ಮಂಗಳವಾರ, ನವೆಂಬರ್ 19, 2013

ಕನ್ನಡದ ‘ಟಾರ್ಜನ್’ನ ಟ್ರಾಜಡಿ :





          ಟಾರ್ಜನ್ ಸಿನೆಮಾಗಳು ಗೊತ್ತಿವೆಯಲ್ಲಾ, ಕಾಡಲ್ಲಿ ಪ್ರಾಣಿ ಪಕ್ಷಿ ಪ್ರಕೃತಿಗಳ ನಡುವೆ ಬೆಳೆದ ಹುಡುಗ (ಕೆಲವೊಮ್ಮೆ ಹುಡುಗಿ) ನನ್ನು ನಾಡಿನ ಜನ ಅದು ಹೇಗೋ ಹಿಡಿದು ಪಟ್ಟಣಕ್ಕೆ ಕರೆತಂದು ಪ್ರಚಾರಕ್ಕೋ ಹಣ ಗಳಿಕೆಗೋ ಬಳಸಿಕೊಳ್ಳಲು ಹವಣಿಸುತ್ತಾರೆ. ಹಾಗೆಯೇ ಆತ ನಾಡಿನ ಹುಡುಗಿಯತ್ತ ಆಕರ್ಷಿತನಾಗುತ್ತಾನೆ. ಕೊನೆಗೆ ನಾಗರೀಕತೆಯ ನಿರರ್ಥಕತೆ ಹಾಗೂ ಸ್ವಾರ್ಥಕತೆ ಗೊತ್ತಾಗಿ ಮತ್ತೆ ಕಾಡಿಗೆ ಹೋಗಿ ಸ್ವತಂತ್ರವಾಗಿ ಬದುಕುತ್ತಾನೆ. ಇಲ್ಲವೆ ನಾಗರೀಕತೆಯೆಂಬ ಅಮಾನವೀಯತೆಗೆ ಬಲಿಯಾಗುತ್ತಾನೆ. ಅದು ವಾಲ್ಟ ಡಿಸ್ನೆಯವರ ಮೋಗ್ಲಿ ಯಾಗಿರಬಹುದು ಅಥವಾ ಹಾಲಿವುಡ್ ದಿ ಏಪ್ ಮ್ಯಾನ್ ನಂತಹ ಹಲವಾರು ಟಾರ್ಜನ್ ಚಲನಚಿತ್ರಗಳಾಗಿರಬಹುದು. ಕನ್ನಡದ ಕಾಡಿನ ರಾಜ ಅಥವಾ ಆಫ್ರಿಕಾದಲ್ಲಿ ಶೀಲಾ ಆಗಿರಬಹುದು. ಇವೆಲ್ಲದರ ಕಥಾ ಸಾರ ಹೆಚ್ಚು  ಕಡಿಮೆ ಹೀಗೇನೆ.....
          ಒಂದು ಕಾಲಕ್ಕೆ ಟಾರ್ಜನ್ ಮಾದರಿಯ ಸಿನೆಮಾಗಳು ಜನಪ್ರೀಯವಾಗಿದ್ದವು. ನಾಡಿನ ಕಥೆಗಳನ್ನು ನೋಡಿ ಬೇಸರಗೊಂಡಿದ್ದ ಜನಕ್ಕೆ ಕಾಡಿನ ಮನುಷ್ಯನ ಕಥೆ ಹಾಗೂ ಆತನ ಸಾಹಸಗಳು ತುಂಬಾ ಹಿಡಿಸಿದ್ದವು. ಆದರೆ ಇವೆಲ್ಲವೂ ಊಹೆಯನ್ನು ಆಧರಿಸಿದ ಕಥಾನಕಗಳಾಗಿದ್ದವು. ಇಂತಹ ಟಾರ್ಜನ್ ಮಾದರಿಯ ಕಥೆಗಳು ನಿಜವಾಗಲೂ ನಡೆಯಲು ಸಾಧ್ಯಾನಾ? ಹೌದು ಸಾಧ್ಯವಾಗಿದೆ. ದೂರದಲ್ಲೆಲ್ಲೂ ಅಲ್ಲ, ಇಲ್ಲೇ ನಮ್ಮ ರಾಜ್ಯದಲ್ಲೇ ನಮ್ಮ ನಡುವೆಯೇ ಘಟಿಸಿದೆ. ಜೀವಂತ ಟಾರ್ಜನ್ ದುರಂತಗಾಥೆ ಮಾತ್ರ ರಾಜ್ಯದ ಜನರ ಮನ ಮಿಡಿದಿದೆ. 
        
  ನಮ್ಮ ಟಾರ್ಜನ್ ಹೆಸರು ರಾಜೇಶ್. ಕರ್ನಾಟಕದ ಹೆಗ್ಗಡದೇವನಕೋಟೆಯ ಕಾಡಲ್ಲಿರುವ ಹಾಡಿಯ ಬುಡುಕಟ್ಟು ಜನಾಂಗದ ಯುವಕನೀತ. ಓದು ಬರಹ ಗೊತ್ತಿಲ್ಲ. ನಾಗರೀಕ ಪ್ರಪಂಚದ ತಳುಕು ಬಳುಕಿನ ಅರಿವಿಲ್ಲ.  ಆಧುನಿಕ ಎನ್ನುವ ಯಾವುದೇ ಸಾಧನೆ ಸಲಕರಣೆಗಳ ಅನುಕೂಲತೆಗಳಿಲ್ಲ. ತನ್ನ ಪಾಡಿಗೆ ತಾನು ಪ್ರಕೃತಿಯ ನಡುವೆ, ಪ್ರಾಣಿಗಳ ಜೊತೆಗೆ ಹೊಂದಾಣಿಕೆ ಮಾಡಿಕೊಂಡು ನೆಮ್ಮದಿಯಾಗಿದ್ದ.

        ಟಿಆರ್ಪಿ ಮೇಲೆ ಬದುಕಿರುವ, ಬಹುರಾಷ್ಟ್ರೀಯ ಕಂಪನಿ ಕೃಪಾಪೋಷಿತ ಟಿವಿ ಚಾನೆಲ್ ಎಂಬ ಆಧುನಿಕ ಪೆಡಂಭೂತದ ಚಿತ್ತ ಯಾವಾಗ ನಾಡನ್ನು ಬಿಟ್ಟು ಕಾಡಿನತ್ತ ಹೊರಳಿತೋ ನಮ್ಮ ಟಾರ್ಜನ್ ದುರಂತಗಾಥೆಗೆ ಮೂಹೂರ್ತ ಫಿಕ್ಸ ಆಯಿತು. ಸುವರ್ಣ ಟಿವಿ ಚಾನೆಲ್ರವರು ಹಳ್ಳಿ ಹೈದ ಪ್ಯಾಟೆಗ್ ಬಂದ್ ಎಂಬ ರಿಯಾಲಿಟಿ ಷೋ ಆರಂಭಿಸಿದರು. ಅದರಲ್ಲಿ ಭಾಗವಹಿಸಲು ಆಯ್ಕೆಯಾಗಿದ್ದು ಕಾಡಿನ ಹಾಡಿಯ ಹುಡುಗ ರಾಜೇಶ್.
          ಆತನ ಮುಗ್ಧತನ, ಹುಂಬುತನಗಳನ್ನೇ ಬಂಡವಾಳ ಮಾಡಿಕೊಂಡ ರಿಯಾಲಿಟಿ ಷೋ ನವರು ತಮ್ಮ ಟಿಆರ್ಪಿ ಹೆಚ್ಚಿಸಿಕೊಂಡರು. ನಾಡಿನ ಜನ ಕಾಡಿನ ಹುಡುಗನ ಒರಟುತನವನ್ನು ಮೆಚ್ಚಿಕೊಂಡು ಓಟ್ ಮಾಡಿ ಗೆಲ್ಲಿಸಿದರು. ಕೊನೆಗೂ ಷೋದಲ್ಲಿ ವಿಜೇತನಾದ ರಾಜೇಶನಿಗೆ ಸಿಕ್ಕ ಮೊತ್ತ ಅನಾಮತ್ 25 ಲಕ್ಷ. ರಿಯಾಲಿಟಿ ಷೋನಿಂದಾಗಿ ಜಾಹಿರಾತಿನ ಮೂಲಕ ಚಾನೆಲ್ಗೆ ಹರಿದು ಬಂದ ಕೊಟ್ಯಾಂತರ ಹಣಕ್ಕೆ ಹೋಲಿಸಿದರೆ ಬಹುಮಾನದ ಮೊತ್ತ ಏನೇನೂ ಅಲ್ಲ. ಆದರೆ ಏನೆಂದರೆ ಏನೂ ಇಲ್ಲದ ಹಾಡಿಯ ಹೈದನಿಗೆ ಕಾಲುಲಕ್ಷ ಹಣ ಅಗಾಧವಾಗಿತ್ತು. ಅಷ್ಟೊಂದು ಹಣವನ್ನು ಏನು ಮಾಡೋದು ಅನ್ನೋದೆ ಆತನಿಗೆ ತಿಳಿಯದಂತಾಗಿತ್ತು. ಯಾಕೆಂದರೆ ನಾಗರೀಕ ಪ್ರಪಂಚದ ಆರ್ಥಿಕ ವ್ಯವಹಾರಗಳನ್ನು ಅರಿಯದ ಮುಗ್ಧ ಹುಡುಗ ಅವನು.
          ದಿನಕ್ಕೆ ಮೂರು ಗಂಟೆ ನೆಟ್ಟಗೆ ಕರೆಂಟ್ ಕೂಡಾ ಸಿಗದ ಕಾಡಿನ ನಡುವಿನ ಹಾಡಿಯ ತನ್ನ ಗುಡಿಸಿಲಿನಲ್ಲಿ ಟಿವಿ, ಡಿವಿಡಿ, ಏರ್ ಕೂಲರ್, ಪ್ರಿಜ್ ನಂತಹ ನಾಗರೀಕ ಜಗತ್ತಿನ ಅನಿವಾರ್ಯ ವಸ್ತುಗಳನ್ನು ಕೊಂಡು ತಂದಿಟ್ಟುಕೊಂಡ. ಬೇಕು ಬೇಡಾದದ್ದಕ್ಕೆಲ್ಲಾ ನೀರಿನಂತೆ ಹಣ ಖರ್ಚು ಮಾಡಿದರೆ ಎಷ್ಟು  ದಿನಾಂತ ಕಾಸು ಉಳಿದೀತು. ಹಣ ಖರ್ಚಾದಂತೆಲ್ಲಾ ರಾಜೇಶನಿಗೆ ಕಾಸಿನ ಹುಚ್ಚು ಹೆಚ್ಚಾಯಿತು. ಒಂದು ಕಡೆ ಕೀರ್ತಿಯ ಶನಿ ಹೆಗಲೇರಿದಿರೆ ಇನ್ನೊಂದು ಕಡೆ ಹಣದ ಪಿಶಾಚಿ ನೆತ್ತಿಗೇರಿತು. ಅತ್ತ ಕಾಡಿನವನೂ ಆಗದೆ ಇತ್ತ ನಾಡಿನವನೂ ಆಗದೇ ಅತಂತ್ರವಾಗಿ ಮಾನಸಿಕ ಕ್ಷೆಭೆಗೆ ಒಳಗಾಗಿಬಿಟ್ಟ.
          ಅವನಷ್ಟಕ್ಕೆ ಅವನನ್ನು ಬಿಟ್ಟಿದ್ದರೆ ಇಂದೋ ನಾಳೆನೋ ತನ್ನ ಪರಿಸ್ಥಿತಿಯ ಜೊತೆಗೆ ಹೇಗೊ ರಾಜಿ ಮಾಡಿಕೊಂಡು ಹೋಗುತ್ತಿದ್ದನೇನೋ?, ಆದರೆ... ಆತನ ಜನಪ್ರೀಯತೆ ಆತನನ್ನು ಬಿಡಲಿಲ್ಲ. ಸಿನೆಮಾದವರು ಆತನ ಬೆನ್ನು ಬಿದ್ದರು. ನಾಡಿನ ಜನತೆ ರಾಜೇಶನನ್ನು ಇಷ್ಟಪಟ್ಟಿದ್ದಾರೆಂಬುದನ್ನೇ ಬಂಡವಾಳ ಮಾಡಿಕೊಂಡು ಲಾಭಗಳಿಸುವ ಆಸೆಗೆ ಬಿದ್ದ ರವಿ ಕಡೂರ್ ಎನ್ನುವಾತ ರಾಜೇಶನನ್ನೇ ನಾಯಕ ನಟನನ್ನಾಗಿ ಹಾಕಿಕೊಂಡು ಜಂಗಲ್ ಜಾಕಿ ಎನ್ನುವ ಸಿನೆಮಾ ಶುರು ಮಾಡಿಯೇ ಬಿಟ್ಟ. ಶೂಟಿಂಗ್ ಅನುಕೂಲಕ್ಕಾಗಿಯೋ ಇಲ್ಲವೇ ನಾಡಿನ ಆಕರ್ಷಣೆಗೊಳಗಾಗಿಯೋ ಒಟ್ಟಿನಲ್ಲಿ ಹಾಡಿ ಬಿಟ್ಟು ಮೈಸೂರಿನ ಶ್ರೀರಾಂಪುರದ ಪರಸಯ್ಯನ ಹುಂಡಿಯಲ್ಲಿ ಬಾಡಿಗೆಗೆ ಮನೆಯನ್ನು ಮಾಡಿದ ರಾಜೇಶ್ ತನ್ನ ಕುಟುಂಬದ ವಾಸ್ತವ್ಯ ಬದಲಾಯಿಸಿದ. ಹಾಗೂ ಹೀಗೂ ಸಿನೆಮಾ ಚಿತ್ರೀಕರಣವೇನೋ ಮುಗೀತು ಆದರೆ  ಕೊಡುತ್ತೇನೆಂದಷ್ಟು ಹಣವನ್ನು ಪೂರ್ತಿ ಕೊಡದೆ ರಾಜೇಶನಿಗೆ ಬೋಗಸ್ ಚೆಕ್ಕ ಕೊಟ್ಟು ಮೋಸಗೊಳಿಸಲಾಯಿತು. ಜೊತೆಗೆ ಸಿನೆಮಾ ಪೂರ್ಣಗೊಂಡರೂ ವರ್ಷಗಂಟಲೇ ಡಬ್ಬಾದಲ್ಲೇ ಇದ್ದು ಬಿಡುಗಡೆ ವಿಳಂಬವಾಗತೊಡಗಿತು

      ಕೈಯಲ್ಲಿರುವ ಹಣ ಖಾಲಿಯಾಯಿತು. ಬರಬೇಕಾಗಿದ್ದ ಕಾಸು ಬರಲಿಲ್ಲ. ಸಿನೆಮಾ ರಿಲೀಜ್ ಆಗಲಿಲ್ಲ ಇದರಿಂಗಾಗಿ ರಾಜೇಶನ ಮಾನಸಿಕ ಒತ್ತಡ ಹೆಚ್ಚಾಗತೊಡಗಿತು. ಹೆತ್ತವರನ್ನು, ಸುತ್ತಮುತ್ತಲಿನವರನ್ನು, ಹೆಂಡತಿಯನ್ನು ಇನ್ನಿಲ್ಲದಂತೆ ಹಿಂಸಿಸತೊಡಗಿದ. ಹೊತ್ತಲ್ಲದ ಹೊತ್ತಲ್ಲಿ ಕೂಗಾಡ ತೊಡಗಿದ. ಚಿಕ್ಕಪುಟ್ಟ ಕಾರಣಗಳಿಗೆ ಜಗಳಾಡತೊಡಗಿದ. ಬರುಬರುತ್ತಾ ಪಿತ್ತ ನೆತ್ತಿಗೇರಿತು, ಹುಚ್ಚು ತಾರಕ್ಕಕ್ಕೇರಿತು. ಆತನನ್ನು ಮೈಸೂರಿನ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಯಿತಾದರೂ ಪೂರ್ಣ ಪ್ರಮಾಣದಲ್ಲಿ ಪ್ರಯೋಜನವಾಗಲಿಲ್ಲ.
          ಕೊನೆಗೂ ಜಂಗಲ್ ಜಾಕಿ ಸಿನೆಮಾ ಬಿಡುಗಡೆಯಾಯಿತು. ನಿರ್ಮಾಪಕರಿಗೆ ಲಾಸ್ ಅಂತೂ ಆಗಲಿಲ್ಲ. ರಾಜೇಶನನ್ನು ರಿಯಾಲಿಟಿ ಷೋನಲ್ಲಿ ನೋಡಿ ಮೆಚ್ಚಿದ ಕೆಲವರು ಸಿನೆಮಾ ನೋಡಿದರು. ಹೀಗೆ ಮಿನಿಮಮ್ಮ ಗ್ಯಾರಂಟಿ ಹೀರೋ ಸಿಕ್ಕರೆ ಸಿನೆಮಾದವರು ಬಿಡ್ತಾರಾ?. ಮತ್ತೆರಡು ಸಿನೆಮಾಗಳಿಗೆ ರಾಜೇಶ್ ಬುಕ್ ಆದ. ಚಿತ್ರವೊಂದಕ್ಕೆ ಹತ್ತು ಲಕ್ಷ ಕೊಡುವ ಮಾತಾಯಿತು. ಒಂದಿಷ್ಟು ಅಡ್ವಾನ್ಸ ಕೂಡಾ ಸಿಕ್ಕಿತು. ನಂದನ್ ಪ್ರಭು ನಿರ್ದೇಶನದ ಲವ್ ಈಸ್ ಪಾಯ್ಸನ್ ಹಾಗೂ ಇನ್ನೊಂದು ಸಿನೆಮಾ ರಾಜೇಶ್ ಲವ್ಸ್ ಪ್ರೀಯಾ ಎರಡೂ ಸಿನೆಮಾಗಳ ಚಿತ್ರೀಕರಣ ಪ್ರಾರಂಭವಾಗಬೇಕಿತ್ತು. ಇಷ್ಟರಲ್ಲೇ ರಾಜೇಶನ ಹುಚ್ಚಾವತಾರಕ್ಕೆ ಬೇಸತ್ತ ಆತನ ಹೆಂಡತಿ ಕಾವ್ಯಾ ಮನೆ ಬಿಟ್ಟು ತವರು ಸೇರಿದಳು

    ರಾಜೇಶನ ಮಾನಸಿಕ ಸಮತೋಲನ ದಿನದಿಂದ ದಿನಕ್ಕೆ ಬಿಗಡಾಯಿಸತೊಡಗಿತು. ಅಭದ್ರತೆ ಕಾಡತೊಡಗಿತು. ಕುಟುಂಬ ಛಿದ್ರಗೊಂಡಿತು. ನಾಗರೀಕ ಪ್ರಪಂಚದ ಅನಾಗರಿಕತೆ ಆತನನ್ನು ಆವರಿಸಿಕೊಂಡಿತು. ನಿರಾಶಾವಾದ ಬಲಿಯ ತೊಡಗಿತು. ನಾಗರೀಕ ಬದುಕು ಬಲಿ ಕೇಳತೊಡಗಿತು. ಬದುಕೋದೆ ಬೇಡ ಎಂದು ನಿರ್ಧರಿಸಿಯಾಗಿತ್ತು. ಸಾವಿನ ಬಯಕೆ ಕಾಡತೊಡಗಿತು. ಲೋಕದ ಜಂಜಡದಿಂದ ಮುಕ್ತನಾಗಲು ರಾಜೇಶ ಅಂತಿಮ ನಿರ್ಧಾರ ತೆಗೆದುಕೊಂಡಾಗಿತ್ತು.
          ಆವತ್ತು 2013, ನವೆಂಬರ್ 3, ಬೆಳ್ಳಂಬೆಳಿಗ್ಗೆ ಎದ್ದು ಕೆಲವು ಸ್ನೇಹಿತರನ್ನು ಜೊತೆಗಿಟ್ಟುಕೊಂಡು ತಾಯಿಯನ್ನೂ ಕರೆದುಕೊಂಡು ತನ್ನ ಕೊಟ್ಟಕೊನೆಯ ಆಸೆಯನ್ನು ನೀಗಿಕೊಳ್ಳಲು ರಾಜೇಶ ಹೊರಟಿದ್ದು ಚಾಮುಂಡಿ ಬೆಟ್ಟಕ್ಕೆ. ದೇವಿಯ ದರ್ಶನಕ್ಕೆ. ದರ್ಶನಭಾಗ್ಯ ಸಿಕ್ಕ ನಂತರ ದೌರ್ಬಾಗ್ಯದ ಯುವಕ ಚಾಮುಂಡಿ ಬೆಟ್ಟದಿಂದ ಕೆಳಗೆ ಧುಮುಕಿ ಆತ್ಮಹತ್ಯೆಮಾಡಿಕೊಳ್ಳಲು ಪ್ರಯತ್ನಿಸಿದ.  ಆದರೆ ಜೊತೆಗಿದ್ದ ಗೆಳೆಯರು ಅದಕ್ಕೆ ಅವಕಾಶ ಕೊಡಲಿಲ್ಲ. ನಾನು ಸಾಯಬೇಕು ಬಿಡಿ ಎಂದು ಕೊಸರಾಡಿದ. ತಾಯಿಯ ಮೇಲೆ ಕೂಗಾಡಿದ. ಆತಂಕಕ್ಕೊಳಗಾದ ತಾಯಿ ಲಕ್ಷ್ಮೀ ಹರಸಾಹಸ ಮಾಡಿ ಹೀಗೋ ಮನೆಗೆ ಕರೆತಂದರು

     ಸಾಯುವ ಬಯಕೆಯ ರೋಗ ಮೈ ಮನಸ್ಸಿನಾದ್ಯಾಂತ ತುಂಬಿತ್ತು. ಮನಸ್ಸು ಸಾವಿನತ್ತ ಹಾತೊರೆಯುತ್ತಿತ್ತು.  ಮನೆಗೆ ಬಂದ ತಕ್ಷಣ ನೋಡುನೋಡುತ್ತಿದ್ದಂತೆ ಚಾಮುಂಡೇಶ್ವರಿ ಪೋಟೋವನ್ನು ತಬ್ಬಿಕೊಂಡು ಹಿಂದು ಮುಂದು ನೋಡದೇ ಮನೆಯ ಮೂರನೇ ಮಹಡಿಯಿಂದ ಜಂಗಲ್ ಜಾಕಿ ಜಿಗಿದೇ ಬಿಟ್ಟ. ಅಷ್ಟೆತ್ತರದಿಂದ ಬಿದ್ದರೂ ಕಾಡಿನ ಹುಡುಗ ಬದುಕುತ್ತಿದ್ದನೋ ಏನೋ? ಆದರೆ ಕೆಳಗಿನ ಕಂಪೌಂಡ್ಗೆ ಹಾಕಿದ ಚೂಪಾದ ಗ್ರಿಲ್ ತುದಿ ಸೀದಾ ಹೊಟ್ಟೆಯೊಳಗೆ ಹೊಕ್ಕು ನೆಲದ ಮೇಲೆಲ್ಲಾ ರಕ್ತದೋಕಳಿ. ಉಸಿರು ನಿಂತ ಗಳಿಗೆ ಸಾವು ಬಾಚಿ ತಬ್ಬಿತು.
          ಕೊನೆಗೂ ನಮ್ಮ ಟಾರ್ಜನ್ ಕಥೆ ಟ್ರಾಜಡಿ ಆಗೇ ಬಿಟ್ಟಿತು. ಹಳ್ಳಿ ಹೈದ... ರಿಯಾಲಿಟಿ ಷೋನಲ್ಲಿ ರಾಜೇಶನ ಮುಗ್ಧ ಮಾತುಗಳಿಗೆ, ಹುಂಬು ನಡುವಳಿಕೆಗೆ ಖುಷಿ ಪಟ್ಟ ಟಿವಿ ವೀಕ್ಷಕರಿಗೆಲ್ಲಾ ಜಂಗಲ್ ಜಾಕಿಯ ಧಾರುಣ ದುರಂತ ಅಂತ್ಯ ದುಃಖವನ್ನು ತಂದಿದ್ದಂತೂ ಸುಳ್ಳಲ್ಲ.
          ಬಂದ ಹಣವನ್ನು ಹೇಗೆ ಬಳಸಬೇಕು, ಸಿಕ್ಕ ಯಶಸ್ಸನ್ನು ಹೇಗೆ ಉಪಯೋಗಿಸಬೇಕು, ನಾಡಿನ ಜನರ ತಂತ್ರ ಕುತಂತ್ರಗಳನ್ನು ಹೇಗೆ ಎದುರಿಸಬೇಕು ಎಂಬುದು ಗೊತ್ತಾಗದೇ ನಾಗರೀಕ ಪ್ರಪಂಚದ ಅಮಾವೀಯತೆಯ ಸುಳಿಯಲ್ಲಿ ಸಿಕ್ಕು, ಟಿವಿ ಸಿನೆಮಾದ ಭ್ರಮೆಯಲ್ಲಿ ಮೈಮರೆತು ದುರಂತ ಅಂತ್ಯ ಕಂಡ ಹಳ್ಳಿ ಹೈದನ ದಾರುಣ ಕಥೆ ದೀಪದ ಆಕರ್ಷಣೆಗೊಳಗಾಗಿ ಸಾಯುವ ಚಿಟ್ಟಿಯಂತಾಗಿ ಹೋಯಿತು.  ಒಂದು ಮುಗ್ಧ ಜೀವವನ್ನು ಸಾಯುವ ಸ್ಥಿತಿಗೆ ನೂಕಿದ ಟಿಆರ್ಪಿ ಪೀಡಿತ ಟಿವಿ ವಾಹಿನಿಗಳಿಗೆ, ತಮ್ಮ ಲಾಭಕ್ಕಾಗಿ ಆತನ ಜನಪ್ರೀಯತೆಯನ್ನು ಬಳಸಿಕೊಂಡು ಮಾತುಕೊಟ್ಟಷ್ಟೂ ಹಣವನ್ನು ಕೊಡದೇ ಮೋಸಗೊಳಿಸಿದ ಸಿನೆಮಾ ಲೋಕದ ಕೆಲವು ವಂಚಕರಿಗಾಗಲೀ ರಾಜೇಶನ ಸಾವು ಒಂದಿಷ್ಟೂ ಪಶ್ಚಾತ್ತಾಪವನ್ನು ತರಲೇ ಇಲ್ಲ.
          ಯಾಕೆಂದರೆ ದೃಶ್ಯಮಾಧ್ಯಮ ಲೋಕದಲ್ಲಿ ಹಣವೇ ಎಲ್ಲಾ. ಮನುಷ್ಯರಿಗೆ, ಮನಸುಗಳಿಗೆ, ಕಲೆಗೆ, ಕಲಾವಿದರಿಗೆ  ಬೆಲೆಯೇ ಇಲ್ಲ. ನಾವು ಕಟ್ಟಿಕೊಂಡ ನಾಗರೀಕ ಪ್ರಪಂಚದಲ್ಲಿ ಎಲ್ಲವೂ ಮಾರಾಟಕ್ಕಿದೆ. ಜಾಗತೀಕರಣದ ಪರಿಣಾಮದಿಂದಾಗಿ ಹುಟ್ಟಿಕೊಂಡ ವಾಹಿನಿಗಳು ಜನರ ಖಾಸಗೀತನ, ಮಕ್ಕಳ ಮುಗ್ಧತನ, ಕಾಡಿನ ಹುಡುಗರ ಹುಂಬುತನಗಳೆಲ್ಲವನ್ನೂ ಬಳಸಿಕೊಳ್ಳುತ್ತವೆ. ಜನರನ್ನು ಭ್ರಮೆಯಲ್ಲಿಡುವ ಜೋತಿಷ್ಯ, ಕಟ್ಟುಕಥೆಗಳನ್ನು ಸೃಷ್ಟಿಸುವ ಮೌಡ್ಯಾಧಾರಿತ ಕಾರ್ಯಕ್ರಮಗಳೆಲ್ಲವನ್ನೂ ಟಿಆರ್ಪಿಗಾಗಿ ವಾಹಿನಿಗಳು ಸೃಷ್ಟಿಸುತ್ತವೆ. ಖಾಸಗಿ ವಾಹಿನಿ ಲೋಕದಲ್ಲಿ ಎಲ್ಲವೂ ಪ್ರದರ್ಶನಕ್ಕಿದೆ ಎಲ್ಲವೂ ಬಿಕರಿಗಿದೆ.
          ರಾಜೇಶನಂತಹ ಮುಗ್ಧ ಜೀವಿಗಳು ಜಾಗತೀಕರಣದಿಂದಾದ ವ್ಯಾಪಾರೀ ಸಂಸ್ಕೃತಿಯ ಹುನ್ನಾರುಗಳನ್ನು ತಿಳಿಯಬೇಕಿದೆ. ಏನೇ ಬಂದರೂ  ಎದುರಿಸುವ ಎದೆಗಾರಿಕೆ ರೂಢಿಸಿಕೊಳ್ಳಬೇಕಿದೆ. ರಾಜೇಶನ ದುರಂತ ಅಂತ್ಯ ಯುವಜನರಿಗೆ ಪಾಠ ಕಲಿಸಬೇಕಿದೆ. ಯಾಕೆಂದರೆ ಈಗಲೂ ಸಹಸ್ರಾರು ಹಳ್ಳಿಗಾಡಿನ ಯುವಕ ಯುವತಿಯರು ದೃಶ್ಯಮಾಧ್ಯಮ ಎನ್ನುವ ಮಾಯಾ ದೀಪದ ಸೆಳೆತಕ್ಕೊಳಗಾಗಿ ಭ್ರಮೆಗೆ ಬಲಿಯಾಗುತ್ತಿದ್ದಾರೆ. ಅದೆಷ್ಟೋ ಯುವತಿಯರು ತಮ್ಮ ಮಾನ-ಪ್ರಾಣಗಳನ್ನೇ ತೆತ್ತಿದ್ದಾರೆ. ಏನೇ ಆಗಲಿ ಸಾವು ಎನ್ನುವುದು ಯಾವುದೇ ಸಮಸ್ಯೆಗೆ ಪರಿಹಾರವೂ ಅಲ್ಲ, ಎಂತಹುದೇ ಆಪತ್ತಿಗೆ ಪರ್ಯಾಯವೂ ಅಲ್ಲ

    ನಮ್ಮ ರಾಜೇಶನ ಹಾಗೆಯೇ ಇನ್ನೊಬ್ಬನಿದ್ದ. ದಕ್ಷಿಣ ಆಫ್ರಿಕಾದಲ್ಲಿರುವ ನಮೀಬಿಯಾದ ಕಲಹರಿ ಮರಭೂಮಿಗೆ ಸೇರಿದ ಬುಡುಕಟ್ಟು ಜನಾಂಗದಲ್ಲಿ ನಿಕ್ಜು ಎನ್ನುವ ಯುವಕನೊಬ್ಬನಿದ್ದ. ಅದು ಹೇಗೋ ಒಮ್ಮೆ ಹಾಲಿವುಡ್ ನಿರ್ದೇಶಕ ಜೆಮ್ಮಿ ಯೂಸ್ ಕಣ್ಣಿಗೆ ಬಿದ್ದ. ಗಾಡ್ಸ್ ಮಸ್ಟ್ ಬಿ ಕ್ರೇಜಿ ಎನ್ನುವ ಕಾಮೆಡಿ ಸಿನೆಮಾದ (1980) ನಾಯಕನಾಗಿ ನಟಿಸಿ ದಿನಬೆಳಗಾಗುವುದರೊಳಗೆ ಸ್ಟಾರ್ ಆಗಿಬಿಟ್ಟ. ಅರ್ಧ ಕೋಟಿ ಡಾಲರ್ ನಲ್ಲಿ ನಿರ್ಮಿಸಲಾದ ಸಿನೆಮಾ ಮೂರುವರೆ ಕೋಟಿ ಡಾಲರ್ ಹಣ ಗಳಿಸಿತು. ಸಿನೆಮಾದ ನಟನೆಗಾಗಿ ನಾಯಕನಿಗೆ ಕೊಟ್ಟಿದ್ದು ಕೇವಲ ಕಲವೇ ನೂರು ಡಾಲರಗಳನ್ನು ಮಾತ್ರ. ಸಿನೆಮಾದ ಯಶಸ್ಸಿನ ನಂತರವೂ ಕೆಲವು ಸಿನೆಮಾಗಳಲ್ಲಿ ನಟಿಸಿ ಹೆಸರುವಾಸಿ ಆದ. ಆದರೆ ಆತನಿಗೆ ಹಣ-ಹೆಸರಿನ ಪಿತ್ತ ನೆತ್ತಿಗೇರಲಿಲ್ಲ. ಎಂದೂ ಪ್ರಸಿದ್ಧಿಯ ಭ್ರಮೆಗೆ ಬೀಳಲಿಲ್ಲ. ಯಶಸ್ಸಿನ ಎತ್ತರಕ್ಕೆ ಬೀಗಲಿಲ್ಲ. ತನ್ನ ಬುಡಕಟ್ಟಿನ ಬೀಡು ಬಿಟ್ಟು ನಾಡಿಗೆ ಬಂದು ನೆಲೆಸಲಿಲ್ಲ. ಶ್ರೇಷ್ಟತೆಯ ವ್ಯಸನ ಕಾಡಲಿಲ್ಲ. ಎಂದೂ ನಾಗರೀಕತೆಯ ಆಕರ್ಷಣೆಗೆ ಒಳಗಾಗಲಿಲ್ಲ. ತನ್ನ ನಟನೆ ಮುಗಿದ ತಕ್ಷಣ ಮತ್ತೆ ಆದಿವಾಸಿಗಳ ನೆಲೆಗೆ ಹೋಗಿ ನೆಲೆಸುತ್ತಿದ್ದ. ಆತ ಸಾಯುವವರೆಗೂ (2003, ಜುಲೈ 1) ಬುಡಕಟ್ಟಿನ ಜನರೊಳಗೊಂದಾಗಿ ಬದುಕುತ್ತಿದ್ದ. ಆತ ನಿಜವಾಗಿ ಬದುಕನ್ನು ಸಾರ್ಥಕ ಮಾಡಿಕೊಂಡ.  ಅಂತಹ ಅದೃಷ್ಟ ನಮ್ಮ ರಾಜೇಶನಿಗಿರಲಿಲ್ಲ. ಬಹುಬೇಗ ಮಾಯೆಯ ಹಿಂದೆ ಬಿದ್ದು ಸೋತುಬಿಟ್ಟ, ಕೊನೆಗೆ ದುರಂತ ನಾಯಕನಾಗಿ ಪ್ರಾಣವನ್ನೇ ಬಿಟ್ಟ.



                                                          -ಶಶಿಕಾಂತ ಯಡಹಳ್ಳಿ




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ