ಶುಕ್ರವಾರ, ನವೆಂಬರ್ 1, 2013

ಸ್ಪ್ರಿಂಗ್, ಸಮ್ಮರ್, ಫಾಲ್, ವಿಂಟರ್...ಆಂಡ್ ಸ್ಪ್ರಿಂಗ್

ಸಿನೆಮಾ   ಸಿನೆಮಾ

 

ಅದೊಂದು ವಸಂತಕಾಲ. ಬೆಟ್ಟಗುಡ್ಡಗಳಿಂದ ಆವರಿಸಿದ ವಿಶಾಲವಾದ ನದಿಯ ನಡುವೆ ಒಂದು ಬೌದ್ಧ ಗುರುವಿನ ಆಶ್ರಮ. ನದಿಯ ದಡದಲ್ಲೊಂದು ದೊಡ್ಡ ಗೇಟು. ಗೇಟಿಗೂ ಕುಟೀರಕ್ಕೂ ನಡುವಿನ ಸಂಪರ್ಕ ಸೇತುವೆಯಾಗಿ ಒಂದು ಬೋಟು. ಅಲ್ಲೊಬ್ಬ ಗುರು. ಅವನಿಗೊಬ್ಬ ವರ್ಷದ ಪುಟ್ಟ ಶಿಷ್ಯ. ಶಿಷ್ಯನೋ ಮೀನು, ಕಪ್ಪೆ, ಹಾವುಗಳನ್ನು ಹಿಡಿದು ಅವುಗಳಿಗೆ ಕಲ್ಲು ಕಟ್ಟಿ ಅವುಗಳು ಈಸಲು ಪರದಾಡುವುದನ್ನು ನೋಡಿ ಖುಷಿಪಡುವವ. ಇದನ್ನು ನೋಡಿದ ಗುರು ರಾತ್ರಿ ಶಿಷ್ಯನ ಬೆನ್ನಿಗೆ ಕಲ್ಲೊಂದನ್ನು ಕಟ್ಟಿ ನೋವಿನ ಅರಿವು ಮೂಡಿಸುತ್ತಾನೆ. ಭಾರದಿಂದ ಮುಕ್ತಿ ಬೇಕಾದರೆ ಬೆನ್ನ ಭಾರ ಹೊತ್ತುಕೊಂಡು ಹೋಗಿ ಹಿಂಸಿಸಿದ ಜೀವಿಗಳನ್ನು ಬಿಡುಗಡೆಗೊಳಿಸಲು ಗುರು ಆಜ್ಙಾಪಿಸುತ್ತಾನೆ. ಮೀನು ಹಾವು ಸತ್ತಿರುವುದನ್ನು ನೋಡಿದ ಬಾಲಕ ದುಃಖಪಡುತ್ತಾನೆ.
          ಕಾಲ ಬದಲಾಗುತ್ತದೆ. ಬಾಲಶಿಷ್ಯ ಈಗ ಯುವಕನಾಗಿದ್ದಾನೆ.  ಬೇಸಿಗೆಯ ಕಾಲದ ಅದೊಂದು ದಿನ ಒಬ್ಬಳು ತಾಯಿ ತನ್ನ ಹದಿಹರೆಯದ ಮಗಳನ್ನು ಕರೆದುಕೊಂಡು ಆಶ್ರಮಕ್ಕೆ ಬರುತ್ತಾಳೆ. ಗುರುವಿನ ಆದೇಶದಂತೆ ಖಿನ್ನತೆಯಿಂದ ಬಳಲುತ್ತಿದ್ದ ಯುವತಿಯನ್ನು ಚಿಕಿತ್ಸೆಗಾಗಿ ಆಶ್ರಮದಲ್ಲಿ ಬಿಟ್ಟು ತೆರಳುತ್ತಾಳೆ. ಬರುಬರುತ್ತಾ ಯುವತಿಗೂ ಹಾಗೂ ಯುವ ಶಿಷ್ಯನಿಗೂ ಆಕರ್ಷಣೆ ಉಂಟಾಗಿ ಇಬ್ಬರೂ ದೈಹಿಕವಾಗಿಯೂ ಒಂದಾಗುತ್ತಾರೆ. ಇದು ಗುರುವಿಗೂ ಗೊತ್ತಾಗುತ್ತದೆ. ಯುವತಿ ಮನೋರೋಗದಿಂದ ಚೇತರಿಸಿಕೊಂಡಿದ್ದರಿಂದ ಗುರು ಆಕೆಯನ್ನು ಅವಳ ತಾಯಿಯ ಹತ್ತಿರ ಕಳುಹಿಸುತ್ತಾನೆ. ವಿರಹ ತಾಳಲಾರದ ಯುವಕ ಅದೊಂದು ದಿನ ಬುದ್ಧನ ಮೂರ್ತಿಯನ್ನು ಎತ್ತಿಕೊಂಡು ಆಶ್ರಮವನ್ನು ತೊರೆದು ಯುವತಿಯತ್ತ ಹೊರಡುತ್ತಾನೆ.
          ಮಳೆಗಾಲದ ಆರಂಭ ಕಾಲ. ಗುರು ತಿಂಡಿ ಕಟ್ಟಿಸಿಕೊಂಡು ಬಂದ ವೃತ್ತ ಪತ್ರಿಕೆಯಲ್ಲಿ ಆತನ ಶಿಷ್ಯನ ಪೊಟೋ ಹಾಗೂ ವಿವರಗಳಿರುತ್ತವೆ. ತನ್ನ ಹೆಂಡತಿ ಅನೈತಿಕ ಸಂಬಂಧ ಹೊಂದಿರುವುದನ್ನು ಸಹಿಸದೆ ಆಕೆಯನ್ನು ಕೊಲೆಮಾಡಿ ತಲೆ ತಪ್ಪಿಸಿಕೊಂಡ ಶಿಷ್ಯನ ಸುದ್ದಿ ಗುರುವಿಗೆ ತಿಳಿಯುತ್ತದೆ. ನಂತರ ಶಿಷ್ಯನೂ ಗುರುವಿನ ಆಶ್ರಮಕ್ಕೆ ಬುದ್ಧನ ಮೂರ್ತಿಯೊಂದಿಗೆ ಮರಳಿ ಬಂದು ಪಶ್ಚಾತ್ತಾಪ ಪಡುತ್ತಾನೆ. ಆತ್ಮಹತ್ಯೆಗೂ ಪ್ರಯತ್ನಿಸಿ ಗುರುವಿನಿಂದ ಶಿಕ್ಷಿಸಲ್ಪಡುತ್ತಾನೆ. ತನ್ನ ವರ್ತನೆಯಲ್ಲಿ ಬದಲಾವಣೆಮಾಡಿಕೊಳ್ಳುತ್ತಾನೆ. ಪೊಲೀಸರು ಬಂದು ಆತನನ್ನು ಕೊಲೆ ಆರೋಪದ ಮೇಲೆ ಬಂಧಿಸಿ ಕರೆದೊಯ್ಯುತ್ತಾರೆ. ಕೊನೆಗೆ ಗುರು ತನ್ನನ್ನು ತಾನೇ ಅಗ್ನಿಗಾಹುತಿಮಾಡಿಕೊಂಡು ಪ್ರಾಣಬಿಡುತ್ತಾನೆ


          ಚಳಿಗಾಲ ಆರಂಭವಾಗುತ್ತದೆ. ಗಿಡಮರಗಳ ಎಲೆಗಳೆಲ್ಲಾ ಉದುರಿ ಬೆಟ್ಟ ಬೋಳಾದಂತಿರುತ್ತದೆ. ಹಿಮಪಾತದಿಂದಾಗಿ ನದಿಗೆ ನದಿಯೇ ಹೆಪ್ಪುಗಟ್ಟಿ ಮಂಜುಗಡ್ಡೆಯಾಗುತ್ತದೆ. ಜೈಲಿಂದ ಬಿಡುಗಡೆಯಾದ ಶಿಷ್ಯ ಮರಳಿ ಆಶ್ರಮಕ್ಕೆ ಬರುತ್ತಾನೆ. ಗುರುವಿನ ಅಗಲಿಕೆ ತಿಳಿದು ದುಃಖಿತನಾಗುತ್ತಾನೆ. ಸಮರ ಕಲೆಯಲ್ಲಿ ಸಾಧನೆಯನ್ನು ಮುಂದುವರೆಸುತ್ತಾನೆ. ಅದೊಂದು ದಿನ ಮುಸುಕುದಾರಿ ಮಹಿಳೆಯೊಬ್ಬಳು ಎರಡು ವರ್ಷದ ಮಗುವೊಂದನ್ನು ಹೊತ್ತು ತಂದು ಆಶ್ರಮಕ್ಕೆ ಬರುತ್ತಾಳೆ. ಮಗುವನ್ನು ಬಿಟ್ಟು ಮರಳಿ ಹೋಗುವಾಗಿ ನದಿಯೊಳಗೆ ಮುಳುಗಿ ಸಾಯುತ್ತಾಳೆ. ತನ್ನ ಬೆನ್ನಿಗೆ ತಾನೇ ಕಲ್ಲೊಂದನ್ನು ಕಟ್ಟಿಕೊಂಡ ನವಗುರು ಬುದ್ದನ ವಿಗೃಹವನ್ನು ಕೈಯಲ್ಲಿಡಿದುಕೊಂಡು ಕಡಿದಾದ ಬೆಟ್ಟ ಏರಿ ಅದರ ತುದಿಯಲ್ಲಿ ವಿಗ್ರಹವನ್ನು ಸ್ಥಾಪಿಸುತ್ತಾನೆ. ಮೂಲಕ ತಾನು ಮಾಡಿ ಪಾಪಗಳಿಗೆ ಪಶ್ಚಾತ್ತಾಪ ಅನುಭವಿಸುತ್ತಾನೆ.
          ಮತ್ತೆ ವಸಂತಕಾಲ ಬರುತ್ತದೆ. ನದಿಯ ದಡದ ಹೆಬ್ಬಾಗಿಲು ತೆರೆಯುತ್ತದೆ. ಆತ ಗುರುವಾಗಿದ್ದಾನೆ. ಮಹಿಳೆ ತಂದು ಕೊಟ್ಟ ಮಗು ಬಾಲಕನಾಗಿದ್ದಾನೆ. ಮತ್ತೆ ಮರಿ ಶಿಷ್ಯ ಆರಂಭದ ಶಿಷ್ಯನ ಹಾಗೆಯೇ ಮೀನು, ಕಪ್ಪೆ, ಹಾವುಗಳಿಗೆ ಹಿಂಸಿಸಿ ಆನಂದಪಡುತ್ತಾನೆ. ಬೆಟ್ಟದ ಮೇಲಿನ ಬುದ್ದನ ಪ್ರತಿಮೆ ಇದೆಲ್ಲವನ್ನು ಗಮನಿಸುತ್ತಲೇ ಇರುತ್ತದೆ.
          ಇದು ಸ್ಪ್ರಿಂಗ್-ಸಮ್ಮರ್-ಫಾಲ್-ವಿಂಟರ್....ಆಂಡ್ ಸ್ಪ್ರಿಂಗ ಎನ್ನುವ ದಕ್ಷಿಣ ಕೋರಿಯಾದ ಸಿನೆಮಾದ ಸಂಕ್ಷಿಪ್ತ ಕಥೆ. 2003 ರಲ್ಲಿ ಬಿಡುಗಡೆಯಾದ ಚಲನಚಿತ್ರದ ನಿರ್ದೇಶಕ ಕಿಮ್ ಕಿ-ಡುಕ್. ಮನುಷ್ಯನ ಬದುಕಿನ ವಿವಿಧ ಆವಸ್ಥೆಗಳನ್ನು ಪ್ರಕೃತಿಯ ಋತುಮಾನಗಳ ಬದಲಾವಣೆಗೆ ಸಮೀಕರಿಸಿ ಅದ್ಬುತವಾದ ಕಥೆಯೊಂದನ್ನು ಸಿನೆಮಾ ಕಟ್ಟಿಕೊಡುತ್ತದೆ. ಬುದ್ಧನ ಆಸೆಯೆ ದುಃಖಕ್ಕೆ ಮೂಲ ಕಾರಣ ಎನ್ನುವ ತತ್ವವನ್ನು ಆಧರಿಸಿ ಇಡೀ ಕಥೆಯನ್ನು ನಿರೂಪಿಸಲಾಗಿದೆ. ಪರಿವರ್ತನೆ ಮತ್ತು ಪುನರಾವರ್ತನೆ ಜಗದ ನಿಯಮ, ಅದು ಮನುಷ್ಯನಿಗೂ ಮತ್ತು ಪ್ರಕೃತಿಗೂ ಅನ್ವಯಿಸುತ್ತದೆ ಎನ್ನುವುದನ್ನು ಸಿನೆಮಾ ಸಾಬೀತು ಪಡಿಸುತ್ತದೆ

          ಲಾಂಗು, ಮಚ್ಚು, ಕ್ರೈಂ, ಸೆಕ್ಸ್ ಹಾಗೂ ಅಪಹಾಸ್ಯದ ಸಿನೆಮಾಗಳನ್ನು ನೋಡಿ ಬೇಸರವಾಗಿದ್ದರೆ ಒಮ್ಮೆ ದಕ್ಷಿಣ ಕೋರಿಯಾದ ಸಿನೆಮಾವನ್ನು ನೋಡಲೇಬೇಕು. ಅದ್ಭುತವಾದ ನಯನಮನೋಹರ ಲೊಕೇಶನ್, ಅತ್ಯಂತ ಸರಳ ಹಾಗೂ ಸುಂದರವಾದ ಶಾಟ್ಗಳು, ಅನನ್ಯ ಸಿನೆಮಾಟೋಗ್ರಫಿ, ಅತ್ಯಂತ ಸರಳವಾದ ಹಾಗೂ ನೇರವಾದ ನಿರೂಪನೆ, ಅತೀ ಕಡಿಮೆ ಪಾತ್ರಗಳು, (ಕೇವಲ ಎರಡೇ ಪ್ರಮುಖ ಪಾತ್ರಗಳು)... ಇದು ನಿಜಕ್ಕೂ ಬರೀ ಸಿನೆಮಾ ಅಲ್ಲ... ಅದೊಂದು ದೃಶ್ಯಕಾವ್ಯ. ಇಡೀ ಸಿನೆಮಾದ ಪ್ರತಿ ಪ್ರೇಮ್ ಕೂಡಾ ಒಂದೊಂದು ಕಲಾತ್ಮಕ ಪೇಂಟಿಂಗ್ ರೀತಿಯಲ್ಲಿ ಮೂಡಿಬಂದಿದೆ.  
          ಬರೀ ಮಾತಿನ ಸಿನೆಮಾಗಳು ಪ್ರೇಕ್ಷಕರ ಮನಸ್ಸಿಗೆ ರೇಜಿಗೆಯನ್ನು ಹುಟ್ಟಿಸುತ್ತವೆ. ಆದರೆ ಸಿನೆಮಾದಲ್ಲಿ ಮಾತುಗಳೇ ವಿರಳ. ಸಿನೆಮಾ ಅಂದರೆ ಬರೀ ಮಾತುಗಳು, ತಾಂತ್ರಿಕ ಗಿಮಿಕ್ಗಳು, ಚಿತ್ರವಿಚಿತ್ರ ಪೈಟಿಂಗ್ಸಗಳು, ಅರೆಬೆತ್ತಲೆ ಐಟಂ ಸಾಂಗ್ಗಳು... ನಾಯಕ ನಾಯಕಿಯರ ವೈಭವೀಕರಣ... ಎಂದೇ ತಿಳಿದಿರುವ ನಮಗೆ ಸ್ಪ್ರಿಂಗ್-ಸಮ್ಮರ್-ಫಾಲ್-ವಿಂಟರ್....ಆಂಡ್ ಸ್ಪ್ರಿಂಗ ಸಿನೆಮಾ ತಣ್ಣನೆಯ ವಾತಾವರಣದಲ್ಲಿ ಬಣ್ಣನೆಗೆ ನಿಲುಕದ ಅನುಭೂತಿಯನ್ನು ಕೊಡುವಂತಿದೆ. ಸೂಕ್ಷ್ಮವಾಗಿ ಅವಲೋಕಿಸಿದರೆ ಮನುಷ್ಯನ ಬದುಕಿನ ಒಳಮರ್ಮವನ್ನೇ ಬಿಚ್ಚಿಡಲಾಗಿದೆ. ಬುದ್ದನ ಮೂಲ ತತ್ವಗಳನ್ನು ಪ್ರತ್ಯಕ್ಷವಾಗಿ ಹಾಗೂ ಸಾಂಕೇತಿಕವಾಗಿ ಸಿನೆಮಾದಾದ್ಯಂತ ದೃಶ್ಯಗಳ ಮೂಲಕ ಹೇಳಲಾಗಿದೆ.

 ನಿರ್ದೇಶಕ ಕಿಮ್ ಕಿ-ಡುಕ್
        ನಿಜ ಹೇಳಬೇಕೆಂದರೆ ದಕ್ಷಿಣ ಕೋರಿಯಾದ ಸಿನೆಮಾ ಕ್ಷೇತ್ರಕ್ಕೆ ನೂರಾರು ವರ್ಷದ ಇತಿಹಾಸವಿಲ್ಲ. ಕಳೆದ ಎರಡು ದಶಕಗಳಲ್ಲಿ ಗಮನಾರ್ಹ ಸಿನೆಮಾಗಳನ್ನು ದೇಶ ನಿರ್ಮಿಸಿದೆ. ಜಗತ್ತಿನ ಸಾರ್ವಕಾಲಿಕ ಶ್ರೇಷ್ಟ ಸಿನೆಮಾಗಳನ್ನು ತಯಾರಿಸುವ ಕೆಲವೇ ದೇಶಗಳಲ್ಲಿ ದಕ್ಷಿಣ ಕೋರಿಯಾ ಮುಂಚೂಣಿಯಲ್ಲಿದೆ. ಓಲ್ಡ್ ಬಾಯ್, ದಿ ಗುಡ್, ದಿ ಬ್ಯಾಡ್, ದಿ ವಿಯರ್ಡ್, ಮೆಮೋರಿಸ್ ಆಪ್ ಮರ್ಡರ್.... ಮುಂತಾದ  ಸಾರ್ವಕಾಲಿಕ ಚಲನಚಿತ್ರಗಳನ್ನು ತಯಾರಿಸಿ ವಿಸ್ಮಯಗೊಳಿಸಿದೆ. ಬೇರೆ ಭಾಷೆಗಳಿಂದ ರಿಮೇಕ್ ಹಾಗೂ ರಿಮಿಕ್ಸಗಳಲ್ಲೇ ನಿರತರಾಗಿರುವ ಬಹತೇಕ ಕನ್ನಡ ನಿರ್ಮಾಪಕ ನಿರ್ದೇಶಕರು ರಿಮೇಕ್ ಮಾಡೋದೇ ಆದರೆ ಮಸಾಲೆ ಸಿನೆಮಾಗಳನ್ನು ಬಿಟ್ಟು ದಕ್ಷಿಣ ಕೋರಿಯಾ ಸಿನೆಮಾಗಳತ್ತ ಒಂದು ನೋಟ ಹರಿಸಬೇಕಿದೆ. ದಕ್ಷಿಣ ಕೋರಿಯಾದ ಸಿನೆಮಾಗಳನ್ನು  ನೋಡಿದರೆ ಒಂದು ರೀತಿಯಲ್ಲಿ ಸಂತಸವಾದರೂ ಇನ್ನೊಂದು ರೀತಿಯಲ್ಲಿ ಅಸೂಯೆಯೂ ಉಂಟಾಗುತ್ತದೆ. ಯಾಕೆಂದರೆ ಅಂತಹ ಸಿನೆಮಾಗಳು ಕನ್ನಡದಲ್ಲಿ ಯಾಕೆ ಬರುತ್ತಿಲ್ಲ ಎಂದು ಬೇಸರವೂ ಆಗುತ್ತದೆ. ಒಟ್ಟಾರೆಯಾಗಿ ಸ್ಪ್ರಿಂಗ್-ಸಮ್ಮರ್......ಆಂಡ್ ಸ್ಪ್ರಿಂಗ  ಸಿನೆಮಾ ನೋಡಲೇ ಬೇಕಾದ ಚಲನಚಿತ್ರ


                                                    -ಶಶಿಕಾಂತ ಯಡಹಳ್ಳಿ

         
         



1 ಕಾಮೆಂಟ್‌: