ಸೋಮವಾರ, ನವೆಂಬರ್ 4, 2013

ಸುರೇಶ ನಾಮ ಪಾಯಸಕ್ಕೆ, ಗಣೇಶ ನಾಮ 'ಸಕ್ಕರೆ' :














ಸುರೇಶ ನಾಮ ಪಾಯಸಕ್ಕೆ, ಗಣೇಶ ನಾಮ 'ಸಕ್ಕರೆ' :

         
       ಆಕೆ ಸುಂದರವಾದ ಹುಡುಗಿ. ಮಂಗಳೂರಿನ ಬೆಡಗಿ. ಹೆಸರು ನೇಹಾ. ಬದುಕಲ್ಲಿ ಏನಾದರೂ ಸಾಧಿಸಬೇಕು ಎಂದು ಹಂಬಲಿಸುತ್ತಿದ್ದಳು. ಸಂಗೀತ ನುಡಿಸುವುದನ್ನು ಕಲಿತು ಫೇಮಸ್ ಆಗಬೇಕೆಂದು ಗಿಟಾರ್ ಕಲಿಯಲು ಕ್ಲಾಸ್ಗೆ ಹೋಗಿ ತರಬೇತಿ ಕೊಡುವವನನ್ನೇ ಪ್ರೀತಿಸಿದಳು. ಆದರೆ ಆತ ಮತ್ತೊಬ್ಬಳ ಜೊತೆ ರೋಮ್ಯಾನ್ಸ ಮಾಡೋದನ್ನ ನೋಡಿ ಭ್ರಮನಿರಸನಗೊಂಡು ಮಂಗಳೂರು ಬಿಟ್ಟು ಬೆಂಗಳೂರು ಸೇರಿದಳು. ಮತ್ತೆ ಫೇಮಸ್ ಆಗುವ ಹುಚ್ಚಿನಿಂದ ಟಿವಿ  ದಾರಾವಾಹಿಯಲ್ಲಿ ಅಭಿನಯಿಸುವ ಅವಕಾಶ ಗಿಟ್ಟಿಸಿಕೊಂಡು ಅಲ್ಲಿ ದಾರಾವಾಹಿಯೊಂದರ ನಾಯಕ ನಟನ ಮಾತಿಗೆ ಮರುಳಾಗಿ ಮತ್ತೆ ಪ್ರೀತಿಯಲ್ಲಿ  ಬಿದ್ದಳು. ಆದರೆ ಆತ ಇನ್ನೊಬ್ಬಳಿಗೂ ಇದೇ ರೀತಿ ಪ್ರೀತಿಸುವ ಮರಳು ಮಾತುಗಳನ್ನು ಹೇಳುವುದನ್ನು ಕೇಳಿ ಜೀವನದಲ್ಲೇ ಜಿಗುಪ್ಸೆಗೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದಳು.  ನೇಣು ಹಾಕಿಕೊಂಡಾಗ ಪ್ಯಾನ್ ಕಿತ್ತು ಆಕೆಯ ಕಾಲಿನ ಮೇಲೆ ಬಿದ್ದು ಗಾಯಗೊಂಡಳು. ನಂತರ ಬೆಂಗಳೂರು  ಬಿಟ್ಟು ಆಕೆಯ ಅಕ್ಕ ಸ್ನೇಹಾಳ ಜೊತೆಗಿರಲು ಮಡಿಕೇರಿಗೆ ಹೋದಳು.
          ಅಲ್ಲೊಬ್ಬನಿದ್ದ ರೋಮಿಯೋ. ಹೆಸರು ವಿನ್ನಿ ಅಲಿಯಾಸ್ ವಿನಯ್. ತನ್ನನ್ನ ತಾನೇ ವಿನ್ನಿ ದಿ ಬಾಜಿಗರ್ ಎಂದು  ಕರೆದುಕೊಳ್ಳುತ್ತಿದ್ದ. ಅಸಾಧ್ಯ ಮಾತುಗಾರ. ಕಥೆಗೆ ಕಥೆ ಕಟ್ಟುವುದರಲ್ಲೀ  ನಿಸ್ಸೀಮ. ತನ್ನ ಮಾತಿನ ಮೋಡಿಯಲ್ಲಿ ಏನನ್ನಾದರೂ ಸಾಧಿಸುವೆನೆಂಬ ಛಲದಂಕಮಲ್ಲ. ನೆರೆಮನೆಯ ಸ್ನೇಹಾಳ ಜೊತೆ ಆತನಿಗೆ ಒಂದಿಷ್ಟು  ಗೆಳೆತನವಿತ್ತು. ಆಕೆಯ ತಂಗಿ ನೇಹಾಳ ವಿಫಲ ಪ್ರೇಮದ ಕಥೆ ಕೇಳಿ ಆಕೆಯನ್ನು ತನ್ನ ಪ್ರೇಮದ ಬಲೆಗೆ ಬೀಳಿಸಿಕೊಳ್ಳಲು ಒಂದು ಸ್ಕೆಚ್ ಹಾಕಿದ. ನೇಹಾ ಹೇಳಿದ ಕಥೆಯನ್ನು ತನ್ನ ಅನುಕೂಲಕ್ಕೆ ತಕ್ಕಂತೆ ಇಂಪ್ರೂವೈಸ್ ಮಾಡಿ ಆಕೆಯ ಎರಡೂ ವಿಫಲ ಪ್ರೇಮಕಥೆಯಲ್ಲಿ ತನ್ನನ್ನು ಒಂದು ಪಾತ್ರ ಎಂಬಂತೆ ಕಥೆ ಕಟ್ಟಿ ನೇಹಾಳನ್ನು ನಂಬಿಸಿದ

      ನೇಹಾ ಅಂಗಡಿಗೆ ಬಂದಾಗ ಗಿಟಾರ್ ಕೊಡಲು ಹೇಳಿದ್ದು, ಇಂತದೇ ಕ್ಲಾಸ್ಗೆ ಹೋಗಿ ಕಲಿಯಲು ಅಡ್ರೆಸ್ ಒದಗಿಸಿದ್ದು, ನೇಹಾ ಗಿಟಾರ್ ಕಲಿಯುತ್ತಿದ್ದ ಕ್ಲಾಸಿನಲ್ಲೆ ತಾನೂ  ಡ್ರಮ್ಮರ್ ಆಗಿದ್ದು, ನೇಹಾಳ ತಂಟೆಗೆ ಹೋಗದಂತೆ ಗಿಟಾರ್ ತರಬೇತುದಾರನನ್ನು  ತದುಕಿದ್ದು,      ನೇಹಾಳ ಪ್ರೇಮಿ ಇನ್ನೊಬ್ಬಳ ಜೊತೆಯಲ್ಲಿದ್ದಾಗ ಆಕೆಗೆ ಪೋನ್ ಮಾಡಿ ಮಾಹಿತಿ ಕೊಟ್ಟಿದ್ದು, ಮುಂದೆ ನೇಹಾಳು ಬೆಂಗಳೂರಿಗೆ ಬಂದು ಧಾರಾವಾಹಿಯಲ್ಲಿ ನಟಿಸುವುದು ತಿಳಿದು ತಾನೂ ಜೂನಿಯರ್ ಆಕ್ಟರ್ ಆಗಿ ಸೇರಿದ್ದು. ಆಕೆ ಆತ್ಮಹತ್ಯೆ ಪ್ರಯತ್ನದಲ್ಲಿ ವಿಫಲಳಾಗಿ ಆಸ್ಪತ್ರೆಗೆ ದಾಖಲಾದಾಗ ಅವನೂ  ಅಲ್ಲೇ ಇದ್ದದ್ದು, ಸಿಟ್ಟಿನಿಂದ ಹೋಗಿ ಆಕೆಯ ಆತ್ಮಹತ್ಯೆಗೆ ಕಾರಣನಾದ ದಾರಾವಾಹಿ ನಾಯಕ ನಟನನ್ನು ಅಟ್ಟಾಡಿಸಿಕೊಂಡು ಹೊಡೆದದ್ದು, ಹೀಗೆ ... ಯಾವಾಗಲೂ ಆಕೆಯ ಹಿಂದೆ ಇದ್ದೆ , ಒಂಚೂರು ತಿರುಗಿ  ನೋಡಿದ್ದರೆ ಸಿಗುತ್ತಿದ್ದೆ ಎಂದು ನಂಬಿಕೆ ಬರುವಂತೆ ಆಕೆಯ ಕಥೆಯ ಘಟನಾವಳಿಗಳಲ್ಲಿ ತನ್ನಪಾತ್ರವನ್ನು ಬಿಂಬಿಸಿಕೊಳ್ಳುತ್ತಾನೆ. ಮೂಲಕ ನೇಹಾಳ ಪ್ರೀತಿಯನ್ನು ಗಿಟ್ಟಿಸಿಕೊಳ್ಳಲು ಪ್ರಯತ್ನಿಸುತ್ತಾನೆ.
          ಮಡಿಕೇರಿಯಲ್ಲಿ ನೇಹಾಳಿದ್ದ ಮನೆಯ ಎದುರಿಗೆ ಇನ್ನೆರಡು ಮನೆಗಳಿರುತ್ತವೆ. ಒಂದರಲ್ಲಿ ರಿಟೈರ್ಡ್ ಮಿಲಿಟರಿ ಶೆಪ್ ಕರ್ನಲ್ ಕಾರಿಯಪ್ಪ ಮದುವೆಯಾಗದೇ ಒಂಟಿಯಾಗಿದ್ದರೆ, ಇನ್ನೊಂದು ಮನೆಯಲ್ಲಿ ಬ್ಯಾಂಕ್  ಮ್ಯಾನೇಜರ್ ವಸುಂದರಾ ಒಬ್ಬಂಟಿಯಾಗಿರುತ್ತಾಳೆ. ನೇಹಾ ಒಂದು  ದಿನ ಇಬ್ಬರು ಅಂಕಲ್ ಆಂಟಿಗಳ ಸಂಬಂಧಗಳ ಕುರಿತು ಪ್ರಶ್ನೆ ಕೇಳುತ್ತಾಳೆ. ಅಷ್ಟಕ್ಕೆ   ವಿನ್ನಿ  ಇಬ್ಬರೂ ಒಂಟಿ ಜೀವಿಗಳನ್ನು ಒಂದು ಮಾಡಲು ತನ್ನ ಮಾತಿನ ಮೋಡಿಯನ್ನು ಬಳಸಿ, ಸುಳ್ಳು ಸಂಬಂಧದ ಕಥೆ ಕಟ್ಟಿ, ಮದರ್ ಸೆಂಟಿಮೆಂಟನ್ನು ಹುಟ್ಟಿಸಿ, ಕೊನೆಗೂ ಅವರಿಬ್ದರೂ ಒಂದಾಗುವಂತೆ ಮಾಡಿ ನೇಹಾಳ ಕಣ್ಣಲ್ಲಿ ಹೀರೊ ಆಗುತ್ತಾನೆ. ಜೊತೆಗೆ  ಸ್ನೇಹಾ ಹಾಗೂ ಆಕೆಯ ಗೆಳೆಯ ಇಬ್ಬರೂ ಒಬ್ಬರಿಗೊಬ್ಬರು ಪ್ರೇಮ ನಿವೇದನೆ ಮಾಡುವಂತೆ ಪ್ರೇರೇಪಿಸಿ ಅವರಿಬ್ಬರನ್ನೂ ಒಂದು ಗೂಡಿಸುವ ಮೂಲಕ ವಿನ್ನಿ ನೇಹಾಳ ಹೃದಯದಲ್ಲಿ ಪ್ರೇಮದ ಕನಸು ಚಿಗುರಿಸುತ್ತಾನೆ. ಹಾಗೆಯೇ ವಿನ್ನಿಗೊಬ್ಬ ಮಾವನಿರುತ್ತಾನೆ. ಆತ ನಾಟಿವೈದ್ಯ ಪಂಡಿತ. ಕ್ಲಿನಿಕ್ ಇಡಲು ಸಾಲಕ್ಕಾಗಿ ಅಲೆದಾಡುತ್ತಿರುತ್ತಾನೆ. ಆಂಟಿ  ವಸುಂಧರಾ ಮ್ಯಾನೇಜರ್ ಆಗಿರುವ ಬ್ಯಾಂಕಿಗೆ ಹೋಗಿ ಅಲ್ಲಿ ಕೂಡಾ ನಾಟಕವಾಡಿದ ವಿನ್ನಿ ಬ್ಯಾಂಕಿನಿಂದ ಸಾಲ ಸ್ಯಾಂಕ್ಷನ್ ಮಾಡಿಸುತ್ತಾನೆ. ಹೊಸ ಕ್ಲಿನಿಕ್ ಆರಂಭವಾಗುತ್ತದೆ.
          ಕೊನೆಗೊಂದು ದಿನ ತನ್ನ ಪ್ರೇಮವನ್ನು ನಿವೇದನೆ ಮಾಡಿಕೊಳ್ಳಲು ವಿನ್ನಿಯ ಮನೆಗೆ ನೇಹಾ ಬರುತ್ತಾಳೆ. ಅಲ್ಲಿ ವಿನ್ನಿ ತನ್ನ ಮಾವನ ಹತ್ತಿರ ತಾನು ಹೇಗೆ ನೇಹಾಳ ಬದುಕಿನ ಪ್ರೇಮ ಕಥೆಯಲ್ಲಿ ತನ್ನ ಪಾತ್ರವನ್ನು ಸೃಷ್ಟಿಸಿಕೊಂಡು ಹೇಳಿ ಅವಳನ್ನು ನಂಬಿಸಿದೆ ಎನ್ನುವುದನ್ನು ಹೇಳುತ್ತಿರುತ್ತಾನೆ. ಅದನ್ನು ಮರೆಯಲ್ಲಿ  ನಿಂತು ಕೇಳಿದ ನೇಹಾ ಕುದಿಯುತ್ತಾಳೆ. ವಿನ್ನಿ ಕೆನ್ನೆಗೆ ಬಾರಿಸಿ ಜಲಪಾತವೊಂದರ ಹತ್ತಿರ ಬಂದು ನಿಂತು ಎಲ್ಲಾ ಯಾಕೆ ನನ್ನ ಭಾವನೆಗಳ ಜೊತೆ ಆಟವಾಡುತ್ತಾರೆ? ಎಂದು ದುಃಖಿಸುತ್ತಾಳೆ. ಆತ್ಮಹತ್ಯೆ ಮಾಡಿಕೊಳ್ಳಲು ಆಲೋಚಿಸುತ್ತಾಳೆ.


  ಅದೇ ಸಮಯಕ್ಕೆ ನೇಹಾಳ ತಂದೆ ಮಂಗಳೂರಿನಿಂದ ಸ್ನೇಹಾಳ ಮನೆಗೆ ಬರುತ್ತಾರೆ. ವಿನ್ನಿ ಮತ್ತು ಆತನ ಮಾವ ಕೂಡಾ ನೇಹಾಳನ್ನು ಹುಡುಕಿಕೊಂಡು ಸ್ನೇಹಾಳ ಮನೆಗೆ ಬರುತ್ತಾರೆ. ಆದ ಕತೆಯನ್ನೆಲ್ಲಾ ವಿವರಿಸುತ್ತಾರೆ. ನೇಹಾಳ ಅಪ್ಪ ಸಿಟ್ಟಿನಿಂದ ವಿನ್ನಿಗೆ ದೂರಹೋಗಲು ಹೇಳುತ್ತಾನೆ. ಜಲಪಾತದ ಹತ್ತಿರ ಪಾನಿಪುರಿ ಅಂಗಡಿಯ ಪುಟ್ಟ ಹುಡುಗನೊಬ್ಬ ನೇಹಾ ಜಲಪಾತದಲ್ಲಿ ಬಿದ್ದಳು ಎಂದು ವಿನ್ನಿಗೆ ಪೋನ್ ಮಾಡುತ್ತಾನೆ. ಆತಂಕದಿಂದ ಓಡಿಹೋದ ವಿನ್ನಿ ಪ್ರಜ್ಞೆ ಇಲ್ಲದೇ ನದಿಯ ದಂಡೆಯಲ್ಲಿ ಬಿದ್ದಿದ್ದ ನೇಹಾಳನ್ನು ಕರೆತಂದು ಆಸ್ಪತ್ರೆಗೆ ಸೇರಿಸುತ್ತಾನೆ.    ವಿಷಯ ತಿಳಿದ ಆಕೆಯ ಅಕ್ಕ ಹಾಗೂ ತಂದೆ ಆಸ್ಪತ್ರೆಗೆ ಓಡಿ ಬರುತ್ತಾರೆ.   ಅನಾಹುತಕ್ಕೆಲ್ಲಾ ವಿನ್ನಿನೇ ಕಾರಣ ಎಂದು ತಿಳಿದ ಆಕೆಯ ತಂದೆ ವಿನ್ನಿಯನ್ನು ನಿಂದಿಸಿ ಆಕೆಯ ಬದುಕಿನಿಂದ ದೂರ ಹೊರಟು ಹೋಗು ಎಂದು  ಒತ್ತಾಯಿಸುತ್ತಾನೆ. ಇದರಿಂದ ಮನನೊಂದ ವಿನ್ನಿ ತನ್ನ ಮಾವನಿಗೆ ಒಂದು ಪತ್ರ ಬರೆದಿಟ್ಟು  ಮಡಕೇರಿ ಬಿಟ್ಟು ಬಸ್ ಹತ್ತಿ ಹೊರಡುತ್ತಾನೆ.
          ಇತ್ತ ಆಸ್ಪತ್ರೆಯಲ್ಲಿ ಎಚ್ಚರಗೊಂಡ ನೇಹಾ  ತಾನೇನು ಆತ್ಮಹತ್ಯೆಗೆ ಪ್ರಯತ್ನಿಸಿಲ್ಲ. ಕಾಲು ಜಾರಿ ನದಿಗೆ ಬಿದ್ದೆ, ವಿನ್ನಿ ನನಗೆ ಬೇಕೆ ಬೇಕು ಎನ್ನುತ್ತಾಳೆ. ಅನ್ಯಾಯವಾಗಿ ವಿನ್ನಿಯನ್ನು ದೂರ ಓಡಿಸಿದ್ದಕ್ಕಾಗಿ ಆಕೆಯ ತಂದೆ ಪಶ್ಚಾತ್ತಾಪ ಪಡುತ್ತಾನೆ. ಕೊನೆಗೆ ಎಲ್ಲರೂ ವಿನ್ನಿಗಾಗಿ ಹುಡುಕಾಟ ಆರಂಭಿಸುತ್ತಾರೆ. ವಿನ್ನಿ ಹೋಗುತ್ತಿದ್ದ ಬಸ್ಸನ್ನು ಅಡ್ಡಗಟ್ಟಿ ಆತನನ್ನು ಕೆಳಕ್ಕಿಳಿಸುತ್ತಾರೆ. ಕೊನೆಗೆ ವಿನ್ನಿ ಹಾಗೂ ನೇಹಾ ಒಂದಾಗುತ್ತಾರೆ. ಇಲ್ಲಿಗೆ   ಕಥೆ ಮುಕ್ತಾಯವಾಗುತ್ತದೆ.
          ಇದು.... 2013, ಅಕ್ಟೋಬರ್ 18 ರಂದು ಬಿಡುಗಡೆಯಾದ ಅಭಯ್ಸಿಂಹ ನಿರ್ದೇಶನದ ಸಕ್ಕರೆ ಸಿನೆಮಾದ ಸಂಕ್ಷಿಪ್ತ ಕಥೆ. ಸಿನೆಮಾವನ್ನು ನಿರ್ಮಿಸಿದವರು ಬಿ.ಸುರೇಶ್ ದಂಪತಿಗಳು. ವಿನ್ನಿಯಾಗಿ ಗೋಲ್ಡನ್ ಸ್ಟಾರ್ ಗಣೇಶ ತಮ್ಮ ಮಾಮೂಲಿ ದಾಟಿಯಲ್ಲಿ ನಟಿಸಿದ್ದರೆ, ನೇಹಾ ಆಗಿ ದೀಪಾ ಸನ್ನಿಧಿ ಸೊಗಸಾಗಿ ಅಭಿನಯಿಸಿದ್ದಾರೆ. ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡಬೇಕು ಎನ್ನುವ ಗಾದೆಯಂತೆ ನೂರಾರು ಸುಳ್ಳು ಹೇಳಿ ಹುಡುಗಿಯನ್ನು ಪ್ರೀತಿಸಲೇಬೇಕು, ಶತಾಯ ಗತಾಯ ಆಕೆಯನ್ನು  ಪಡೆಯಲೇಬೇಕು ಎನ್ನುವ ಒನ್ಲೈನ್ ಥೀಮ್ ಇರುವ  ಸಿನೆಮಾ ಮುಂಗಾರು ಮಳೆ ಸಿನೆಮಾದ ನೆರಳಚ್ಚಿನಂತೆಯೇ ಮೂಡಿ ಬಂದಿದೆ. ಮುಂಗಾರುಮಳೆಯಲ್ಲೂ ಸಹ ನಾಯಕ ತನ್ನ ಮಾತಿನ ಮೋಡಿಯ ಮೂಲಕವೇ ನಾಯಕಿಯನ್ನು ಪ್ರೀತಿಸಲು, ಪಡೆಯಲು ಇನ್ನಿಲ್ಲದಂತೆ ಪ್ರಯತ್ನಿಸಿ ವಿಫಲನಾಗಿ ತ್ಯಾಗರಾಜನಾಗುತ್ತಾನೆ. ಕೊಟ್ಟಕೊನೆಗೆ ಹೇಗೋ ನಾಯಕ ನಾಯಕಿ ಒಂದಾಗುತ್ತಾರೆ. ಇನ್ನೊಂದು ಮುಂಗಾರುಮಳೆಯನ್ನು ಸೃಷ್ಟಿಸಲು, ಅಂತಹ ಯಶಸ್ಸನ್ನು ಗಿಟ್ಟಿಸಲು  ಸಕ್ಕರೆ ಸಿನೆಮಾ ನಿರ್ಮಾಣವಾದಂತಿದೆ. ಚಿತ್ರದ ಕ್ಲೈಮ್ಯಾಕ್ಸ ಸಿಕ್ಕಾಪಟ್ಟೆ ನಾಟಕೀಯವಾಗಿದೆ. ಅದೆಷ್ಟೋ ಸಿನೆಮಾಗಳಲ್ಲಿ ಈಗಾಗಲೇ ಬಂದುಹೋಗಿದೆ.
          ಮುಂಗಾರು ಮಳೆ ಮತ್ತು ಸಕ್ಕರೆ ಎರಡೂ ಸಿನೆಮಾ ಕಥೆಯ ಮೂಲ ಆಶಯವೂ ಒಂದೆ ಆದರೂ ನಿರೂಪನಾ ತಂತ್ರಗಾರಿಕೆ ಒಂದಿಷ್ಟು ಭಿನ್ನವಾಗಿದೆ. ಒಬ್ಬ ನಾಯಕ ಇನ್ನೊಬ್ಬಳು ನಾಯಕಿ-ಪ್ರೇಮ ಪ್ರೀತಿ ಪರದಾಟ-ವಿರಹ ನೋವು ಸಾವು ಜಲಪಾತ-ಕೊನೆಗೆ ಪ್ರೇಮಿಗಳ ಮಿಲನ-ಶುಭಂ ಇದು ಪ್ರಸ್ತುತ ಮಾಸ್ ಸಿನೆಮಾಗಳ ಟ್ರೆಂಡ್ ಆಗಿದೆ. ಏನಾದರೂ ಮಾಡು ಹುಡುಗಿಯನ್ನು ಕಾಳುಹಾಕಿ ಪಟಾಯಿಸು, ಸಮಯಕ್ಕೊಂದು ಸುಳ್ಳು ಹೇಳಿ ಯಾಮಾರಿಸಿ ಪ್ರೀತಿಸು, ಹೆಚ್ಚೆಚ್ಚು ಬಿಲ್ಡಪ್ ತೋರಿಸಿ, ಮಾತಿನ ಮೋಡಿಯಲ್ಲಿ  ಸುಂದರ ಹುಡುಗಿಯನ್ನು ಪರವಶಗೊಳಿಸಿ ಪಡೆಯಲು ಪ್ರಯತ್ನಿಸು.  ಎನ್ನುವ ಆಶಯವುಳ್ಳ  ಸಿನೆಮಾಗಳು ಪುಂಕಾನುಪುಂಕವಾಗಿ ಬರುತ್ತಲೇ ಇವೆ. ಕಳೆದ ಹತ್ತು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಮೂಡಿ ಬಂದ ಬಹುತೇಕ ಸಿನೆಮಾಗಳನ್ನು ಅದರಲ್ಲೂ ಪ್ರೇಮಕಥೆಗಳ ಚಲನಚಿತ್ರಗಳನ್ನು ಅವಲೋಕಿಸಿದಾಗ ಬಹುತೇಕ ಸಿನೆಮಾಗಳು   ಮೇಲೆ ತಿಳಿಸಿದ ಸೂತ್ರಗಳಲ್ಲೇ ನೇಯಲಾಗಿದೆ. ಹೇಗಾಗಿಯೇ ಜನುಮದ ಜೋಡಿ ಇಲ್ಲವೆ ಮುಂಗಾರುಮಳೆಯಂತಹ ಸಿನೆಮಾಗಳು ಯಶಸ್ವಿಯಾಗಿವೆಯಾದರೂ ಸಿದ್ದ ಸೂತ್ರಗಳಿಂದ ನಿರ್ಮಿತಿಗೊಂಡ ಪ್ರತಿಶತ ೮೦ ಭಾಗ ಸಿನೆಮಾಗಳು ಜನರಿಂದ ತಿರಸ್ಕೃತಗೊಂಡಿವೆ.

   ಯಾರೋ ವ್ಯಾಪಾರಿ ಮನೋಭಾವದಿಂದ ಸಿನೆಮಾ ನಿರ್ಮಿಸುವ ನಿರ್ಮಾಪಕರು ಇಂತಹ ಸಿನೆಮಾಗಳನ್ನು ಮಾಡಿದರೆ ಅವರ ಹಣೆಬರಹ ಎಂದುಕೊಂಡು  ಸುಮ್ಮನಾಗಬಹುದಾಗಿತ್ತು. ಆದರೆ ಸಕ್ಕರೆ ನಿರ್ಮಾಪಕರು ಬಿ.ಸುರೇಶ. ಅರ್ಥ, ಪುಟ್ಟಕ್ಕನ ಹೈವೆಯಂತಹ ಸೃಜನಾತ್ಮಕ ಚಲನಚಿತ್ರಗಳನ್ನು ರಚಿಸಿ ನಿರ್ದೇಶಿಸಿದವರು. ಪ್ರಗತಿಪರ ಚಳುವಳಿಯಲ್ಲಿ ಭಾಗವಹಿಸಿದವರು. ಜನಜಾಗೃತಿಗಾಗಿ ಬೀದಿನಾಟಕಗಳನ್ನು  ಆಡಿದವರು, ಹದಿನೈದಕ್ಕೂ ಹೆಚ್ಚು ವಿಶಿಷ್ಟ ನಾಟಕಗಳನ್ನು ರಚಿಸಿದವರು, ಹತ್ತಕ್ಕು ಹೆಚ್ಚು ದಾರಾವಾಹಿಗಳನ್ನು ನಿರ್ದೇಶಿಸಿದವರು. ಇಂತಹ ಕ್ರಿಯಾಶೀಲ ವ್ಯಕ್ತಿ  ಸಕ್ಕರೆಯಂತಹ ಸೂತ್ರಬದ್ದ ವ್ಯಾಪಾರಿ ಸಿನೆಮಾವನ್ನು ನಿರ್ಮಿಸಿದ್ದಾರೆ ಎನ್ನುವುದೇ ಅಚ್ಚರಿಯ ವಿಷಯ. ಯಾಕೆಂದರೆ ಇಡೀ ಸಕ್ಕರೆ ಸಿನೆಮಾದಲ್ಲಿ ಎಲ್ಲಿಯೂ ವೈಚಾರಿಕ ಅಂಶ ಹುಡುಕಿದರೂ ಸಿಕ್ಕುವುದಿಲ್ಲ. ಮನರಂಜನೆಯೂ ಪೂರ್ಣಪ್ರಮಾಣದಲ್ಲಿ ನೋಡುಗರಿಗೆ ದಕ್ಕುವುದಿಲ್ಲ. ರಂಜನೆಯ ಮೂಲಕ ಬೋಧನೆ ಎನ್ನುವ ಅವರ ನಂಬಿಕೆಗೆ ಇಂಬುಕೊಡುವಂತಹ ಯಾವುದೇ ವಿಚಾರಗಳೂ ಇಲ್ಲಿಲ್ಲ. ಸಮಾಜಕ್ಕೆ ಸಕ್ಕರೆ ಯಾವುದೇ ಸಂದೇಶವನ್ನಾಗಲೀ, ಕೊಡುಗೆಯನ್ನಾಗಲೀ ಕೊಡುವುದೂ ಇಲ್ಲಾ.
          ಆದರೂ ಯಾಕೆ ಇಂತಹ ಕಮರ್ಸಿಯಲ್ ಸಿನೆಮಾ ನಿರ್ಮಾಣಕ್ಕೆ ಬಿ.ಸುರೇಶ ಇಳಿದರು. ಏನನ್ನು ನಿರೀಕ್ಷಿಸಿ ಅನಾಮತ್ತು  ಐದು ಕೋಟಿ ಹಣವನ್ನು ಇನ್ವೆಸ್ಟ್ ಮಾಡಿದರು.  ಮುಂಗಾರುಮಳೆ ಸಿನೆಮಾದ ಹಾಗೆ ಹಣ ಮಾಡುವ ಇರಾದೆಯಾ? ವ್ಯಾಪಾರಿ ಸಿನೆಮಾವೊಂದನ್ನು ಮಾಡಿ ಅದೃಷ್ಟವನ್ನು ಪರೀಕ್ಷಿಸುವ ವ್ಯವಧಾನವಾ? ಇಲ್ಲವೇ ತಮ್ಮ ಶಿಷ್ಯ ಗಣೇಶನ ಮುಖಮೌಲ್ಯವನ್ನು ಕ್ಯಾಶ್ ಮಾಡಿಕೊಳ್ಳುವ ಪ್ರಯತ್ನವಾ? ಅಥವಾ ಅಭಯ್ಸಿಂಹರವರ ನಿರ್ದೇಶನದ ಮೇಲಿಟ್ಟ ಅಪಾರವಾದ ಭರವಸೆಯಾ? ಗೊತ್ತಿಲ್ಲ.  ಸಿನೆಮಾ ಗೆಲ್ಲಬೇಕು, ಸಿಕ್ಕಾಪಟ್ಟೆ ಹಣ ಸಂಪಾದಿಸಬೇಕು. ಅದರಿಂದ ಬಂದ ಲಾಭದ ಹಣದಲ್ಲಿ ಬಿ.ಸುರೇಶ್ ಹಲವಾರು  ಸೃಜನಾತ್ಮಕ ಸಿನೆಮಾಗಳನ್ನು ನಿರ್ಮಿಸಬೇಕು ಎನ್ನುವುದು  ಬಹುತೇಕ ಸುರೇಶರವರ ಸ್ನೇಹಿತರ, ಹಿತೈಷಿಗಳ ಆಶಯವಾಗಿತ್ತು. ಆದರೆ ಅದ್ಯಾಕೋ ಸುರೇಶ್ರವರ ಸಕ್ಕರೆಗೆ ಪ್ರೇಕಕರೆಂಬೋ ಇರುವೆಗಳು ಮುತ್ತುತ್ತಿಲ್ಲ. ನಿರೀಕ್ಷಿಸಿದಷ್ಟು ಯಶಸ್ಸು ಗಿಟ್ಟುತ್ತಿಲ್ಲ.
          ಇಷ್ಟಕ್ಕೂ ಸಕ್ಕರೆ ಸಿನೆಮಾ ಯಾವ ಮೌಲ್ಯವನ್ನು ಪ್ರತಿಪಾದಿಸುತ್ತದೆ?. ಪ್ರೀತಿಯ ಪರಾಕಾಷ್ಟೆಯನ್ನಾ? ಪ್ರೇಮದ ಹೆಸರಿನಲ್ಲಿ ನಡೆಯುವ ನಂಬಿಕೆ ದ್ರೋಹವನ್ನಾ? ಅಥವಾ ಪ್ರೀತಿಗಾಗಿ ಏನನ್ನಾದರೂ ಮಾಡಬೇಕು ಎನ್ನುವ ಗುರಿಯನ್ನಾ? ಪ್ರೀತಿ ಸಿಗದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳಬೇಕು ಎನ್ನುವ ನಿರಾಶಾವಾದಿ ಆಶಯವನ್ನಾ?.... ಒಟ್ಟಾರೆಯಾಗಿ ಸಿನೆಮಾ ಪ್ರತಿಬಿಂಬಿಸುವ ಯಾವ ಮೌಲ್ಯಗಳೂ ಜೀವಪರವಾಗಿಲ್ಲ. ಸಮಾಜಮುಖಿಯೂ ಆಗಿಲ್ಲ. ಮೋಸದಿಂದ ಪ್ರೀತಿಸುವುದು, ವಂಚನೆಯಿಂದ ಯಾಮಾರಿಸುವುದು, ಮಾತಿನ ಮೋಡಿಯಲ್ಲಿ ನಂಬಿಕೆ ದ್ರೋಹ ಮಾಡುವುದು... ಇವು ಅನುಕರಿಸಬಹುದಾದ ನೈತಿಕ ಮೌಲ್ಯಗಳಲ್ಲ

      ಸಿನೆಮಾ ಎನ್ನುವುದು ಅತ್ಯಂತ ಪ್ರಭಾವಶಾಲಿಯಾದ ಮಾಧ್ಯಮ. ಸಿನೆಮಾದ ನಾಯಕ ನಾಯಕಿಯರನ್ನು ಜನತೆ ಅನುಕರಿಸಲು ಪ್ರಯತ್ನಿಸುತ್ತಾರೆ. ಇಂತಹ ಸಿನೆಮಾ ಅನುಕರಣೆ ಎಂತಹ ಮಟ್ಟಕ್ಕಿಳಿಯುತ್ತದೆಂದರೆ, ಉಪೇಂದ್ರನ ಒಂದು ಸಿನೆಮಾ ನೋಡಿ ಪ್ರೀತಿಸಿದವಳು ಸಿಗಲಿಲ್ಲ ಎನ್ನುವ ಸಿಟ್ಟಿನಲ್ಲಿ ಆಕೆಯ ಮುಖಕ್ಕೆ ಆಸಿಡ್ ಎರಚುವಂತಹ ಹಲವಾರು ಘಟನೆಗಳು ನಡೆದವು.  ಜೋಗಿ ಸಿನೆಮಾದ ಹೊಡಿ ಮಗ ಹಾಡು ಕೇಳಿ ಸಿನೆಮಾ ಥೇಯಟರ್ನಲ್ಲಿ ಹೊಡದಾಟಗಳು  ಶುರುವಾಗುವ ಹಂತಕ್ಕೆ ನಕಾರಾತ್ಮಕ ಸಿನೆಮಾಗಳು ಪ್ರಭಾವ ಬೀರುತ್ತವೆ. 
          ಪ್ರಸ್ತುತ ಲವ್ ಓರಿಯಂಟೆಡ್ ಸಿನೆಮಾಗಳು ಪ್ರೀತಿ ಮಾಡುವುದೇ ಬದುಕಿನ ಪರಮೋಚ್ಚ ಗುರಿ ಎನ್ನುವ ಹಾಗೆ ಸಮಾಜದ ಯುವ ಜನತೆಯಲ್ಲಿ ಹುಸಿ ಭ್ರಮೆಯನ್ನು ಬಿಂಬಿಸುತ್ತಲೆ ಬಂದಿವೆ. ಇಂತಹ ಸಿನೆಮಾಗಳ ಪ್ರೇರೇಪಣೆಯಿಂದಾಗಿ ಅದೆಷ್ಟೋ ಯುವಶಕ್ತಿ ಪ್ರೀತಿ ಪ್ರೇಮದ ಚಕ್ಕರ್ನಲ್ಲಿ ಬಿದ್ದು ತಮ್ಮ ನಿಜವಾದ ಬದುಕಿನಿಂದ ವಿಮುಖವಾಗುತ್ತಿವೆ. ಅದೆಷ್ಟೋ ಅಮೂಲ್ಯ ಜೀವಗಳು ಆತ್ಮಹತ್ಯೆಗೆ ಶರಣಾಗಿವೆ. ಇದಕ್ಕೆ ತಾಜಾ ಉದಾಹರಣೆ ಇದೇ ಸಕ್ಕರೆ ಸಿನೆಮಾದ ಕಲಾ ನಿರ್ದೇಶಕನದ್ದಾಗಿದೆ.
          ಸಕ್ಕರೆ ಸಿನೆಮಾದ ಹಾಡುಗಳನ್ನು ಗಮನಿಸಿ. ಯಾವುದೇ ಹಾಡುಗಳೂ ಕಥೆಗೆ ಪೂರಕವೂ ಆಗಿಲ್ಲ, ಸಿನೆಮಾಗೆ ಅವುಗಳ ಅಗತ್ಯವೂ ಇರಲಿಲ್ಲ. ಹಾಡುಗಳು ಕಥೆಯ ಮುಂದುವರಿಕೆಯ ಭಾಗವಾಗದೇ ಕಥೆಯ ಓಟಕ್ಕೆ ಅಡೆತಡೆಯನ್ನುಂಟುಮಾಡುವಂತೆ ಮೂಡಿಬಂದಿವೆ. ಒತ್ತಾಯ ಪೂರ್ವಕವಾಗಿ ಹಾಡುಗಳನ್ನು ತುರುಕಿದಂತೆನೆಸುತ್ತದೆ. ಆದರೆ...   ಎಲ್ಲಾ ಹಾಡುಗಳ ಸೆಟ್ಗಳ ವಿನ್ಯಾಸವನ್ನೊಮ್ಮೆ ಗಮನಿಸಿದರೆ ವಿಸ್ಮಯ ಉಂಟಾಗುತ್ತದೆ. ಕಲಾ ನಿರ್ದೇಶಕ ಶಶಾಂಕ ಸಾಲಿಗ್ರಾಮ ಅದ್ಬುತ ಲೋಕವೊಂದನ್ನು ಸೃಷ್ಟಿಸಿದ್ದಾರೆ. ಅವರ ಸೌಂದರ್ಯ ಪ್ರಜ್ಞೆಯ ವಿರಾಟ ರೂಪ ಅವರ ಕಲಾನಿರ್ಮಾಣದಲ್ಲಿ ಕಂಡುಬರುತ್ತದೆ. ಎಲ್ಲಾ ಹಾಡುಗಳೂ ಅತ್ಯಂತ ಕಲಾತ್ಮಕವಾಗಿ ಹಾಗೂ ಶ್ರೀಮಂತವಾಗಿ ಮೂಡಿ ಬಂದಿವೆ.  ಶಶಿಧರ್ ಅಡಪರವರ ಗರಡಿಯಲ್ಲಿ ಪಳಗಿದ ಶಶಾಂಕ ಮೊಟ್ಟ ಮೊದಲ ಬಾರಿಗೆ ಸ್ವತಂತ್ರ ಕಲಾನಿರ್ದೇಶಕನಾಗಿ ಸಕ್ಕರೆಯಲ್ಲಿ ತೊಡಗಿಸಿಕೊಂಡಿದ್ದರು. ಅದೇ ಅವರ ಕೊಟ್ಟಕೊನೆಯ ಸಿನೆಮಾ ಆಗುತ್ತದೆಂದು ಯಾರೂ ಊಹಿಸಿರಲಿಲ್ಲ. ಇಂತಹ ಅನನ್ಯ ಯುವ ಕ್ರಿಯಾಶೀಲ ಕಲಾ ನಿರ್ದೇಶಕ ಸಕ್ಕರೆ ಸಿನೆಮಾದ ಕೆಲಸವನ್ನು ಮುಗಿಸಿದ ನಂತರ ಆತ್ಮಹತ್ಯೆ ಮಾಡಿಕೊಂಡು ತೀರಿಕೊಂಡ ಎನ್ನುವುದು ನಂಬಲೂ ಅಸಾಧ್ಯವೆನಿಸುವ ಸತ್ಯ ಘಟನೆ.
          ಇನ್ನೂ ಮೂವತ್ತು ದಾಟದ ಪ್ರೌಢ ವಯಸ್ಸು, ಕೈತುಂಬಾ ಕೆಲಸ, ಮನಸ್ಸಿನ ತುಂಬಾ ಕಲಾ ಚಿತ್ತಾರಗಳು, ಯಾವುದೇ ಆರ್ಥಿಕ ಸಮಸ್ಯೆಗಳಿಲ್ಲ.... ಈಗಷ್ಟೇ ಒಳ್ಳೆಯ ಹೆಸರು ಮತ್ತು ಯಶಸ್ಸು ಸಿಗಲು ಆರಂಭವಾಗಿದೆ. ಎಲ್ಲವೂ ಇರುವಾಗ ಎಲ್ಲವನ್ನೂ ಬಿಟ್ಟ ಕಲಾವಿದ ಶಶಾಂಕ ಅಕಾಲ ಮೃತ್ಯುವನ್ನು ಆಹ್ವಾನಿಸಿದ್ದು ಯಾಕೆ? ಅದಕ್ಕೆ ಕಾರಣ ಮತ್ತೇನಿಲ್ಲ ಸಕ್ಕರೆ ಸಿನೆಮಾದ ನಾಯಕಿಯ ಮನಸ್ಥಿತಿ. ಅದು ಪ್ರೇಮ ವೈಪಲ್ಯ.  ಪ್ರೀತಿ ಪ್ರೇಮದ ವಿಪರೀತದ ಸುಳಿಗೆ ಸಿಲುಕಿ ಕ್ರಿಯಾಶೀಲ ಜೀವವೊಂದು ೨೦೧೩ ಫೆಬ್ರುವರಿ ೭ರಂದು ಮುರುಟಿ ಹೋಯಿತು.  ನಿನ್ನೆ ಮೊನ್ನೆ ಬಂದ ಒಂದು  ಹುಡುಗಿಗಾಗಿ ಶಶಾಂಕ ಹುಟ್ಟಿನಿಂದ ಪ್ರೀತಿಸಿದ ತಂದೆ, ತಂಗಿ, ಬಂದು ಬಳಗವನ್ನು ನಿರ್ಲಕ್ಷಿಸಿ ಬಾರದ ಲೋಕಕ್ಕೆ ಹೊರಟುಹೋದ. ಬದುಕಿಗಿಂತ ಹೆಚ್ಚಾಗಿ ಪ್ರೀತಿಸಿದ ಕಲೆ, ಸಿನೆಮಾ... ಎಲ್ಲವನ್ನೂ ತೃಣವಾಗಿಸಿ ತಾನಂದುಕೊಂಡಂತೆ ಬಯಸಿದ ಪ್ರೀತಿ ಸಿಗಲಿಲ್ಲ ಎಂದು ನೊಂದು ಸಾವಿನ ಸೆರಗು ಹಿಡಿದು ನೇಪತ್ಯಕ್ಕೆ ಜಾರಿಹೋದ. ತನ್ನ ಸಾವನ್ನು ತನ್ನ ಕೈಯಾರ ತಂದುಕೊಂಡ. ಈಗೇನು ಹೇಳೋದು ಪ್ರೀತಿಗೆ ದಿಕ್ಕಾರವೆಂದೋ, ಇಲ್ಲಾ ಜೈಕಾರವೆಂದೋ? ಯಾವನಿಗೆ ಗೊತ್ತು? ಇಂತಹ ಅದೆಷ್ಟೊ ಶಶಾಂಕಗಳು, ಅದೆಷ್ಟೋ ಯುವ ಪ್ರೇಮಿಗಳು ಪ್ರೀತಿಯ ಅತಿರೇಕಕ್ಕೆ ಬಿದ್ದು ಅಮೂಲ್ಯವಾದ ಬದುಕನ್ನು ಕಳೆದುಕೊಳ್ಳುತ್ತಿವೆ.    ಪ್ರೀತಿ ಎನ್ನುವ ಭಾವನಾತ್ಮಕತೆಯನ್ನು ವೈಭವೀಕರಿಸಿ ತೋರಿಸುತ್ತಾ ಪ್ರೀತಿಯೊಂದೇ ಬದುಕಿನ ಗುರಿ ಎನ್ನುವಂತೆ ವಿಜ್ರಂಭಿಸುತ್ತಿರುವ ಸಿನೆಮಾ ಮಾಧ್ಯಮಗಳು ಇಂತಹ ನಕಾರಾತ್ಮಕ ಭಾವನೆಗಳನ್ನು ಯುವಜನರಲ್ಲಿ ಬಿತ್ತುತ್ತಿದ್ದಾವಾ?   

          ವಾಸ್ತವ ಪ್ರಜ್ಞೆ ಬಿ.ಸುರೇಶರವರಿಗಿದೆ. ಯಾಕೆಂದರೆ ಸಿನೆಮಾ ರಂಗದಲ್ಲಿ ಸೂಕ್ಷ್ಮ ಪ್ರಜ್ಙೆ ಇರುವ, ಸಾಮಾಜಿಕ ಕಳಕಳಿ ಇರುವ ವ್ಯಕ್ತಿಗಳು ಬೆರಳೆಣಿಕೆಯಷ್ಟು ಮಾತ್ರ.  ಅದರಲ್ಲಿ ಬಿ.ಸುರೇಶ ಮುಂಚೂಣಿಯಲ್ಲಿದ್ದಾರೆ. ಆದರೂ ಯಾಕೆ ಇಂತಹ ಸಿನೆಮಾವನ್ನು ನಿರ್ಮಿಸಿದರು? ನಾನು ನನ್ನ ಕನಸು ಎನ್ನುವ ಸಂವೇದನಾಶೀಲ ಸಿನೆಮಾವನ್ನು ನಿರ್ಮಿಸಿದ ಬಿ.ಸುರೇಶರವರಿಂದ ಇಂತಹ ಸಿನೆಮಾಗಳನ್ನು ಪ್ರಗತಿಪರರು ನಿರೀಕ್ಷಿಸಿರಲಿಲ್ಲ. ಸಿನೆಮಾದ ಗೆಲುವು ಮತ್ತು ಸೋಲುಗಳಿಗಿಂತ ಮುಖ್ಯವಾದ ಪ್ರಶ್ನೆ ಇಂತಹ ಸಿನೆಮಾ ಬೇಕಾಗಿತ್ತಾ? ಬಿ.ಸುರೇಶರಂತವರು ನಿರ್ಮಿಸುವ ಅಗತ್ಯವಿತ್ತಾ? 

                                                                                     -ಶಶಿಕಾಂತ ಯಡಹಳ್ಳಿ  

          
         
         


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ