ಬುಧವಾರ, ಫೆಬ್ರವರಿ 5, 2014

“ಡಬ್ಬಿಂಗ್ ಎಂಬ ವಿಕೃತಿ” ಭಾಗ-1



                                   
(ಸೃಷ್ಟಿ ದೃಶ್ಯಕಲಾಮಾಧ್ಯಮ ಅಕಾಡೆಮಿಯು 2014, ಫೆಬ್ರವರಿ 2ರಂದು ದೃಶ್ಯಮಾಧ್ಯಮಗಳಲ್ಲಿ ಡಬ್ಬಿಂಗ್ ಬೇಕೊ ಬೇಡವೊ ಕುರಿತು ವಿಚಾರಸಂಕಿರಣ ಮತ್ತು ಸಂವಾದ ಕಾರ್ಯಕ್ರಮವನ್ನು ಆಯೋಜಿಸಿತ್ತು. ಸೆಮಿನಾರ್ನಲ್ಲಿ ಡಬ್ಬಿಂಗ್ ಬೇಡವೇ ಬೇಡ ಎಂದು ವಿಚಾರ ಮಂಡಿಸಿದ ಸಿನೆಮಾ, ದೂರದರ್ಶನ ಹಾಗೂ ರಂಗಭೂಮಿಯ ನಿರ್ದೇಶಕ, ನಿರ್ಮಾಪಕ, ನಟ, ಬರಹಗಾರ ಬಿ.ಸುರೇಶ್ರವರ ಅನಿಸಿಕೆಗಳನ್ನು ಹಾಗೂ ನಂತರ ನಡೆದ ಸಂವಾದದಲ್ಲಿ ಕೇಳಲಾದ ಪ್ರಶ್ನೆಗಳಿಗೆ ಸುರೇಶರವರು ಕೊಟ್ಟ ಉತ್ತರಗಳನ್ನು ಇಲ್ಲಿ ದಾಖಲಿಸಲಾಗಿದೆ. ಡಬ್ಬಿಂಗ್ ಯಾಕೆ ಬೇಡ, ಅದು ಬಂದರೆ ಏನಾಗುತ್ತದೆ ಎನ್ನುವುದರ ಕುರಿತು ವಿವರವಾಗಿ ಹೇಳಿದ್ದಾರೆ. ಓದುಗರಿಗೆ ಅನೂಕೂಲಕರವಾಗಲಿ ಎಂದು ಒಂದೊಂದು ಪ್ಯಾರಾಗಳಲ್ಲಿ ಒಂದೊಂದು ವಿಷಯವನ್ನು ಒಪ್ಪವಾಗಿ ಜೋಡಿಸಿ ಸಂದರ್ಶನದ ಮಾದರಿಯಲ್ಲಿ ಕೊಡಲಾಗಿದೆ.)

ಡಬ್ಬಿಂಗ್ ವಿರೋಧಿಸಲೇ ಬೇಕು : ಕಳೆದ ಎರಡು ವರ್ಷಗಳಿಂದ ಡಬ್ಬಿಂಗ್ ವಿರುದ್ದ ಮಾತಾಡಿ ಮಾತಾಡಿ ಸುಸ್ತಾಗಿದ್ದೇನೆ. ಡಬ್ಬಿಂಗ್ ಪರವಾಗಿರುವವರ ಜೊತೆಗೆ, ಹಲವು ಸಂಘಟನೆಗಳೊಂದಿಗೆ, ಮಾಧ್ಯಮಗಳ ಜೊತೆಗೆ, ಸಿಸಿಐನವರ ಜೊತೆಗೆ ವಾದಿಸಿದ್ದೇನೆ. ಹೈಕೋರ್ಟನಲ್ಲಿ ಕೂಡಾ ಡಬ್ಬಿಂಗ್ ವಿರುದ್ದ ಬಡೆದಾಡುತ್ತಿದ್ದೇನೆ.  ನಿರಂತರವಾಗಿ ಚರ್ಚೆಗಳನ್ನು ಮಾಡುತ್ತಲೇ ಇದ್ದೇನೆ. ನಾನು ಎಲ್ಲಾ ಕಾಲಕ್ಕೂ ಡಬ್ಬಿಂಗನ್ನ ವಿರೋಧಿಸುತ್ತೇನೆ. ವಿರೋಧಿಸಬೇಕು.

ಡಬ್ಬಿಂಗ್ ಅಪೂರ್ಣ ಅಭಿನಯ : ಯಾಕೆಂದರೆ.... ಅಭಿನಯದಲ್ಲಿ ನಾಲ್ಕು ಭಾಗವಿದೆ. ಆಂಗಿಕ, ವಾಚಿಕ, ಆಹಾರ್ಯ ಮತ್ತು ಸಾತ್ವಿಕ ಎಂದು. ನಾಲ್ಕು ಸೇರಿದ್ದನ್ನ ನಾವು ಅಭಿನಯ ಎನ್ನುತ್ತೇವೆ. ಆದರೆ ಯಾರದೋ ಆಂಗಿಕಕ್ಕೆ ಇನ್ಯಾರದೋ ವಾಚಿಕ ಸೇರಿದರೆ ಅದಕ್ಕೆ ಅಪೂರ್ಣ ಅಭಿನಯ ಎನ್ನುತ್ತೇವೆ. ನಾವು ಅಮಿತಾಬಚ್ಚನ್ ಅಭಿನಯವನ್ನು ನೋಡುವಾಗ ಕೇವಲ ಅವರ ದೇಹವನ್ನು ಮಾತ್ರ ನೋಡುವುದಿಲ್ಲ. ಅವರ ಬೇಸ್ವೈಸನ್ನ, ಉಸಿರಾಟವನ್ನ, ಮಾತಿನ ಉಚ್ಚಾರಣೆಯನ್ನ ಕೂಡಾ ಗಮನಿಸುತ್ತೇವೆ. ರಜನೀಕಾಂತರ ಸ್ಟೈಲನ್ನು ಮಾತ್ರ ನಾವು ಆಸ್ವಾದಿಸುವುದಿಲ್ಲ ಅದರ ಜೊತೆಗೆ ಅವರು ಭಾಷೆಯನ್ನು ಅಭಿಯನದ ಜೊತೆಗೆ ಬಳಸುವ ರೀತಿಯನ್ನೂ ಸಹ ಅರ್ಥಮಾಡಿಕೊಳ್ಳುತ್ತೇವೆ. ಯಾಕೆಂದರೆ ನಟನೆ ಅನ್ನುವುದು ಉಸಿರನ್ನು ಆಧರಿಸಿದೆ. ಯಾರೋ ಮಾಡಿದ ಅಭಿನಯಕ್ಕೆ ಇನ್ಯಾರೋ ದ್ವನಿ ಕೊಟ್ಟರೆ ಅದು ಕೃತಕ ಆಗುತ್ತದೆ. ಅದು ವಿಕೃತಿ ಯಾಗುತ್ತದೆ.

ಡಬ್ಬಿಂಗ್ ಭಗ್ನವಿಗ್ರಹ : ನಮ್ಮ ದೇಶದಲ್ಲಿ ಭಗ್ನಗೊಂಡ ವಿಗ್ರಹಗಳನ್ನ ಪೂಜಿಸುವ ರೂಢಿಇಲ್ಲ. ಬೇಲೂರು ಹಳೆಬೀಡುಗಳಲ್ಲಿ ಭಗ್ನಗೊಂಡ ವಿಗ್ರಹಗಳಿಗೆ ಪೂಜೆ ಸಲ್ಲಿಸುವುದಿಲ್ಲ. ಹೀಗೆಯೇ ಯಾರದೋ ಅಭಿನಯಕ್ಕೆ ಇನ್ಯಾರದೋ ದ್ವನಿ ಅಳವಡಿಸಿದರೆ ಅದು ಭಗ್ನಗೊಂಡ ವಿಗ್ರಹವಾಗುತ್ತದೆ. ಇದಕ್ಕೆ ಉದಾಹರಣೆಯಾಗಿ ಆಕ್ಷನ್ ಚಾನೆಲ್ನಲ್ಲಿ ಬರುವ ಡಬ್ಬ ಆದ ಸಿನೆಮಾಗಳನ್ನು ನೋಡಿ. ಮೂಲ ಸಿನೆಮಾಗಳಲ್ಲಿ ಚೆನ್ನಾಗಿದ್ದ ನಟನೆ ಡಬ್ ಆದ ಸಿನೆಮಾಗಳಲ್ಲಿ ಅಪಭ್ರಂಶವಾಗಿ ಕಾಣಿಸುತ್ತದೆ. ಕೇವಲ ಕನ್ನಡ ಮಾತ್ರವಲ್ಲ, ಜಗತ್ತಿನ ಯಾವುದೇ ಭಾಷೆಯ ಸಿನೆಮಾಕ್ಕೆ ಮತ್ತೊಂದು ಭಾಷೆಯ ದ್ವನಿಯನ್ನು ಕೊಟ್ಟು ಡಬ್ಬಿಂಗ್ ಮಾಡುವುದನ್ನು ನಾನು ವಿರೋಧಿಸುತ್ತೇನೆ.

ಅಪಂಭ್ರಂಶದಿಂದ ಕನ್ನಡ ನಾಶ : ಉದಾಹರಣೆಗೆ, ಮೈನೇ ಪ್ಯಾರಕಿಯಾ ಎನ್ನುವುದು ಹಿಂದಿ ವಾಕ್ಯ. ಕನ್ನಡಕ್ಕೆ ಇದನ್ನು ಅನುವಾದ ಮಾಡಿದರೆ ನಾನು ಪ್ರೀತಿ ಮಾಡಿದೆ ಎಂದಾಗುತ್ತದೆ. ಇವರಡಕ್ಕೂ ತುಟಿಚಲನೆ ಹೊಂದಾಣಿಕೆ ಆಗುವುದಿಲ್ಲ. ಆಗ ನಾನು ಮಾಡಿದೆ ಪ್ರೀತಿ ಎಂದು ಡಬ್ ಮಾಡಲಾಗುತ್ತದೆ. ಇದರಿಂದ ಭಾಷೆ ವಿಕಾರವಾಗಿ ಬಳಸಲಾಗುತ್ತದೆ. ಕನ್ನಡ ಅಷ್ಟಾಗಿ ಬಾರದಿರುವ ನಮ್ಮ ಮುಂದಿನ ತಲೆಮಾರಿನವರು ಡಬ್ ಆದ ಸಿನೆಮಾಗಳಲ್ಲಿ ಬಳಸಲಾದ ವಿಕೃತ ಕನ್ನಡವನ್ನೇ ನಿಜವಾದ ಕನ್ನಡ ಎಂದು ತಿಳಿದು ಮಾತನಾಡಲು ಶುರು ಮಾಡಿದರೆ ಕನ್ನಡದ ಗತಿ ಏನು? ಕನ್ನಡವನ್ನು ಹೀಗೆ ಅಪಭ್ರಂಶಗೊಳಿಸಿದರೆ ಕನ್ನಡ ಉಳಿಯುವುದಿಲ್ಲ.

ಡಬ್ಬಿಂಗ್ ಅಂದರೆ ಅನುವಾದ ಅಲ್ಲ : ಜೋ ಜೀತಾ ವಹಿ ಸಿಕಂದರ್ ಒಂದು ಜನಪ್ರೀಯ ಹಿಂದಿ ಸಿನೆಮಾ. ಅದರಲ್ಲಿ ವಾಖ್ಯ ಹಲವು ಬಾರಿ ಪುನರಾವರ್ತನೆಗೊಳ್ಳುತ್ತದೆ. ಇದೇ ವಾಕ್ಯವನ್ನು ಕನ್ನಡಕ್ಕೆ ಅನುವಾದ ಮಾಡಿದರೆ ಗೆದ್ದೋನೆ ದೊಡ್ಡೋನು ಅಂತಾಗುತ್ತದೆ. ಹಿಂದಿಯ ಉದ್ದವಾದ ವಾಕ್ಯ ಹೇಳುಲು ಬೇಕಾದ ಅವಧಿಗೂ ಹಾಗೂ ಅದಕ್ಕಿಂತ ಚಿಕ್ಕದಾಗಿರುವ ಕನ್ನಡ ಅನುವಾದಿತ ವಾಕ್ಯ ಹೇಳುವ ಅವಧಿಗೂ ಅಂತರವಿದೆ. ಹೀಗಾಗಿ ತುಟಿ ಚಲನೆಗೆ ಹೊಂದಾಣಿಕೆ ಆಗುವುದಿಲ್ಲ. ಹಾಗೆ ಹೊಂದಾಣಿಕೆ ಮಾಡಲೇಬೇಕಾದಾಗ ಯಾವನು ಗೆದ್ದವನೋ ಅವನೇ ದೊಡ್ಡೋನು ಎಂದು ಹೇಳಬೇಕಾಗುತ್ತದೆ. ಇದು ಕನ್ನಡದ ಹಾಗೇ ಕೇಳುತ್ತೆ ಆದರೆ ವ್ಯಾಕರಣಬದ್ದ ಕನ್ನಡ ಅಲ್ಲ. ಹಲವಾರು ಪುಸ್ತಕಗಳು ಅನ್ಯ ಭಾಷೆಯಿಂದ ಕನ್ನಡಕ್ಕೆ ಅನುವಾದವಾಗ್ತಿವೆಯಲ್ಲಾ, ಸಿನೆಮಾ ಯಾಕೆ ಅನುವಾದ ಮಾಡಬಾರದು? ಎಂದು ಕೇಳುವವರು ಅರ್ಥ ಮಾಡಿಕೊಳ್ಳಬೇಕು ಡಬ್ಬಿಂಗ್ ಅಂದರೆ ಅನುವಾದ ಅಲ್ಲ. ಡಬ್ಬಿಂಗ್ ಅಂದ್ರೆ ವಿಕೃತಿಯೇ ಹೊರತು ಕಲಾಕೃತಿ ಅಲ್ಲ. 

ಸತ್ಯಮೇವ ಜಯತೆ ಮತ್ತು ಡಬ್ಬಿಂಗ್ : ಟೆಲಿವಿಜನ್ ದೃಷ್ಟಿಕೋನದಿಂದ ಆಲೋಚನೆ ಮಾಡಿದರೆ, ಕಳೆದ ಹಲವು ವರ್ಷಗಳಿಂದ ವಾಹಿನಿಗಳು ನಮ್ಮನ್ನು ನಿಯಂತ್ರಿಸುತ್ತಿವೆ. ಮೊದಲ ಬಾರಿಗೆ ಡಬ್ಬಿಂಗ್ ಕುರಿತು ಚರ್ಚೆ ಶುರುವಾಗಿದ್ದು ಸತ್ಯಮೇವ ಜಯತೆ ಭಾಗ ಒಂದು ಕನ್ನಡ ಚಾನೆಲ್ನಲ್ಲಿ ಡಬ್ ಆಗಿ ಬರಬೇಕು ಎಂದಾದಾಗ. ಈಗ ಅದೇ ಸತ್ಯಮೇವ ಜಯತೆ ಭಾಗ ಎರಡು ಚಿತ್ರೀಕರಣ ಶುರುವಾಗಿದೆ ಮತ್ತೆ ಡಬ್ಬಿಂಗ್ ಚರ್ಚೆ ಶುರುಮಾಡಲಾಗಿದೆ. ಇದರ ಹಿಂದಿರುವ ಹುನ್ನಾರವನ್ನ ಅರ್ಥಮಾಡಿಕೊಳ್ಳಬೇಕಾಗಿದೆ. ಸತ್ಯಮೇವ ಒಂದೇ ಒಂದು ಎಪಿಸೋಡ್ ಪ್ರೊಡಕ್ಷನ್ ಕಾಸ್ಟ್ ನಾಲ್ಕು ಕೋಟಿ ಎಪ್ಪತ್ತು ಲಕ್ಷವಾದರೆ, ಅಮೀರ್ಖಾನ್ರವರ ಸಂಭಾವನೆ ಒಂದು ಕೋಟಿ ಎಂಬತ್ತು ಲಕ್ಷ ರೂಪಾಯಿ ಒಟ್ಟು ಒಂದು ಎಪಿಸೋಡ್ ಮಾಡಲಿಕ್ಕೆ ಆರುವರೆ ಕೋಟಿ ರೂಪಾಯಿ ಖರ್ಚು ಮಾಡಲಾಗುತ್ತಿದೆ. ಆದರೆ ನಮ್ಮ ಕನ್ನಡದಲ್ಲಿ ಒಂದು ಅದ್ಬುತವಾದ ಎಪಿಸೋಡ್ ಮಾಡಲಿಕ್ಕೆ ಎರಡುಲಕ್ಷವನ್ನು ಖರ್ಚುಮಾಡಲಾಗುವುದಿಲ್ಲ. ಇದೇ ಸತ್ಯಮೇವ ಬೇರೆಲ್ಲಾ ಭಾಷೆಗಳಿಗೆ ಡಬ್ ಆಗಿತ್ತು. ತಮಿಳುನಾಡಿನಲ್ಲಿ ಅದಕ್ಕೆ ಬಂದ ಟಿಆರ್ಪಿ ಕೇವಲ 0.4. ತೆಲುಗಿನಲ್ಲಿ ಡಬ್ ಆಗಿದ್ದಕ್ಕೆ ಬಂದಿದ್ದು 0.8. ಹಿಂದಿಯಲ್ಲೇ ಭಾರತದಾದ್ಯಂತ ಅದಕ್ಕೆ ಸಿಕ್ಕ ಟಿಆರ್ಪಿ 1.5  ಟಿಆರ್ಪಿ ಯಲ್ಲಿ ಸತ್ಯಮೇವಕ್ಕೆ ಹಾಕಿದ ದುಡ್ಡನ್ನು ಖಂಡಿತಾ ಅದು ಮರಳಿ ಪಡೆದಿರುವುದಿಲ್ಲ. ಕರ್ನಾಟಕದಲ್ಲಿ ಒಂದು ಪಾಯಿಂಟ್ ಟಿಆರ್ಪಿಗೆ ಹುಟ್ಟುವ ಹಣ ಗರಿಷ್ಟ ತೊಂಬ್ಬತ್ತು ಸಾವಿರ ಮಾತ್ರ. ತೊಂಬತ್ತು ಸಾವಿರ ರೂಪಾಯಿಯ ಮಾರುಕಟ್ಟೆ ಅಮೀರ್ಖಾನ್ರವರಿಗೆ ಬೇಕು ಎಂದರೆ ಅವರು ಕನ್ನಡ ಕಲಿತು ಕಾರ್ಯಕ್ರಮ ನಿರ್ಮಿಸಿದರೆ ನಾವು ಒಪ್ಪಿಕೊಳ್ಳುತ್ತೇವೆ. ಇಲ್ಲಿರುವ ಸಾಯಿಕುಮಾರೋ ಇಲ್ಲಾ ಇನ್ಯಾರೋ ಅಮೀರಖಾನರಿಗೆ ದ್ವನಿ ಕೊಡ್ತಾನೆ ಅಂದ್ರೆ ನಾವು ಅದನ್ನ ಒಪ್ಪುವುದಿಲ್ಲ. ಬೇಕಾದರೆ ಅದೇ ಕಾರ್ಯಕ್ರಮಕ್ಕೆ ಕನ್ನಡದ ಸಬ್ ಟೈಟಲ್ ಹಾಕಿ ತೋರಿಸಲಿ. ಕನ್ನಡ ಓದಲಿಕ್ಕೆ ಹೆಚ್ಚು ಜನಕ್ಕೆ ಬರುವುದಿಲ್ಲ ಅನ್ನೋದಾದರೆ ತುಟಿಚಲನೆಗೆ ಮಾತು ಹೊಂದಿಸುವ ಬದಲು ಕನ್ನಡದಲ್ಲಿ ನಿರೂಪನೆ ಮಾಡಲಿ ಬೇಡಾ ಅಂದೋರು ಯಾರು?


ಡಬ್ಬಿಂಗ್ಗೆ ಪರ್ಯಾಯ ಮಾರ್ಗಗಳು : 1996 ರಲ್ಲಿ  ಬಾರ್ಸಿಲೋನಾ ಒಪ್ಪಂದದ ಪ್ರಕಾರ ಯನಿಸೆಪ್ ಎನ್ನುವ ವಿಶ್ವಸಂಸ್ಥೆಯೊಂದು ಲಿಂಗ್ವಿಸ್ಟಿಕ್ ರೈಟ್ಸ್ ಹೆಸರಲ್ಲಿ ಒಂದು ಘೋಷಣೆಯನ್ನು ಮಾಡಿತು. ಒಪ್ಪಂದದ ಪ್ರತಿ ಬೇಕಾದರೆ ಗೂಗಲ್ನಲ್ಲಿ ಸಿಗುತ್ತದೆ. ಅದರಲ್ಲಿ ಐವತ್ನಾಲ್ಕು ಡಿಕ್ಲರೇಷನ್ಗಳಿವೆ. ಅದರಲ್ಲಿ 44 ಮತ್ತು 45 ನೇ ಡಿಕ್ಲರೇಷನ್ ನಮ್ಮ ಭಾಷೆಗಳ ರಕ್ಷಣೆ ಕುರಿತು ಹಾಗೂ ದೃಶ್ಯಮಾಧ್ಯಮಗಳಲ್ಲಿ ಒಂದು ಭಾಷೆಯ ಕೃತಿಯನ್ನು ಇನ್ನೊಂದು ಭಾಷೆಗೆ ತರುವುದರ ಕುರಿತು ಸ್ಪಷ್ಟೀಕರಣಕೊಡುತ್ತದೆ. ಹಾಗೆ ತರುವುದಕ್ಕೆ ಅದು ಐದು ಆಯ್ಕೆಗಳನ್ನು ಕೊಡುತ್ತದೆ. ಮೊದಲನೆಯದು ಸಬ್ ಟೈಟ್ಲಿಂಗ್, ಅಂದರೆ ಉಪಶೀರ್ಷಿಕೆ. ಜಗತ್ತಿನ ಶ್ರೇಷ್ಟ ಸಿನೆಮಾಗಳನ್ನು ಹೀಗೆ ನಾನು ಸಬ್ಟೈಟಲ್ಗಳ ಮೂಲಕ ನೋಡಿ ಅರ್ಥೈಸಿಕೊಂಡಿದ್ದೇನೆ. ಇದು ಅಕ್ಷರ ಓದಲು ಬರುವವರಿಗಾಗಿ ಮಾತ್ರ. ಆದರೆ ಅನಕ್ಷರಸ್ತರೂ ಬೇಕಾದಷ್ಟಿದ್ದಾರೆ. ಅವರಿಗಾಗಿ ಬಾರ್ಸಿಲೋನಾ ಒಪ್ಪಂದ ಎರಡನೆಯದಾಗಿ ಹೀಗೆ ಸೂಚಿಸುತ್ತದೆ. ಅದು ಪ್ಯಾರಾಡಮಿಕ್. ಮೂಲ ಭಾಷೆಯ ದ್ವನಿ ಶೇಕಡ ಮೂವತ್ತರಷ್ಟು ಕಡಿಮೆ ವ್ಯಾಲೂಮ್ನಲ್ಲಿರಬೇಕು ಹಾಗೂ ತುಟಿಚಲನೆಗೆ ಹೊಂದದ ಹಾಗೆ ಪಾತ್ರ ಆಡಿದ ಮಾತಿನ ಅನುವಾದವನ್ನು ಕ್ಲುಪ್ತವಾಗಿ ಹದಿನಾರು ಪ್ರೇಮುಗಳ ನಂತರ ಕೇಳಿಸಬೇಕು. ಇದು ಕೇವಲ ಅರ್ಥವನ್ನು ತಿಳಿಸಲು ಮಾತ್ರ ಬಳಕೆಯಾಗಬೇಕು. ಜಪಾನೀಸ್ ಭಾಷೆಯಲ್ಲಿರುವ ಅಕಿರಾ ಕುರೋಸೊವಾರವರ ಎಲ್ಲಾ ಸಿನೆಮಾಗಳ ಸ್ಟುಡೆಂಟ್ ವರ್ಶನ್ಗಳಲ್ಲಿ ಪ್ಯಾರಾಡಮಿಕ್ನ್ನು ಬಳಸಲಾಗಿದೆ. ಯುಜಿಸಿ ಯು ದೂರದರ್ಶನದ ಜೊತೆ ಸೇರಿ ಶಾಲೆಗಳಲ್ಲಿ ದಿನಕ್ಕೆ ಮೂರು ಗಂಟೆಗಳ ಕಾಲ ಸ್ಯಾಟಲೈಟ್ ಮೂಲಕ ಪಾಠ ಮಾಡಲಾಗುತ್ತಿದೆ. ಅದರಲ್ಲೂ ಸಹ ಪ್ಯಾರಾಡಮಿಕ್ ಮಾದರಿಯನ್ನೇ ಬಳಸಲಾಗಿದೆ. ಮೂರನೆಯದು ರೀಮೇಕ್, ಅಂದರೆ ಪುನರಾವೃತ್ತಿ. ಮೂಲಭಾಷೆಯ ಸಿನೆಮಾವನ್ನೇ ಮತ್ತೆ ಮರು ನಿರ್ಮಿಸುವುದು. ನಾಲ್ಕನೆಯದು ನರೇಶನ್ ಅಂದರೆ ನಿರೂಪನೆ. ನ್ಯಾಷನಲ್ ಜಿಯಾಗ್ರಾಫಿಯಂತಹ ಚಾನೆಲ್ಗಳಲ್ಲಿ ಇದನ್ನು ವ್ಯಾಪಕವಾಗಿ ಬಳಸಿ ಅಲ್ಲಿ ನಡೆಯುವ ಕ್ರಿಯೆಗಳನ್ನು ನಿರೂಪನೆಯ ಮೂಲಕ ತಿಳಿಸಲಾಗುತ್ತದೆ. ಸಾಕ್ಷಚಿತ್ರಗಳಲ್ಲಿ ಇದು ಹೆಚ್ಚಾಗಿ ಬಳಕೆಯಾಗುತ್ತದೆ. ಕೊನೆಯದು ಡಬ್ಬಿಂಗ್. ಐದು ಆಯ್ಕೆಗಳಲ್ಲಿ ಮೊದಲಿನ ನಾಲ್ಕು ಆಯ್ಕೆಗಳನ್ನು ಬಿಟ್ಟು ಕಡೆಯ ಆಯ್ಕೆಯನ್ನು ಯಾಕೆ ಬಯಸುತ್ತಿದ್ದಾರೆ?.

ಜ್ಞಾನವಾಹಿನಿಗಳಲ್ಲಿ ಡಬ್ಬಿಂಗ್ಗೆ ವಿರೋಧವಿಲ್ಲ : ನ್ಯಾಷನಲ್ ಜಿಯಾಗ್ರಾಫಿನಂತಹ ಜ್ಞಾನವಾಹಿನಿಗಳನ್ನು, ಪೋಗೋನಂತಹ ಚಾನೆಲ್ಗಳನ್ನು ಕನ್ನಡದಲ್ಲಿ ನೋಡಬೇಕು ಎನ್ನುವವರಿಗೆ ಯಾರೂ ಬೇಡಾ ಎನ್ನುವುದಿಲ್ಲ. ಈಗಾಗಲೇ ಸುವರ್ಣವಾಹಿಸಿ ಇನ್ನೂರು ಗಂಟೆಯ ನ್ಯಾಷನಲ್ ಜಿಯಾಗ್ರಾಫಿ ಕಾರ್ಯಕ್ರಮವನ್ನು ಕೊಂಡುಕೊಂಡು ಅದರಲ್ಲಿ ಐವತ್ತು ಗಂಟೆಯ ಕಾರ್ಯಕ್ರಮವನ್ನು ಪ್ರತಿ ಶನಿವಾರ ಒಂದು ವರ್ಷ ಪೂರ್ತಿ ಪ್ರಸಾರ ಮಾಡಿದೆ. ಹೀಗೆ ಪ್ರಸಾರ ಮಾಡಿದ್ದಕ್ಕೆ ಸುವರ್ಣ ವಾಹಿನಿಗೆ ಬಂದ ಟಿಆರ್ಪಿ ಕೇವಲ 0.4. ಇಷ್ಟು ಕಡಿಮೆ ಟಿಆರ್ಪಿಗೆ ಯಾರೂ ಜಾಹಿರಾತು ಕೊಡುವುದಿಲ್ಲ.  ಜಾಹಿರಾತು ಬರದೇ ಇರುವುದನ್ನು ಯಾವುದೇ ವಾಹಿನಿಯೂ ಪ್ರಸಾರ ಮಾಡುವುದಿಲ್ಲ. ನೇರವಾಗಿ ಜಿಯಾಗ್ರಾಫಿ ಚಾನೆಲ್ನವರಿಗೆ ಕನ್ನಡದಲ್ಲಿ ಮಾಡಿ ಎಂದು ಕೇಳಿದರೆ ನಿಮ್ಮಲ್ಲಿ ಡಬ್ಬಿಂಗ್ಗೆ ವಿರೋಧವಿದೆ ಎಂದು ಸಬೂಬು ಹೇಳುತ್ತಾರೆ. ಆದರೆ ನಾವು ಅದಕ್ಕೆ ವಿರೋಧ ವ್ಯಕ್ತಪಡಿಸುವುದಿಲ್ಲ. ಇಡೀ ಜಗತ್ತಿನಾದ್ಯಂತ ಚಾನೆಲ್ಗೆ ಇರುವ ಟಿಆರ್ಪಿ ರೇಟಿಂಗ್ ಎಷ್ಟು ಅಂದರೆ 1.2 ಮಾತ್ರ. ಭಾರತದಲ್ಲಿ ಹಿಂದಿ ಮತ್ತು ತಮಿಳಿನಲ್ಲಿ ಡಬ್ ಮಾಡಿ ನ್ಯಾಷನಲ್ ಜಿಯಾಗ್ರಾಫಿ ಚಾನೆಲ್ ಏನು ಪ್ರಸಾರಮಾಡುತ್ತಿದೆಯೋ ದುಡ್ಡನ್ನೂ ಸಹ ಮರಳಿಪಡೆಯಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ನಮಗೆ ಬೇಕು ಎಂದರೂ ಚಾನಲ್ನವರು ಡಬ್ ಮಾಡುವುದಿಲ್ಲ.  ಯಾರೂ ಸಹ ಜ್ಞಾನವಾಹಿನಿಗಳ ಪ್ರಸಾರಕ್ಕೆ ಬೇಡ ಎನ್ನುವುದಿಲ್ಲ. ಆದರೆ ನಮ್ಮ ವಿರೋಧ ಇರುವುದು ಜೀವಂತ ವ್ಯಕ್ತಿಗಳು ಪಾತ್ರವಹಿಸಿರುವ ಮನರಂಜನಾ ಕಾರ್ಯಕ್ರಮಗಳನ್ನು ಡಬ್ ಮಾಡಬೇಡಿ ಎನ್ನುವುದಾಗಿದೆ. 

ಡಬ್ಬಿಂಗ್ ವಿರೋಧಿ ಕಾನೂನು ಬೇಕು : ಡಬ್ಬಿಂಗ್ ವಿರೋಧ ಎನ್ನುವುದು ಒಂದು ಮೌಖಿಕ ಒಪ್ಪಂದವಾಗಿದೆ. ಅದನ್ನು ವಿರೋಧಿಸುವ ಯಾವ ಕಾನೂನೂ ಕೂಡಾ ಇಲ್ಲಾ. ಹಾಗೆ ಕಾನೂನನ್ನು ಮಾಡಬಹುದಾಗಿದೆ.  ನಮ್ಮ ಭಾಷೆಯ ಹಿತಾಸಕ್ತಿಯನ್ನು ಕಾಪಾಡಲು ಕರ್ನಾಟಕದ ಸರ್ಕಾರ ಕಾನೂನು ಮಾಡಲು ಸಾಧ್ಯವಿದೆ. ಅದಕ್ಕೆ ಇಚ್ಚಾಶಕ್ತಿ ಇರುವ ರಾಜಕೀಯ ನಾಯಕರುಗಳು ಇರಬೇಕಾಗುತ್ತದೆ. ಅಂತಹ ನಾಯಕರು ಇಲ್ಲಿವರೆಗೂ ಬಂದಿಲ್ಲಾ, ಮುಂದೆಯೂ ಬರ್ತಾರೆ ಎಂಬ ಭರವಸೆ ಇಲ್ಲಾ. ಅಂತಹ ಇಚ್ಚಾಶಕ್ತಿ ಅನ್ನೋದು ಇದ್ದಿದ್ದರೆ ಸರೋಜಿನಿ ಮಹಿಷಿ ವರದಿ ಜಾರಿಗೆ ತರಲಿಕ್ಕೆ ಇಷ್ಟೊಂದು ವರ್ಷ ಬೇಕಾಗಿತ್ತೆ?. ಮಾತೃಭಾಷೆಯಲ್ಲಿ  ಖಡ್ಡಾಯ ಶಿಕ್ಷಣ ಕೊಡಲು ಯಾಕೆ ಆಗುತ್ತಿಲ್ಲ?. ಮಹಾರಾಷ್ಟ್ರ, ಕೇರಳ, ತಮಿಳುನಾಡಿನಲ್ಲಿ ಆಯಾ ಭಾಷೆಯಲ್ಲಿ ಖಡ್ಡಾಯ ಶಿಕ್ಷಣ ಸಾಧ್ಯವಾಗುವುದಾದರೆ ನಮ್ಮಲ್ಲಿ ಯಾಕೆ ಸಾಧ್ಯವಿಲ್ಲ?.  ಕನ್ನಡ ಮಾಧ್ಯಮ ಶಿಕ್ಷಣಕ್ಕೆ ಒಂದು ಕಾನೂನನ್ನು ಮಾಡದವರು ಡಬ್ಬಿಂಗ್ ವಿರುದ್ಧ ಕಾನೂನನ್ನು ಮಾಡುತ್ತಾರೆ ಎನ್ನುವುದನ್ನು  ನಂಬಲು ಸಾಧ್ಯವಿಲ್ಲ. ಅಕಸ್ಮಾತ್ ಸರಕಾರ ಡಬ್ಬಿಂಗ್ ವಿರೋಧಿ ಕಾನೂನನ್ನು ಮಾಡಿದರೂ ಮತ್ತೆ ಯಾರೋ ಒಬ್ಬರು ಕೋರ್ಟಿಗೆ ಹೋಗಿ ಅದನ್ನು ತಡೆಯುತ್ತಾರೆ.

ಇಮೇಜಿಂಗ್ ಪಾಲಿಟಿಕ್ಸ :  ಅಕಸ್ಮಾತ್ ಡಬ್ಬಿಂಗ್ ಎನ್ನುವುದು ಟೆಲಿವಿಶನ್ ಮಾಧ್ಯಮಕ್ಕೆ ಬಂದರೆ ಏನಾಗುತ್ತದೆ? ಎನ್ನುವುದರ ಕುರಿತು ಆಲೋಚಿಸಬೇಕಿದೆ. ಸುವರ್ಣ, ಝೀ, ಈಟಿವಿ ಅಥವಾ ಉದಯಾ ಟಿವಿ ಇರಬಹುದು ಇವೆಲ್ಲಾ ಬೇರೆ ಭಾಷೆಯ ಮಾಲೀಕರು ನಡೆಸುತ್ತಿರುವ ಚಾನೆಲ್ಗಳು. ಉದಯಾವನ್ನು ಹೊರತುಪಡಿಸಿ ಎಲ್ಲಾ ವಾಹಿನಿಗಳು ರಿಮೇಕ್ ಕಾರ್ಯಕ್ರಮಗಳನ್ನೇ ಪ್ರಸಾರಮಾಡುತ್ತಿವೆ. ಒರಿಜಿನಲ್ ದಾರಾವಾಹಿಗಳನ್ನು ಕರ್ನಾಟಕದಲ್ಲಿ  ಟಿ.ಎನ್.ಸೀತಾರಾಂ, ಸಿಹಿಕಹಿ ಚಂದ್ರೂ ಮತ್ತು ನಾನು ಮಾಡುತ್ತಿರುವುದು. ಎಲ್ಲರೂ ಮಾಡ್ತಿರೋದು ರಿಮೇಕನ್ನೆ. ಪುಟ್ಟಗೌರಿ ಮದುವೆ, ಅಮೃತವರ್ಷಿಣಿ.....ಯಂತಹ ಅನೇಕ ದಾರಾವಾಹಿಗಳು ರಿಮೇಕ್ ಆಗಿವೆ. ಇಂತಹ ಬೇರೆ ಭಾಷೆಗಳಿಂದ ರಿಮೇಕ್ ಮಾಡಿದಂತಹ ದಾರಾವಾಹಿಗಳನ್ನು ನಿರಂತರವಾಗಿ ಪ್ರಸಾರ ಮಾಡುವ ಮೂಲಕ ರೀಮೇಕ್ ಸಂಸ್ಕೃತಿಯನ್ನು ಕನ್ನಡಿಗರಿಗೆ ಅಭ್ಯಾಸ ಮಾಡಿಸುತ್ತಿದ್ದಾರೆ. ಹೀಗೆ ಆದರೆ ಕನ್ನಡಿಗರು ರಿಮೇಕ್ ದಾರಾವಾಹಿಗೆ ಹೊಂದಿಕೊಂಡು ಬಿಡುತ್ತಾರೆ. ಡಬ್ಬಿಂಗ್ ಬಂದರೆ ಅದನ್ನೇ ನಿರಂತರವಾಗಿ ತೋರಿಸಿ ಜನರು ಅದಕ್ಕೆ ಹೊಂದಾಣಿಕೆಯಾಗುವಂತೆ ಮಾಡಲಾಗುತ್ತದೆ. ಇದನ್ನು ನವೋಮ್ ಚಾಮಸ್ಕಿ ಎನ್ನುವ ಅಮೇರಿಕಾದ ಪ್ರಖ್ಯಾತ ಭಾಷಾಶಾಸ್ತ್ರಜ್ಞ ಇಮೇಜಿಂಗ್ ಪಾಲಿಟಿಕ್ಸ ಎಂದು ಕರೆಯುತ್ತಾನೆ. ಉದಾಹರಣೆಗೆ, ಆರೋಗ್ಯವಂತ ಸದ್ದಾಂ ಹುಸೇನನ್ನು ಸೆರೆಹಿಡಿದ ನಂತರ ದೀನನಾದ ಸದ್ದಾಂನನ್ನು ಲೋಕಕ್ಕೆ ತನ್ನ ಮೀಡಿಯಾಗಳ ಮೂಲಕ ತೋರಿಸುತ್ತಾ ತಾನು ಎಷ್ಟು ಸರ್ವಶಕ್ತ ಹಾಗೂ ಸದ್ದಾಂ ಎನ್ನುವವ ಎಂತಹ ರಾಕ್ಷಸ ಎನ್ನುವುದನ್ನು ಇಮೇಜಿಂಗ್ ಪಾಲಿಟಿಕ್ಸ ಮೂಲಕ ಅಮೇರಿಕ ಸಮರ್ಥಿಸಿಕೊಳ್ಳುತ್ತದೆ. ಜನರ ಅಭಿಪ್ರಾಯವನ್ನು ತಮಗೆ ಬೇಕಾದಂತೆ ಬದಲಾಯಿಸುವ ಗುಣ ಇಮೇಜಿಂಗ್ ಪಾಲಿಟಿಕ್ಸ ಗೆ ಇದೆ. ಹೀಗೆಯೇ ಎಲ್ಲಾ ಚಾನೆಲ್ಗಳೂ ಸಹ ಪರಭಾಷೆಯ ವಿವರ, ಕಾರ್ಯಕ್ರಮಗಳನ್ನು ತೋರಿಸುತ್ತಲೇ ಜನರ ಅಭಿಪ್ರಾಯಗಳನ್ನು ತಮ್ಮ ಹಿತಾಸಕ್ತಿಗೆ ಪೂರಕವಾಗಿ ಬದಲಾಯಿಸಿ ಬಿಡುತ್ತಾರೆ. ಇದರಿಂದಾಗಿ ಜನರ ನಡೆ ನುಡಿ ಆಚಾರ ವಿಚಾರ ಸಂಸ್ಕೃತಿ ಬದಲಾಗುತ್ತಾ ಹೋಗುತ್ತದೆ. ಈಗ ರಿಮೇಕ್ಗಳನ್ನು ಬಹುತೇಕ ತೋರಿಸುವ ಚಾನೆಲ್ಗಳು ಜನಾಭಿಪ್ರಾಯವನ್ನು ಬದಲಾಯಿಸಿ ಮುಂದೆ ರಿಮೇಕ್ ಬದಲು ಮೂಲವನ್ನೇ ಡಬ್ಬಿಂಗ್ ಮಾಡಿ ತೋರಿಸುತ್ತೇನೆ ಎನ್ನುತ್ತಾರೆ. ಇದರಿಂದಾಗಿ ಕಥೆ ನೋಡುವ ಅಭ್ಯಾಸದ ಬದಲು ಇಮೇಜನ್ನು ನೋಡುವ ಅಭ್ಯಾಸವನ್ನು ರೂಡಿಮಾಡಿಸಿ ಬಿಡುತ್ತಾರೆ. ಇದು ಇಮೇಜಿಂಗ್ ಪಾಲಿಟಿಕ್ಸ ಬಹು ದೊಡ್ಡ ರಾಜಕಾರಣ.

ಡಬ್ಬಿಂಗ್ ನಾಶಕ್ಕೆ ಗೆಲ್ಲುವ ಮಾದರಿ ಅಸ್ತ್ರ : ಕಳೆದ ಮೂರು ವರ್ಷಗಳಿಂದ ನಾನು ಡಬ್ಬಿಂಗ್ ವಿರುದ್ಧ ಹೋರಾಡುತ್ತಿದ್ದೇನೆ. ಸ್ವತಂತ್ರ ದಾರಾವಾಹಿಗಳನ್ನು ಮಾಡಬೇಕು ಎನ್ನುವುದು ನನ್ನ ಅಭಿಲಾಷೆ. ಅದಕ್ಕೆ ಯಾವ ಚಾನೆಲ್ ಕೂಡಾ ಹೆಚ್ಚು ಪ್ರೋತ್ಸಾಹ ಕೊಡೊಲ್ಲ. ಗೆದ್ದರೆ ಮಾತ್ರ ಕೊಡುತ್ತಾರೆ. ಉದಯಾದಲ್ಲಿ ನನ್ನ ಪ್ರೀತಿ ಪ್ರೇಮ ಗೆದ್ದಿತು. ಅದು ಗೆದ್ದಿದ್ದಕ್ಕೆ ಅಳಗೂಳಿ ಮನೆ ದಾರಾವಾಹಿ ಕೊಟ್ಟರು, ಅದೂ ಗೆದ್ದಿದ್ದಕ್ಕೆ ಮದರಂಗಿ ದಾರಾವಾಹಿ ಸಿಕ್ತು. ಅದೂ ಯಶಸ್ವಿಯಾಗಿದ್ದಕ್ಕೆ ಕಾದಂಬರಿಕಣಜ ದಾರಾವಾಹಿ ಕೊಟ್ಟರು. ಹೀಗೆ ನಾನು ಮಾಡಿದ ಸ್ವತಂತ್ರ ಕೃತಿಗಳು ಯಶಸ್ವಿಯಾಗಿದ್ದರಿಂದ ಉದಯಾದಲ್ಲಿ ಒಂದು ದಾರಾವಾಹಿಯನ್ನು ಹೊರತು ಪಡಿಸಿ ಎಲ್ಲಾ ಎಂಟು ದಾರಾವಾಹಿಗಳೂ ಸಹ ಕನ್ನಡದ ಸ್ವತಂತ್ರ ಕೃತಿಗಳಾಗಿವೆ. ತುಂಬಾ ಕಷ್ಟ ಪಟ್ಟು ನಮ್ಮ ಸಾಮರ್ಥ್ಯವನ್ನು ತೋರಿಸಿ ರೀತಿಯ ಬದಲಾವಣೆಯನ್ನು ಚಾನೆಲ್ನಲ್ಲಿ ತರಲಾಯಿತು. ಜಗತ್ತಲ್ಲಿ ಯಶಸ್ಸನ್ನು ಹಿಂಬಾಲಿಸೋರೇ ಎಲ್ಲಾ, ಸೋಲನ್ನಲ್ಲ. ಒಂದು ಸಿನೆಮಾ ಗೆದ್ದರೆ ಅದೇ ರೀತಿ ಹಲವು ಸಿನೆಮಾಗಳು ಬರುತ್ತವೆ. ಹೀಗಾಗಿ ನಾವು ಗೆಲ್ಲುವ ಮಾದರಿಗಳನ್ನು ಕಟ್ಟಬೇಕು. ಡಬ್ಬಿಂಗ್ ವಿರುದ್ಧದ ಹೋರಾಟಕ್ಕೆ ಅತ್ಯುತ್ತಮವಾದ ಅಸ್ತ್ರ ಗೆಲ್ಲುವ ಮಾದರಿಗಳನ್ನು ಹುಟ್ಟುಹಾಕುವುದು.

ಚಾನೆಲ್ನವರು ಹೇಗೆ ಸುಳ್ಳು ಲೆಕ್ಕ:  ಚಾನೆಲ್ನವರು ಹೇಗೆ ಸುಳ್ಳು ಲೆಕ್ಕಗಳನ್ನು ಸೃಷ್ಟಿಸುತ್ತಾರೆ ಎನ್ನುವುದಕ್ಕೆ ಉದಾಹರಣೆ ಹೀಗೆದೆ. ಪುಟ್ಟಗೌರಿ ಮದುವೆ ದಾರಾವಾಹಿಯ ಎಪಿಸೋಡ್ ಒಂದಕ್ಕೆ ಒಂದೂಲಕ್ಷ ಚಿಲ್ಲರೆ ಹಣ ಕೊಡ್ತಿದ್ದೀವೆ. ರುತಿರೋದು ಕೇವಲ 2.5 ಟಿಆರ್ಪಿ. ಹತ್ತು ಸೆಕೆಂಡ್ ಜಾಹಿರಾತು ಸಮಯವನ್ನು ಎರಡು ಸಾವಿರಕ್ಕೆ ಮಾರಾಟ ಮಾಡಲು ಸಾಧ್ಯ. ಜಾಹಿರಾತು ಮಾರಾಟಕ್ಕೆ ಇರೋದು ಇನ್ನೂರಾ ಹತ್ತು ಸೆಕೆಂಡುಗಳು ಮಾತ್ರ. ಅಂದರೆ 21 ಯುನಿಟ್ ಮಾತ್ರ. ಒಂದು ಯುನಿಟ್ಗೆ ಎರಡು ಸಾವಿರ ಎಂದರೆ ನಲವತ್ತೆರಡು ಸಾವಿರ ವಾಯಿತು. ನಾವು ಎಪಿಸೋಡೊಂದಕ್ಕೆ ಕೊಡ್ತಿರೋದು ಒಂದು ಲಕ್ಷ, ರುತಿರೋದು ಕೇವಲ ನಲವತ್ತೆರಡು ಸಾವಿರ. ಕನಿಷ್ಟ ಅರವತ್ತು ಸಾವಿರದಷ್ಟು ಹಣ ಲಾಸ್ ಆಗ್ತಿದೆ ಎಂದು ಚಾನೆಲ್ ಸುಳ್ಳು ಲೆಕ್ಕವನ್ನು ತೋರಿಸುತ್ತಾ ಅದನ್ನೇ ನಂಬಿಸುತ್ತಾ ಹೋಗುತ್ತದೆ. ಹೀಗೆ ರಿಮೇಕ್ ದಾರಾವಾಹಿಗಳಿಂದಲೂ ಚಾನೆಲ್ಗೆ ಲಾಸ್ ಆಗ್ತಿದೆ ಅದಕ್ಕಾಗಿ ಡಬ್ಬಿಂಗ್ ಮಾಡುತ್ತೇವೆ ಎಂದು ನಂಬಿಸುವ ಪ್ರಯತ್ನವನ್ನು ಚಾನೆಲ್ಗಳು ನಿರಂತರವಾಗಿ ಮಾಡುತ್ತಿವೆ. ಬಾಲಿಕಾವಧು ವನ್ನು ಪುಟ್ಟಗೌರಿ ಹೆಸರಲ್ಲಿ ಡಬ್ಬಿಂಗ್ ಮಾಡಲು ಬೇಕಾದದ್ದು ಗರಿಷ್ಟಿ ಐದು ಸಾವಿರ ರೂಪಾಯಿ ಮಾತ್ರ. ಅದರ ಮೇಲೆ ಮಾರ್ಕೆಟಿಂಗ್ ಖರ್ಚು ಆರು ಸಾವಿರ. ಡಬ್ಬಿಂಗ್ ದಾರಾವಾಹಿಗೆ ಕೇವಲ 0.8 ಟಿಆರ್ಪಿ ಬಂದರೂ ಕೇವಲ ಒಂದು ಯುನಿಟ್ಗೆ ಐದುನೂರು ರೂಪಾಯಿಗೆ ಜಾಹೀರಾತು ಸಮಯ ಮಾರಾಟ ಮಾಡಿದರೂ ಎಪಿಸೋಡ್ ಒಂದಕ್ಕೆ ಹತ್ತುವರೆ ಸಾವಿರ ಆದಾಯ ಬರುತ್ತದೆ. ಅದರಲ್ಲಿ  ಐದು ಸಾವಿರ ಕಳೆದರೂ ಇನ್ನೂ ನಾಲ್ಕೈದು ಸಾವಿರ ನಿವ್ವಳ ಲಾಭವನ್ನು ಒಂದು ಪ್ರಕರಣದಿಂದ ವಾಹಿನಿಗಳು ಪಡೆಯುತ್ತವೆ. ಚಾನೆಲ್ಗಳು ಕೊಡುವ ಇಂತಹ ಲೆಕ್ಕ ನೋಡಿದರೆ ಪುಟ್ಟಗೌರಿ ದಾರಾವಾಹಿಯನ್ನು ರಿಮೇಕ್ ಮಾಡಿದರೆ ಅರವತ್ತು ಸಾವಿರ ನಷ್ಟ, ಡಬ್ಬಿಂಗ್ ಮಾಡಿದರೆ  ಐದು ಸಾವಿರ ಲಾಭ ಎನ್ನುವಂತಿರುತ್ತದೆ. ರೀತಿಯಲ್ಲಿ ಜನರನ್ನು ನಂಬಿಸಲು ಅದೆಷ್ಟು ದಿನಗಳಿಂದ ವಾಹಿನಿಗಳು ಸಿದ್ದತೆ ನಡೆಸಿರುತ್ತವೆ.     ಡಬ್ಬಿಂಗ್ ಇರಲಿ ಬಿಡಿ ಎಂದು ಜನರು ಒಪ್ಪಿಕೊಳ್ಳುವಂತೆ ಮಾಡುವ ಹುನ್ನಾರು ಇದರಲ್ಲಿದೆ. ಇದಕ್ಕೆ ನಾವು ಗೆಲ್ಲುವ ಮಾದರಿಗಳನ್ನು ಹುಟ್ಟುಹಾಕಬೇಕು. ರಿಮೇಕ್ ಮಾಡು ಎಂದು ವಾಹಿನಿಯವರು ಹೇಳಿದರೂ ನಾನು ಮಾಡುವುದಿಲ್ಲಾ ನಿಮಗೆ ಬೇಕಾದ ಟಿಆರ್ಪಿಯನ್ನು ಸ್ವತಂತ್ರ ಕೃತಿಗಳನ್ನು ಸೃಷ್ಟಿಸುವುದರ ಮೂಲಕ ತಂದುಕೊಡುತ್ತೇನೆ ಎನ್ನುವ ದೈರ್ಯ ಬೇಕು.

ಮ್ಯಾನುಪೆಕ್ಚರ್ ಆಪ್ ಕನ್ಸೆಂಟ್ : ಡಬ್ಬಿಂಗ್ ತರಲು ವಾಹಿನಿಗಳು ಹಲವಾರು ಸುಳ್ಳುಗಳನ್ನು ಹೇಳುತ್ತಾ ನಮ್ಮ ಮನಸ್ಸನ್ನು ತಿದ್ದಲು ಪ್ರಯತ್ನಿಸುತ್ತವೆ. ಇದನ್ನು ಮ್ಯಾನುಪೆಕ್ಚರ್ ಆಪ್ ಕನ್ಸೆಂಟ್ ಎಂದು ಕರೆಯುತ್ತಾರೆ. ಇದಕ್ಕೆ ಉದಾಹರಣೆ ಎಂದರೆ, ಮೊದಲ ಬಾರಿಗೆ ಅಣ್ಣಾ ಹಜಾರೆ ಲೋಕಪಾಲ ಮಸೂದೆಗೆ ಒತ್ತಾಯಿಸಿ ಉಪವಾಸ ಕೂತಾಗ ಇಡೀ ದೇಶವೇ ಅವರ ಬೆಂಬಲಕ್ಕಿತ್ತು. ಎರಡನೇ ಸಲ ಸತ್ಯಾಗ್ರಹ ಮಾಡಿದಾಗ ಯಾಕೆ ಅಷ್ಟು ಜನ ಸ್ಪಂದಿಸಲಿಲ್ಲ, ಮೂರನೇ ಸಲ ಉಪವಾಸ ಕೂತಾಗ ಯಾಕೆ ಜನಬೆಂಬಲ ಕಡಿಮೆಯಾಯ್ತು, ಯಾಕೆಂದರೆ ಮೊದಲ ಸಲ ಟೈಮ್ಸ್ ಆಪ್ ಇಂಡಿಯಾ ಅಣ್ಣಾ ಹಜಾರೆ ಪರ ನಿಂತುಕೊಂಡಿತ್ತು. ಯಾಕೆಂದರೆ ಟೈಮ್ಸ್ ಹಿಂದೆ ಅರಿವಿಂದ ಕೆಜ್ರಿವಾಲ ಮತ್ತು ಅವರ ಎನ್ ಜಿಓ ಗಳ ನಡುವೆ ನೇರ ಸಂಬಂಧವಿದೆ. ಯಾವಾಗ ಕೆಜ್ರಿವಾಲ ಸತ್ಯಾಗ್ರಹ ಬಿಟ್ಟು ರಾಜಕೀಯ ಪಕ್ಷ ಕಟ್ಟತಾರೋ ಆಗ ಅಣ್ಣಾ ಹಜಾರೆ ದಿಕ್ಕಾಪಾಲಾಗ್ತಾರೆ. ಇಡೀ ದೇಶದಲ್ಲಿ ಈಗ ಮೋದಿಯನ್ನು ಮೆಚ್ಚುವ ಹಾಗೆ ಭ್ರಮೆಯನ್ನು ಹುಟ್ಟಿಸಿರುವುದೂ ಕೂಡಾ ಇದೇ ಮ್ಯಾನುಪೆಕ್ಚರ್ ಆಪ್ ಕನ್ಸೆಂಟ್. ಬಡವರು ಗುಜರಾತ್ನಲ್ಲಿ ಬದುಕೋಕೆ ಸಾಧ್ಯವಿಲ್ಲದಂತಹ ವಾತಾವರಣ ಇದೆ. ವಾಸ್ತವವನ್ನು ಮುಚ್ಚಿ ಹಾಕಿ ಅಭಿವೃದ್ದಿ ಎಂಬ ಬ್ರಮೆಯನ್ನು ಹುಟ್ಟಿಸಿ ಹಲವು ಮಾಧ್ಯಮಗಳ ಮೂಲಕ ಮೋದಿಯನ್ನು ಮುಂಚೂಣಿಗೆ ತರುವ ಪ್ರಯತ್ನಗಳು ನಡೆಯುತ್ತಿವೆ. ಸುಳ್ಳುಗಳನ್ನು ನಿರಂತರವಾಗಿ ಹೇಳಿದಾಗ ಅದು ಸತ್ಯವೆನ್ನಿಸುವ ಅಪಾಯವಿದೆ. ಇದೇ ರೀತಿ ಡಬ್ಬಿಂಗ್ ಬಂದರೆ ಒಳ್ಳೆಯದು ಎನ್ನುವುದನ್ನು ಸಾವಿರಾರು ಜನ ಪೇಸ್ಬುಕ್ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಹೇಳಲು ಶುರುಮಾಡಿದರೆ ನಾವು ಅದನ್ನ ಒಪ್ಪಿಕೊಳ್ಳುವ ಅಪಾಯವಿದೆ. ಕೆಲವರು ಡಬ್ಬಿಂಗ್ ಸಾಂವಿಧಾನಿಕ ಹಕ್ಕು ಎಂದರೆ ಜನತೆ ‘‘ಹೌದಲ್ಲಾ, ವ್ಯಕ್ತಿಗೆ ಆಯ್ಕೆ ಸ್ವಾತಂತ್ರ್ಯ ಮುಖ್ಯ ಅಲ್ವಾ’’ ಎಂದು ಒಪ್ಪಿಕೊಳ್ಳುತ್ತೇವೆ.

ಸಂವಿಧಾನಿಕ ಹಕ್ಕು ಮತ್ತು ಬಾಧ್ಯತೆ : ಸಂವಿಧಾನದಲ್ಲಿ ಎಲ್ಲರಿಗೂ ಹಕ್ಕು ಎಷ್ಟಿದೆಯೋ ಬಾಧ್ಯತೆಯೂ ಕೂಡಾ ಅಷ್ಟೇ ಇದೆ. ಹಕ್ಕನ್ನು ಕೇಳುವವರು ಬಾಧ್ಯತೆಗಳನ್ನು ಅರ್ಥ ಮಾಡಿಕೊಳ್ಳಬೇಕು. ರಸ್ತೆಯಲ್ಲಿ ನೋ ಎಂಟ್ರಿಯಲ್ಲಿ ಹೋಗಬಾರದು ಎನ್ನುವುದು ಬಾಧ್ಯತೆ. ರಸ್ತೆಯ ಎಡಗಡೆಗೆ ವಾಹನ ಚಲಾಯಿಸಬೇಕು ಎನ್ನುವುದು ಒಂದು ಕಟ್ಟುಪಾಡು. ವಿಸ್ಕಿ ಬ್ರ್ಯಾಂಡಿ ಉತ್ಪಾದಿಸಬಹುದಾದರೂ  ಬಟ್ಟಿ ಸರಾಯಿ ಮಾಡಬಾರದು ಎನ್ನುವುದು ಕಾನೂನು. ಬಟ್ಟಿ ಸರಾಯಿಯನ್ನು ನಿಷೇಧಿಸುವುದು ಸಾಧ್ಯವಾದರೆ ಡಬ್ಬಿಂಗನ್ನು ಯಾಕೆ ನಿಷೇಧಿಸಬಾರದು? ಯಾಕೆಂದ್ರೆ ಅದು ವಿಕೃತಿ.

ನನಗೆ ಸಾಧ್ಯವಾಗದ್ದನ್ನ ಯಾರೂ ನೋಡಬೇಡಿ :  ಮಲ್ಟಿಪ್ಲೆಕ್ಸ ಸ್ಕ್ರೀನ್ ಒಂದರಲ್ಲಿ ರಜನಿಕಾಂತರವರ ಕನ್ನಡ ಸಿನೆಮಾ, ಸ್ಕ್ರೀನ್ ಎರಡರಲ್ಲಿ ರಜನಿಕಾಂತರವರ ತಮಿಳು ಸಿನೆಮಾ, ಸ್ಕ್ರೀನ್ ಮೂರರಲ್ಲಿ ರಜನಿಕಾಂತರವರ ಹಿಂದಿ ಸಿನೆಮಾ ಇದ್ದಾಗ ನಾನು ನೋಡುವುದು ಅವರು ಮೂಲದಲ್ಲಿ ಮಾಡಿದ ತಮಿಳು ಸಿನೆಮಾವನ್ನೇ.  ಡಬ್ಬಿಂಗ್ ಆದ ರಜನಿಕಾಂತರವರ ಅದೇ ಸಿನೆಮಾವನ್ನು ಕನ್ನಡದಲ್ಲಿ ನಾನು ನೋಡುವುದಿಲ್ಲ. ನಮ್ಮ ಮನೆಯಲ್ಲಿ ಯಾರೂ ಡಬ್ಬಿಂಗ್ ಆದ ಸಿನೆಮಾಗಳನ್ನು ನೋಡುವುದಿಲ್ಲ. ನನಗೆ ನೋಡಲು ಸಾಧ್ಯವಾಗದ್ದನ್ನು ಜನರಿಗೆ ನೋಡಿ ಎಂದು ಹೇಳಲು ಹೇಗೆ ಸಾಧ್ಯ? ನನಗೆ ಇಷ್ಟ ವಾಗದೇ ಇರುವುದನ್ನು ದಯಮಾಡಿ ನೀವೂ ನೋಡಬೇಡಿ. ಉದಾಹರಣೆಗೆ ನೀಲಿ ಚಿತ್ರ. ಯೌವನದಲ್ಲಿದ್ದರೆ ನಾನೂ ನೋಡುತ್ತಿದ್ದೆನೇನೋ. ಅದರೆ ಈಗ ವಯಸ್ಸಾಗಿದೆ. ತಿಳುವಳಿಕೆ ಬಂದಿದೆ. ಜೀವನ ಎಂದರೆ ಬರೀ ಕಾಮ ಅಲ್ಲಾ ಎನ್ನುವುದು ಗೊತ್ತಾಗಿದೆ. ಹೀಗಾಗಿ ನನಗೆ ಅಂತಹ ನೀಲಿ ಚಿತ್ರಗಳನ್ನ ನೋಡಲು ಸಾಧ್ಯವಿಲ್ಲ. ಅಸಹ್ಯ ಆಗುತ್ತದೆ. ನನಗೆ ಅಸಹ್ಯ ಆಗುವುದನ್ನ ನಾನು ನೋಡಬೇಡಿ ಎಂತಲೇ ಹೇಳುತ್ತೇನೆ. ಅಯ್ಯೋ ನನ್ನ ಆಯ್ಕೆಯ ಸ್ವಾತಂತ್ರ್ಯ ನಾನು ನೀಲಿ ಚಿತ್ರಗಳನ್ನ ನೋಡ್ತೇನೆ ಅನ್ನೋರಿಗೆ ಏನು ತಾನೆ ಹೇಳಲಿಕ್ಕೆ ಸಾಧ್ಯ?

ಸ್ಪರ್ಧೆ ಎದುರಿಸುವ ಶಕ್ತಿಯಿಲ್ಲ : ಹೀಗೆಂದು  ಬಾಳಾ ಜನ ಹೇಳ್ತಾರೆ. ನಾವೀಗ ಐದು ಭಾಷೆಗಳ ಜೊತೆಗೆ ನೇರವಾಗಿ ಸ್ಪರ್ಧೆ ಮಾಡ್ತಿದ್ದೀವಿ. ಹಾಲಿವುಡ್ ಮೈಕ್ ಟೈಸನ್, ಸ್ಟಿಲ್ ಬರ್ಗನಿಂದ ಹಿಡಿದು ತಮಿಳಿನ ರಜನೀಕಾಂತ, ಮಲಿಯಾಳಿಯ ಮೋಹನಲಾಲ್, ತೆಲಿಗಿನ ವಿಜಯ್ ಇಲ್ಲವೇ ಹಿಂದಿಯ ಶಾರುಖಾನ್ ಇರಬಹುದು ಇವರೆಲ್ಲರ ಜೊತೆಗೆ ನಮ್ಮ ಕನ್ನಡ ಸಿನೆಮಾ ಇಂದು ಸ್ಪರ್ಧೆಯನ್ನು ಎದುರಿಸಿಕೊಂಡೇ ಬೆಳೆದಿದೆ. ನೇರವಾಗಿ ಸ್ಪರ್ಧೆ ನಡೆಯುತ್ತಿದೆ. ನನ್ನ ನಾನು ನನ್ನ ಕನಸು ಸಿನೆಮಾ 154 ದಿನ ನಡೆದಿದೆ. ನನ್ನ ಸಕ್ಕರೆ ಸಿನೆಮಾ ಮೂರೆ ವಾರದಲ್ಲಿ ಹಾಕಿದ ಹಣ ಮರಳಿಸಿದೆ. ನೇರವಾಗಿ ಐದು ಭಾಷೆಗಳ ಜೊತೆಗೆ ಸ್ಪರ್ಧೆ ಎದುರಿಸಿದರೂ ನನಗೇನೂ ನಷ್ಟ ಆಗಿಲ್ಲ. ಹೀಗೆ.... ನಮಗೆ ಸ್ಪರ್ಧೆ ಎದುರಿಸುವ ಶಕ್ತಿ ಇಲ್ಲ ಎನ್ನುವ ಆರೋಪವನ್ನು ನಾನು ಒಪ್ಪುವುದಿಲ್ಲ. ಡಬ್ಬಿಂಗ್ ನಮಗೆ ಆರೋಗ್ಯಕಾರಿ ಸ್ಪರ್ಧೆಯಲ್ಲ.

ಸ್ಪರ್ಧೆ ಎದುರಿಸಿ ಯಶಸ್ವಿಯಾಗಬಹುದು : ಕಳೆದ ಐದು ವಾರಕ್ಕೆ ಮುಂಚೆ ಸನ್ಟಿವಿ ನಂಬರ ಒನ್ ಆಗಿತ್ತು.
ಆದರೆ ಈಗ ನನ್ನ ದಾರಾವಾಹಿ ನಂಬರ್ ಒನ್ ಆಗಿದೆ. ಹೀಗಾಗಿ 10 ಸೆಕೆಂಡ್ ಸಮಯಕ್ಕೆ ಹದಿನಾರು ಸಾವಿರ ಹಣ ಬರುವ ಹಾಗೆ ನನ್ನ ದಾರಾವಾಹಿ ಟಿಆರ್ಪಿ ರೇಟಿಂಗ್ನಲ್ಲಿ ಮುಂಚೂಣಿಯಲ್ಲಿದೆ. ಸನ್ ಟಿವಿ ನಂಬರ ಒನ್ ಆಗಿದ್ದರೆ ನಮಗೆ ಯುನಿಟ್ ಒಂದಕ್ಕೆ ಹತ್ತು ಸಾವಿರ ಕೊಡ್ತಿದ್ದರು. ಆದರೆ ಉದಯಾ ಈಗ ನಂಬರ್ ಒನ್ ಆಗಿದ್ದರಿಂದ ಹದಿನಾರು ಸಾವಿರ ಯುನಿಟ್ಗೆ ಜಾಹಿರಾತಿನಿಂದ ಸಿಗುತ್ತಿದೆ. ಹದಿನಾರು ಸಾವಿರ ಹಣ ಹತ್ತು ಸೆಕೆಂಡಿಗಾದರೆ ಇನ್ನೂರ ಹತ್ತು ಸೆಕೆಂಡಿಗೆ ಮೂರುಲಕ್ಷ ಮೂವತ್ತಾರು ಸಾವಿರ ಹಣ ಒಂದು ಎಪಿಸೋಡಿಗೆ ಹರಿದು ಬರುತ್ತದೆ. ನನ್ನ ಸಿರಿಯಲ್ ಒಂದು ಎಪಿಸೋಡ್ ಟೆಲಿಕಾಸ್ಟ್ ಚಾರ್ಜ ಅಂತಾ ಒಂದೂವರೆ ಲಕ್ಷ ಹಾಗೂ ಸರ್ವಿಸ್ ಚಾರ್ಜ ಹದಿನೈದು ಸಾವಿರ, ಪ್ರೊಡಕ್ಷನ್ ಕಾಸ್ಟ್ ಒಂದು ಲಕ್ಷ.... ಹೀಗೆ ಒಟ್ಟು ಎರಡು ಲಕ್ಷ ಅರವತೈದು ಸಾವಿರ ತೆಗೆದರೂ ನನಗೆ ಎಲ್ಲಾ ಕಳೆದು ಬರುವ ನಿವ್ವಳ ಲಾಭ ದಿನವೊಂದಕ್ಕೆ ಐವತ್ತರಿಂದ ಆರವತ್ತು ಸಾವಿರ ಲಾಭ ಪಡೆಯುತ್ತಿದ್ದೇನೆ. ನೇರ ಸ್ಪರ್ಧೆ ಇದ್ದಾಗ ನಾವು ಉತ್ತಮವಾಗಿದ್ದನ್ನು ಕೊಟ್ಟರೆ ಖಂಡಿತ ಲಾಭದಾಯಕವಾಗುತ್ತದೆ. ಡಬ್ಬಿಂಗ್ ಬಂದರೆ ನನ್ನ ತುಳಿದಾಕಿಬಿಡುತ್ತೆ ಎನ್ನುವ ಆತಂಕದಿಂದ ಮಾತನ್ನು ಹೇಳುತ್ತಿಲ್ಲ, ಯಶಸ್ಸಿನ ಜೊತೆಗೆ ನಾನು ಮಾತನ್ನು ಹೇಳುತ್ತಿದ್ದೇನೆ



                             (ಭಾಗ 2 ರಲ್ಲಿ ಮುಂದುವರೆದಿದೆ)



                              -ಶಶಿಕಾಂತ ಯಡಹಳ್ಳಿ  (ಅಕ್ಷರ ರೂಪಕ್ಕೆ)            
 

2 ಕಾಮೆಂಟ್‌ಗಳು: