ ಕೊಡಲಾಗುತ್ತದೆ. ಆಸ್ಕರ್ ಕೆಟಗರಿಯಲ್ಲಿ ವಿದೇಶಿ ವಿಭಾಗದಲ್ಲಿ ಬೇರೆ ದೇಶದ ಯಾವುದೇ ಭಾಷೆಯಲ್ಲಿ ತಯಾರಾದ ಸಿನೆಮಾಗೂ ವಿದೇಶಿ ವಿಭಾಗದ ಅತ್ಯುತ್ತಮ ಚಿತ್ರ ಎಂದು ಪ್ರಶಸ್ತಿಯನ್ನು ಆಯ್ಕೆ ಮಾಡಿ ಕೊಡಲಾಗುತ್ತದೆ. 1929ರಲ್ಲಿ ಅಕಾಡೆಮಿ ಅವಾರ್ಡ ಆಸ್ಕರ್ ಆರಂಭಗೊಂಡಾಗಿನಿಂದ ಇಲ್ಲಿವರೆಗೂ ವಿದೇಶಿ ವಿಭಾಗದಲ್ಲೂ ಸಹ ಯಾವುದೇ ಭಾರತೀಯ ಸಿನೆಮಾಗಳಿಗೆ ಆಸ್ಕರ್ ಪ್ರಶಸ್ತಿ ದೊರೆತಿಲ್ಲ. ಜಗತ್ತಿನಲ್ಲಿ ಅತೀ ಹೆಚ್ಚು ಸಿನೆಮಾಗಳನ್ನು ತಯಾರಿಸುವ ದೇಶ ಭಾರತವಾದರೂ, ಹಲವಾರು ಅತ್ಯುತ್ತಮ ಸಿನೆಮಾಗಳು ತಯಾರಾಗಿದ್ದರೂ ಸಹ ಆಸ್ಕರ್ ಕನಸಾಗೇ ಉಳಿದಿದ್ದಕ್ಕೆ ಸಾಮ್ರಾಜ್ಯಶಾಹಿ ದೇಶಗಳ ಕುತಂತ್ರವೇ ಕಾರಣ

          ಆದರೂ ಸಂಪ್ರದಾಯವೆನೋ ಎಂಬಂತೆ ಪ್ರತಿ ವರ್ಷ ಭಾರತದ ಆಯಾ ಭಾಷೆಯ ಅಧಿಕೃತ ಮಾನ್ಯತೆ ಪಡೆದ ಫಿಲಂ ಚೆಂಬರ ಅಥವಾ ಫಿಲಂ ಸೊಸೈಟಿಗಳ ಮೂಲಕ ಸಿನೆಮಾ ನಿರ್ಮಾಪಕರು ಭಾರತೀಯ ಫಿಲಂ ಫೆಡರೇಶನ್ಗೆ 50 ಸಾವಿರ ಎಂಟ್ರಿ ಫೀ ಕಟ್ಟಿ ಅರ್ಜಿ ಸಲ್ಲಿಸಬೇಕು. ಫೆಡರೇಶನ್ ತನ್ನದೇ ಆದ ಸಮಿತಿಮಾಡಿಕೊಂಡು ಸ್ಪರ್ಧೆಗೆ ಬಂದ ಎಲ್ಲಾ ಭಾರತೀಯ ಭಾಷೆಗಳ ಸಿನೆಮಾಗಳಲ್ಲಿ ಒಂದನ್ನು ಆಯ್ಕೆ ಮಾಡಿ ಅಕಾಡೆಮಿ ಅವಾರ್ಡ ಸಂಸ್ಥೆಗೆ ಕಳುಹಿಸಿಕೊಡುತ್ತಾರೆ. ಹೀಗೆ ಸುಮಾರು ೫೦ಕ್ಕೂ ಹೆಚ್ಚು ದೇಶಗಳಿಂದ ಒಂದೊಂದು ಸಿನೆಮಾಗಳು ಆಯ್ಕೆಯಾಗಿ ಬರುತ್ತವೆ. ಹಾಗೆ ಬಂದ ಎಲ್ಲಾ ಸಿನೆಮಾಗಳನ್ನು ಪರಿಶೀಲಿಸಿ ಕೊನೆಗೆ ಅಂತಿಮವಾಗಿ ನಾಲ್ಕು ಸಿನೆಮಾಗಳನ್ನು ವಿದೇಶಿ ವಿಭಾಗದಲ್ಲಿ ಆಯ್ಕೆ ಮಾಡಲಾಗುತ್ತದೆ. ಕೊನೆಗೆ ಹಾಲಿವುಡ್ 3೦೦೦ ಸದಸ್ಯರು ಅಂತಿಮವಾಗಿ ನಾಲ್ಕರಲ್ಲಿ ಒಂದು ಸಿನೆಮಾವನ್ನು ಆಯ್ಕೆ ಮಾಡಿ ಅವಾರ್ಡ ಘೋಷಿಸುತ್ತಾರೆ. 2013 ವಿದೇಶಿ ವಿಭಾಗದ ಆಸ್ಕರ್ ಪ್ರಶಸ್ತಿಗೆ ಭಾರತದಿಂದ ದಿ ಗುಡ್ ರೋಡ್, ರಶಿಯಾದಿಂದ ಸ್ಟಲಿಂಗಾರ್ಡ, ಬ್ರೆಜಿಲ್ನಿಂದ ನೇಬರಿಂಗ್ ಸೌಂಡ್ಸ್, ಮೆಕ್ಸಿಕೋದಿಂದ ಹೆಲಿ, ಥೈವಾನ್ ನಿಂದ ಸೋಲ್, ಪ್ರಾನ್ಸನಿಂದ ರಿನೋಯರ್....ಹೀಗೆ ಬೇರೆ ಬೇರೆ ದೇಶಗಳಿಂದ ನಾಮಿನೇಟ್ ಆಗಿ ಬಂದು ಫಾರೆನ್ ಸಿನೆಮಾ ವಿಭಾಗದ ಆಸ್ಕರ್ ಪ್ರಶಸ್ತಿಗಾಗಿ ಪ್ರಯತ್ನಿಸುತ್ತಿವೆ.
          ಆಸ್ಕರ್ ೮೫ ವರ್ಷದ ಇತಿಹಾಸದಲ್ಲಿ ವಿದೇಶಿ ವಿಭಾಗದಲ್ಲಿ ಅಂತಿಮವಾಗಿ ಆಯ್ಕೆ ಆದ ನಾಲ್ಕು ಸಿನೆಮಾಗಳಲ್ಲಿ ಕೇವಲ ಮೆಹಬೂಬ್ ಖಾನ್ ರವರ ಮದರ್ ಇಂಡಿಯಾ(1957), ಮೀರಾ ನಾಯರ್ ರವರ ಸಲಾಂ ಬಾಂಬೆ(1989), ಮತ್ತು ಆಶುತೋಷ್ ಗೂವಾಲಿಕರ್ ಲಗಾನ್ (2002)... ಹೀಗೆ ಮೂರೇ ಮೂರು ಹಿಂದಿ ಸಿನೆಮಾಗಳು ಆಯ್ಕೆಯಾಗಿವೆಯಾದರೂ ಅಂತಿಮವಾಗಿ ಆಸ್ಕರ್ ಸಿಗಲೇ ಇಲ್ಲ. ಗಾಂಧಿ ಮತ್ತು ಸ್ಲಂ ಡಾಗ್ ಮಿಲಿಯನೇರ್ ಚಿತ್ರಗಳಿಗೆ ಆಸ್ಕರ್ ಅವಾರ್ಡ ದೊರತಿದೆಯಾದರೂ ಸಿನೆಮಾಗಳು ಭಾರತದಲ್ಲಿ ಚಿತ್ರೀಕರಣಗೊಂಡಿದ್ದರೂ ಅವು ಹಾಲಿವುಡ್ ನಿರ್ಮಾಣದ ಚಿತ್ರಗಳಾಗಿವೆ. ಹೀಗಾಗಿ 130 ವರ್ಷದ ಇತಿಹಾಸವಿರುವ, ಅತೀ ಹೆಚ್ಚು ಸಿನೆಮಾಗಳನ್ನು ವಾರ್ಷಿಕವಾಗಿ ನಿರ್ಮಿಸುವ ಭಾರತೀಯ ಸಿನೆಮಾಗಳಿಗೆ ಇಲ್ಲಿವರೆಗೂ ವಿದೇಶಿ ವಿಭಾಗದ ಆಸ್ಕರ್ ಪ್ರಶಸ್ತಿ ಮರೀಚಿಕೆಯಾಗಿಯೇ ಉಳಿದಿದೆ.
          ಕನ್ನಡದ ಮಟ್ಟಿಗಂತೂ ಕನ್ನಡ ಚಿತ್ರೋದ್ಯಮ ಸುದ್ದಿ ಶೂರರಂತಾಗಿದೆ. ಬಾರಿ ಕನ್ನಡದಿಂದ ಲೂಸಿಯಾ ಮತ್ತು ಸಂಗೊಳ್ಳಿ ರಾಯಣ್ಣ ಎಂಬ ಎರಡು ಸಿನೆಮಾಗಳ ನಿರ್ಮಾಪಕರು 50 ಸಾವಿರ ಹಣವನ್ನು ಭಾರತೀಯ ಫಿಲ್ಮ್ ಫೆಡರೇಶನ್ಗೆ ಕಟ್ಟಿ ಅರ್ಜಿ ಸಲ್ಲಿಸಿದ್ದವು. ಅರ್ಜಿ ಸಲ್ಲಿಸಿದ್ದಕ್ಕೆ ಆಸ್ಕರ್ಗೆ ಆಯ್ಕೆಯಾಗಿಬಿಟ್ಟವೆನೋ ಎನ್ನುವಂತೆ ಪ್ರಚಾರ ಗಿಟ್ಟಿಸಿಕೊಂಡವು. ಆಯ್ಕೆಯ ಅಂತಿಮ ಸುತ್ತಿನಲ್ಲಿ ನಿಂತವು ಹಿಂದಿಯ ಲಂಚ್ ಬಾಕ್ಸ ಮತ್ತು ಗುಜರಾತಿಯ ದಿ ಗುಡ್ ರೋಡ್ ಚಲನಚಿತ್ರಗಳು ಮಾತ್ರ. ಆಯ್ಕೆ ಕಮಿಟಿಯ ಅಧ್ಯಕ್ಷರಾಗಿದ್ದವರು ಗೌತಮ್ ಘೋಷ್. 16 ಜನರಿದ್ದ ಆಯ್ಕೆ ಸಮಿತಿಯಲ್ಲಿ ಕನ್ನಡದ ಇಬ್ಬರು ನಿರ್ದೇಶಕರು ಫಿಲಂ ಫೆಡರೇಶನ್ ಆಯ್ಕೆ ಕಮಿಟಿಯಲ್ಲಿದ್ದರು.  ಆದರೂ ಕನ್ನಡದ ಸಿನೆಮಾಗಳು ಕನಿಷ್ಟ ಚರ್ಚೆಗೂ ಬರಲಿಲ್ಲ. ಆಯ್ಕೆ ಪ್ರಕ್ರಿಯೆಯಲ್ಲಿ ಭಾಷೆಗಿಂತಲೂ ಕಥಾ ವಸ್ತು ಮತ್ತು ನಿರೂಪಣೆ ಮುಖ್ಯವಾಗುತ್ತದೆ. ಹೀಗಾಗಿ ಹಿಂದಿಯ ದಿಗ್ಗಜರನ್ನೂ ಹಿಂದಿಕ್ಕಿ ಗುಜರಾತಿ ಫಿಲಂ ದಿ ಗುಡ್ ರೋಡ್ ಆಯ್ಕೆಯಾಗಿ ಅಚ್ಚರಿ ಮೂಡಿಸಿತು. ಮತ್ತು ಸಿನೆಮಾ ಅದಕ್ಕೆ ಯೋಗ್ಯವಾಗಿತ್ತು. ವಿಶೇಷವೇನೆಂದರೆ ಯಾವ ಭಿನ್ನಾಭಿಪ್ರಾಯಗಳಿಲ್ಲದೇ ಅವಿರೋಧವಾಗಿ ಅಯ್ಕೆ ಕಮಿಟಿ ದಿ ಗುಡ್ ರೋಡ್ ನ್ನು ಆಯ್ಕೆ ಮಾಡಿತು


 ನಿರ್ದೇಶಕ ಗ್ಯಾನ್ ಕೋರಿಯಾ

          ವಿದೇಶಿ ವಿಭಾಗದ ಆಸ್ಕರ್ಗೆ ಭಾರತದಿಂದ ಅಂತಿಮ ಸುತ್ತಿನಲ್ಲಿ  2013, ಸೆಪ್ಟೆಂಬರ್ 17 ರಂದು ದಿ ಗುಡ್ ರೋಡ್ ಆಯ್ಕೆಯಾದಾಗ ಅದರ ನಿರ್ದೇಶಕ ಗ್ಯಾನ್ ಕೋರಿಯಾ ಹೇಳಿದ್ದೇನೆಂದರೆ ಆಯ್ಕೆಯಾಗಿದ್ದು ಸಂತಸ. ಆದರೆ ಆಸ್ಕರ್ಗಾಗಿ ನಾನು ಸಿನೆಮಾ ಮಾಡಿಲ್ಲ. ಮಾನವೀಯ ಮೌಲ್ಯಗಳನ್ನು ಹೇಳುವ ಪ್ರಯತ್ನ ಮಾಡಿದ್ದೇನೆ. ಎಂದು. ಚಿತ್ರವನ್ನು ಆಯ್ಕೆ ಮಾಡುವ ಕಮಿಟಿಯ ಅಧ್ಯಕ್ಷರಾದ ಗೌತಮ್ ಘೋಷ್ ರವರು ಅಪರಿಚಿತ ಕ್ಷೇತ್ರದ ಅಚ್ಚರಿದಾಯಕ ಸಂಗತಿಗಳನ್ನು ವಿಭಿನ್ನ ರೀತಿಯ ಪಾತ್ರಗಳ ಮೂಲಕ ಅನಾವರಣಗೊಳಿಸಿ ದಿ ಗುಡ್ ರೋಡ್ ಸಿನೆಮಾ ಅದ್ಬುತವಾದ ಅನುಭವಗಳನ್ನು ಕೊಟ್ಟಿತು. ಹೀಗಾಗಿ ಸಿನೆಮಾವನ್ನು ಆಸ್ಕರ್ಗೆ ಆಯ್ಕೆ ಮಾಡಿ ಕಳುಹಿಸಲಾಯಿತು ಎಂದು ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡರು. 
          ಅಮೇರಿಕ ಪ್ರಾಯೋಜಿತ ಅಕಾಡೆಮಿ ಅವಾರ್ಡ ಆಸ್ಕರ್ನ್ನು ಭಾರತೀಯ ಸಿನೆಮಾಗಳಿಗೆ ಕೊಡಲು ಸಾಧ್ಯವೇ ಇಲ್ಲಾ. ವಿದೇಶಿ ವಿಭಾಗದಲ್ಲಿ ದೊರಕುವ ಸಾಧ್ಯತೆಗಳಿವೆಯಾದರೂ ಅದನ್ನು ಕೊಡುವಂತಹ ಮನಸ್ಥಿತಿಯಲ್ಲಿ ಸಾಮ್ರಾಜ್ಯಶಾಹಿ ದೇಶ ಇಲ್ಲವೇ ಇಲ್ಲ. ಪ್ರತಿ ವರ್ಷದಂತೆ ವರ್ಷವೂ ಏನಾದರೊಂದು ಪವಾಡವಾಗಿ ಸಿಗಬಹುದೇನೋ ಎನ್ನುವ ಆಶಾಬಾವ ಮಾತ್ರ ಭಾರತೀಯರದ್ದಾಗದೆ. ಹಾಲಿವುಡ್ ನಿರ್ಮಾಣದ ಗಾಂಧಿ, ಸ್ಲಂ ಡಾಗ್.... ಚಿತ್ರಗಳಿಗೆ ಆಸ್ಕರ್ ಬಂದಾಗ ಭಾರತೀಯರಿಗೆ ಬಂತೇನೋ ಎಂದು ದೇಶಕ್ಕೆ ದೇಶವೇ ಸಂಭ್ರಮಿಸಿತ್ತು. ಮಾಧ್ಯಮಗಳೂ ರೀತಿಯ ಹುಚ್ಚು ಭ್ರಮೆಯನ್ನು ಹುಟ್ಟಿಸಿದ್ದವು. ಆದರೆ ರಿಯಾಲಿಟಿ ಬೇರೆಯೇ ಆಗಿದೆ


                  
         


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ