ಶನಿವಾರ, ನವೆಂಬರ್ 9, 2013

ಅಮೋಲ್ ಪಾಲೇಕರ್ ಜೊತೆಗೊಂದು ಸಂವಾದ :




      ಅಮೋಲ್ ಪಾಲೇಕರ್ ಬೆಂಗಳೂರಿಗೆ ಬಂದಿದ್ದರು. ಶೂಟಿಂಗಿಗೂ ಅಲ್ಲಾ... ಆಕ್ಟಿಂಗಿಗೂ ಅಲ್ಲಾ. ಕ್ರಿಕೆಟ್ ನೋಡೋದಕ್ಕೆ. ಅಕ್ಟೋಬರ್ 4ರಂದು ಚಿನ್ನಸ್ವಾಮಿ ಕ್ರಿಡಾಂಗಣದಲ್ಲಿ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಏಕದಿನ ಪಂದ್ಯದ ಪೈನಲ್ ಆಟವನ್ನು ನೋಡಲು ಬಾಂಬೆಯಿಂದ ಬಂದಿದ್ದರು. ಪ್ರೆಸ್ ಕ್ಲಬ್ ಕಲಾವಿದನೊಂದಿಗೆ ಸೋಮವಾರದಂದು (ಅಕ್ಟೋಬರ್ 4) ಮಾಧ್ಯಮದವರ ಜೊತೆಗೊಂದು ಸಂವಾದ ಕಾರ್ಯಕ್ರಮವನ್ನು ಏರ್ಪಡಿಸಿತ್ತು. ಅದರ ಸಂಕ್ಷಿಪ್ತ ವಿವರವನ್ನು ಪಲೇಕಾರ್ ಪರಿಚಯದೊಂದಿಗೆ ಹೇಳುವ ಪ್ರಯತ್ನ ಇಲ್ಲಿದೆ.
       ಮೂಲತಃ ಚಿತ್ರಕಲಾವಿದರಾಗಿದ್ದ ಅಮೋಲ್ ಪಾಲೇಕರ್ ಮಹಾರಾಷ್ಟ್ರದ ಬಾಂಬೆನವರು. ಮರಾಠಿ ರಂಗಭೂಮಿಯಲ್ಲಿ ಸತ್ಯದೇವ್ ದುಬೆಯವರ ರಂಗತಂಡದ ಮೂಲಕ ತಮ್ಮ ನಟನೆಯನ್ನು ಆರಂಭಿಸಿದರು.  ನಂತರ ಅನಿಕೇತ ಎನ್ನುವ ಸ್ವಂತ ರಂಗತಂಡವನ್ನು ಆರಂಭಿಸಿ ಅನೇಕ ಮರಾಠಿ ನಾಟಕಗಳನ್ನು ಕಟ್ಟಿಕೊಟ್ಟರು. ಇಪ್ಟಾ ಸಾಂಸ್ಕೃತಿಕ ಸಂಘಟನೆಯ ಪ್ರೇರಣೆಯಿಂದಾಗಿ ಬೀದಿ ನಾಟಕಗಳ ಮೂಲಕ ಜನಜಾಗೃತಿ ಮಾಡುತ್ತಾ ತಮ್ಮ ಸಾಮಾಜಿಕ ಬದ್ದತೆಯನ್ನು ತೋರಿಸಿದವರು. ಎಡಪಂಥೀಯ ಪ್ರಗತಿಪರ ವಿಚಾರಧಾರೆಯನ್ನು ಹೊಂದಿದ್ದ ಅಮೋಲ್ರವರು ಸಮಾಜದ ಬಗ್ಗೆ ಕಳಕಳಿಯನ್ನು ತಮ್ಮೆಲ್ಲಾ ನಾಟಕ ಸಿನೆಮಾಗಳ ಮೂಲಕ ತೋರಿಸಿದವರು. 1967 ರವರೆಗೂ ಮರಾಠಿ ಹಾಗೂ ಹಿಂದಿ ರಂಗಭೂಮಿಯಲ್ಲಿ ನಟರಾಗಿ, ನಿರ್ದೇಶಕರಾಗಿ, ನಿರ್ಮಾಪಕರಾಗಿ, ರಂಗಸಂಘಟಕರಾಗಿ ತಮ್ಮನ್ನು ಸಕ್ರೀಯವಾಗಿ ತೊಡಗಿಸಿಕೊಂಡರು. ಆಧುನಿಕ ಭಾರತೀಯ ರಂಗಭೂಮಿಗೆ ಪಾಲೇಕರ್ ಕೊಡುಗೆ ಅಪಾರ.
    ವಿಜಯ್ ತೆಂಡೂಲ್ಕರರು ಬರೆದ ಶಾಂತತಾ ಕೋರ್ಟ ಚಾಲೂ ಹೈ ನಾಟಕ ಆಗ ಮಹಾರಾಷ್ಟ್ರದಲ್ಲಿ ಜನಪ್ರೀಯವಾಗಿತ್ತು. ಸತ್ಯದೇವ್ ದುಬೆಯವರು ನಾಟಕವನ್ನು ಮರಾಠಿಯಲ್ಲಿ ಇದೇ ಹೆಸರಲ್ಲಿ ಸಿನೆಮಾ ಮಾಡಿದರು. ಅದರಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದು ಅಮೋಲ್ ಪಾಲೇಕರ್. ಪಾಲೇಕರ್ರವರ ಅಭಿನಯ ಸಾಮರ್ಥ್ಯವನ್ನು ತಿಳಿದ ಬಸು ಚಟರ್ಜಿ ತಮ್ಮ ರಜನಿಗಂಧ (1974) ಸಿನೆಮಾದಲ್ಲಿ ನಾಯಕ ಪಾತ್ರಕ್ಕೆ ಆಯ್ಕೆ ಮಾಡಿದರು. ಆನಂತರ ಬಂದ ಹಲವಾರು ಮಧ್ಯಮ ವರ್ಗದ ಹಾಸ್ಯ ಪ್ರಧಾನ ಸಿನೆಮಾಗಳಾದ ಗೋಲಮಾಲ್, ನರಮ್-ಗರಮ್, ಚೋಟಿಸಿ ಬಾತ್... ಮುಂತಾದ ಸಿನೆಮಾಗಳಲ್ಲಿ ಅಭಿನಯಿಸಿ ಹಿಂದಿ ಚಿತ್ರರಂಗದಲ್ಲಿ ಹೆಸರುವಾಸಿಯಾದರು. ನಂತರ 1981 ರಿಂದ ತಾವೇ ಸಿನೆಮಾ ನಿರ್ದೇಶನವನ್ನೂ ಆರಂಭಿಸಿದರು.
          ಅವರ ನಿರ್ದೇಶನದ ಮೊಟ್ಟಮೊದಲ ಮರಾಠಿ ಚಲನಚಿತ್ರ ಅಕ್ರೀತ್, ಇದಕ್ಕೆ ಅತ್ಯತ್ತಮ ಸಿನೆಮಾ ಪ್ರಶಸ್ತಿ ದೊರೆಯಿತು. ಆಮೇಲೆ ಅಮೋಲ್ ಪಾಲೇಕರ್ರವರು ಆಂಕೆ, ಥೊಡಾಸಾ ರೂಮಾನಿ ಹೋ ಜಾಯೆ, ಬಂಗಾರವಾಡಿ, ದಾಯರಾ, ಅನಾಹತ್, ಕಾಯಿರೇ, ದ್ಯಾಸ ಪರ್ವ.... ಮುಂತಾದ ಸಿನೆಮಾಗಳನ್ನು ನಿರ್ದೇಶಿಸಿ ಸೃಜನಾತ್ಮಕ ನಿರ್ದೇಶಕ ಎಂದು ಪ್ರಸಿದ್ದರಾದರು. ಅವರ ಪಹೆಲಿ ಸಿನೆಮಾ 2006 ರಲ್ಲಿ ಆಸ್ಕರ್ ಪ್ರಶಸ್ತಿಗೆ ಭಾರತದಿಂದ ಆಯ್ಕೆಯಾಗಿತ್ತು. 1974  ರಿಂದ ಎರಡು ದಶಕಗಳ ಕಾಲ ಹಿಂದಿ ಸಿನೆಮಾದ ನಾಯಕನಾಗಿ ಜನಪ್ರೀಯರಾದ ಅಮೋಲ್ ನೆರೆಮನೆಯ ಹುಡುಗ ಎನ್ನುವ ಖ್ಯಾತಿ ಹೊಂದಿದವರು. ಮೂರು ಫಿಲಂ ಪೇರ್ ಪ್ರಶಸ್ತಿ ಹಾಗೂ ಆರು ರಾಜ್ಯ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಮರಾಠಿ, ಬೆಂಗಾಲಿ, ಮಲಯಾಳಿ, ಕನ್ನಡ, ಹಿಂದಿ ಹೀಗೆ ಐದು ಭಾಷೆಗಳ ಸಿನೆಮಾಗಳಲ್ಲಿ ಅಭಿನಯಿಸಿದ ಪಾಲೇಕರ್ರವರು 1986 ರಿಂದ ನಟಿಸುವುದನ್ನು ಕಡಿಮೆಗೊಳಿಸಿ ಸಿನೆಮಾ ನಿರ್ದೇಶನ ಹಾಗೂ ನಿರ್ಮಾಣದಲ್ಲಿ ತೊಡಗಿಸಿಕೊಂಡರು. 1981 ರಿಂದ 2011ರವರೆಗಿನ ಎರಡು ದಶಕಗಳ ಕಾಲ ಒಟ್ಟು 14 ಸಿನೆಮಾಗಳನ್ನು ನಿರ್ದೇಶಿಸಿದ್ದಾರೆ. ಕನ್ನಡದಲ್ಲೂ ಕೂಡಾ ಎಂ.ಎಸ್.ಸತ್ಯು ನಿರ್ದೇಶನದ ಕನ್ನೆಶ್ವರ ರಾಮ ಸಿನೆಮಾದಲ್ಲಿ ಅಮೋಲ್ ಪಾಲೇಕರರು ನಟಿಸಿದ್ದು ಹಾಗೆಯೇ ಕನ್ನಡ ಮತ್ತು ಇಂಗ್ಲೀಷ್ ಎರಡೂ ಭಾಷೆಯಲ್ಲಿ ತಯಾರಾದ ಪಟ್ಟಾಭಿರಾಮರೆಡ್ಡಿ ನಿರ್ದೇಶನದ  ಪೇಪರ್ ಬೋಟ್ಸ್ ಚಲನಚಿತ್ರದಲ್ಲೂ ಸಹ ಅಭಿನಯಿಸಿದ್ದಾರೆ. 
         
         ಭಾರತೀಯ ಸಾಹಿತ್ಯ ಆಧರಿಸಿದ ಸಿನೆಮಾಗಳನ್ನು ಹೆಚ್ಚು ನಿರ್ದೇಶಿಸುತ್ತಿದ್ದ ಪಾಲೇಕರ್ ಬಹುತೇಕ ಮಹಿಳಾ ಪ್ರಧಾನ ಚಲನಚಿತ್ರಗಳನ್ನು ತಯಾರಿಸಿದ್ದಾರೆ. ಅವರ ಎಲ್ಲಾ ಸಿನೆಮಾಗಳೂ ಪ್ರಗತಿಪರ ನೆಲೆಗಟ್ಟಿನಲ್ಲಿ ಮೂಡಿಬಂದಿವೆ. 25ಕ್ಕೂ ಹೆಚ್ಚು ಸಿನೆಮಾಗಳಲ್ಲಿ  ನಟಿಸಿದ್ದಾರೆ. ಕಚ್ಚೀ ದೂಪ್, ಮೃಗಯಾನಿ, ನಾಕೂಬ್, ಪಾವೋಲ್ ಕೌನಾ, ಕೃಷ್ಣಾ ಕಲಿ... ಮುಂತಾದ ಟಿವಿ ಸೀರಿಯಲ್ಗಳನ್ನೂ ಸಹ ನ್ಯಾಷನಲ್ ನೆಟ್ವರ್ಕಗಾಗಿ ನಿರ್ದೇಶಿಸಿದ್ದಾರೆ.
          ಇಂತಹ ಸೃಜನಶೀಲ ನಟ-ನಿರ್ದೇಶಕ ಬೆಂಗಳೂರಿಗೆ ಬಂದಾಗ ಅದರಲ್ಲೂ ಪ್ರೆಸ್ ಕ್ಲಬ್ನಲ್ಲಿ ಮಾತಿಗೆ ಸಿಕ್ಕಾಗ ಒಂದು ರೀತಿಯ ರೊಮಾಂಚನದ ಅನುಭವ. ಹಿರಿಯ ಅನುಭವಿ ಕ್ರಿಯಾಶೀಲ ಪ್ರಭುದ್ದ ಕಲಾವಿದನೊಂದಿಗೆ ಮಾತಾಡುವುದೇ ಒಂದು ಸೌಭಾಗ್ಯ. ಅಂದು ನಡೆದ ಸಂವಾದದಲ್ಲಿ ಅಮೂಲ್ ಪಾಲೇಕರ್ ವ್ಯಕ್ತಿಪಡಿಸಿದ ಕೆಲವು ಅಭಿಪ್ರಾಯಗಳು ಹೀಗಿವೆ.
                                                                   ಸಿನೆಮಾ ಯಾರ ಮಾಧ್ಯಮ?
ಚಲನಚಿತ್ರ ತಯಾರಿಕೆಯಲ್ಲಿ ನಿರ್ದೇಶಕ . ನಿರ್ಮಾಪಕ, ತಂತ್ರಜ್ಞರು, ಕಲಾವಿದರು... ಹೀಗೆ ಹಲವಾರು ಜನ ಕೆಲಸ ನಿರ್ವಹಿಸಿದರೂ ಸಿನೆಮಾ ಮಾಡುವ ಮೂಲ ಉದ್ದೇಶ ಪ್ರೇಕ್ಷಕರಿಗಾಗಿಯೇ ಆಗಿದೆ. ಆದ್ದರಿಂದ ಸಿನೆಮಾ ಎನ್ನುವುದು ಪ್ರೇಕ್ಷಕರ ಮಾಧ್ಯಮವಾಗಿದೆ.
ಚಲನಚಿತ್ರ ಹಾಗೂ ಕಲಾ ಮಾಧ್ಯಮದಲ್ಲಿ ನಿಮ್ಮ ಅನುಭವ?
ಪ್ರೇಕ್ಷಕರೊಂದಿಗೆ ಸಂವಹನ ಸಾಧಿಸುವ ಕುರಿತು ಅಭಿನಯ, ನಿರ್ದೇಶನ, ನಿರ್ಮಾಣ ಹಾಗೂ ಇತರೆ ವಿಭಾಗಗಳಲ್ಲಿ  ನನ್ನಲ್ಲಿರುವ ಕಲಾಭಿವ್ಯಕ್ತಿಯನ್ನು ದುಡಿಸಿಕೊಳ್ಳುವ ಪ್ರಯತ್ನವನ್ನು ಸಕಾರಾತ್ಮಕ ದೃಷ್ಟಿಕೋನದಿಂದ ಮಾಡುತ್ತಾ ಬಂದಿದ್ದೇನೆ. ಇದು ನಿಜಕ್ಕೂ ನನಗೆ ಅದ್ಬುತವಾದ ಅನುಭವವನ್ನು ಕೊಟ್ಟಿದೆ. ಭಾರತ ದೇಶದ ವೈವಿದ್ಯಮಯವಾಗಿರುವ ಸಂಸ್ಕೃತಿ ನನ್ನ ಕುತೂಹಲ ಮತ್ತು ಆಸಕ್ತಿಯನ್ನು ಇಮ್ಮಡಿಗೊಳಿಸಿದೆ. ನಾನು ಮೂಲಭೂತವಾಗಿ ಚಿತ್ರ ಕಲಾವಿದ. ಸಿನೆಮಾ ಮತ್ತು ಚಿತ್ರಕಲೆ ನಡುವೆ ಅಭಿವ್ಯಕ್ತಿಯ ವ್ಯತ್ಯಾಸವಿದೆ.  ಚಿತ್ರಕಲೆ ಎನ್ನುವುದು ಆಂತರಿಕ ಪಯಣವಾದರೆ, ಸಿನೆಮಾ ಎನ್ನುವುದು ಬಾಹ್ಯ ಪಯಣವಾಗಿದೆ. ೪೩ ವರ್ಷಗಳ ನನ್ನ ಕಲಾ ಜೀವನದಲ್ಲಿ ನಾನೆಂದೂ ವ್ಯಾಪಾರಿ ಸಂಸ್ಕೃತಿ ಮತ್ತು ಗ್ರಾಹಕ ಶಕ್ತಿಗಳ ಆಕರ್ಷಣೆಗೆ ಒಳಗಾಗಿಲ್ಲ ಎನ್ನುವುದೇ ಸಮಾಧಾನಕರ ಸಂಗತಿ. ಎಚ್ಚರದೊಂದಿಗೆ ಕಲಾವಿದನಾಗಿ  ನಾನು  ಜನರನ್ನು  ತಲುಪುವ ಕೆಲಸವನ್ನು ಮಾಡಿದ್ದೇನೆ. ಇಷ್ಟು ವರ್ಷಗಳ ನಂತರ ನನಗೆ ಮತ್ತೆ ಚಿತ್ರಕಲೆಗೆ ಮರಳಬೇಕು ಎಂದೆನ್ನಿಸುತ್ತಿದೆ. ಚಿತ್ರಕಲೆ ನಮ್ಮೊಳಗಿನ ಸತ್ಯವನ್ನು ಅರಿಯಲು ಸಹಾಯ ಮಾಡುತ್ತದೆ. ಹೀಗಾಗಿ ಚಿತ್ರಕಲೆಯನ್ನು ಮುಂದುವರೆಸಲು ಆಲೋಚಿಸಿದ್ದೇನೆ.
      ಅಂದುಕೊಂಡ ಕೆಲಸವನ್ನು ಎಲ್ಲರಿಗಿಂತಲೂ ಭಿನ್ನವಾಗಿ ತುಂಬಾ ದಿನಗಳ ಕಾಲ ನಿಭಾಯಿಸುವುದು ಸವಾಲಿನ ಕೆಲಸ. ಅದರಲ್ಲೂ ಮುಖ್ಯವಾಹಿನಿಯ ಒತ್ತಡಗಳಿಗೆ ಮಣಿಯದೇ ನಾವು ಅಂದುಕೊಂಡಿದ್ದನ್ನು ಮಾತ್ರವೇ ಕಾರ್ಯಗತ ಗೊಳಿಸುವ ಅವಕಾಶ ಎಲ್ಲರಿಗೂ ಸಿಗಲಾರದು. ಆದರೆ, ಅದು ನನಗೆ ಸಿಕ್ಕತು. ನನ್ನ ಕೆಲವು ಹಿರಿಯರು ಅಂತಹದ್ದೊಂದು ಅವಕಾಶಕ್ಕೆ ಬುನಾದಿ ಹಾಕಿಕೊಟ್ಟರು. ನನ್ನ ಮುಂದಿನ ತಲೆಮಾರು ಕೂಡಾ ಇದೇ ರೀತಿಯ ಹಾದಿ ರೂಢಿಸಿಕೊಳ್ಳಲಿ ಎಂದು ಬಯಸುತ್ತೇನೆ. ನನ್ನ ಕೆಳಗೆ ಕೆಲಸ ಮಾಡಿದ ಬಹುತೇಕರು ಈಗ ನನಗಿಂತಲೂ ದೊಡ್ಡ ಹೆಸರು ಮಾಡಿರುವುದನ್ನು ನೋಡಿ ಸಂತೋಷವಾಗುತ್ತದೆ.
   ಒಬ್ಬ ಚಿತ್ರಕಲಾವಿದನೆಂದು, ಸಿನೆಮಾ ನಟನೆಂದು, ನಿರ್ದೇಶಕನೆಂದು, ರಂಗಕರ್ಮಿಯೆಂದು ಜನ ನನ್ನನ್ನು ಗುರುತಿಸಿದ್ದಾರೆ.    ಸ್ವಾತಂತ್ರ್ಯೋತ್ತರ ಸಂದರ್ಭ ಎನ್ನುವುದು ಭಾರತದಲ್ಲಿ ಸಿನೆಮಾ, ಸಂಗೀತ, ಚಿತ್ರಕಲೆ, ರಂಗಕಲೆ.. ಮುಂತಾದ ಸಾಂಸ್ಕೃತಿಕ ಅಭಿವ್ಯಕ್ತಿಗೆ ಪುನರುಜ್ಜೀವನದ ಕಾಲವಾಗಿತ್ತು. ಅಂತಹ ಕಾಲದಲ್ಲಿ ನಾನು ಕಲಾ ಜಗತ್ತಿಗೆ ಬಂದೆ. ಅದು ಕಲಾಭಿವ್ಯಕ್ತಿಗೆ ತುಂಬಾನೇ ಅನುಕೂಲಕರವಾದ ಕಾಲವಾಗಿತ್ತು. ಆದರೆ ಇಂದು ಸಾಹಿತ್ಯ, ಸಿನೆಮಾ.... ಇಲ್ಲಾ ಸೃಜನಶೀಲ ಕ್ಷೇತ್ರಗಳನ್ನೂ ಮೀಡಿಯಾಕ್ರಸಿ ಆಕ್ರಮಿಸಿಕೊಂಡಿದೆ. ಎಲ್ಲವೂ ವ್ಯಾಪಾರಿಕರಣಗೊಳ್ಳುತ್ತಿದೆ. ಆದರೆ ಇಂತವುಗಳಿಂದ ನಾನೆಂದೂ ಪ್ರೇರಣೆಗೊಳಗಾಗಲಿಲ್ಲ. ಯಾವುದೇ ಮಾಧ್ಯಮಗಳಿಂದ ಒತ್ತಡಗಳನ್ನು ಅನುಭವಿಸಿಲ್ಲ.
 ಪ್ರಾದೇಶಿಕ ಚಿತ್ರಗಳ ಅವಜ್ಞೆಗೆ ಕಾರಣ?
ಭಾರತೀಯ ಚಲನಚಿತ್ರ ರಂಗದಲ್ಲಿ ಪ್ರ್ರಾದೇಶಿಕ ಚಿತ್ರಗಳಿಗೆ ತನ್ನದೇ ಆದ ವಿಶೇಷತೆ ಇದೆ. ಪ್ರ್ರಾದೇಶಿಕ ಚಿತ್ರಗಳಿಗೆ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲೇ ಬೇಕಾದ ಅನಿವಾರ್ಯತೆ ಮತ್ತು ಅಗತ್ಯತೆ ಇದೆ. ಭಾರತೀಯ ಚಿತ್ರರಂಗದ ಶತಮಾನೋತ್ಸವದ ಸಂಭ್ರಮಾಚರಣೆಯಲ್ಲಿ ಕೇವಲ ಕೆಲವು ಯಶಸ್ವಿ ಸಿನೆಮಾಗಳಿಗಷ್ಟೇ ಮಹತ್ವ ಕೊಟ್ಟು ಪ್ರಾದೇಶಿಕ ಚಲನಚಿತ್ರಗಳನ್ನು ನಿರ್ಲಕ್ಷಿಸುತ್ತಿರುವುದು ಆತಂಕಕಾರಿ ಬೆಳವಣಿಗೆ.  ಸಂಭ್ರಮಾಚರಣೆಯಲ್ಲಿ ಪ್ರಾದೇಶಿಕ ಹಾಗೂ ಪರ್ಯಾಯ ಸಿನೆಮಾಗಳಿಗೆ ಆದ್ಯತೆ ನೀಡುವ ಅಗತ್ಯತೆ ಇದೆ. ಈಗ ಪ್ರಾದೇಶಿಕವಾಗಿ ಚಲನಚಿತ್ರ ತಯಾರಿಕೆಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಪ್ರಾದೇಶಿಕ ಭಾಷಾ ಸಿನೆಮಾಗಳಲ್ಲಿ ಹೊಸ ತಲೆಮಾರು ಸತ್ವಯುತವಾಗಿ ಕೆಲಸ ಮಾಡುತ್ತಿದೆ. ಅದರಲ್ಲಿ ಹೊಸ ಶಕ್ತಿ ಕಾಣಿಸುತ್ತಿದೆ.
ಪರ್ಯಾಯ ಸಿನೆಮಾಗಳೆಂದರೆ?
70 ಹಾಗೂ 80 ದಶಕದಲ್ಲಿ ಭಾರತೀಯ ಚಿತ್ರರಂಗದಲ್ಲಿ ಸಾಕಷ್ಟು ಕಿರುಚಿತ್ರ ಹಾಗೂ ಸಾಕ್ಷಚಿತ್ರಗಳು ನಿರ್ಮಾಣವಾಗುತ್ತಿದ್ದವು. ಸಿನೆಮಾ ಪ್ರದರ್ಶನಕ್ಕೆ ಮುನ್ನ ಅವುಗಳನ್ನು ತೋರಿಸುವ ಸಂಪ್ರದಾಯವೂ ಇತ್ತು. ಆದರೆ ಕಾಲನುಕ್ರಮದಲ್ಲಿ ಅದು ತೆರೆಮರೆಗೆ ಸರಿಯಿತು. ಹಾಗೂ ಅವು ಜನರನ್ನು ಆಕರ್ಷಿಸುವಲ್ಲಿ ವಿಫಲವಾಗಿದ್ದರಿಂದ ಅಂತಹ ಚಿತ್ರಗಳು ಪ್ರಾಧಾನ್ಯತೆ ಕಳೆದುಕೊಂಡವು. ಆದರೆ ಈಗ ಪೂರ್ಣಪ್ರಮಾಣದ ಸಿನೆಮಾಗಳಲ್ಲಿ 90ರಷ್ಟು ಸಿನೆಮಾಗಳು ನೆಲಕಚ್ಚುತ್ತಿವೆ. ಹೀಗಾಗಿ ಸಾಕ್ಷಚಿತ್ರಗಳು ಹಾಗೂ ಕಿರುಚಿತ್ರಗಳು ಹೆಚ್ಚು  ಹೆಚ್ಚಾಗಿ ನಿರ್ಮಾಣವಾಗಿ ಜನತೆಗೆ ತಲುಪಬೇಕಾಗಿದೆ. ಇವತ್ತು ಕಿರುಚಿತ್ರಗಳ ಕುರಿತು ಎಲ್ಲೆಡೆ ಆಸಕ್ತಿ ಕಾಣುತ್ತಿದೆ. ಇದರಿಂದ ಆಗಬಹುದಾದ ಬದಲಾವಣೆಗಳನ್ನು ಕಾಲವೇ ಹೇಳಬೇಕಿದೆ. ಹಾಗೂ ಇಂತಹ ಚಿತ್ರಗಳನ್ನು ಪ್ರೇಕ್ಷಕರಿಗೆ ತಲುಪಿಸಲು ಸೂಕ್ತವಾದ ವೇದಿಕೆ ನಿರ್ಮಿಸಬೇಕಾಗಿದೆ. ಒಟ್ಟಿನಲ್ಲಿ  ಪಾಪ್ಯುಲರ್ ಸಿನೆಮಾನೋ ಇಲ್ಲಾ ಪ್ಯಾರಲಲ್ ಸಿನೆಮಾನೋ ... ಅಂದುಕೊಂಡಿದ್ದನ್ನು ಶ್ರದ್ದೆಯಿಂದ ಕಾರ್ಯಗತ ಗೊಳಿಸಬೇಕಾಗಿದೆ.
 ಸಿನೆಮಾ ವಿಮರ್ಶೆ ಕುರಿತು?
ಈಗೀಗ ಬರುವ ಚಲನಚಿತ್ರಗಳ ವಿಮರ್ಶೆ ವಿಮರ್ಶೆಯೇ ಅಲ್ಲಾ. ಅವುಗಳಲ್ಲಿ ಕಲೆಯನ್ನು ಪ್ರೋತ್ಸಾಹಿಸುವಂತಹ ಯಾವುದೇ ಅಂಶಗಳಿರುವುದಿಲ್ಲ. ಈಗ ಮಾಧ್ಯಮಗಳಲ್ಲಿ ಬರುವ ವಿಮರ್ಶೆಗಳನ್ನು ನಾನು ವಿಮರ್ಶೆಗಳೆಂದು ಪರಿಗಣಿಸುವುದೂ ಇಲ್ಲ. ರೇಟಿಂಗ್ ಸಿಸ್ಟಂ ಎನ್ನುವದೇ ಶುದ್ದ ನಾನ್ಸೆನ್ಸ್. ಏಕೆಂದರೆ ಇತ್ತೀಚಿನ ಸಿನೆಮಾಗಳ ಕುರಿತು ನೈಜ ವಿಮರ್ಶೆ ಎಂಬುದು ಕಂಡುಬರುತ್ತಿಲ್ಲ. ಸಿನೆಮಾ ವಿಮರ್ಶೆ ಎಂದರೆ ಚಿತ್ರಕಥೆಯನ್ನು ಇನ್ನೊಮ್ಮೆ ಹೇಳುವುದು ಎಂದು ತಿಳಿಯಲಾಗಿದೆ. ಕೊನೆಗೆ ಕಾಸ್ಟೂಮ್ ಸರಿಯಿಲ್ಲ, ನಟನೆ ಸಮಸ್ಯೆ ಇದೆ ಎಂದು ಟೀಕೆ ಮಾಡುವುದಕ್ಕಷ್ಟೇ ವಿಮರ್ಶೆ ಸೀಮಿತವಾಗಿದೆ. ಸಿನೆಮಾವೊಂದರ ಕಥೆ, ಕಲಾವಿದರು ಮತ್ತು ನಿರ್ದೇಶಕರ  ಕುರಿತು ಜಾಳಾಗಿ ಬರೆದು ಕೊನೆಗೆ ಒಂದೆರಡು ಸಾಲುಗಳಲ್ಲಿ ತಮ್ಮ ಅನಿಸಿಕೆಗಳನ್ನು ಹೇಳುವುದು ಎಂದೂ ವಿಮರ್ಶೆ ಎನ್ನಿಸಲಾರದು. ವಿಮರ್ಶೆ ಎನ್ನುವುದು ಸಿನೆಮಾದ ಕೊರತೆಗಳನ್ನು ಹೇಳುವುದರ ಜೊತೆಗೆ ಉತ್ತಮ ಅಭಿರುಚಿ ಬೆಳೆಸುವಂತಿರಬೇಕು. ನಾನು ಯಾವುದೇ ಸಿನೆಮಾಗಳನ್ನು  ವಿಮರ್ಶೆಯನ್ನು ಆಧರಿಸಿ ನೋಡುವುದಿಲ್ಲ.
ರಾಜಕೀಯ ಆಕಾಂಕ್ಷೆ...?
ನೋ ವೆ. ಕೆಲವು ರಾಜಕೀಯ ಪಕ್ಷಗಳು ನನ್ನನ್ನು ಆಹ್ವಾನಿಸಿವೆ. ಆದರೆ ಎಲ್ಲಾ ಆಹ್ವಾನಗಳನ್ನು ನಾನು ವಿನಯದಿಂದ ತಿರಸ್ಕರಿಸಿದ್ದೇನೆ. ನಾನು ಯಾವುದೇ ಸೋ ಕಾಲ್ಡ ರಾಜಕೀಯ ಪಕ್ಷಗಳೊಂದಿಗೆ ಗುರುತಿಸಿಕೊಂಡಿಲ್ಲ. ಆದರೆ ನಾನು ದೇಶದ ಒಬ್ಬ ಜವಾಬ್ದಾರಿಯುತ ನಾಗರೀಕ. ಲತಾ ಮಂಗೇಶ್ವರರಂತವರು ಮೋದಿ ಪ್ರಧಾನಿಯಾಗಬೇಕು ಎಂದು ಹೇಳಿರುವುದು ಅವರ ವ್ಯೆಯಕ್ತಿಕ ಅಭಿಪ್ರಾಯ. ಆದರೆ ನಾನು ಕುರಿತು ಏನನ್ನೂ ಪ್ರತಿಕ್ರಿಯಿಸುವುದಿಲ್ಲ.  ಆದರೂ ವ್ಯೆಯಕ್ತಿಕವಾಗಿ ಹೇಳಲೇ ಬೇಕೆಂದರೆ ಮೋದಿ ಪ್ರಧಾನಿಯಾಗುವುದನ್ನು ನಾನು ಇಷ್ಟಪಡುವುದಿಲ್ಲ.  ವ್ಯೆಯಕ್ತಿಕ ಅಭಿಪ್ರಾಯಗಳನ್ನು ಗೌರವಿಸುವ ಹಾಗೂ ಜನರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಬೆಲೆ ನೀಡಿ ನಿಜವಾದ ಪ್ರಜಾಪ್ರಭುತ್ವಕ್ಕಾಗಿ ಹೋರಾಡುವ ಎಲ್ಲರನ್ನೂ ನಾನು ಬೆಂಬಲಿಸುತ್ತೇನೆ. ಆದರೆ ಹಿಂಸೆಯನ್ನೇ ಉಸಿರಾಡುವ ಹಾಗೂ ಅದನ್ನು ಪ್ರಚೋದಿಸುವ ಯಾರನ್ನೂ ನಾನು ಬೆಂಬಲಿಸಲು ಸಾಧ್ಯವಿಲ್ಲ.
ಕಲಾವಿದ ಮತ್ತು ಕ್ರಿಕೆಟ್?
ಹೌದು ನನಗೆ ಕ್ರಿಕೆಟ್ ಅಂದರೆ ತುಂಬಾನೇ ಇಷ್ಟಾ. ನಟನೆ ಕೊಡುವ ಸಂತೋಷವನ್ನು  ನಾನು  ಕ್ರಿಕೆಟ್ ನಿಂದಲೂ ಅನುಭವಿಸಿದ್ದೇನೆ. ಇತ್ತಿಚೆಗೆ ಆರಂಭವಾದ ಟ್ವೆಂಟಿ ಟ್ವೆಂಟಿ ಕ್ರಿಕೆಟ್ನ್ನು ನಾನು ತಪ್ಪದೇ ನೋಡುತ್ತೇನೆ. ಜಿ.ಆರ್.ವಿಶ್ವನಾಥ ಹಾಗೂ ಸಚಿನ್ ತೆಂಡೂಲ್ಕರ್ ನನ್ನ ಮೆಚ್ಚಿನ ಆಟಗಾರರು.
          ... ಇವಿಷ್ಟು ಅಮೋಲ್ ಪಾಲೇಕರ್ ಹೇಳಿದ ಮನದಾಳದ ಮಾತುಗಳು. 

                                                     -ಶಶಿಕಾಂತ ಯಡಹಳ್ಳಿ




ಅಮೋಲ್ ಪಾಲೇಕರ್ ಕುರಿತ ವಿಡಿಯೋ ವೀಕ್ಷಿಸಿ. ಈ ಕೆಳಗಿನದನ್ನು ಯುಟ್ಯೂಬ್ ಸರ್ಚನಲ್ಲಿ ಕಾಪಿ ಮಾಡಿ 

http://www.youtube.com/v/hkdMIa7qfUc?autohide=1&version=3&autoplay=1&attribution_tag=_GzOuT2MaSaEQ0eqUYZNug&showinfo=1&feature=share&autohide=1 


1 ಕಾಮೆಂಟ್‌:

  1. Kiru chitragallannu prothsahisuva mattu janarige talupisuva sukta vyavasthe hagu pramanika prayatnada avashyakate eege atyavashyavaagide. Ee nittinalli namma kiruteregalu gamana harisali. Varshanugattale ade paatragalannu nodi kangettiruva gruha veekshakarige badalavaneya bayake idde ide

    ಪ್ರತ್ಯುತ್ತರಅಳಿಸಿ